ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

3 ತಿಂಗಳೊಳಗೆ ಸರ್ಕಾರಿ ಶಾಲೆ–ಕಾಲೇಜುಗಳ ಆಸ್ತಿ ಕ್ರಮಬದ್ಧ: ಸುರೇಶ್‌ಕುಮಾರ್‌

Last Updated 15 ಮಾರ್ಚ್ 2021, 19:55 IST
ಅಕ್ಷರ ಗಾತ್ರ

ಬೆಂಗಳೂರು: ‘ಎಲ್ಲ ಸರ್ಕಾರಿ ಶಾಲೆಗಳು ಮತ್ತು ಪದವಿ ಪೂರ್ವ ಕಾಲೇಜುಗಳ ಆಸ್ತಿಯನ್ನು ದಾಖಲು ಮಾಡಲು ತಂತ್ರಾಂಶ ಅಭಿವೃದ್ಧಿಪಡಿಸಲಾಗಿದ್ದು, ಮೂರು ತಿಂಗಳ ಒಳಗೆ ಈ ಕೆಲಸ ಪೂರ್ಣ ಆಗಲಿದೆ’ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಸುರೇಶ್‍ಕುಮಾರ್ ಹೇಳಿದರು.

ವಿಧಾನ ಪರಿಷತ್‌ನಲ್ಲಿ ಜೆಡಿಎಸ್‍ನ ಕಾಂತರಾಜ್‌ ಕೇಳಿದ ಪ್ರಶ್ನೆಗೆ ಉತ್ತರ ನೀಡಿದ ಸಚಿವರು, ‘ರಾಜ್ಯದಲ್ಲಿ 20,751 ಕಿರಿಯ ಪ್ರಾಥಮಿಕ ಶಾಲೆಗಳು, 22,499 ಹಿರಿಯ ಪ್ರಾಥಮಿಕ ಶಾಲೆಗಳು, 4,727ಸರ್ಕಾರಿ ಪ್ರೌಢಶಾಲೆಗಳು, 1,234 ಪದವಿ ಪೂರ್ವ ಕಾಲೇಜುಗಳಿವೆ. ಅವುಗಳ ಆಸ್ತಿಯನ್ನು ರಕ್ಷಣೆ ಮಾಡಲು ಆಯಾ ತಾಲ್ಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಯನ್ನು ಎಸ್ಟೇಟ್ ಅಧಿಕಾರಿಯಾಗಿ ನೇಮಿಸಲಾಗಿದೆ. ಅವರು ಶಾಲೆಗಳ ಜಾಗಗಳ ದಾಖಲೆಗಳನ್ನು ನಿರ್ವಹಣೆ ಮಾಡುತ್ತಿದ್ದಾರೆ. ಈವರೆಗೂ 26 ಸಾವಿರ ಜಾಗಗಳ ಮಾಹಿತಿ ಕ್ರಮಬದ್ಧಗೊಳಿಸಲಾಗಿದೆ’ ಎಂದರು.

‘ಸರ್ಕಾರಿ ಶಾಲೆಗಳಿಗೆ ಕೆಲವು ಕಡೆ ದೇವಸ್ಥಾನದ ಜಾಗ ಬಳಕೆಯಾಗುತ್ತಿವೆ. ಅನೇಕರು ದಾನ ಮಾಡಿದ್ದಾರೆ. ಆದರೆ, ಖಾತಾ ಆಗಿದ್ದರೂ ದಾಖಲಾತಿಗಳ ನಿರ್ವಹಣೆ ಅಸಮರ್ಪಕವಾಗಿವೆ. ಅದನ್ನು ಕ್ರಮಬದ್ಧಗೊಳಿಸಬೇಕು’ ಎಂದು ಕಾಂತರಾಜ್‌ ಆಗ್ರಹಿಸಿದರು.

ಅದಕ್ಕೆ ಧ್ವನಿಗೂಡಿಸಿದ ಪರಿಷತ್‌ ವಿರೋಧ ಪಕ್ಷದ ನಾಯಕ ಎಸ್.ಆರ್. ಪಾಟೀಲ, ’ಸಾಕಷ್ಟು ದಾನಿಗಳು ರಾಜ್ಯಪಾಲರ ಹೆಸರಿನಲ್ಲಿ ಶಾಲೆಗೆ ಜಾಗ ದಾನ ನೀಡಿದ್ದಾರೆ. ದಾಖಲೆಗಳನ್ನು ನಿರ್ವಹಣೆ ಮಾಡಿ ಬೇಲಿ ಹಾಕಿ ರಕ್ಷಣೆ ಮಾಡಬೇಕು’ ಎಂದು ಸಲಹೆ ನೀಡಿದರು.

ಆರ್ಥಿಕ ಇಲಾಖೆ ಜೊತೆ ಚರ್ಚೆ: ಬಿಜೆಪಿಯ ಅರುಣ ಶಹಾಪುರ ಅವರ ಪ್ರಶ್ನೆಗೆ ಉತ್ತರಿಸಿ ಸುರೇಶ್‍ಕುಮಾರ್, ‘1995ರಿಂದ 2000ರ ನಡುವೆ ಆರಂಭವಾಗಿರುವ ಶಾಲಾ-ಕಾಲೇಜುಗಳನ್ನು ಅನುದಾನಕ್ಕೆ ಒಳಪಡಿಸಲು ಆರ್ಥಿಕ ಇಲಾಖೆ ಜತೆ ಚರ್ಚೆ ನಡೆಯುತ್ತಿದೆ’ ಎಂದರು.

‘1995ರಿಂದ 2020ರ ಮಧ್ಯೆ ಆರಂಭಿಸಿದ ಪ್ರಾಥಮಿಕ ಮತ್ತು ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ 19,656 ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಗಿದೆ. ಅವರಿಗೆ ವಾರ್ಷಿಕ ವೇತನ ನೀಡುವುದಾದರೆ ₹ 819.65 ಕೋಟಿ ಬೇಕಾಗಿದೆ. ಪ್ರೌಢಶಾಲೆಗಳ 12,031 ಶಿಕ್ಷಕಕರು ಮತ್ತು 981 ಬೋಧಕೇತರರಿಗೆ ₹ 682.21 ಕೋಟಿ, ಪಿಯು ಕಾಲೇಜಿನ 18,750 ಉಪನ್ಯಾಸಕರು, 3,125 ದೈಹಿಕ ಶಿಕ್ಷಕರು ಮತ್ತು ಅಷ್ಟೇ ಸಂಖ್ಯೆಯ ದ್ವಿತೀಯ ದರ್ಜೆ ಸಹಾಯಕರು ಹಾಗೂ ಪ್ರಾಚಾರ್ಯರಿಗೆ ವೇತನ ನೀಡಲು ಹೆಚ್ಚಿನ ಅನುದಾನ ಅಗತ್ಯವಿದೆ’ ಎಂದು ಸಚಿವರು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT