ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಳಂದೂರು: ಕಾನನದಲ್ಲಿ ಕಿರು ಜಲಪಾತಗಳ ವೈಭವ

ಹಿಂಗಾರು ಮಳೆಯೇ ಏನು ನಿನ್ನ ಹನಿಗಳ ಲೀಲೆ, ಹೆಚ್ಚಿದ ಬಿಆರ್‌ಟಿ ಕಾಡಿನ ಸೌಂದರ್ಯ
Last Updated 6 ನವೆಂಬರ್ 2021, 19:31 IST
ಅಕ್ಷರ ಗಾತ್ರ

ಯಳಂದೂರು:ಹಿಂಗಾರು ಮಳೆಯ ಹಾಡು ಗಿರಿ ಶಿಖರಗಳನ್ನು ಈಗ ಮುದ್ದಾಡುತ್ತಿದೆ. ಧರೆಗೆ ಮುತ್ತಿಡುವಪ್ರತಿ ಹನಿಯೂ ಪ್ರಕೃತಿ ಮಾತೆಗೆ ನವೋಲ್ಲಾಸ ತುಂಬಿದೆ. ಎತ್ತ ನೋಡಿದರತ್ತ ಬೆಟ್ಟ,ಗುಡ್ಡ, ಕಣಿವೆ ಮತ್ತು ಕಾನು ಹಸಿರು ಹೊದ್ದು, ಪ್ರವಾಸಿಗರನ್ನು ಕೈಬೀಸಿ ಕರೆಯುತ್ತದೆ.

ಅಡವಿಯ ಅಂಕುಡೊಂಕು ಹಾದಿಯಲ್ಲಿ ಹರಿಯುವ ಹನಿಹನಿಯೂ ಗುಡ್ಡದ ಬಂಡೆ ಮೇಲೆ ಏರುತ್ತ,ಇಳಿಯುತ್ತ ನಾಟ್ಯ ಮಾಡುತ್ತಿದೆ. ನೀರ ಹನಿಗಳು ಅಲ್ಲಲ್ಲಿ ಜಲಧಾರೆ ಹರಿಸುವಾಗ ಸೃಷ್ಟಿಸುವ ಕಿರು ಜಲಪಾತಗಳು ಅನನ್ಯ ಅನುಭೂತಿಯನ್ನು ನೀಡುತ್ತಿವೆ.

ತಾಲ್ಲೂಕಿನಲ್ಲಿ ಈ ಬಾರಿ ಮುಂಗಾರು ಮಳೆ ನಕ್ಷತ್ರಗಳು ಪರಿಸರಕ್ಕೆ ತಂಪು ತುಂಬಲಿಲ್ಲ.ಅಶ್ವಿನಿ, ಭರಣಿ, ಕೃತ್ತಿಕಾ, ರೋಹಿಣಿ ಮಳೆಗಳು ಹುಟ್ಟಿದಷ್ಟೇ ವೇಗದಲ್ಲಿಕಣ್ಮರೆಯಾದವು. ಮೃಗಾಶಿರದಿಂದ ಹಸ್ತ ತನಕ ಅಲ್ಪ ಪ್ರಮಾಣದ ಮಳೆ ಮಾರುತಗಳು ನೆಲ,ಜಲವನ್ನು ತೋಯಿಸಿ ಓಡಿ ಹೋದವು. ಹಿಂಗಾರು ಮಾರುತಗಳು ವರುಣನ ಆಗಮನವನ್ನು ಸಾರಿತು. ಈನಡುವೆ ವಿಶಾಖ ಅಬ್ಬರದಿಂದಲೇ ಧರೆ ಅಪ್ಪಿ ನೀರ ಹಾಡು ಹಾಡಿದೆ. ನಾಡು ಕಾಡಿನ ಸುತ್ತಹನಿಗಳ ಜೋಗುಳ ತುಸು ಹೆಚ್ಚಾಗಿ ಕೇಳಿಬಂದಿದೆ. ಬಂಡೆಗಳ ಸಂದುಗಳಲ್ಲಿ, ಇಳಿಜಾರಿನಕಿರು ಹಾದಿಗಳಲ್ಲಿ ಧುಮ್ಮಿಕ್ಕುತ್ತಾ ಪುಟ್ಟ ಜಲಪಾತಗಳನ್ನು ಸೃಷ್ಟಿಸಿದೆ.

ಸೆಪ್ಟೆಂಬರ್ ಮಾಸದಲ್ಲಿ ಬಣಗುಟ್ಟುತ್ತಿದ್ದ ಪ್ರದೇಶಗಳಲ್ಲಿ ಜಲನಾಡಿ ಕಟ್ಟೆಹೊಡೆದಿದೆ. ರಸ್ತೆ ಬದಿ ಇಣುಕಿದರೆ ಜಲಲಧಾರೆ ಸದ್ದು ಕಿವಿಗಪ್ಪಳಿಸುತ್ತಿದೆ.

ಜಲ ದೇವಿಯ ನರ್ತನ ಪ್ರವಾಸಿ ತಾಣಗಳ ಸ್ವರೂಪ ಪಡೆಯುತ್ತಿದೆ. ಅರಣ್ಯದ ಸುತ್ತಲ ನಿಸರ್ಗತಂಪಾದಂತೆ, ಸುತ್ತಲೂ ತೇವಾಂಶ ಭರಿತ ವಾಯು ಮೈ, ಮನಕ್ಕೆ ಮುದ ನೀಡುತ್ತಿದೆ. ಈ ಸಮಯತುಂತುರು ಮಳೆಯಾದರೂ ವಸುಂಧರೆ ಪ್ರತಿ ಹನಿಗೆ ಕೆಳ ಪಾತ್ರದ ಜಲಾವರದ ದಿಕ್ಕುತೋರುತ್ತಾಳೆ. ಕಲ್ಲಿನ ಕಿಂಡಿಗಳಿಂದ, ಬಂಡೆಗಳ ಬದಿಯಿಂದ ಧುಮ್ಮಿಕ್ಕುವ ಪುಟ್ಟಪುಟ್ಟಜಲಪಾತಗಳ ವೈಭವವನ್ನು ವೀಕ್ಷಿಸುವುದೇ ನಯನ ಮನೋಹರ ಎನ್ನುತ್ತಾರೆ ಪ್ರವಾಸಿ ಪ್ರಿಯರು.

‘ಬಿಆರ್‌ಟಿ ಕಾಡು-ಮೇಡುಗಳಲ್ಲಿ ನೂರಾರು ಜಲಪಾತಗಳಿವೆ. ಅತಿ ಮಳೆ ಬೀಳುವ ಪ್ರದೇಶಗಳಲ್ಲಿ ಜಲಧಾರೆ ಕಾನನದ ನಡುವೆ ಅದೃಶ್ಯವಾಗಿರುತ್ತವೆ. 25ಕ್ಕೂ ಹೆಚ್ಚುಹಳ್ಳಗಳು, ಸದಾ ಜಿನುಗುವ ಕೊಳ್ಳಗಳು ಇಲ್ಲಿವೆ. ಮಳೆಗಾಲದಲ್ಲಿ ಹುಟ್ಟುವಝರಿತೊರೆಗಳಿಗೆ ಲೆಕ್ಕ ಇಟ್ಟವರಿಲ್ಲ. ಇಳಿಜಾರು ಪ್ರದೇಶದಲ್ಲಿ ನೀರಿನ ಬುಗ್ಗೆಗಳುಸಕ್ರಿಯವಾಗಿವೆ. ಇವು 30ಕ್ಕೂ ಹೆಚ್ಚು ಕೆರೆಗಳಿಗೆ ನೀರು ಹರಿಸುತ್ತವೆ. ಬೆಳ್ಳಟ್ಟಮತ್ತು ಕೃಷ್ಣಯ್ಯನಕಟ್ಟೆ ಸರೋವರಗಳ ಆಕರ್ಷಣೆಯನ್ನು ಮಳೆ ಕಾಡಿನ ಜೀವ ತೊರೆಗಳೇಹೆಚ್ಚಿಸಿವೆ. ಈ ಸಮಯ ಜಲಪಾತಗಳ ಜಾಡಿನಲ್ಲಿ ಸಾವಿರಾರು ಸಸ್ಯ ಪ್ರಭೇದಗಳು ಕಣ್ಣುಅರಳಿಸುತ್ತವೆ ’ಎನ್ನುತ್ತಾರೆ ಏಟ್ರೀ ವಿಜ್ಞಾನಿ ಸಿದ್ದಪ್ಪ ಶೆಟ್ಟಿ.

ದೂರದಿಂದ ದರ್ಶನ

‘ಈಗ ರಸ್ತೆ ಬದಿ ಜಲಪಾತದ ಸದ್ದು ಆಲಿಸಬಹುದು. ಕೆಲವೊಮ್ಮೆ ಹಾದಿ ಬದಿಯೇ ಕಿರು ಜಲಪಾತ ಜಿನುಗುತ್ತದೆ. ಪೂರ್ವ ಶ್ರೇಣಿಗಳ ಏರು ತಗ್ಗುಗಳ ಕಣಿವೆಯಲ್ಲಿ ನಿಧಾನಕ್ಕೆ ಹರಿಯುವಹೊಳೆಗಳಿವೆ. ನೈರುತ್ಯ ಮತ್ತು ದಕ್ಷಿಣಕ್ಕೆ ಜಲಾನಯನ ಪ್ರದೇಶ ವಿಸ್ತಾರವಾಗುತ್ತಹೋಗುತ್ತದೆ. ಕತ್ತರಿಬೆಟ್ಟ ಮತ್ತು ಹೊನ್ನಮೇಟಿ ಸುತ್ತಮುತ್ತ ದೂರದಿಂದಲೇ ದೊಡ್ಡಜಲಪಾತಗಳನ್ನು ವೀಕ್ಷಿಸಬಹುದು. ಬಿಆರ್‌ಟಿ ಜೀವನದಿ ಭಾರ್ಗವಿ ವನ್ಯ ಜೀವಿಗಳ ಪಾಲಿನಅಶ್ವಿನಿ ದೇವತೆ’ ಎಂದು ಶಿಖಾರಿ ಮಾದೇಗೌಡ ಅವರು ಸ್ಮರಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT