ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರವೀಣ್‌ ನೆಟ್ಟಾರು ಹತ್ಯೆ– ಸರ್ಕಾರ ತಕ್ಕ ಉತ್ತರ ಕೊಡಲಿದೆ ಎಂದ ನಳಿನ್‌

Last Updated 27 ಜುಲೈ 2022, 14:33 IST
ಅಕ್ಷರ ಗಾತ್ರ

ಮಂಗಳೂರು: ‘ಪ್ರವೀಣ್‌ ನೆಟ್ಟಾರು ಹತ್ಯೆಯ ಕುರಿತು ಜನರಲ್ಲಿ ಆಕ್ರೋಶ ಇದೆ. ಇದೇ ಭಾವನೆಯಿಂದ ಪಕ್ಷದ ಕಾರ್ಯಕರ್ತರು ರಾಜೀನಾಮೆ ನೀಡುವ ಮೂಲಕ ನೋವು ಹೊರಹಾಕುವುದು ಸಹಜ. ಭಯದ ವಾತಾವರಣ ನಿವಾರಿಸುವ ಹಾಗೂ ಕಾರ್ಯಕರ್ತರ ನೋವು ನಿವಾರಿಸಲು ಸರ್ಕಾರ ಕ್ರಮ ಕೈಗೊಳ್ಳಲಿದೆ’ ಎಂದುಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ತಿಳಿಸಿದರು.

ಇಲ್ಲಿ ಸುದ್ದಿಗಾರರ ಜೊತೆ ಬುಧವಾರ ಮಾತನಾಡಿದ ಅವರು, ‘ಪ್ರವೀಣ್‌ ನೆಟ್ಟಾರು ಹತ್ಯೆಯನ್ನು ಖಂಡಿಸುತ್ತೇನೆ. ಅವರೊಬ್ಬ ಆದರ್ಶ ಕಾರ್ಯಕರ್ತ. ಸಜ್ಜನಿಕೆ ಹೆಸರಾದವರು. ಯಾವುದೇ ದುಷ್ಕೃತ್ಯಗಳಲ್ಲಿ ಕೃತ್ಯ ಭಾಗಿಯಾದವ ಅಲ್ಲ. ಜನರ ಕಷ್ಟಕ್ಕೆ ಸ್ಪಂದಿಸುತ್ತಿದ್ದ ವ್ಯಕ್ತಿ’ ಎಂದರು.

‘ಸರ್ಕಾರ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರ ಸೇರಿ ಇಂತಹ ಕೃತ್ಯದಲ್ಲಿ ತೊಡಗಿರುವವರನ್ನು ಮಟ್ಟ ಹಾಕಲಿವೆ. ಹಂತಕರನ್ನು ಬಂಧಿಸಿ ಸೂಕ್ತ ಉತ್ತರ ಕೊಡುತ್ತೇವೆ. ಮುಂದಿನ ದಿನದಲ್ಲಿ ಇಂತಹ ಘಟನೆ ಮರುಕಳಿಸದಂತೆ ನೋಡಿಕೊಳ್ಳಬೇಕಿದೆ’ ಎಂದರು.

‘ಮತಾಂಧ ಶಕ್ತಿಗಳು ದೇಶದಾದ್ಯಂತ ಇಂತಹ ದುಷ್ಕೃತ್ಯಗಳನ್ನು ನಡೆಸುತ್ತಿವೆ. ರಾಜಸ್ಥಾನದಲ್ಲಿ, ಶಿವಮೊಗ್ಗದಲ್ಲಿ ಇಂತಹ ಹತ್ಯೆಗಳು ನಡೆದಿವೆ. ಇವುಗಳ ಹಿಂದಿನ ಪಿತೂರಿ ಬಗ್ಗೆಯೂ ತನಿಖೆ ಆಗಬೇಕು. ಕಾರ್ಯಕರ್ತರನ್ನು ಬಿಟ್ಟುಕೊಡು ಪ್ರಶ್ನೆಯೇ ಇಲ್ಲ. ಘಟನೆ ಆದಾಗ ಕಾರ್ಯಕರ್ತರಿಗೆ ಉತ್ತರಕೊಡುವ ಕೆಲಸ ಮಾಡುತ್ತೇವೆ. ಆತ್ಮಕ್ಕೆ ಶಾಂತಿ ಸಿಗುವ ರೀತಿ ಉತ್ತರ ಕೊಡುವ ಕೆಲಸ ಮಾಡುತ್ತೇವೆ. ಕೇರಳದವರು ಬಂದು ಹತ್ಯೆ ನಡೆಸಿದ್ದರೆ ಆ ಬಗ್ಗೆಯೂ ಸರ್ಕಾರ ತನಿಖೆ ನಡೆಸಲಿದೆ. ಈ ಬಗ್ಗೆ ಮುಖ್ಯಮಂತ್ರಿ ಅವರಿಗೂ ತಿಳಿಸಿದ್ದೇನೆ’ಎಂದರು.

‘ಪ್ರವೀಣ್‌ ಹತ್ಯೆ ಬಗ್ಗೆ ಜನರಲ್ಲಿ ಆಕ್ರೋಶ ಮಡುಗಟ್ಟಿದೆ. ಇಂತಹ ಘಟನೆ ಆದಾಗ ಕಾರ್ಯಕರ್ತರು ನನ್ನ ವಿರುದ್ಧವೂ ಆಕ್ರೋಶ ವ್ಯಕ್ತಪಡಿಸುವುದು ಸಹಜ. ಕಾರ್ಯಕರ್ತರ ನೋವು ಭಾವನೆ ಸರ್ಕಾರದ ಗಮನಕ್ಕೆ ತರುತ್ತೇನೆ. ಸರ್ಕಾರವೇ ಇದಕ್ಕೆ ಉತ್ತರ ಕೊಡುತ್ತದೆ’ ಎಂಬ ನಿರೀಕ್ಷೆ ಇದೆ.

ಮತಾಂಧ ಶಕ್ತಿಗಳನ್ನು ಮಟ್ಟ ಹಾಕುತ್ತೇವೆ: ಸುನಿಲ್‌

‘ಪ್ರವೀಣ್‌ ಹತ್ಯೆಯನ್ನು ನೋಡಿ ಸರ್ಕಾರ ಕೈ‌ಕಟ್ಟಿ ಕುಳಿತಿಲ್ಲ. ಇದಕ್ಕೆ ತಕ್ಕ ಉತ್ತರ ಕೊಟ್ಟೇ ಕೊಡುತ್ತೇವೆ. ಜನರ ಆಕ್ರೋಶ ನಮ್ಮ ಕಣ್ಮುಂದಿದೆ. ಇಂತಹ ಕೃತ್ಯದಲ್ಲಿ ತೊಡಗಿರುವ ಮತಾಂಧ ಶಕ್ತಿಗಳನ್ನು ಮಟ್ಟ ಹಾಕುತ್ತೇವೆ‘ ಎಂದು ದಕ್ಷಿನ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ವಿ.ಸುನಿಲ್‌ ಕುಮಾರ್‌ ತಿಳಿಸಿದರು.

’ನಾವು ಮನೆಯ ಮಗನನ್ನು ಕಳೆದ ಕೊಂಡ ನೋವಿನಲ್ಲಿದ್ದೇವೆ. ಪ್ರವೀಣ್‌ ನೆಟ್ಟಾರು ಹತ್ಯೆಯನ್ನು ಖಂಡಿಸಲು ಪದಗಳಿಲ್ಲ. ಈ ಹತ್ಯೆ ಪ್ರಕರಣದ ತನಿಖೆ ತಿವ್ರಗೊಳಿಸುವಂತೆ ಮುಖ್ಯಮಂತ್ರಿ ಹಾಗೂ ಗೃಹ ಸಚಿವರನ್ನು ಒತ್ತಾಯಿಸಿದ್ದೇನೆ’ ಎಂದು ತಿಳಿಸಿದರು.

’ಈ ಹತ್ಯೆ ಹಿಂದಿನ ಎಲ್ಲ ಮತಾಂಧ ಶಕ್ತಿಗಳನ್ನು ಮಟ್ಟಹಾಕುವ ಸಾಧ್ಯತೆಗಳನ್ನು ಮುಕ್ತವಾಗಿಟ್ಟುಕೊಂಡಿದ್ದೇವೆ. ಆರೋಪಿಗಳನ್ನು ಪತ್ತೆ ಹಚ್ಚಿ ಶಿಕ್ಷೆ ಕೊಡಲು ಸರ್ಕಾರ ಬದ್ಧವಾಗಿದೆ. ಈ ವಿಚಾರದಲ್ಲಿ ಪೊಲೀಸ್‌ ಇಲಾಖೆಗೆ ಮುಕ್ತ ಅಧಿಕಾರ ನೀಡುತ್ತೇವೆ. ಜಿಲ್ಲೆಯ ಎಲ್ಲ ಶಾಸಕರು ಪ್ರವೀಣ್‌ ಅವರ ಮನೆಗೆ ಭೇಟಿ ಕೊಟ್ಟಿದ್ದೇವೆ. ತನಿಖೆ ಪೂರ್ಣಗೊಳ್ಳುವವರೆಗೆ ಮುಖ್ಯಮಂತ್ರಿ ಹಾಗೂ ಗೃಹಸಚಿವರ ಸಂಪರ್ಕದಲ್ಲಿದ್ದುಕೊಂಡು ಮತೀಯ ಶಕ್ತಿಗಳನ್ನು ಮಟ್ಟ ಹಾಕಲು ಅಗತ್ಯ ಕ್ರಮ ಕೈಗೊಳ್ಳುತ್ತೇವೆ’ ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.

ಸುನಿಲ್‌ ಅವರು ಗುರುವಾರ ದೊಡ್ಡಬಳ್ಳಾಪುರದ ಜನೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಬೇಕಿತ್ತು. ಆದರೆ, ಜಿಲ್ಲೆಯಲ್ಲಿ ಎದುರಾಗಿರುವ ಪರಿಸ್ಥಿತಿ ನಿಭಾಯಿಸುವ ಸಲುವಾಗಿ ಅವರು ಮಂಗಳೂರಿನಲ್ಲೇ ಉಳಿದುಕೊಂಡಿದ್ದಾರೆ.

ಕೋಕಾ ಕಾಯ್ದೆಯಡಿ ಕ್ರಮಕ್ಕೆ ಕಾಮತ್‌ ಒತ್ತಾಯ

ಮಂಗಳೂರು ನಗರ ದಕ್ಷಿಣ ಶಾಸಕ ವೇದವ್ಯಾಸ್ ಕಾಮತ್, ‘ಪ್ರವೀಣ್ ನೆಟ್ಟಾರು ಹತ್ಯೆ ಹಿಂದೆ ಎಸ್‌ಡಿಪಿಐ ಹಾಗೂ ಪಿಎಫ್ಐ ಕೈವಾಡವಿದೆ. ದೇಶ ವಿರೋಧಿ ಮಾನಸಿಕತೆಯಲ್ಲಿರುವ ಮತಾಂಧ ಶಕ್ತಿಗಳು ಭಯೋತ್ಪಾದನೆ ಸೃಷ್ಟಿಸಲು ರಾಷ್ಟ್ರೀಯವಾದಿ ಯುವಕನ ಹತ್ಯೆ ಮಾಡಿದ್ದಾರೆ. ಕರಾವಳಿಯಲ್ಲಿ ನೆಲೆಯೂರುತ್ತಿರುವ ಉಗ್ರರನ್ನು ಬುಡ ಸಮೇತ ಕಿತ್ತು ಹಾಕಲು ಕಠಿಣ ಕಾನೂನು ರೂಪಿಸುವಂತೆ ಗೃಹ ಸಚಿವ ಆರಗ ಜ್ಞಾನೇಂದ್ರ ಅವರಿಗೆ ಮನವಿ ಸಲ್ಲಿಸಿದ್ದೇನೆ‘ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT