ಬೆಂಗಳೂರು: ‘ಪಕ್ಷದಲ್ಲಿ ನನ್ನನ್ನು ಯಾರೂ ಕಡೆಗಣಿಸಿಲ್ಲ. ಪಕ್ಷ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರು ನನಗೆ ಎಲ್ಲ ಅವಕಾಶ, ಸ್ಥಾನಮಾನಗಳನ್ನೂ ನೀಡಿದ್ದಾರೆ’ ಎಂದು ಬಿಜೆಪಿಯ ಬಿ.ಎಸ್. ಯಡಿಯೂರಪ್ಪ ವಿಧಾನಸಭೆಯಲ್ಲಿ ಬುಧವಾರ ಹೇಳಿದರು.
ಬಜೆಟ್ ಮೇಲಿನ ಚರ್ಚೆಯಲ್ಲಿ ವಿದಾಯ ಭಾಷಣದ ಧಾಟಿಯಲ್ಲಿ ಭಾವುಕರಾಗಿ ಮಾತನಾಡಿದ ಅವರು, ‘ಬಿಜೆಪಿ ಯಡಿಯೂರಪ್ಪ ಅವರನ್ನು ಕಡೆಗಣಿಸಿದೆ, ಅನ್ಯಾಯ ಮಾಡುತ್ತಿದೆ ಎಂದು ಕೆಲವರು ಟೀಕಿಸುತ್ತಿದ್ದಾರೆ. ಆ ರೀತಿ ಯಾವತ್ತೂ ಆಗಿಲ್ಲ. ನಾಲ್ಕು ಬಾರಿ ಮುಖ್ಯಮಂತ್ರಿಯಾಗಲು ನನಗೆ ಪಕ್ಷ ಅವಕಾಶ ನೀಡಿದೆ. ನನಗೆ ಸಿಕ್ಕಷ್ಟು ಅವಕಾಶಗಳು ಬೇರೆ ಯಾರಿಗೂ ದೊರೆತಿಲ್ಲ’ ಎಂದರು.
‘ಇಂತಹ ಮಾತುಗಳಿಂದ ಯಡಿಯೂರಪ್ಪ ಅವರನ್ನು ಸುಮ್ಮನೆ ಕೂರಿಸಬಹುದು ಎಂದು ಕೆಲವರು ಭಾವಿಸಿದ್ದಾರೆ. ನನಗೆ ನೀಡಿರುವ ಸ್ಥಾನಮಾನಕ್ಕೆ ಪ್ರಧಾನಿ ನರೇಂದ್ರ ಮೋದಿ ಮತ್ತು ಪಕ್ಷಕ್ಕೆ ಜೀವನದುದ್ದಕ್ಕೂ ಋಣಿಯಾಗಿರುವೆ. ಬದುಕಿನ ಕೊನೆಯ ಉಸಿರು ಇರುವವರೆಗೂ ಪಕ್ಷವನ್ನು ಅಧಿಕಾರಕ್ಕೆ ತರಲು ಶ್ರಮಿಸುತ್ತೇನೆ. ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲಿದೆ. ನಿಮಗೆ (ಕಾಂಗ್ರೆಸ್) ಪ್ರತಿಪಕ್ಷದ ಸ್ಥಾನ ಕಾಯಂ’ ಎಂದು ಹೇಳಿದರು.
ಸಿದ್ದರಾಮಯ್ಯ ವಿಶ್ವಾಸ ದ್ರೋಹ: ‘ಒಮ್ಮೆ ಗೆದ್ದುಬಂದ ಕ್ಷೇತ್ರದಿಂದ ಮತ್ತೆ ಸ್ಪರ್ಧಿಸುವುದಿಲ್ಲ ಎಂದರೆ ಏನರ್ಥ? ಕೆಲಸ ಮಾಡಿಲ್ಲವೊ? ಅಥವಾ ಗೆಲ್ಲುವ ವಿಶ್ವಾಸವಿಲ್ಲವೊ? ಹೊಸ ಕ್ಷೇತ್ರದಲ್ಲಿ ಸ್ಪರ್ಧಿಸಿದರೆ ಜನರು ಹೇಗೆ ನಂಬುತ್ತಾರೆ. ಜನರು ವಿಶ್ವಾಸ ಇರಿಸುವಂತೆ ಹಿಂದೆ ಗೆದ್ದ ಕ್ಷೇತ್ರದಲ್ಲೇ ಸಿದ್ದರಾಮಯ್ಯ ಸ್ಪರ್ಧಿಸಬೇಕು’ ಎಂದು ಯಡಿಯೂರಪ್ಪ ಹೇಳಿದರು.
ಮಧ್ಯ ಪ್ರವೇಶಿಸಿದ ವಿರೋಧ ಪಕ್ಷದ ಉಪ ನಾಯಕ ಯು.ಟಿ. ಖಾದರ್, ‘ಸಿದ್ದರಾಮಯ್ಯ ಅವರಿಗೆ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಹಿನ್ನಡೆಯಾಗಿದ್ದು ನಿಜ. ಆದರೆ, ಬಾದಾಮಿಯಲ್ಲ ಹಾಗಿಲ್ಲ. ಅಲ್ಲಿ ಮತ್ತೆ ಸ್ಪರ್ಧಿಸಿದರೆ ಗೆಲ್ಲುತ್ತಾರೆ. ರಾಜ್ಯದ 224 ಕ್ಷೇತ್ರಗಳಲ್ಲಿ ಎಲ್ಲಿ ಸ್ಪರ್ಧಿಸಿದರೂ ಗೆಲ್ಲುತ್ತಾರೆ’ ಎಂದರು.
‘ಬಾದಾಮಿ ಕ್ಷೇತ್ರದಲ್ಲಿ ಗೆಲ್ಲುವ ವಿಶ್ವಾಸವಿಲ್ಲದೆ ಬೇರೆ ಕ್ಷೇತ್ರ ಹುಡುಕುತ್ತಿದ್ದಾರೆ. ಇದು ಆ ಭಾಗದ ಜನರಿಗೆ ಮಾಡುತ್ತಿರುವ ವಿಶ್ವಾಸದ್ರೋಹ’ ಎಂದು ಯಡಿಯೂರಪ್ಪ ಟೀಕಿಸಿದರು.
‘ಚುನಾವಣೆಗೆ ಮತ್ತೆ ಸ್ಪರ್ಧಿಸುವುದಿಲ್ಲ’
‘ನಾನು ಇನ್ನು ಚುನಾವಣೆಗೆ ಸ್ಪರ್ಧಿಸುವುದಿಲ್ಲ. ಹೀಗಾಗಿ ನಾನು ಮತ್ತೆ ಈ ಸದನದ ಒಳಗೆ ಬರುವ ಪ್ರಶ್ನೆ ಉದ್ಭವಿಸುವುದಿಲ್ಲ. ಆಡಳಿತ ಪಕ್ಷದ ಎಲ್ಲ ಸದಸ್ಯರೂ ಒಟ್ಟಾಗಿ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರೋಣ. ಇದು ಒಂದು ರೀತಿಯಲ್ಲಿ ನನ್ನ ವಿದಾಯ ಭಾಷಣ’ ಎಂದು ಯಡಿಯೂರಪ್ಪ ಹೇಳಿದರು.
‘ಹಿರಿಯರಾದ ನೀವು ದೆಹಲಿ ನಾಯಕರ ಮಾತು ಕೇಳಬಾರದು. ಮತ್ತೆ ಚುನಾವಣೆಗೆ ಸ್ಪರ್ಧಿಸಿ, ಗೆದ್ದು ಸದನಕ್ಕೆ ಬರಬೇಕು’ ಎಂದು ಕಾಂಗ್ರೆಸ್‌ನ ಪ್ರಿಯಾಂಕ್ ಖರ್ಗೆ ಹಾಗೂ ಜೆಡಿಎಸ್‌ನ ಕೆ.ಎಂ. ಶಿವಲಿಂಗೇಗೌಡ ಒತ್ತಾಯಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.