ಬುಧವಾರ, ಜನವರಿ 26, 2022
26 °C
ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ ಮಾಹಿತಿ ಕೇಳಿದ ಸಮಾಜ ಕಲ್ಯಾಣ ಇಲಾಖೆ

ನೇಮಕಾತಿ ನಿಯಮ ರಚನೆಯಾಗದೆ ಹುದ್ದೆ ಭರ್ತಿಗೆ ಮುಂದಾದ ಕನ್ನಡ ವಿ.ವಿ: ಆರ್‌ಟಿಐ

ಶಶಿಕಾಂತ ಎಸ್‌. ಶೆಂಬೆಳ್ಳಿ Updated:

ಅಕ್ಷರ ಗಾತ್ರ : | |

Prajavani

ಹೊಸಪೇಟೆ (ವಿಜಯನಗರ): ವೃಂದ ಮತ್ತು ನೇಮಕಾತಿ ನಿಯಮಗಳನ್ನು ರಚಿಸದೇ ಇಲ್ಲಿನ ಹಂಪಿ ಕನ್ನಡ ವಿಶ್ವವಿದ್ಯಾಲಯವು 17 ಬೋಧಕ ಹುದ್ದೆಗಳ ನೇಮಕಾತಿಗೆ ಮುಂದಾಗಿದೆ.

2018ರಲ್ಲಿ ಯುಜಿಸಿಯ ನಿಯಮಗಳಿಗೆ ತಿದ್ದುಪಡಿ ತರಲಾಗಿದೆ. ಅದಕ್ಕೆ ಪೂರಕವಾಗಿ ಹೊಸ ವೃಂದ ಮತ್ತು ನೇಮಕಾತಿ ನಿಯಮಗಳನ್ನು ವಿಶ್ವವಿದ್ಯಾಲಯ ರಚಿಸಬೇಕು. ಬಳಿಕ ಅದನ್ನು ವಿಶ್ವವಿದ್ಯಾಲಯದ ವೆಬ್‌ಸೈಟಿನಲ್ಲಿ ಪ್ರಕಟಿಸಿ, ಆಕ್ಷೇಪಣೆಗೆ ಕಾಲಾವಕಾಶ ನೀಡಬೇಕು. ಅನಂತರ ರಾಜ್ಯಪಾಲರಿಂದ ಅನುಮೋದನೆ ಪಡೆಯಬೇಕು. ಆದರೆ, ಇದ್ಯಾವ ಕೆಲಸ ಮಾಡದೆ ಹುದ್ದೆಗಳನ್ನು ತುಂಬಲು ವಿಶ್ವವಿದ್ಯಾಲಯ ಮುಂದಾಗಿದೆ.

‘ಬೋಧಕ ಮತ್ತು ಬೋಧಕೇತರ ಹುದ್ದೆಗಳ ನೇರ ನೇಮಕಾತಿಗಾಗಿ ವೃಂದ ಮತ್ತು ನೇಮಕಾತಿ ನಿಯಮಗಳನ್ನು ರಚಿಸಲಾಗಿಲ್ಲ’ ಎಂದು ಸ್ವತಃ ವಿಶ್ವವಿದ್ಯಾಲಯದ ಕುಲಸಚಿವ ಪ್ರೊ. ಎ. ಸುಬ್ಬಣ್ಣ ರೈ ಅವರು ವಿಜಯನಗರ ಜಿಲ್ಲೆ ಕೂಡ್ಲಿಗಿಯ ಎಂ.ಎಚ್‌. ಬಸವರಾಜು ಎಂಬುವರಿಗೆ ಮಾಹಿತಿ ಹಕ್ಕು ಕಾಯ್ದೆ ಅಡಿ ಕೇಳಿದ ಪ್ರಶ್ನೆಗೆ ಮಾಹಿತಿ ಕೊಟ್ಟಿದ್ದಾರೆ. ಆದರೆ, ವಾಸ್ತವದಲ್ಲಿ 1993 ಮತ್ತು 2017ರಲ್ಲಿ ನೇಮಕಾತಿ ಪರಿನಿಯಮವನ್ನು ವಿಶ್ವವಿದ್ಯಾಲಯ ರಚಿಸಿದೆ. ಆದರೆ, ಮಾಹಿತಿ ಹಕ್ಕು ಕಾಯ್ದೆಯಡಿ ತಪ್ಪು ಮಾಹಿತಿ ಕೊಟ್ಟಿದ್ದಾರೆ. ಒಂದುವೇಳೆ ವೃಂದ ನೇಮಕಾತಿ ನಿಯಮಗಳು ಆಗದೇ ಇದ್ದರೆ ‘ಮಿಸ್ಸಿಂಗ್‌ ರೋಸ್ಟರ್‌’ ತೋರಿಸಿ ಹುದ್ದೆಗಳನ್ನು ಹೇಗೆ ಗುರುತಿಸಿದ್ದಾರೆ ಎಂಬ ಪ್ರಶ್ನೆ ಮೂಡುವುದು ಸಹಜ. ಈ ಕುರಿತು ‘ಪ್ರಜಾವಾಣಿ’ ಕುಲಸಚಿವರನ್ನು ಪ್ರಶ್ನಿಸಿದಾಗ, ‘ಈ ಹಿಂದೆ ವೃಂದ ಮತ್ತು ನೇಮಕಾತಿ ನಿಯಮ ರಚಿಸಲಾಗಿದೆ’ ಎಂದು ಹೇಳಿಕೆ ಕೊಟ್ಟಿದ್ದಾರೆ.

ಬೋಧಕ ಹುದ್ದೆಗಳ ಅರ್ಜಿ ಪರಿಶೀಲನಾ ಸಮಿತಿಯ ಸದಸ್ಯರಾಗಿದ್ದ ಎಂ. ಮಲ್ಲಿಕಾರ್ಜುನಗೌಡ ಹೊಸ ವೃಂದ ನೇಮಕಾತಿಗೆ ಸಂಬಂಧಿಸಿದ ನಿಯಮಗಳ ಮಾಹಿತಿ ಪುಸ್ತಕ ಕೊಡಬೇಕೆಂದು ಕೇಳಿದ್ದ ಕಾರಣಕ್ಕಾಗಿಯೇ ಅವರನ್ನು ಬೇರೆಡೆ ವರ್ಗಾವಣೆಗೊಳಿಸಲಾಗಿದೆ ಎಂಬ ಆರೋಪ ಇದೆ.

ಮಾಹಿತಿ ಕೇಳಿದ ಸಮಾಜ ಕಲ್ಯಾಣ ಇಲಾಖೆ:

ಮೀಸಲಾತಿ ಕುರಿತು ಇತ್ತೀಚೆಗೆ ‘ಪ್ರಜಾವಾಣಿ’ ಪ್ರಕಟಿಸಿದ್ದ ವರದಿ ಹಾಗೂ ದೂರುಗಳು ಬಂದಿರುವುದರಿಂದ ಸಮಾಜ ಕಲ್ಯಾಣ ಇಲಾಖೆಯ ಆಯುಕ್ತರು ವಿಶ್ವವಿದ್ಯಾಲಯದ ಕುಲಸಚಿವರಿಗೆ ಪತ್ರ ಬರೆದಿದ್ದಾರೆ. ವಿಶ್ವವಿದ್ಯಾಲಯದ ವೃಂದ ಮತ್ತು ನೇಮಕಾತಿ ನಿಯಮಗಳು (ತಿದ್ದುಪಡಿಗಳು), ಬೋಧಕ ವೃಂದದ ಹುದ್ದೆ ದಾಖಲಾತಿ ಪುಸ್ತಕ, ಬೋಧಕ ವೃಂದದ ರೋಸ್ಟರ್‌ ದಾಖಲಾತಿ ಪುಸ್ತಕ, ಬೋಧಕ ವೃಂದದ ಮಂಜೂರಾದ ಆದೇಶ ಪ್ರತಿಗಳು, ಹುದ್ದೆ ಭರ್ತಿಯ ಅಧಿಸೂಚನೆಗೆ ಸಂಬಂಧಿಸಿದ ದಾಖಲೆಗಳನ್ನು ಕಳಿಸಿಕೊಡಬೇಕೆಂದು ಸೂಚಿಸಿದ್ದಾರೆ. ಈ ಪತ್ರ ‘ಪ್ರಜಾವಾಣಿ’ಗೆ ಲಭ್ಯವಾಗಿದೆ.

ಆಯಾ ಪ್ರವರ್ಗವಾರು ನೇಮಕಗೊಂಡು ನಿವೃತ್ತಿಯಾದವರ ವಿವರವನ್ನು ಬೋಧಕ ವೃಂದದ ಹುದ್ದೆ ದಾಖಲಾತಿ ಪುಸ್ತಕದಲ್ಲಿ ನಮೂದಿಸಬೇಕು. ಆದರೆ, ಇದುವರೆಗೆ ಆ ದಾಖಲಾತಿ ಪುಸ್ತಕವನ್ನೇ ನಿರ್ವಹಣೆ ಮಾಡಿಲ್ಲ. ರೋಸ್ಟರ್‌ ದಾಖಲಾತಿ ಪುಸ್ತಕವೂ ಇಲ್ಲ. ಹೀಗಿರುವಾಗ ನೇಮಕ ಪ್ರಕ್ರಿಯೆ ಯಾವ ನಿಯಮವನ್ನು ಅನುಸರಿಸಿ ಮಾಡುತ್ತಿದ್ದಾರೆ ಎನ್ನುವುದು ಸಂಶಯಕ್ಕೆ ಎಡೆ ಮಾಡಿಕೊಟ್ಟಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು