ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Pv Web Exclusive: ಬೆಂಗಳೂರಿನಲ್ಲಿರುವ ಕನ್ನಡದ ಪಾರಂಪರಿಕ ಚರ್ಚ್‌ಗಳು

Last Updated 8 ಡಿಸೆಂಬರ್ 2020, 7:34 IST
ಅಕ್ಷರ ಗಾತ್ರ
ADVERTISEMENT
""

ಬೆಂಗಳೂರಿನಲ್ಲಿ ಇರುವ ಚರ್ಚ್‌ಗಳಲ್ಲಿ ಹಡ್ಸನ್‌ ಚರ್ಚ್‌ ಮತ್ತು ರೈಸ್‌ ಮೆಮೋರಿಯಲ್‌ ಚರ್ಚ್‌ಗೆ ಮಹತ್ವದ ಸ್ಥಾನಮಾನಗಳಿವೆ. ಈ ಎರಡೂ ಶತಮಾನೋತ್ಸವ ಕಂಡಿರುವ ಕನ್ನಡದ ಪಾರಂಪರಿಕ ಚರ್ಚ್‌ಗಳಾಗಿ ನಮ್ಮೊಂದಿಗೆ ಬೆಸೆದುಕೊಂಡಿವೆ.

ಹಡ್ಸನ್‌ ಚರ್ಚ್‌ ಅನ್ನು ‘ಕ್ರೈಸ್ತ ಕನ್ನಡಿಗರ ಮಾತೃ ಚರ್ಚ್‌’ ಎಂದೂ, ರೈಸ್‌ ಮೆಮೋರಿಯಲ್‌ ಚರ್ಚ್‌ ಅನ್ನು ಬೆಂಗಳೂರಿನ ಮೊದಲ ಕನ್ನಡ ಚರ್ಚ್‌ ಎಂದೂ ಕರೆಯಲಾಗುತ್ತದೆ. ಈ ಎರಡೂ ಚರ್ಚ್‌ಗಳಿಗೆ ಇಡಲಾಗಿರುವ ಹೆಸರು ಕನ್ನಡ ಮತ್ತು ಕನ್ನಡಿಗರಿಗೆ ಸೇವೆ ಸಲ್ಲಿಸಿದ್ದ ಮಹಾನ್‌ ವ್ಯಕ್ತಿಗಳದ್ದಾಗಿದೆ.

ಹಡ್ಸನ್‌ ಚರ್ಚ್‌

ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯ ಮುಖ್ಯ (ಕಾರ್ಪೋರೇಷನ್‌) ಕಚೇರಿ ಬಳಿ ಹಡ್ಸನ್‌ ವೃತ್ತ ಇದೆ. ವೃತ್ತದ ಬಳಿ ಹಡ್ಸನ್‌ ಚರ್ಚ್‌ ಇರುವ ಕಾರಣಕ್ಕೆ ಈ ವೃತ್ತಕ್ಕೆ ಹಡ್ಸನ್‌ ವೃತ್ತ ಎಂಬ ಹೆಸರು ಬಂದಿದೆ. 1904ರಲ್ಲಿ ಆರಂಭವಾದ ಈ ಚರ್ಚ್‌ಗೆ ಮಿಷನರಿ ಹಡ್ಸನ್‌ ಅವರ ಹೆಸರಿಡಲಾಗಿದೆ. ಬೆಂಗಳೂರಿನಲ್ಲಿ ಶತಮಾನೋತ್ಸವ ಕಂಡಿರುವ ಕೆಲವೇ ಚರ್ಚ್‌ಗಳಲ್ಲಿ ಇದೂ ಒಂದು.

ಇಲ್ಲಿ ಆರಾಧನೆ, ಪ್ರಾರ್ಥನೆ, ಗೀತೆ ಗಾಯನಗಳೆಲ್ಲವೂ ನಡೆಯುವುದು ಕನ್ನಡದಲ್ಲಿಯೇ. ಕನ್ನಡ ಮಾತೃಭಾಷಿಕ ಕ್ರೈಸ್ತರೇ ಈ ಚರ್ಚ್‌ನ ಸದಸ್ಯರಾಗಿರುವುದು ವಿಶೇಷ. ಇದನ್ನು ‘ಕ್ರೈಸ್ತ ಕನ್ನಡಿಗರ ಮಾತೃ ಚರ್ಚ್‌’ ಎಂದೂ ಕರೆಯಲಾಗುತ್ತದೆ.

ಕೆರೆ, ಹೊಲ, ತೋಟಗಳಿಂದ ಕೂಡಿದ್ದ ಈ ಪ್ರದೇಶದಲ್ಲಿ 1900ರ ಜನವರಿ 19ರಂದು ವೆಸ್ಲಿಯನ್‌ ಮಿಷನರಿ ಜೆ.ಎ.ವೇನ್ಸ್‌ ಅವರು ₹2000 ಕ್ಕೆ ಮೂರು ಎಕರೆ ಜಾಗವನ್ನು ಖರೀದಿಸಿದ್ದರು. ಅಲ್ಲಿ ಸುಮಾರು ₹25,000 ವೆಚ್ಚದಲ್ಲಿ ಕ್ಲಾಸಿಕಲ್‌ ಮತ್ತು ಗಾಥಿಕ್‌ ವಾಸ್ತುಶಿಲ್ಪ ಮಾದರಿಯಲ್ಲಿ ಸರಳವೂ, ಸುಂದರವೂ ಆದ ಚರ್ಚ್‌ ಅನ್ನು ಕಲ್ಲುಗಳಿಂದಲೇ ನಿರ್ಮಿಸಲಾಯಿತು.

1859ರಲ್ಲಿ ನಗರ್ತಪೇಟೆಯಲ್ಲಿ (ಹಿಂದಿನ ಗಾಣಿಗರಪೇಟೆ) ಕನ್ನಡ ಕ್ರೈಸ್ತರು ‘ಗುಡಿಹಟ್ಟಿ’ ಎಂಬ ಹೆಸರಿನ ಸಣ್ಣ ಆರಾಧನಾ ಕೇಂದ್ರ ಕಟ್ಟಿಕೊಂಡಿದ್ದರು. ಅಲ್ಲಿ ಆರಾಧನೆ ನಡೆಸುವಾಗ ಕೆಲವರಿಂದ ಅಡಚಣೆಗಳಾಗುತ್ತಿದ್ದವು. ಹೀಗಾಗಿ ಕೆಲ ಸಲ ಸೈನ್ಯದ ಕಾವಲಿನಲ್ಲಿ ಆರಾಧನೆಗಳು ನಡೆದಿದ್ದಿದೆ. ಸುಮಾರು 45 ವರ್ಷಗಳವರೆಗೆ ಅಲ್ಲಿ ಆರಾಧನೆ ನಡೆಯಿತು. ನಂತರ 1904ರಲ್ಲಿ ಹಡ್ಸನ್‌ ಚರ್ಚ್‌ ನಿರ್ಮಾಣದ ಸ್ಥಳಕ್ಕೆ ಅದೂ ಸ್ಥಳಾಂತರಗೊಂಡಿತು ಎಂಬುದು ಇತಿಹಾಸದ ಪುಟಗಳಲ್ಲಿ ದಾಖಲಾಗಿದೆ.

ಈ ಚರ್ಚ್‌ ಅನ್ನು 1904ರ ಸೆಪ್ಟೆಂಬರ್ 25ರಂದು ಹಡ್ಸನ್‌ ಅವರ ಪುತ್ರಿ ಡಬ್ಲ್ಯು.ಎಚ್‌. ಥಾರ್ಪ್‌ ಉದ್ಘಾಟಿಸಿದರು. ಮೂರು ಪ್ರವೇಶದ್ವಾರಗಳನ್ನು ಒಳಗೊಂಡಿರುವ ಇದು ಗೋಪುರವನ್ನೂ ಹೊಂದಿದೆ. ಬಾಗಿಲುಗಳ ಮೇಲೆ ವರ್ಣರಂಜಿತ ಗಾಜಿದೆ. ಇಲ್ಲಿನ ಕಿಟಕಿ ಗಾಜುಗಳಿಗೆ ಲಂಡನ್ನಿನ ಕಲಾವಿದರು ಕ್ರಿಸ್ತನ ಜೀವನಕ್ಕೆ ಸಂಬಂಧಿಸಿದ ಚಿತ್ರಗಳನ್ನು ರಚಿಸಿದ್ದಾರೆ. ಆಕಾಶದಿಂದ ವೀಕ್ಷಿಸಿದರೆ ಚರ್ಚ್‌ ಶಿಲುಬೆಯಾಕಾರದಲ್ಲಿ ಆಕರ್ಷಕವಾಗಿ ಕಂಗೊಳಿಸುತ್ತದೆ.

ಕ್ರೈಸ್ತ ಕನ್ನಡಿಗರ ಮಾತೃ ಚರ್ಚ್‌ ಎಂಬ ಹಿರಿಮೆ ಹೊಂದಿರುವ ಈ ಚರ್ಚ್‌ ಇತರ ಕೆಲ ಕನ್ನಡದ ಚರ್ಚ್‌ಗಳಿಗೆ ಆರ್ಥಿಕ ನೆರವನ್ನೂ ನೀಡುತ್ತ, ಪೋಷಿಸಿಕೊಂಡು ಬಂದಿದೆ. ಸುಗ್ಗಿಹಬ್ಬ, ವೈಟ್‌ ಕ್ರಿಸ್‌ಮಸ್‌ ಹಾಗೂ ಕ್ರಿಸ್‌ಮಸ್‌ ಅನ್ನು ವಿಶೇಷವಾಗಿ ಆಚರಿಸಿ ಸಂಭ್ರಮಿಸಲಾಗುತ್ತದೆ. ಇಲ್ಲಿ ಕನ್ನಡದ ಭಜನಾ ಮಂಡಳಿ ಇದ್ದು, ಅದರಲ್ಲಿ 35 ಸದಸ್ಯರಿದ್ದಾರೆ.

ಹಡ್ಸನ್‌ ಅವರ ಹೆಜ್ಜೆಗುರುತು: ಇಂಗ್ಲೆಂಡಿನ ಮಿಷನರಿ ಜೋಶಾಯ ಹಡ್ಸನ್‌ ಭಾರತಕ್ಕೆ ಬಂದದ್ದು 1864ರಲ್ಲಿ. ಮದ್ರಾಸಿನ ಮೂಲಕ ಬೆಂಗಳೂರಿಗೆ ಬಂದಾಗ ಅವರಿಗೆ 24 ವರ್ಷ. ಅಲ್ಲಿಂದ 33 ವರ್ಷ ಅವರು ಕರ್ನಾಟಕದ ಜನರ ಮತ್ತು ಕನ್ನಡದ ಸೇವೆ ಮಾಡಿದ್ದಾರೆ. ಶಿಕ್ಷಣ ಕ್ಷೇತ್ರದಲ್ಲಿ ಕೆಲ ಕ್ರಾಂತಿಕಾರಿ ಕೆಲಸಗಳು ಹಡ್ಸನ್‌ ಅವರಿಂದ ಆಗಿವೆ. ಆಗ ಮೈಸೂರು, ಬೆಂಗಳೂರಿನಲ್ಲಿ ವಿದ್ಯಾಸಂಸ್ಥೆಗಳಿದ್ದರೂ ಅವೆಲ್ಲಾ ಮದ್ರಾಸ್‌ ವಿಶ್ವವಿದ್ಯಾಲಯದ ವ್ಯಾಪ್ತಿಗೆ ಒಳಪಟ್ಟಿದ್ದವು. ಹಾಗಾಗಿ ಪರೀಕ್ಷೆಗಾಗಿ ಮದ್ರಾಸಿಗೆ ಹೋಗಬೇಕಾಗಿತ್ತು. ಇದನ್ನು ತಪ್ಪಿಸಿ, ಮೈಸೂರು ರಾಜ್ಯದಲ್ಲಿಯೇ ಪರೀಕ್ಷೆಗಳನ್ನು ನಡೆಸಲು ಇವರು ಸಾಕಷ್ಟು ಶ್ರಮಿಸಿ ಅದಕ್ಕೆ ಏರ್ಪಾಡು ಮಾಡಿದರು.

ಇವರು ಹೆಣ್ಣು ಮಕ್ಕಳಿಗಾಗಿ ಬೆಂಗಳೂರಿನ ಸಿದ್ದೀಕಟ್ಟೆ ಬಳಿ (ಕೆ.ಆರ್‌. ಮಾರ್ಕೆಟ್‌) ಬಾಲಕಿಯರ ಪಾಠಶಾಲೆ ಆರಂಭಿಸಿದರು. ಅಲ್ಲಿ 354 ಬಾಲಕಿಯರು ವ್ಯಾಸಂಗ ಮಾಡುತ್ತಿದ್ದರು. ಶಿವಮೊಗ್ಗದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ ತರಬೇತಿ ಕೇಂದ್ರವನ್ನು ಆರಂಭಿಸಿದ ಕೀರ್ತಿ ಹಡ್ಸನ್‌ ಅವರಿಗೆ ಸಲ್ಲುತ್ತದೆ. ಮೈಸೂರಿನಲ್ಲಿ ಹಾರ್ಡ್ವಿಕ್‌ ಕಾಲೇಜು (ಈಗ ಹಾರ್ಡ್ವಿಕ್‌ ಹೈಸ್ಕೂಲ್‌) ಸ್ಥಾಪನೆ ಸೇರಿದಂತೆ ಹಲವು ಮಹತ್ವದ ಕಾರ್ಯಗಳನ್ನು ಅವರು ಮಾಡಿದ್ದರು.

ರೈಸ್‌ ಮೆಮೋರಿಯಲ್‌ ಚರ್ಚ್‌

ರೈಸ್‌ ಮೆಮೋರಿಯಲ್‌ ಚರ್ಚ್‌

ಬೆಂಗಳೂರಿನ ಚಿಕ್ಕಪೇಟೆಯ ಅವೆನ್ಯೂ ರಸ್ತೆಯಲ್ಲಿ ಇರುವ ರೈಸ್ ಮೆಮೋರಿಯಲ್‌ ಚರ್ಚ್‌ ನಗರದ ಹಳೆಯ ಚರ್ಚ್‌ಗಳಲ್ಲೊಂದು. ಶತಮಾನೋತ್ಸವ ಕಂಡಿರುವ ಈ ಚರ್ಚ್‌ಗೆ ಬೆಂಗಳೂರಿನ ಮೊದಲ ಕನ್ನಡ ಚರ್ಚ್‌ ಎಂಬ ಹೆಗ್ಗಳಿಕೆ ಇದೆ. ಈ ಚರ್ಚ್‌ಗೆ ಇದಕ್ಕೂ ಹಿಂದಿನ ಇತಿಹಾಸವಿದೆ. 1851ರಲ್ಲಿಯೇ ಇಲ್ಲಿ ಕ್ರೈಸ್ತ ಆಲಯವೊಂದು ಇತ್ತು. ಅದು ಶಿಥಿಲವಾಗಿದ್ದರಿಂದ ಅದನ್ನು ಕೆಡವಿ 1859ರಲ್ಲಿ ಅಂದಾಜು ₹3500 ವೆಚ್ಚದಲ್ಲಿ ಹೊಸ ಆಲಯವನ್ನು ನಿರ್ಮಿಸಲಾಯಿತು.

1907ರಲ್ಲಿ ಸ್ಥಳೀಯ ಸಂಸ್ಥೆಯ ಎಂಜಿನಿಯರ್‌ ಈ ಕಟ್ಟಡ ಸುಭದ್ರ ಸ್ಥಿತಿಯಲ್ಲಿಲ್ಲವೆಂದು ವರದಿ ನೀಡಿದ್ದರಿಂದ ಅದನ್ನು ಕೆಡವಿ, 1912ರ ನವೆಂಬರ್‌ 13 ರಂದು ಹೊಸ ಚರ್ಚ್‌ಗೆ ಅಡಿಪಾಯ ಹಾಕಿ ರೈಸ್‌ ಮೆಮೋರಿಯಲ್‌ ಚರ್ಚ್‌ ಎಂದು ಮರು ನಾಮಕರಣ ಮಾಡಲಾಯಿತು. ಅದರ ಕಾಮಗಾರಿ 1916–17ರಲ್ಲಿ ಪೂರ್ಣಗೊಂಡಿತು. 1991ರಲ್ಲಿ ಚರ್ಚ್‌ ಅನ್ನು ಮತ್ತೊಮ್ಮೆ ನವೀಕರಿಸಲಾಗಿದೆ. ಚರ್ಚ್‌ನ ಮುಂಭಾಗ ರೋಮನ್‌ ಶೈಲಿಯನ್ನು ಹೊಂದಿದೆ.

ಕನ್ನಡ ಸಾಹಿತ್ಯ ಸಾಧಕರೂ ಆದ ರೆವರೆಂಡ್‌ ಬೆಂಜಮಿನ್‌ ರೈಸ್‌ ಮಿಷನರಿಗಳ ಸಹಾಯದಿಂದ 1917ರಲ್ಲಿ ಈ ಚರ್ಚ್‌ ಅನ್ನು ಕಟ್ಟಿಸಿದರು. 1836ರಲ್ಲಿ ಬೆಂಗಳೂರಿಗೆ ಬಂದ ಅವರು, ಕನ್ನಡ ಭಾಷೆಯನ್ನು ಕೇವಲ 6ರಿಂದ 7 ತಿಂಗಳಲ್ಲಿ ಕಲಿತು, ಕನ್ನಡದಲ್ಲಿಯೇ ಧರ್ಮೋಪದೇಶ ಮಾಡುತ್ತಿದ್ದರು. ಅವರು ಸ್ಥಾಪಿಸಿದ ಮಿತ್ರಾಲಯ ಶಾಲೆ ಇಂದಿಗೂ ಬೆಂಗಳೂರಿನ ಪ್ರತಿಷ್ಠಿತ ಶಾಲೆಗಳಲ್ಲಿ ಒಂದಾಗಿದೆ. ಅಲ್ಲದೆ ಅವರು ಆಂಗ್ಲೊ–ದೇಶೀಯ ಭಾಷಾ ಮಾಧ್ಯಮ ಶಾಲೆಯನ್ನೂ ಸುಲ್ತಾನ್‌ಪೇಟೆಯಲ್ಲಿ ಆರಂಭಿಸಿದರು. ಇದರ ಜತೆಗೆ ಅವರು ಕ್ರೈಸ್ತರ ಕೆರೋಲ್‌ ಗೀತೆಗಳನ್ನು ಕನ್ನಡಕ್ಕೆ ತಂದರು.

ಕನ್ನಡ ಶಾಸನಗಳ ಕ್ಷೇತ್ರದಲ್ಲಿ ಸಾಕಷ್ಟು ಕೆಲಸ ಮಾಡಿರುವ ಬಿ.ಎಲ್‌. ರೈಸ್‌ ಅವರು ಬೆಂಜಮಿನ್‌ ರೈಸ್‌ ಅವರ ಪುತ್ರ. ಬಿ.ಎಲ್‌. ರೈಸ್‌ ಅವರು ಸುಮಾರು 9000 ಕನ್ನಡ ಶಾಸನಗಳನ್ನು ಓದಿ, ಅವುಗಳನ್ನು ಎಪಿಗ್ರಾಫಿಯಾ ಕರ್ನಾಟಿಕಾದ 12 ಸಂಪುಟಗಳನ್ನು ಪ್ರಕಟಿಸಿದ್ದಾರೆ. ಕರ್ನಾಟಕ ಮತ್ತು ಭಾರತದ ಇತಿಹಾಸ ರಚನೆಗೆ ಮಹತ್ವದ ಕೊಡುಗೆ ನೀಡಿದ್ದಾರೆ.

ರೈಸ್‌ ಮೆಮೋರಿಯಲ್‌ ಚರ್ಚ್‌ನಲ್ಲಿ ವೈಟ್‌ ಕ್ರಿಸ್‌ಮಸ್‌, ಮತ್ತು ಕ್ರಿಸ್‌ಮಸ್‌ ಅನ್ನು ಸಡಗರ, ಸಂಭ್ರಮದಿಂದ ಆಚರಿಸಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT