ಭಾನುವಾರ, ಜೂನ್ 13, 2021
23 °C

ರಾಜ್ಯ ಸರ್ಕಾರ ತಲಾ 10 ಕಿಲೋ ಅಕ್ಕಿ, ₹ 10 ಸಾವಿರ ನೀಡಲಿ: ಸಿದ್ದರಾಮಯ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ರಾಜ್ಯದಲ್ಲಿ ಕೋವಿಡ್‌ ಪಾಸಿಟಿವಿಟಿ ಪ್ರಮಾಣ ಶೇ 5ಕ್ಕಿಂತ ಕಡಿಮೆ ಆಗುವವರೆಗೂ ಲಾಕ್‌ಡೌನ್‌ ಘೋಷಿಸಬೇಕು. ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಘೋಷಿಸಿರುವ ಪ್ಯಾಕೇಜ್‌ ಏನೇನೂ ಅಲ್ಲ. ಸಂಕಷ್ಟದಲ್ಲಿರುವ ವರ್ಗಕ್ಕೆ ರಾಜ್ಯ ಸರ್ಕಾರ 10 ಕಿಲೋ ಅಕ್ಕಿ ಮತ್ತು ₹ 10 ಸಾವಿರ ಕೊಡಬೇಕು’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಒತ್ತಾಯಿಸಿದರು.

ಸುದ್ದಿಗಾರರ ಜೊತೆ ಬುಧವಾರ ಮಾತನಾಡಿದ ಅವರು, ‘ಇದೇ ಪರಿಸ್ಥಿತಿ ತಮಿಳುನಾಡು, ಕೇರಳ, ತೆಲಂಗಾಣ, ಅಂಧ್ರದಲ್ಲಿ ಇದ್ದರೂ ಅಲ್ಲಿ ಹೆಚ್ಚಿನ ಪರಿಹಾರ ಘೋಷಿಸಿದ್ದಾರೆ. ಅವರು ಬಡವರ ರಕ್ಷಣೆ ಮಾಡಬೇಕೆಂದು ಪರಿಹಾರ ಘೋಷಣೆ ಮಾಡಿದಾರೆ. ಇಲ್ಲೂ ಅದೇ ರೀತಿ ಮಾಡಬೇಕು. ಐದು ದಿನವೋ, ಹತ್ತು ದಿನವೋ, ಹದಿನೈದು ದಿನವೋ ಒಟ್ಟಿನಲ್ಲಿ ಕೋವಿಡ್‌ ಪಾಸಿಟಿವಿಟಿ ರೇಟ್ ಶೇ 5ಕ್ಕಿಂತ ಕಡಿಮೆ ಆಗುವವರೆಗೂ ಲಾಕ್‌ಡೌನ್‌ ಮಾಡಿ’ ಎಂದು ಆಗ್ರಹಿಸಿದರು.

‘ಯಡಿಯೂರಪ್ಪ ₹ 1,250 ಕೋಟಿಯ ಪರಿಹಾರ ಪ್ಯಾಕೇಜ್ ಘೋಷಣೆ ಮಾಡಿದಾರೆ. ಆದರೆ, ವಾಸ್ತವಿಕವಾಗಿ ₹ 1,111 ಕೋಟಿ ಮಾತ್ರ. ಸಹಕಾರ ಇಲಾಖೆಗೆ ಸಂಬಂಧಿಸಿದಂತೆ ಅವರು ಘೋಷಿಸಿರುವುದು ಸಾಲದ ಕಂತು ಮುಂದೆ ಹಾಕುವುದು ಮಾತ್ರ. ಅದರಿಂದ ಸರ್ಕಾರದ ಮೇಲೆ ಹೊರೆ ಆಗುವುದಿಲ್ಲ. ಕಟ್ಟಡ ಕಾರ್ಮಿಕರಿಗೆ ಕೊಡುವುದು ಅವರ ಕಲ್ಯಾಣ ನಿಧಿಯ ಹಣ. ಸರ್ಕಾರದ ಖಜಾನೆಯಿಂದ ಒಂದು ರೂಪಾಯಿಯೂ ಹೋಗಲ್ಲ’ ಎಂದರು.

‘ಕಾರ್ಮಿಕರ ಕಲ್ಯಾಣ ನಿಧಿಯಲ್ಲಿ ಕಾರ್ಮಿಕರೇ ಕೊಟ್ಟಿರುವ ವಂತಿಗೆ ಹಣ. ₹ 434 ಕೋಟಿ ಹೊರೆ ಬಜೆಟ್ ಮೇಲೆ ಬರಲ್ಲ. ಅಲ್ಲಿಗೆ ₹ 628.38 ಕೋಟಿ ಮಾತ್ರ ಬಜೆಟ್ ಮೇಲೆ ಹೊರೆ ಬರುವುದು. ಆದರೆ, ₹ 1,250 ಕೋಟಿ ಎಂದು ಹೇಳುತ್ತಾರೆ. ಕಳೆದ ಬಾರಿ ₹ 2,100 ಕೋಟಿ ಪ್ಯಾಕೇಜ್ ಘೋಷಣೆ ಮಾಡಿದ್ದರು. ಅದರಲ್ಲಿ ₹ 850 ಕೋಟಿ‌ ಕಟ್ಟಡ ಕಾರ್ಮಿಕರಿಗೆ ಅವರ ಕಲ್ಯಾಣ ನಿಧಿಯಿಂದ ಕೊಟ್ಟಿದ್ದರು. ಈ ಬಾರಿ ಕಡಿಮೆ ಮಾಡಿದ್ದಾರೆ. ಕಳೆದ ಬಾರಿ ಏಳು‌ ಲಕ್ಷ ಚಾಲಕರಿಗೆ ಪರಿಹಾರ ಕೊಡುತ್ತೇವೆ ಎಂದು ಹೇಳಿ ಎಲ್ಲರಿಗೂ ಕೊಡಲಿಲ್ಲ’ ಎಂದರು.

‘ಈ ಬಾರಿ ಉಚಿತವಾಗಿ ಅಕ್ಕಿ ಕೊಡಿ ಎಂದು ನಾನು ಒತ್ತಾಯಿಸಿದ್ದೆ. ಕಾರ್ಮಿಕರಿಗೆ, ಬಡವರಿಗೆ, ಬೀದಿಬದಿ ವ್ಯಾಪಾರಿಗಳಿಗೆ, ಬಿಪಿಎಲ್ ಕಾರ್ಡ್ ಹೊಂದಿರುವವರಿಗೆ ನೆರವು ಕೊಡಿ ಎಂದಿದ್ದೆ. ತಮಿಳುನಾಡಿನಲ್ಲಿ ಎರಡು ಕೋಟಿಗೂ ಹೆಚ್ಚು ಕುಟುಂಬಗಳಿಗೆ ₹ 4 ಸಾವಿರ‌‌ ಪರಿಹಾರ ಘೋಷಿಸಿದ್ದಾರೆ. ಅಂದರೆ, ಅಲ್ಲಿ ಸುಮಾರು ₹ 8 ಸಾವಿರ ಕೋಟಿ ಪರಿಹಾರ ಘೋಷಣೆ ಆಗಿದೆ. ಆದರೆ,  ನಮ್ಮ ಸರ್ಕಾರ ಕೇವಲ ₹ 628 ಕೋಟಿ ಪರಿಹಾರ ಘೋಷಣೆ ಮಾಡಿದೆ’ ಎಂದರು.

‘ಕೊರೊನಾ ಪರೀಕ್ಷೆ ಕಡಿಮೆ ಮಾಡಿದ್ದಾರೆ. ಪಾಸಿಟಿವ್ ಪ್ರಮಾಣ ಜಾಸ್ತಿ ಆಗಿದೆ. ಎರಡು ಜಿಲ್ಲೆಗಳಲ್ಲಿ ಶೇ 55 ಆಗಿದೆ. ನಿಯಂತ್ರಕ್ಕೆ ಬಂದಿದೆ ಎಂದು ಹೇಳಬೇಕಾದರೆ ಶೇ 5ಕ್ಕಿಂತ ಕಡಿಮೆ ಇರಬೇಕು. ರಾಜ್ಯದ ನಾನಾ ಜಿಲ್ಲೆಗಳಲ್ಲಿ ಪಾಸೆಟಿವ್‌ ಪ್ರಮಾಣ ಶೇ 25ರಿಂದ ಶೇ 55 ಇದೆ. ಪರೀಕ್ಷೆ ಹೆಚ್ಚಿಸಿದರೆ ನೂರಕ್ಕೆ 55 ಜನರಿಗೆ ಪಾಸಿಟಿವ್ ಇರುವುದು ಗೊತ್ತಾಗುತ್ತಿದೆ. ಸತ್ತವರ ಲೆಕ್ಕ ಸುಳ್ಳು ಹೇಳುತ್ತಿದ್ದಾರೆ. ಈಗ ಗ್ರಾಮೀಣ ಭಾಗಕ್ ಸೋಂಕು ಹಬ್ಬಿದೆ. ಅಲ್ಲಿ ಸತ್ತವರ ಲೆಕ್ಕ ಸಿಗಲ್ಲ. ಸರ್ಕಾರ ಜನರ ಕಣ್ಣಿಗೆ ಮಣ್ಣೆರಚುವ ಕೆಲಸ ಮಾಡುತ್ತಿದೆ. ಸತ್ಯ ಮುಚ್ಚಿಟ್ಟು ಸುಳ್ಳು ಹೇಳುತ್ತಿದೆ’ ಎಂದು ದೂರಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು