ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಸಕರ ಅನುದಾನ ಬಿಡುಗಡೆಗೆ ಸಮಿತಿ: ಹೊರಟ್ಟಿ

Last Updated 3 ಆಗಸ್ಟ್ 2021, 23:26 IST
ಅಕ್ಷರ ಗಾತ್ರ

ಬೆಂಗಳೂರು: ವಿಧಾನ ಪರಿಷತ್‌ ಸದಸ್ಯರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿ ಅನುದಾನದಲ್ಲಿ ಬಾಕಿ ಇರುವ ಮೊತ್ತದ ಬಿಡುಗಡೆಯ ಕುರಿತು ಮೇಲುಸ್ತುವಾರಿಗೆ ಸಮಿತಿ ನೇಮಿಸಲಾಗುವುದು ಎಂದು ಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ ತಿಳಿಸಿದರು.

ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿ ಅನುದಾನ ಕಡಿತ ಮತ್ತು ಬಾಕಿ ಮೊತ್ತದ ಬಿಡುಗಡೆ ವಿಳಂಬ ಕುರಿತು ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಮಂಗಳವಾರ ಹಿರಿಯ ಅಧಿಕಾರಿಗಳು ಹಾಗೂ ವಿಧಾನ ಪರಿಷತ್‌ ಸದಸ್ಯರ ಜತೆ ಸಭೆ ನಡೆಸಿದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಅವರು ಮಾತನಾಡಿದರು.

‘ಅನುದಾನ ಬಿಡುಗಡೆ ಮಾಡುವಂತೆ ಹಾಗೂ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ ಕೈಗೆತ್ತಿಕೊಂಡಿರುವ ಕಾಮಗಾರಿಗಳನ್ನು ತಡೆ ಹಿಡಿಯದಂತೆ ಈಗಾಗಲೇ ಕೆಲವು ಇಲಾಖೆಗಳ ಅಧಿಕಾರಿಗಳಿಗೆ ಪತ್ರ ಬರೆದಿದ್ದೇನೆ. ಜಿಲ್ಲಾಧಿಕಾರಿಗಳಿಂದಲೂ ಈ ಕುರಿತು ಮಾಹಿತಿ ಪಡೆಯುತ್ತೇನೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಜತೆಗೂ ಈ ಕುರಿತು ಚರ್ಚೆ ನಡೆಸುವೆ’ ಎಂದರು.

ಪ್ರತಿ ಶಾಸಕರಿಗೆ ವರ್ಷಕ್ಕೆ ₹ 2 ಕೋಟಿ ಅನುದಾನ ನೀಡಬೇಕು. ಬಜೆಟ್‌ನಲ್ಲಿ ಅನುಮೋದನೆ ನೀಡಿದರೂ ಪೂರ್ಣ ಪ್ರಮಾಣದ ಅನುದಾನ ಬಿಡುಗಡೆಯಾಗುತ್ತಿಲ್ಲ ಎಂಬ ದೂರುಗಳಿವೆ. ಈಗ ₹ 90 ಕೋಟಿ ಅನುದಾನ ಬಿಡುಗಡೆ ಬಾಕಿ ಇದೆ. ಅನುದಾನ ಬಿಡುಗಡೆಯಲ್ಲಿ ಇರುವ ಸಮಸ್ಯೆಗಳ ಕುರಿತು ವಿಧಾನ ಪರಿಷತ್‌ನ ಹಲವು ಸದಸ್ಯರು ಸಭೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮತ್ತೊಮ್ಮೆ ಸಭೆ ನಡೆಸಿ ಸಮಸ್ಯೆ ಪರಿಹರಿಸಲಾಗುವುದು ಎಂದು ತಿಳಿಸಿದರು.

ವಿಧಾನ ಪರಿಷತ್‌ ವಿರೋಧ ಪಕ್ಷದ ನಾಯಕ ಎಸ್‌.ಆರ್‌. ಪಾಟೀಲ, ಬಿಜೆಪಿಯ ಎಚ್‌.ವಿಶ್ವನಾಥ್‌, ಕಾಂಗ್ರೆಸ್‌ನ ಪ್ರಕಾಶ್ ರಾಥೋಡ್‌, ಜೆಡಿಎಸ್‌ನ ಕೆ.ಟಿ. ಶ್ರೀಕಂಠೇಗೌಡ ಸೇರಿದಂತೆ ಹಲವು ಸದಸ್ಯರು ಅನುದಾನ ಬಿಡುಗಡೆ ವಿಳಂಬಕ್ಕೆ ಅಸಮಾಧಾನ ವ್ಯಕ್ತಪಡಿಸಿದರು. ಜಿಲ್ಲಾಧಿಕಾರಿಗಳ ವೈಯಕ್ತಿಕ (ಪಿ.ಡಿ) ಖಾತೆಯಲ್ಲಿ ಅನುದಾನ ಲಭ್ಯವಿದ್ದು, ಕಾಮಗಾರಿ ಕೈಗೊಳ್ಳಬಹುದು ಎಂದು ಹಣಕಾಸು ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಐ.ಎಸ್‌.ಎನ್‌. ಪ್ರಸಾದ್ ಉತ್ತರಿಸಿದರು.

ಉಪ ಸಭಾಪತಿ ಎಂ.ಕೆ. ಪ್ರಾಣೇಶ್‌, ಸದಸ್ಯರಾದ ಬಿ.ಕೆ. ಹರಿಪ್ರಸಾದ್, ಕೆ.ಸಿ. ಕೊಂಡಯ್ಯ, ಅಲ್ಲಂ ವೀರಭದ್ರಪ್ಪ, ಯು.ಬಿ. ವೆಂಕಟೇಶ್, ಎನ್‌. ರವಿಕುಮಾರ್‌, ತಿಪ್ಪೇಸ್ವಾಮಿ, ಕಾಂತರಾಜ್‌ ಸೇರಿದಂತೆ ಹಲವು ಸದಸ್ಯರು ಸಭೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT