ಸೋಮವಾರ, ಆಗಸ್ಟ್ 8, 2022
22 °C

ಜಂಗಮ ಪ್ರೇಮಿ ಯಡಿಯೂರಪ್ಪ ಬದಲಾವಣೆ ಬೇಡ: ಮಠಾಧೀಶರ ಒಕ್ಕೊರಲ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿಜಯಪುರ: ‘ಜಂಗಮ, ಸಾಧು, ಸಂತರ ಪ್ರೇಮಿಯಾಗಿರುವ ಯಡಿಯೂರಪ್ಪ ಅವರನ್ನು ಇನ್ನುಳಿದ ಅವಧಿಗೂ ಮುಖ್ಯಮಂತ್ರಿಯಾಗಿ ಮುಂದುವರಿಸಬೇಕು’ ಎಂದು ವಿಜಯಪುರ–ಬಾಗಲಕೋಟೆ ಜಿಲ್ಲೆಯ 17ಕ್ಕೂ ಅಧಿಕ ವಿವಿಧ ಮಠಾಧೀಶರು ಬಿಜೆಪಿ ಹೈಕಮಾಂಡ್‌ಗೆ ಒಕ್ಕೊರಲಿನಿಂದ ಆಗ್ರಹಿಸಿದರು.

ಯಡಿಯೂರಪ್ಪ ಅವರಿಗೆ ಬೆಂಬಲ ಸೂಚಿಸಿ ನಗರದಲ್ಲಿ ಗುರುವಾರ ನಡೆದ ಮಠಾಧೀಶರ ಸಭೆ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಬಬಲೇಶ್ವರದ ಡಾ.ಮಹಾದೇವ ಶಿವಾಚಾರ್ಯ ಸ್ವಾಮಿ, ಯಡಿಯೂರಪ್ಪನವರು ನಾಡಿನ ಎಲ್ಲ ಜಾತಿ, ಜನಾಂಗವನ್ನು ಒಟ್ಟಿಗೆ ಕರೆದುಕೊಂಡು ಹೋಗುತ್ತಿರುವ ಧೀಮಂತ ರಾಜಕಾರಣಿಯಾಗಿದ್ದಾರೆ. ಯಾವುದೇ ಕಾರಣಕ್ಕೂ ಅವರನ್ನು ಹದ್ದೆಯಿಂದ ಕೆಳಗಳಿಸಬಾರದು. ಬಿಜೆಪಿ ವರಿಷ್ಠರು ನಮ್ಮ ಅಭಿಪ್ರಾಯಕ್ಕೆ ಬೆಲೆ ಕೊಡಬೇಕು ಎಂದು ಮನವಿ ಮಾಡಿದರು.

ಮನಗೂಳಿ ಹಿರೇಮಠದ ಸಂಗನಬಸವ ಸ್ವಾಮಿ ಮಾತನಾಡಿ, ಯಡಿಯೂರಪ್ಪನವರಿಗೆ ನಾಡಿನ ಮಠಾಧೀಶರು ಸೇರಿದಂತೆ ಕಾಂಗ್ರೆಸ್‌, ಜೆಡಿಎಸ್‌ನ ಅನೇಕ ಮುಖಂಡರೇ ಬೆಂಬಲ ನೀಡುತ್ತಿರುವಾಗ ಬಿಜೆಪಿ ಶಾಸಕರು, ಸಚಿವರು ಬೆನ್ನೆಲುಬಾಗಿ ನಿಲ್ಲಬೇಕು. ಅಣ್ಣ–ತಮ್ಮರಾಗಿ ಒಗ್ಗಟ್ಟಿನಿಂದ ನಡೆಯಬೇಕು ಎಂದು ಸಲಹೆ ನೀಡಿದರು.

ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ನಾಡಿನ ಮಠಾಧೀಶರ ಮೇಲೆ ಅನಗತ್ಯ ಆರೋಪ ಮಾಡುವುದನ್ನು ನಿಲ್ಲಿಸಬೇಕು. ನಾವಾರೂ ನಿಮಗೆ ಕೇಡು ಬಯಸಿಲ್ಲ. ನೀವೂ ಸಹ ಮಠಾಧೀಶರ ಬಗ್ಗೆ ಹಗುರವಾಗಿ ಮಾತನಾಡಬಾರದು ಎಂದರು.

ಯಡಿಯೂರಪ್ಪ ಹಣ ನೀಡಿರುವ ಹಿನ್ನೆಲೆಯಲ್ಲಿ ಮಠಾಧೀಶರು ಬೆಂಬಲಿಸುತ್ತಾರೆ ಎಂಬ ಆರೋಪದಲ್ಲಿ ಹುರುಳಿಲ್ಲ. ಮಠಗಳಿಗೆ ಹಣ ನೀಡಿರುವ ಬಗ್ಗೆ ತಮ್ಮ ಬಳಿ ಪುರಾವೆಗಳು ಏನಾದರೂ ಇದ್ದರೆ ಬಹಿರಂಗಪಡಿಸಿ ಎಂದು ಹೇಳಿದರು.

ಮುಧೋಳ ತಾಲ್ಲೂಕಿನ ಶಿರೋಳದ ಶಂಕರಾರೂಡ ಸ್ವಾಮಿ ಮಾತನಾಡಿ, ಕೋವಿಡ್‌, ಪ್ರವಾಹದಂತಹ ಸಂಕಷ್ಟದ ಸಮಯದಲ್ಲೂ ಯಡಿಯೂರಪ್ಪ ನಾಡಿಗೆ ಉತ್ತಮ ಆಡಳಿತ ನೀಡಿದ್ದಾರೆ. ಅವರು ಮುಂದುವರಿಯಬೇಕು. ಒಂದು ವೇಳೆ ಬದಲಾವಣೆ ಮಾಡುವುದೇ ಅಂತಿಮ ನಿರ್ಧಾರವಾಗಿದ್ದರೇ ಉತ್ತರ ಕರ್ನಾಟಕದವರನ್ನೇ ಮುಂದಿನ ಮುಖ್ಯಮಂತ್ರಿ ಮಾಡಬೇಕು ಎಂದು ಒತ್ತಾಯಿಸಿದರು.

ಇಂಡಿಯ ಡಾ. ಸ್ವರೂಪಾನಂದ ಸ್ವಾಮೀಜಿ, ‘ರಾಜಾಹುಲಿ’ ಎಂದೇ ಗುರುತಿಸಿಕೊಂಡಿರುವ ಯಡಿಯೂರಪ್ಪ ಅವರನ್ನೇ ಈ ಅವಧಿಗೆ ಮುಖ್ಯಮಂತ್ರಿಯನ್ನಾಗಿ ಮುಂದುವರಿಸಬೇಕು. ಮುಂದಿನ ಅವಧಿಗೆ ಬೇರೆಯವರಿಗೆ ಅವಕಾಶ ನೀಡಬೇಕು ಎಂದರು. 

ಬುರಾಣಾಪುರ ಅರೂಡ ಆಶ್ರಯಮದ ಯೋಗೇಶ್ವರಿ ಮಾತಾಜಿ, ರಾಜಕೀಯ ಚಟುವಟಿಕೆಗಳಲ್ಲಿ ಮಠಾಧೀಶರು ಪಾಲ್ಗೊಳ್ಳಬಾರದು, ಪ್ರತಿಕ್ರಿಯಿಸಬಾರದು ಎಂಬುದು ಸರಿಯಲ್ಲ. ರಾಜ–ಮಹಾರಾಜರ ಕಾಲದಿಂದಲೂ ಮಠಾಧೀಶರು ಆಡಳಿತಕ್ಕೆ ಸಲಹೆ, ಸೂಚನೆ ನೀಡುತ್ತಲೇ ಬಂದಿದ್ದಾರೆ. ಇದೇನು ಹೊಸ ಸಂಬಂಧವಲ್ಲ ಎಂದರು.

ಕರ್ನಾಟಕದ ಧೀಮಂತ ನಾಯಕ ಯಡಿಯೂರಪ್ಪ, ಹೋರಾಟದ ಬದುಕು ಅವರದ್ದಾಗಿದೆ. ತಾಳ್ಮೆಯಿಂದಲೇ ಎಲ್ಲವನ್ನು ಜಯಿಸಿದ ವ್ಯಕ್ತಿಯಾಗಿದ್ದಾರೆ. ಅವರ ಬದಲಾವಣೆ ವಿಷಯ ಕೇಳಿ ಬೇಸರವಾಗಿದೆ ಎಂದು ಹೇಳಿದರು.

ಜಕ್ಕನೂರು ಕಮರಿಮಠದ ಸಿದ್ಧಲಿಂಗದೇವರು, ಆಲಗೂರಿನ ಶಾಂತಿಮೂರ್ತಿ ಲಕ್ಷ್ಮಣ ಮುತ್ಯಾ, ರೂಗಿ ಅಡವಿ ಮಠದ ನಿತ್ಯಾನಂದ ಸ್ವಾಮಿ, ಮೆಟಗುಡ್ಡ ವೀರಾನಂದಾಶ್ರಮದ ಚನ್ನಮಲ್ಲಯ್ಯ ಸ್ವಾಮಿ, ತಡವಲಗದ ರಾಚೊಠೇಶ್ಬರ ಶಿವಾಚಾರ್ಯ ಸ್ವಾಮಿ, ತಿಕೋಟಾದ ಚನ್ನಮಲ್ಲಿಕಾರ್ಜುನ ಸ್ವಾಮಿ, ಆಲಮೇಲ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮಿ, ಕುಮಸಗಿ ಬ್ರಹ್ಮಲಿಂಗೇಶ್ವರಮಠದ ಶಿವಾನಂದ ಶಿವಾಚಾರ್ಯ ಸ್ವಾಮಿ, ಮಂಗನಾ ಮಠದ ಜಡ್ಡಿ ಶಾಂತ ಲಿಂಗೇಶ್ವರ ಸ್ವಾಮಿ, ಇಂಚಿಗೇರಿಯ ರುದ್ರಮುನಿ ದೇವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು