ವಿಶ್ವಕವಿ ಸಮ್ಮೇಳನ: ಮೂರು ದಿನ, ನೂರು ಸವಿ

ಬಳ್ಳಾರಿ, ಡಾ.ಜೋಳದರಾಶಿ ದೊಡ್ಡನಗೌಡರ ವೇದಿಕೆ: ಮೂರು ದಿನಗಳಲ್ಲಿ ಕಾವ್ಯದ ರಸದೌತಣದ ಜೊತೆಗೆ ಬಾಯಿಚಪ್ಪರಿಸಿ ಸವಿದಿದ್ದು ಇಲ್ಲಿಯ ಊಟ. ಹೊಟ್ಟೆ ತುಂಬ ಸಮಾಧಾನದ ಊಟ, ರುಚಿಕರ ಊಟ ಸೇವಿಸಿ, ಸಮ್ಮೇಳನದ ಯಶಸ್ವಿಯಾಗುವ ಒಂದು ಮಾನದಂಡವನ್ನು ಭರ್ತಿ ತುಂಬಿದಂತಾಯಿತು.
ಬಳ್ಳಾರಿಯಲ್ಲಿ ಜರುಗಿದ ಅರಿವು ಸಂಸ್ಥೆಯ ಆಶ್ರಯದಲ್ಲಿ ಡೆಕ್ಕನ್ ಹೆರಾಲ್ಡ್ ಹಾಗೂ ಪ್ರಜಾವಾಣಿಯ ಸಹಭಾಗಿತ್ವದಲ್ಲಿ ವಿಶ್ವಕವಿ ಸಮ್ಮೇಳನದ ಊಟದ ವ್ಯವಸ್ಥೆ ಅಚ್ಚುಕಟ್ಟಾಗಿತ್ತು. ಬಂದ ಅತಿಥಿಗಳಿಗೆ, ಪ್ರತಿನಿಧಿಗಳಿಗೆ ಏರ್ಪಡಿಸಿದ ಊಟದ ವ್ಯವಸ್ಥೆ ಮೆಚ್ಚುಗೆಗೆ ಪಾತ್ರವಾಯಿತು.
ರಾಯಚೂರು ಮೂಲದ ಮಲ್ಲಿಕಾರ್ಜುನ ಕೇಟರರ್ಸ್‌ನ 40–45ಜನರ ತಂಡ, ಹೈದರಾಬಾದ್‌ನ ಬಾಣಸಿಗರ ತಂಡದೊಂದಿಗೆ ಊಟ ಬಡಿಸಿತು. ಅವರೂ ಸಮಾಧಾನದಿಂದ ಊಟ ನೀಡುತ್ತಿದ್ದುದು ಇನ್ನೊಮ್ಮೆ ಹೋಗಿ ಊಟ ಮಾಡುವಂತಿತ್ತು.
ಕಡುಕೆಂಪು ಬಣ್ಣದ ಸೇಂಗಾಪುಡಿ, ಕಡುಕಂದು ಬಣ್ಣದ ಗುರೆಳ್ಳು ಚಟ್ನಿ. ಅವೆರಡಕ್ಕೂ ಚಂದಗೊಳಿಸಲು, ರುಚಿ ಹೆಚ್ಚಿಸಲೆಂದೇ ಬೆಳ್ಮುಗಿಲಿನಂಥ ಗಟ್ಟಿಮೊಸರು. ಜೊತೆಗೆ ಸೌತೆಕಾಯಿ, ಮೂಲಂಗಿ, ಕ್ಯಾರೆಟ್ಟುಗಳು 75ನೇ ಅಮೃತಮಹೋತ್ಸವದ ಊಟವಿದು ಎಂಬಂತೆ ಅಲಂಕರಿಸಲಾಗುತ್ತಿತ್ತು. ಸುವರ್ಣಗಡ್ಡೆಯ ಮಂದ ಸಿಹಿ, ಮೂಲಂಗಿಯ ಕಿರುಕಹಿ, ಈರುಳ್ಳಿಯ ಖಾರ ಸಲಾಡ್ ಅನ್ನು, ಚಟ್ನಿಪುಡಿಗಳ ಜೊತೆಗೆ ಸವಿಯುವುದೇ ಒಂದು ಖುಷಿ ಎಂಬಂತೆ ಸೇವಿಸುತ್ತಿದ್ದವರ ಸಂಖ್ಯೆ ಹೆಚ್ಚಿತ್ತು. ಕ್ಯಾಲರಿಗಳ ಲೆಕ್ಕ ಹಾಕುತ್ತ, ಕಳೆದೆರಡು ವರ್ಷಗಳಲ್ಲಿ ಕಳೆದುಕೊಂಡ ತೂಕದ ಕುರಿತು ಚರ್ಚಿಸುತ್ತಲೇ ಸೌತೆಕಾಯಿ ಕಡಿಯುತ್ತಿದ್ದರು.
ಇನ್ನೊಂದು ಗುಂಪು ತಿಂದುಂಡು ಸುಖವಾಗಿರಲು ಎಂಬಂತೆ ಊಟವನ್ನು ಸವಿದರು. ಸಂಭ್ರಮಿಸಿದರು. ಖಟಿರೊಟ್ಟಿಗೆ ಎಣ್ಣೆಗಾಯಿ, ಪೊಪ್ಪು, ಮೊಸರು ಚಟ್ನಿಪುಡಿಗಳೊಂದಿಗೆ ಸವಿಯುತ್ತಲೇ ಸೌತೆಕಾಯಿ, ಮೂಲಂಗಿ ಕಡಿಯುತ್ತಿದ್ದರು.
ಮೂರುದಿನಗಳಲ್ಲಿ ಮೊದಲ ದಿನದ ಮಸಾಲಾ ರೈಸ್, ಎರಡನೆಯ ದಿನದ ವೆಜ್ ಪುಲಾವ್, ಮೂರನೆಯ ದಿನದ ದಮ್ ಬಿರಿಯಾನಿಗೆ ಚೂರೇಚೂರು ಖಾರ ಹೆಚ್ಚೆನಿಸಿದರೂ, ಹಸಿವಿಗೆ ಕಿಚ್ಚು ಹಚ್ಚುವಂತಹ ರುಚಿಯಿತ್ತು. ಇದನ್ನು ಮಂದಗೊಳಿಸಲು ಸಿಹಿಮಿಶ್ರಿತ ಮೊಸರಿನ ರೈತ, ಬಿಳಿಮಲ್ಲಿಗೆಯಂಥ ಅನ್ನಕ್ಕೆ ಬಣ್ಣದ ಸೊಕ್ಕಿರಬಾರದು ಎಂಬಂತೆ ಕೆಂಬಣ್ಣದ ಸಾರು ಸುರಿಯುತ್ತಿದ್ದರು.
ಜೊತೆಗೆ ರಾಯಚೂರು ಮತ್ತು ಬಳ್ಳಾರಿಯ ವಿಶೇಷ ಎನ್ನುವಂಥ ಹಪ್ಪಳ ಸಂಡಿಗೆಗಳು.
ಮನಗೆದ್ದ ಸಿಹಿ: ಪಾಯಸ, ತವಾ ಮೀಠಾ, ಡಬಲ್ ಕಾಮೀಠಾ, ಪೈನಾಪಲ್ ಜಿಲೇಬಿ, ಮಟಕಾ ರಬಡಿ
ಹಿತೋಷ್ಣವೆನಿಸುವಂಥ ಬಿಸಿ, ಹದವಾದ ಸಿಹಿ, ಸಕ್ಕರೆ ಹೆಚ್ಚಾಗದ ಪಾಯಸ, ಎಲ್ಲರೂ ಮತ್ತೊಂದು ಕಪ್‌ಗೆ ಮುಂದಾಗುವಂತೆ ಮಾಡಿದ್ದರು. ನೀಡುವವರೂ, ಬಟ್ಟಲು ತುಂಬುವಂತೆ, ಸೌಟು ತುಂಬಿ ಬಡಿಸಿದಂತೆ...
ಬಹುತೇಕರಿಗೆ ಹೊಸದೆನಿಸಿದ್ದು ಡಬಲ್ ಕಾ ಮೀಠಾ. ನಿಜಾಮರ ನಾಡಿನ ಈ ಸಿಹಿಗೆ ಈ ಹೆಸರು ಬರಲು ಕಾರಣ, ಅದರಲ್ಲಿ ಬಳಸುವ ಬ್ರೆಡ್‌ನಿಂದಾಗಿ. ಬೇಕಿಂಗ್ ಕೌಶಲವನ್ನು ಕಲಿಯಲೆಂದೇ ನಿಜಾಮರು ತಮ್ಮ ಬಾಣಸಿಗರನ್ನು ಇಂಗ್ಲೆಂಡ್‌ಗೆ ಕಳುಹಿಸಿದ್ದರಂತೆ. ಅವರು ಬ್ರೆಡ್ ಮಾಡುವುದನ್ನು ಕಲಿತು ಬಂದಾಗ ಅದಕ್ಕೆ ಡಬಲ್ ರೋಟಿ ಎಂದು ಹೆಸರಿಟ್ಟಿದ್ದರು. ಈ ಡಬಲ್ ರೋಟಿಯಂಥ ಬ್ರೆಡ್ ಅನ್ನು, ಮೊದಲು ಎಣ್ಣೆಯಲ್ಲಿ ಕರಿದು, ಗರಿಗರಿಯಾಗಿಸಿ, ಗಟ್ಟಿಹಾಲು ಅಥವಾ ಮಿಲ್ಕ್‌ಮೇಡ್‌ನಲ್ಲಿ ನೆನೆಸಲಾಗುತ್ತದೆ. ಪ್ರತಿ ಡಬಲ್‌ಗೂ ಇದನ್ನು ಪ್ರತ್ಯೇಕವಾಗಿ ಮಾಡಬೇಕು. ಹಂಗೆ ಹಾಲನ್ನು ಹೀರಿಕೊಂಡ ಬ್ರೆಡ್ ತುಣುಕನ್ನು ಸಕ್ಕರೆಯ ಪಾಕದಲ್ಲಿ ಅದ್ದಲಾಗುತ್ತದೆ. ಅದರಲ್ಲಿ ಒಂದಷ್ಟು ಒಣಹಣ್ಣುಗಳನ್ನು ಉದುರಿಸಿದರೆ ಡಬಲ್‌ಕಾಮೀಠಾ ಸಿದ್ಧವಾಗುತ್ತದೆ.
ಇದಲ್ಲದೆ, ಬೂದುಗುಂಬುಳದ ಪೇಠಾವನ್ನು ಸಣ್ಣೆಳೆಯ ಶ್ಯಾವಿಗೆಯೊಂದಿಗೆ ಅಂಗೂರಿ ಜಾಮೂನನ್ನು ಅದ್ದಿ ಕೊಟ್ಟಿದ್ದು ತವಾ ಮೀಠಾ. ಒಂದೇ ಬಟ್ಟಲಿನಲ್ಲಿ ಮೂರು ವಿಧದ ಸಿಹಿ ಸವಿಯುವುದರಲ್ಲಿ ಊಟ ಪರಿಪೂರ್ಣ ಅನಿಸುತ್ತಿತ್ತು.
ಬಂದವರಲ್ಲಿ ಯಾರೂ ಗಲಾಟೆ ಮಾಡದೆ, ಸಾಲಿನಲ್ಲಿ ನಿಂತು ಊಟ ಬಡಿಸಿಕೊಂಡು, ಸನಿಹದಲ್ಲಿ ಹಾಕಿರುವ ಮೇಜು ಕುರ್ಚಿಗಳಲ್ಲಿ ಕುಳಿತು ಸಮಾಧಾನವಾಗಿ ಸಂಪನ್ನ ಊಟ ಸವಿದರು.
ಊಟದ ಮೇಜಿನ ಮೇಲಿನ ಗೋಷ್ಠಿಗಳಿಗೆ ಇನ್ನೊಂದೇ ಬಣ್ಣ ಬಂದಿತ್ತು. ಅಂದು ಕೇಳಿದ ಕವಿತೆಗಳಿಂದ ಆರಂಭಿಸಿ, ಸಿನಿಮಾಗಳ ವರೆಗೂ, ಉಡುಗೆ ತೊಡುಗೆಯಿಂದ ಆರಂಭಿಸಿ, ಓದಿರುವ ಪುಸ್ತಕಗಳವರೆಗೂ ಚರ್ಚೆಗಳು ಅವ್ಯಾಹತವಾಗಿ ಸಾಗಿದ್ದವು.
ಕೈ ಒಣಗಿದರೂ, ತಟ್ಟೆ ಒಣಗಿದರೂ ಉಣ್ಣುವ, ಮಾತಾಡುವ, ಸವಿಮಾತುಗಳ ಹೊಟ್ಟೆ ತುಂಬುತ್ತಿರಲಿಲ್ಲ. ಮನಸು ತುಂಬುತ್ತಿರಲಿಲ್ಲ... ಎಲ್ಲ ಸಮ್ಮೇಳನಗಳೂ ಹೀಗಾಗಲಿ ಎಂಬ ಆಶಯದೊಂದಿಗೆ ವಿದಾಯ ಹೇಳುತ್ತಿದ್ದರು. ಹಾಗೆ ವಿದಾಯ ಹೇಳುವ ಮುನ್ನ ಒಂದಷ್ಟು ಸೆಲ್ಫಿ ಕ್ಲಿಕ್ಕಿಸಿ, ಫೋನ್ ನಂಬರ್‌ಗಳನ್ನು ವಿನಿಮಯ ಮಾಡಿಕೊಳ್ಳುವುದು ಮರೆಯುತ್ತಿರಲಿಲ್ಲ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.