ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡದ ತಾಣ: ಪ್ರತಿಬಿಂಬದ ಚತುರ್ಮುಖ ಬಸದಿ

Last Updated 30 ಅಕ್ಟೋಬರ್ 2021, 19:30 IST
ಅಕ್ಷರ ಗಾತ್ರ

ಕಾರ್ಕಳ ಹೆಸರು ಕೇಳಿದ ಕೂಡಲೇ ನೆನಪಿಗೆ ಬರುವುದೇ ಎಲ್ಲವನ್ನೂ ನೋಡಿಕೊಂಡು ಮುಗುಳ್ನಗುವಿನೊಂದಿಗೆ ಶಾಂತವಾಗಿ ನಿಂತಿರುವ ಗೊಮ್ಮಟೇಶ್ವರನ ಮೂರ್ತಿ. ಉಡುಪಿಯಿಂದ 40 ಕಿ.ಮೀ. ದೂರದಲ್ಲಿರುವ ಕಾರ್ಕಳದಲ್ಲಿ ಗೊಮ್ಮಟೇಶ್ವರ ಮಾತ್ರ ಅಲ್ಲ, ನೋಡಲು ಹಲವಾರು ಸ್ಥಳಗಳಿವೆ, ಅವುಗಳಲ್ಲಿ ಪ್ರಮುಖವಾದದ್ದು ‘ಚತುರ್ಮುಖ ಬಸದಿ’.

ನಮ್ಮ ದೇವಾಲಯಗಳು ಕೇವಲ ಪ್ರಾರ್ಥನಾ ಮಂದಿರಗಳಲ್ಲ, ನಮ್ಮ ಪರಂಪರೆಯ ತಾಣವಾಗಿವೆ. ಇವು ನಮ್ಮ ಸಂಸ್ಕೃತಿಯನ್ನು ಸಾರುತ್ತವೆ. ಕಲೆಯ ವಿವಿಧ ಪ್ರಕಾರಗಳನ್ನು, ವಿಕಸನವನ್ನು ಎತ್ತಿ ತೋರಿಸುತ್ತವೆ. ದೇಶ, ಧರ್ಮ, ಕಾಲ ಬದಲಾದಂತೆ ಕಲೆಯಲ್ಲೂ ಬದಲಾವಣೆ ಗೋಚರಿಸುತ್ತದೆ. ಒಂದು ತರಹದಲ್ಲಿ ದೇವಾಲಯಗಳು ನಮ್ಮ ಪಠ್ಯಪುಸ್ತಕಗಳು, ಸ್ವಲ್ಪ ಸಮಯ ಕೊಟ್ಟು ಅಭ್ಯಾಸ ಮಾಡಿದರೂ ಹಲವಾರು ವಿಷಯಗಳು ನಮ್ಮ ಮುಂದೆ ತೆರೆದುಕೊಳ್ಳುತ್ತವೆ.

ಕಾರ್ಕಳದ ಅನಂತಶಯನ ದೇವಸ್ಥಾನದ ಸಮೀಪವೇ ಕಪ್ಪು ಶಿಲೆಯ ಬೆಟ್ಟದ ಮೇಲೆ ನಿಂತಿರುವ ಗೊಮ್ಮಟೇಶ್ವರ ಕಾಣಿಸಿದರೆ, ಎಡಬದಿಯ ಬೆಟ್ಟದ ಮೇಲೆ ಚತುರ್ಮುಖ ಬಸದಿ ಕಾಣಿಸುತ್ತದೆ. ಬಹಳ ಸುಂದರ ದೃಶ್ಯವದು. ಕಷ್ಟವಾದರೂ ನಮ್ಮ ಹಿರಿಯರು ಇಂತಹ ಜಾಗಗಳನ್ನೇ ಪ್ರಾರ್ಥನೆಯ ತಾಣವಾಗಿ ಆರಿಸಿಕೊಂಡಿದ್ದಾರೆ. ಬೆಟ್ಟದ ತುದಿಯಲ್ಲಿರುವ ಬಸದಿ ಸೇರಲು ಹೆಚ್ಚು ಕಷ್ಟಪಡಬೇಕಾಗಿಲ್ಲ, ಮೆಟ್ಟಿಲುಗಳಿವೆ. ಮೆಟ್ಟಿಲುಗಳ ಬುಡದಲ್ಲಿ ಪುರಾತತ್ವ ಇಲಾಖೆಯ ಮಾಹಿತಿ ನೀಡುವ ಫಲಕವಿದೆ.

ಚತುರ್ಮುಖ ಬಸದಿ, ಹೆಸರೇ ಹೇಳುವಂತೆ ಬಸದಿಯ ನಾಲ್ಕು ದಿಕ್ಕಿನಲ್ಲೂ ನಾಲ್ಕು ಹೆಬ್ಬಾಗಿಲುಗಳಿವೆ. ಬಸದಿಯ ಪ್ರತೀ ಭಾಗವೂ ಮತ್ತೊಂದರ ಪ್ರತಿಬಿಂಬದಂತಿದೆ. ಎತ್ತ ಕಡೆಯಿಂದ ಪ್ರವೇಶಿಸಿದರೂ ಜೈನ ತೀರ್ಥಂಕರರ ಮೂರ್ತಿ ಎದುರಾಗುತ್ತದೆ. ‘ತ್ರಿಭುವನ ತಿಲಕ ಜಿನ ಚೈತ್ಯಾಲಯ’ ಎಂದೂ ಕರೆಯಲ್ಪಡುವ ಈ ಜಿನ ಮಂದಿರದ ಗರ್ಭಗ್ರಹದಲ್ಲಿ 18, 19 ಮತ್ತು 20ನೇ ತೀರ್ಥಂಕರರಾದ ಅರನಾಥ, ಮಲ್ಲಿನಾಥ ಮತ್ತು ಮುನಿಸುವೃತರ ಮೂರ್ತಿಗಳು ಇವೆ. ಇವುಗಳು ನುಣುಪಾದ ಆಳೆತ್ತರದ ಕಪ್ಪು ಶಿಲೆಯ ಮೂರ್ತಿಗಳು. ಅಲ್ಲದೆ ಯಕ್ಷಿ ಪದ್ಮಾವತಿ ಮತ್ತು 24 ತೀರ್ಥಂಕರರ ಚಿಕ್ಕ ಮೂರ್ತಿಗಳೂ ಇವೆ. ಬಸದಿಯನ್ನು ‘ರತ್ನತ್ರಯ ಧಾಮ’ ಎಂದೂ ಕರೆಯುತ್ತಿದ್ದರೆಂದು ಅಲ್ಲಿರುವ ಶಾಸನದಿಂದ ತಿಳಿದು ಬರುತ್ತದೆ. ಇದನ್ನು ಕಟ್ಟಿಸಲು 30 ವರ್ಷಗಳು ಬೇಕಾಯಿತಂತೆ.

ಚತುರ್ಮುಖ ಬಸದಿಯ ಹೊರಾಂಗಣ ಒಂದಕ್ಕೊಂದರ ಪ್ರತಿಬಿಂಬ
ಚತುರ್ಮುಖ ಬಸದಿಯ ಹೊರಾಂಗಣ ಒಂದಕ್ಕೊಂದರ ಪ್ರತಿಬಿಂಬ

ಬಸದಿಯ ಸುತ್ತ ಕಲ್ಲಿನ ಕಂಬಗಳು, ಎತ್ತರದ ಕಲ್ಲಿನ ವೇದಿಕೆ ಮತ್ತು ಕಲ್ಲಿನ ಮುಚ್ಚಿಗೆ ಇರುವುದು ಸಾಮಾನ್ಯ. ಚತುರ್ಮುಖ ಬಸದಿಯೂ ಇದಕ್ಕೆ ಹೊರತಾಗಿಲ್ಲ, ಬಸದಿಯ ಸುತ್ತ 108 ಗ್ರಾನೈಟ್ ಕಂಬಗಳಿರುವ ವರಾಂಡವಿದೆ. ಪ್ರತಿಯೊಂದು ಕಂಬ ಏಕಶಿಲೆಯದ್ದಾಗಿದ್ದು ಸುಮಾರು 18 ಅಡಿ ಎತ್ತರವಿದೆ. ಕಂಬಗಳಲ್ಲಿ ಕೆತ್ತನೆಗಳೂ ಇದ್ದು ಎಲ್ಲವನ್ನೂ ನೋಡುತ್ತಾ ಹೋದರೆ ಸಾಕಷ್ಟು ಸಮಯ ಬೇಕು. ಬಸದಿಯ ಹೊರಗೆ ಶಿಲಾಶಾಸನವೊಂದು ಕಾಣಿಸುತ್ತದೆ.

ಬಸದಿಯ ಗೋಡೆಗಳಲ್ಲಿ ದೇವತೆಗಳ ಕೆತ್ತನೆಗಳು ಮತ್ತು ಕಲ್ಲಿನ ಮುಚ್ಚಿಗೆಯಲ್ಲಿ ಚಿತ್ತಾರಗಳಿದ್ದರೂ ಹೊಯ್ಸಳ ದೇವಸ್ಥಾನಗಳಲ್ಲಿರುವ ಶ್ರೀಮಂತ ವಾಸ್ತುಶಿಲ್ಪವಾಗಲಿ, ಮೂರ್ತಿಗಳಾಗಲಿ ಇಲ್ಲ, ಉತ್ತರ ಭಾರತದ ಜೈನ ಮಂದಿರಗಳಲ್ಲಿರುವ ಶ್ರೀಮಂತ ಕಾಷ್ಠಶಿಲ್ಪವಾಗಲಿ, ಮಾರ್ಬಲ್ಲಿನ ಅಲಂಕಾರವಾಗಲಿ ಇಲ್ಲಿಲ್ಲ. ಸರಳವಾಗಿ, ಪ್ರಶಾಂತವಾಗಿರುವುದೇ ಇಲ್ಲಿನ ಆಕರ್ಷಣೆ ಎನಿಸುತ್ತದೆ. ಬಸದಿಯ ಹೊರಗೆ ನಿಂತರೆ ಗೊಮ್ಮಟೇಶ್ವರನ ಮೂರ್ತಿಯಲ್ಲದೆ ಗದ್ದೆ, ಕಾಡುಮೇಡಿನ ಸುಂದರ ಕಾರ್ಕಳವನ್ನು ನೋಡಬಹುದು. ಹೀಗೆ ನಾಲ್ಕು ದಿಕ್ಕಿನಲ್ಲಿ ತೆರೆದುಕೊಳ್ಳುವ ಬಸದಿ ಬಹಳ ಕಡಿಮೆ ಎನ್ನುತ್ತಾರೆ ಇಲ್ಲಿ ಪೂಜೆ ಮಾಡುವವರು.

16ನೇ ಶತಮಾನದ ಸಂತಾರ ವಂಶಕ್ಕೆ ಸೇರಿದ ಇಮ್ಮಡಿ ಭೈರರಸ ಒಡೆಯನು ಇದನ್ನು ಕಟ್ಟಿಸಿದನಂತೆ, ಇನ್ನು ಕೆಲವರು ರಾಣಿ ಚೆನ್ನಭೈರವದೇವಿ ಕಟ್ಟಿಸಿದ್ದು ಎನ್ನುತ್ತಾರೆ. ಬಸದಿಯನ್ನು 15ನೇ ಶತಮಾನದಲ್ಲಿ ಜೈನ ಅರಸನಾದ ಪಾಂಡ್ಯದೇವನು ಕಟ್ಟಿಸಿದನೆಂಬ ಊಹೆಯೂ ಇದೆ.

ಈ ಸ್ಮಾರಕವೀಗ ಆರ್ಕಿಯಲಾಜಿಕಲ್‌ ಸರ್ವೇ ಆಫ್ ಇಂಡಿಯಾದ ಸುಪರ್ದಿಯಲ್ಲಿದೆ. ಪ್ರವೇಶಧನವಿಲ್ಲ, ವಿಪರೀತ ಬಿಸಿಲು, ಸೆಖೆ ಇರುವುದರಿಂದ ಬೆಳಿಗ್ಗೆ 10 ಗಂಟೆಯೊಳಗೆ ಅಥವಾ ಸಂಜೆಯ ನಾಲ್ಕು ಗಂಟೆಯ ನಂತರ ಸಂದರ್ಶಿಸುವುದು ಒಳಿತು.

ಕ್ರಿಸ್ತಪೂರ್ವ 500ರ ಸುಮಾರಿಗೆ ಉತ್ತರ ಭಾರತದ ಈಗಿನ ಪಾಟ್ನಾದಲ್ಲಿ ಹುಟ್ಟಿತು ಜೈನ ಧರ್ಮ. ಚಂದ್ರಗುಪ್ತ ಮೌರ್ಯ ರಾಜ್ಯವನ್ನು ತ್ಯಜಿಸಿ, ಜೈನ ಸನ್ಯಾಸಿಯಾಗಿ ಕರ್ನಾಟಕದ ಚಂದ್ರಗಿರಿ ಬೆಟ್ಟದಲ್ಲಿ ನೆಲೆಸಿದ. ಅಲ್ಲಿಂದ ದಕ್ಷಿಣ ಭಾರತದ ಹಲವು ರಾಜ್ಯಗಳಲ್ಲಿ ಜೈನ ಧರ್ಮ ಮಾನ್ಯತೆ ಪಡೆಯಿತು. ರಾಜರು ಜೈನ ಧರ್ಮದ ಪೋಷಕರಾದರು. ಇವರಲ್ಲಿ ಚಾಲುಕ್ಯ, ಕದಂಬ ಮತ್ತು ಹೊಯ್ಸಳರು ಮುಖ್ಯರಾದವರು. ಬಸದಿಗಳು, ಸ್ತಂಭಗಳು, ಗೊಮ್ಮಟ ಜೈನ ಧರ್ಮದ ಸಂಕೇತ ಮಾತ್ರ ಅಲ್ಲ ಸಂಸ್ಕೃತಿ ಮತ್ತು ವಾಸ್ತುಶಿಲ್ಪವೂ ಹೌದು. ಒಂದು ಕಾಲದಲ್ಲಿ ಕಾರ್ಕಳ ಜೈನಧರ್ಮದ ಪ್ರಮುಖ ಕೇಂದ್ರವಾಗಿತ್ತು. ಅದರ ಕುರುಹಾಗಿ 13 ಮೀಟರ್ ಎತ್ತರದ ಬಾಹುಬಲಿ ಮತ್ತು 18 ಬಸದಿಗಳು ಇಲ್ಲಿವೆ.

ಕಾರ್ಕಳದಲ್ಲಿ ಚತುರ್ಮುಖ ಬಸದಿಯಲ್ಲದೆ ಒಟ್ಟು 18 ಬಸದಿಗಳಿವೆ. ಗೊಮ್ಮಟೇಶ್ವರ, ಅನಂತಪದ್ಮನಾಭ ದೇವಸ್ಥಾನಗಳನ್ನು ಪ್ರವಾಸಿಗರು ನೋಡಬಹುದು. ಕಾರ್ಕಳವೆಂದರೆ ಕಪ್ಪು ಕಲ್ಲು ಎಂದರ್ಥ. ಹೆಸರಿಗೆ ತಕ್ಕಂತೆ ಅಲ್ಲಲ್ಲಿ ಕಪ್ಪು ಬಂಡೆಗಳು ಕಂಡು ಬರುತ್ತವೆ, ಆದರೆ ಸುತ್ತಮುತ್ತ ಬೆಸಿಗೆ ಕಾಲದಲ್ಲೂ ತುಂಬಿರುವ ಕೆರೆಗಳಿವೆ, ನಮ್ಮ ಕಣ್ಮನ ತಣಿಸುವ ಕೆರೆಗಳೆಂದರೆ ಆನೆ ಕೆರೆ, ರಾಮಸಮುದ್ರ ಕೆರೆ, ಮಠದ ಕೆರೆ, ಕಮಲ ಕೆರೆ.

ಕಾರ್ಕಳದಿಂದ 19 ಕಿ.ಮೀ. ದೂರದಲ್ಲಿರುವ ಮೂಡುಬಿದರೆಯಲ್ಲಿ ಪ್ರಸಿದ್ಧ ಸಾವಿರ ಕಂಬದ ಬಸದಿಯಿದೆ. v

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT