ಗುರುವಾರ , ಅಕ್ಟೋಬರ್ 21, 2021
21 °C

ಮತಾಂತರ ನಿಷೇಧಕ್ಕೆ ಕಾಯ್ದೆ :ಬೊಮ್ಮಾಯಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಆಸೆ– ಆಮಿಷಗಳನ್ನು ಒಡ್ಡಿ ಅಥವಾ ಬಲವಂತವಾಗಿ ಇನ್ನೊಂದು ಧರ್ಮಕ್ಕೆ ಮತಾಂತರ ಮಾಡುವುದನ್ನು ನಿಷೇಧಕ್ಕಾಗಿ ಕಾಯ್ದೆ ರೂಪಿಸಲು ಚಿಂತನೆ ನಡೆಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. 

‘ಯಾದಗಿರಿ ಜಿಲ್ಲೆಯಲ್ಲಿ ಮತಾಂತರ ನಡೆಸಿರುವ ವಿಚಾರವು ಗಮನಕ್ಕೆ ಬಂದಿದೆ. ಈ ಬಗ್ಗೆ ಗಮನ ಹರಿಸಲು ಜಿಲ್ಲಾಡಳಿತಕ್ಕೆ ಸೂಚನೆ ನೀಡಲಾಗಿದೆ’ ಎಂದು ಅವರು ಸುದ್ದಿಗಾರರಿಗೆ ಮಂಗಳವಾರ ಹೇಳಿದರು.

‘ಸ್ವ ಇಚ್ಛೆಯಿಂದ ಮತಾಂತರಕ್ಕೆ ಅವಕಾಶವಿದೆ. ಆದರೆ, ಹಣ ಮತ್ತು ಇನ್ನಿತರ ರೀತಿಯ ಆಮಿಷಗಳನ್ನು ಒಡ್ಡಿ ಮತಾಂತರ ನಡೆಸುತ್ತಿರುವ ಪ್ರಕರಣಗಳು ಅಲ್ಲಲ್ಲಿ ನಡೆಯುತ್ತಿವೆ. ಕಲಬುರ್ಗಿ ಮತ್ತಿತ್ತರ ಕಡೆಗಳಲ್ಲಿ ಭೇಟಿ ನೀಡಿದಾಗ ಮತಾಂತರ ಮಾಡುತ್ತಿರುವ ಆರೋಪಗಳು ಕೇಳಿ ಬಂದಿವೆ. ಪದೇ ಪದೇ ಈ ವಿಚಾರ ಕೇಳಿ ಬರುತ್ತಿರುವ ಕಾರಣದಿಂದ ಶಾಶ್ವತವಾಗಿ ಕಡಿವಾಣ ಹಾಕಲು ಚಿಂತನೆ ನಡೆಸಲಾಗಿದೆ’ ಎಂದು ಮುಖ್ಯಮಂತ್ರಿ ತಿಳಿಸಿದರು.

ಇತ್ತೀಚೆಗೆ ನಡೆದ ವಿಧಾನಮಂಡಲ ಅಧಿವೇಶನದಲ್ಲಿ ಮಾತನಾಡಿದ್ದ ಬಿಜೆಪಿ ಶಾಸಕ ಗೂಳಿಹಟ್ಟಿ ಶೇಖರ್‌, ‘ಚಿತ್ರದುರ್ಗ ಜಿಲ್ಲೆಯಲ್ಲಿ ಸುಮಾರು 20 ಸಾವಿರ ಮಂದಿ ಮತಾಂತರ ಆಗಿದ್ದಾರೆ. ನನ್ನ ತಾಯಿ ಸಹ ಮತಾಂತರಗೊಂಡಿದ್ದಾರೆ. ಕುಂಕುಮ ಇಡಬಾರದು ಹಾಗೂ ದೇವರ ಫೋಟೋ ಇಡಬಾರದು ಎಂದು ಅವರ ಬ್ರೈನ್‌ ವಾಶ್‌ ಮಾಡಲಾಗಿದೆ. ಇದು ಸರಿಯಲ್ಲ ಎಂದು ಕಿವಿಮಾತು ಹೇಳಿದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ತಾಯಿ ಬೆದರಿಕೆ ಹಾಕುತ್ತಿದ್ದಾರೆ. ಈ ಬೆಳವಣಿಗೆಯಿಂದ ಇಡೀ ಕುಟುಂಬ ಮುಜುಗರ ಅನುಭವಿಸುವಂತಾಗಿದೆ’ ಎಂದು ಹೇಳಿದ್ದರು.

ಇದಕ್ಕೆ ಪ್ರತಿಕ್ರಿಯಿಸಿದ ಜ್ಞಾನೇಂದ್ರ, ‘ರಾಜ್ಯದಲ್ಲಿ ಬಲವಂತದ ಮತಾಂತರಕ್ಕೆ ಅವಕಾಶವಿಲ್ಲ. ಆಮಿಷವೊಡ್ಡಿ ಮತಾಂತರ ಮಾಡುವುದು ಕಾನೂನಿಗೆ ವಿರುದ್ಧವಾದುದು’ ಎಂದು ತಿಳಿಸಿದ್ದರು. 

ಮತಾಂತರಕ್ಕೆ ಯತ್ನ ಪ್ರಕರಣ; ನಾಲ್ವರ ಬಂಧನ

ಸೈದಾಪುರ (ಯಾದಗಿರಿ ಜಿಲ್ಲೆ): ಸಮೀಪದ ನೀಲಹಳ್ಳಿ ಗ್ರಾಮದಲ್ಲಿ ಪರಿಶಿಷ್ಟ ಸಮುದಾಯದ ಜನರ ಬಲವಂತದ ಮತಾಂತರಕ್ಕೆ ಯತ್ನಿಸಿದ ಆರೋಪದಡಿ ನಾಲ್ವರನ್ನು ಸೈದಾಪುರ ಪೊಲೀಸರು ಬಂಧಿಸಿದ್ದಾರೆ.

‘ಕ್ರೈಸ್ತ ಪಾದ್ರಿ ಜೇಮ್ಸ್ ಡೇವಿಡ್ ದಾಸ್ ಮಾಧ್ವಾರ, ಶಾಂತರಾಜ ಜೇಮ್ಸ್ ದಾಸ್, ನೀಲಮ್ಮ ಜೇಮ್ಸ್‌ದಾಸ್, ಮಾಳಮ್ಮ ರಾಘವೇಂದ್ರ ಅವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ’ ಎಂದು ಸಿಪಿಐ ವಿಜಯ ಕುಮಾರ ತಿಳಿಸಿದ್ದಾರೆ.

ಆರೋಪಿಗಳು ಭಾನುವಾರ (ಸೆ.26)ರಂದು ನೀಲಹಳ್ಳಿ ಗ್ರಾಮದಲ್ಲಿ ಮತಾಂತರಕ್ಕೆ ಯತ್ನಿಸಿದ್ದಾರೆ ಎಂದು ಆರೋಪಿಸಿ ನರಸಪ್ಪ ಭೀಮರಾಯ ಜೇಗರ ದೂರು ನೀಡಿದ್ದರು ಎಂದು  ಪಿಎಸ್‌ಐ ಭೀಮರಾಯ ಬಂಕ್ಲಿ ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು