ಶುಕ್ರವಾರ, ಮಾರ್ಚ್ 31, 2023
22 °C

‘ಪೆಂಡಾಲ್‌’ ಹೇಳಿಕೆ: ಕಸಾಪ ಅಧ್ಯಕ್ಷ ಮಹೇಶ ಜೋಶಿ ಆರೋಪ ಸಾಬೀತಿಗೆ ಬಿಳಿಮಲೆ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಹೇಶ ಜೋಶಿ ಅವರು ‘ಪೆಂಡಾಲ್‌’ ಬಗ್ಗೆ ಮಾಡಿರುವ ಆರೋಪ ಹಾಸ್ಯಾಸ್ಪದ. ಅವರು ತಮ್ಮ ಹೇಳಿಕೆ ಸಾಬೀತು ಪಡಿಸಬೇಕು. ಇಲ್ಲವಾದಲ್ಲಿ ಪರಿಷತ್ತಿನ ಅಧ್ಯಕ್ಷ ಪೀಠಕ್ಕೆ ಅವರು ಯೋಗ್ಯರಲ್ಲ ಎಂದೇ ಭಾವಿಸಬೇಕಾಗುತ್ತದೆ’ ಎಂದು ಲೇಖಕ ಹಾಗೂ ಜೆಎನ್‌ಯು ನಿವೃತ್ತ ಪ್ರಾಧ್ಯಾಪಕ ಪುರುಷೋತ್ತಮ ಬಿಳಿಮಲೆ ತಿಳಿಸಿದ್ದಾರೆ.

‘ಬಿಳಿಮಲೆ ಅವರು ಸಾಹಿತ್ಯ ಸಮ್ಮೇಳನದಲ್ಲಿ ಶಾಮಿಯಾನ ಪೆಂಡಾಲ್‌ ಹಾಕಲು ಪರಿಚಿತರಾದ ಮುಸ್ಲಿಂ ವ್ಯಾಪಾರಿಯೊಬ್ಬರಿಗೆ ಅವಕಾಶ ಕೊಡಿಸಿ ಎಂದು ಕೇಳಿದ್ದರು‘ ಎಂದು ಜೋಶಿ ಅವರು ಗುರುವಾರ ಆರೋಪಿಸಿದ್ದರು.

ಇದನ್ನೂ ಓದಿ: ಪೆಂಡಾಲ್‌ ಆರ್ಡರ್‌ ಕೊಡಿಸದಿದ್ದಕ್ಕೆ ಪುರುಷೋತ್ತಮ ಬಿಳಿಮಲೆ ಟೀಕೆ: ಮಹೇಶ ಜೋಶಿ

ಇದಕ್ಕೆ ಸ್ಪಷ್ಟನೆ ನೀಡಿರುವ ಬಿಳಿಮಲೆ, ‘ಸಾರ್ವಜನಿಕ ಸಂಘ–ಸಂಸ್ಥೆಗಳ ಜವಾಬ್ದಾರಿ ಹೊತ್ತವರು ಲಜ್ಜೆಗೆಟ್ಟು, ಯಾವ ಮಟ್ಟಕ್ಕೆ ಇಳಿಯಬಹುದು ಎಂಬುದಕ್ಕೆ ಮಹೇಶ ಜೋಶಿ ಅವರ ಮಾತುಗಳೇ ಸಾಕ್ಷಿ. ಇಂಥದ್ದರ ವಿರುದ್ಧವಾಗಿ ಪ್ರತ್ಯೇಕ ಸಮ್ಮೇಳನಗಳನ್ನು ಸಂಘಟಿಸಿಕೊಳ್ಳಬೇಕಾದ್ದು ಇವತ್ತಿನ ತುರ್ತು ಅಗತ್ಯ’ ಎಂದು ಹೇಳಿದ್ದಾರೆ.

‘ನಾನು ಜೋಶಿ ಅವರ ಸಹಿತವಾಗಿ ಯಾರ ವೈಯಕ್ತಿಕ ವಿಚಾರಗಳ ಬಗ್ಗೆಯೂ ಬರೆದಿಲ್ಲ. ಅವರು ಸಾಹಿತ್ಯ ಸಮ್ಮೇಳನಕ್ಕೆ ನನ್ನನ್ನು ಕರೆದಿದ್ದರು. ನನ್ನದೇ ಕಾರಣಗಳಿಗಾಗಿ ಬರಲಾಗುವುದಿಲ್ಲ ಎಂದು ಹೇಳಿದ್ದೇನೆ. ಅದಕ್ಕೆ ಅವರು ಇಷ್ಟೊಂದು ಆರೋಪಗಳನ್ನು ಮಾಡುವ ಅಗತ್ಯ ಇರಲಿಲ್ಲ’ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

**

13 ಮುಸ್ಲಿಮರಿಗೆ ಹಾವೇರಿಯ ಸಮ್ಮೇಳನದಲ್ಲಿ ಅವಕಾಶ ಕೊಟ್ಟಿದ್ದೇವೆ ಎನ್ನುವ ಕಸಾಪ ಅಧ್ಯಕ್ಷರ ಹೇಳಿಕೆ ಕನ್ನಡ ಸಾಹಿತ್ಯದ ಕುರಿತು ಅವರ ಅಪಕ್ವ ತಿಳಿವಳಿಕೆ ತೋರಿಸಿದೆ.
–ಬಿ.ಎಂ. ಹನೀಫ್‌, ಪತ್ರಕರ್ತ

**

ಜನ ಸಾಹಿತ್ಯ ಸಮ್ಮೇಳನಕ್ಕೂ ನನಗೂ ಸಂಬಂಧವಿಲ್ಲ. ಕಸಾಪ ಅಧ್ಯಕ್ಷ ಮಹೇಶ ಜೋಶಿ ಅವರ ಹೇಳಿಕೆ ಬೇಜವಾಬ್ದಾರಿಯಿಂದ ಕೂಡಿದೆ.
–ಆರ್‌.ಜಿ.ಹಳ್ಳಿ ನಾಗರಾಜ್, ಲೇಖಕ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು