ಶನಿವಾರ, ಮಾರ್ಚ್ 25, 2023
28 °C

ಮೂಡಲಗಿ ಪಟ್ಟಣದ ವಿಶೇಷ: ಎತ್ತುಗಳ ಶರ್ಯತ್ತಿನ ರೋಮಾಂಚನ

ಬಾಲಶೇಖರ ಬಂದಿ Updated:

ಅಕ್ಷರ ಗಾತ್ರ : | |

Prajavani

ಮೂಡಲಗಿ (ಬೆಳಗಾವಿ): ‘ಕರಿ ಎತ್ತು ಕಾಳಿಂಗ, ಬಿಳಿ ಎತ್ತು ಮಾಲಿಂಗ, ಸರದಾರ ನನ್ನೆತ್ತು, ಸಾರಂಗ ಬರುವಾಗ ಸರ್ಕಾರವೆಲ್ಲ ನಡುಗ್ಯಾವೊ...’ ಎಂದು ರೈತರು ಭೂಮಿಯಲ್ಲಿ ದುಡಿಯುವ ಎತ್ತುಗಳ ಬಗ್ಗೆ ವ್ಯಕ್ತಪಡಿಸುವ ಅಭಿಮಾನ–ಪ್ರೀತಿಗೆ ಪಾರವೇ ಇಲ್ಲ. ಅದರ ಮುಂದುವರಿದ ಭಾಗವಾಗಿ ಇಲ್ಲಿ ಶರ್ಯತ್ತುಗಳನ್ನು ನಡೆಸುವುದು ಇಲ್ಲಿನ ಟ್ರೆಂಡ್ ಆಗಿದೆ.

ಶಿವಬೋಧರಂಗ ಜಾತ್ರೆಯಲ್ಲಿ ನಡೆಯುವ ಎತ್ತುಗಳ ಸ್ಪರ್ಧೆಯೂ ಗಮನಸೆಳೆಯುತ್ತದೆ. ಕಟ್ಟುಮಸ್ತಾದ ಎತ್ತುಗಳ ಠಾವು, ಎತ್ತುಗಳ ಮುಗದಾನು ಹಿಡಿದು ಹೆಜ್ಜೆ ಹಾಕುವ ಕುಸ್ತಿ ಪೈಲ್ವಾನರಂತಹ ರೈತರ ನಡಿಗೆಯು ರೋಮಾಂಚನಗೊಳಿಸುತ್ತದೆ.

ಆಕರ್ಷಣೆಗಳಲ್ಲಿ ಒಂದು:

ಈ ಬಾರಿ ಜಾತ್ರೆ ಅಂಗವಾಗಿ ಜೋಡೆತ್ತುಗಳ ತೆರೆ ಬಂಡಿ ಸ್ಪರ್ಧೆಗೆ 10 ಎಕರೆ ವಿಸ್ತಾರದ ಎಸ್‌ಎಸ್‌ಆರ್‌ ಮೈದಾನದ ತುಂಬೆಲ್ಲಾ ಎತ್ತುಗಳ ಕಲರವ ತುಂಬಿತ್ತು. ಜಿಲ್ಲೆಯೊಂದಿಗೆ ಬಾಗಲಕೋಟೆ, ವಿಜಯಪುರ, ಧಾರವಾಡ ಜಿಲ್ಲೆಗಳಿಂದ ಎತ್ತುಗಳು ಜಮಾಯಿಸಿದ್ದವು. ಮಠದ ಪೀಠಾಧಿಪತಿ ಶ್ರೀಪಾದಬೋಧ ಸ್ವಾಮೀಜಿ ಅವರ ಪ್ರೇರಣೆಯಿಂದ ಶರ್ಯತ್ತು ಇಲ್ಲಿನ ಆಕರ್ಷಣೆಗಳಲ್ಲಿ ಒಂದಾಗಿದೆ. ದನದ ಪೇಟೆಯ ವ್ಯಾಪಾರಿಗಳು ಎತ್ತುಗಳ ಶರ್ಯತ್ತು ಸಂಘಟನೆಯ ರೂವಾರಿಗಳು. 4 ದಶಕಗಳಿಂದ ನಡೆಸಿಕೊಂಡು ಬಂದಿದ್ದಾರೆ.

ದನದ ಪೇಟೆಯ ವ್ಯಾಪಾರಿಗಳಾದ ದಿ.ದುಂಡಪ್ಪ ತುಪ್ಪದ (ಮಗದುಮ್‌), ಬಸವರಾಜ ಮುರಗೋಡ, ಲಕ್ಷ್ಮಣ ಭಾಗೋಜಿ, ಪ್ರಭಾಕರ ಬಂಗೆನ್ನವರ, ಶ್ರೀಶೈಲ್‌ ಒಂಟಗೋಡಿ, ಗೋಪಾಲ ತಳವಾರ, ಬಾಬು ಖಾನಟ್ಟಿ, ಬಾಬು ಸಾವಂತನವರ ಎತ್ತುಗಳ ಶರ್ಯತ್ತಿನ ಕಸರತ್ತಿಗೆ ಅಡಿಪಾಯ ಹಾಕಿದ್ದಾರೆ. ಆರಂಭದಲ್ಲಿ ಎತ್ತುಗಳಿಂದ ಕಲ್ಲು ಎಳೆಯುವುದು, ಬಂಡಿ ಓಡಿಸುವುದು, ನೇಗಿಲು ಎಳೆಸುವ ಸ್ಪರ್ಧೆಗಳನ್ನು ಏರ್ಪಡಿಸುತ್ತಿದ್ದರು. ಈಗ ತೆರೆ ಬಂಡಿ ಸ್ಪರ್ಧೆ ಮುಂದುವರಿದಿದೆ.

ಕರತಾಡನದಲ್ಲಿ:

‘ಯಂತ್ರಮಯವಾಗಿರುವ ಪ್ರಸ್ತುತ ದಿನಗಳಲ್ಲಿ ಭೂಮ್ಯಾಗ ಎತ್ತುಗಳ ಬಳಕೆ ಬಾಳ ಕಡಿಮೆ ಆಗೈತ್ರೀ. ಎತ್ತಿನ ಶರ್ಯತ್ತು ಮಾಡುವ ರೈತರಲ್ಲಿ ಮತ್ತು ಹವ್ಯಾಸಿಗಳ ಬಳಿ ಮಾತ್ರ ಎತ್ತುಗಳು ನೋಡಲು ಸಿಗುವಂತೆ ಆಗೈತ್ರೀ’ ಎನ್ನುತ್ತಾರೆ ಮೂಡಲಗಿಯ ರಾಜೇಶ ಬಂಗೆನ್ನವರ.

ಜೋಡೆತ್ತು ತೆರೆಬಂಡಿ ಶರ್ಯತ್ತಿಗಾಗಿ ಮಾಡುವ ವಿಶೇಷ ಬಂಡಿ 4ರಿಂದ 5 ಕ್ವಿಂಟಲ್‌ ಭಾರವಿರುತ್ತದೆ. 2 ನಿಮಿಷದಲ್ಲಿ ಜೋಡೆತ್ತುಗಳು ತೆರೆಬಂಡಿಯನ್ನು ಎಷ್ಟು ದೂರ ಎಳೆಯುತ್ತವೆ ಎನ್ನುವುದರ ಮೇಲೆ ಬಹುಮಾನ ನಿರ್ಧಾರವಾಗುತ್ತದೆ. ಸೀಟಿ ಹಾಕುತ್ತಿದ್ದಂತೆಯೇ ಚಂಗನೆ ಜಿಗಿಯುವ ಎತ್ತುಗಳ ಓಟಕ್ಕೆ ಜನಸಾಗರದ ಶಿಳ್ಳೆ, ಕರತಾಡನವು ಮುಗಿಲು ಮುಟ್ಟುತ್ತವೆ. ಕೆಲವು ಎತ್ತುಗಳು ದಾಖಲೆ ಬರೆಯುತ್ತವೆ.

ದನದ ಪೇಟೆ ವ್ಯಾಪಾರಿಗಳಾದ ಅಣ್ಣಪ್ಪ ಅಕ್ಕನ್ನವರ, ರಾಜೇಶ ಬಂಗೆನ್ನವರ, ಸಿದ್ದಲಿಂಗ ಯರಗಟ್ಟಿ, ಮನೋಹರ ಸಣ್ಣಕ್ಕಿ, ಲಕ್ಕಪ್ಪ ತಟಗಾರ, ಸತ್ಯಪ್ಪ ತಟಗಾರ, ಸಂತೋಷ ಪಟ್ಟಣಶೆಟ್ಟಿ, ಸದಾಶಿವ ತಳವಾರ, ಅಶೋಕ ಭಾಗೋಜಿ ಶರ್ಯತ್ತಿಗೆ ಸಹಕಾರ ನೀಡುತ್ತಿದ್ದಾರೆ. ಲಕ್ಷಾಂತರ ರೂಪಾಯಿ ಬಹುಮಾನಗಳನ್ನು ಸಂಘಟಕರೆ ನೀಡುವುದು ವಿಶೇಷ.

24 ಜೋಡೆತ್ತುಗಳ ಪೈಪೋಟಿ

ಈ ಬಾರಿ 24 ಜೋಡೆತ್ತುಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದವು. ಮೆಟಗುಡ್ಡದ ಕಾಶಿಲಿಂಗೇಶ್ವರ ಪ್ರಸನ್ನ ಎತ್ತುಗಳು 874 ಅಡಿ ಎಳೆದು ಪ್ರಥಮ ಸ್ಥಾನ ಪಡೆದು ₹30ಸಾವಿರ ಬಹುಮಾನಕ್ಕೆ ಭಾಜವಾದವು. 870 ಅಡಿ ಎಳೆದ ಕಮಲದಿನ್ನಿ ಮಾರುತೇಶ್ವರ ಪ್ರಸನ್ನ 2ನೇ ಸ್ಥಾನ, 804 ಅಡಿ ಎಳೆದ ಅಕ್ಕಿಮರಡಿ ಕರಿಸಿದ್ಧೇಶ್ವರ ಎತ್ತುಗಳು 3ನೇ ಸ್ಥಾನ, 798 ಅಡಿ ಎಳೆದ ಯಾದವಾಡ ಕಾರ್ತಿಕ ಮಿರ್ಜಿ ಎತ್ತು 4ನೇ ಸ್ಥಾನ, 797 ಅಡಿ ಎಳೆದ ಇಟ್ನಾಳದ ಕಾಶಿಲಿಂಗೇಶ್ವರ ಎತ್ತುಗಳು 5ನೇ ಸ್ಥಾನ ಪಡೆದು ಕ್ರಮವಾಗಿ ₹25ಸಾವಿರ, ₹20ಸಾವಿರ, ₹15ಸಾವಿರ, ₹10ಸಾವಿರ ಬಹುಮಾನ ಗೆದ್ದವು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು