ಸೋಮವಾರ, 13 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೀಪೋತ್ಸವಕ್ಕೆ ಕಂಚಿನ ರಥ

Last Updated 25 ನವೆಂಬರ್ 2013, 19:30 IST
ಅಕ್ಷರ ಗಾತ್ರ

ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ಆನಂದಪುರಂನ ಮುರುಘಾಮಠದಲ್ಲೀಗ ದೀಪೋತ್ಸವದ ಕಳೆ. ಇದೇ ಶನಿವಾರದಿಂದ(ನ.30) ಮೂರು ದಿನಗಳ ಕಾಲ ಈ ಉತ್ಸವ ಜರುಗಲಿದೆ. ಶತ ಶತಮಾನಗಳ ಇತಿಹಾಸ ಇರುವ ದೀಪೋತ್ಸವಕ್ಕೆ ಈ ಬಾರಿ ರಾಜ್ಯ ಮಟ್ಟದ ಶರಣಸಾಹಿತ್ಯ ಸಮ್ಮೇಳನ, ಭಾವೈಕ್ಯ ಸಮ್ಮೇಳನ ಮತ್ತು ಶ್ರೀಮಠದ ಡಾ.ಮಲ್ಲಿಕಾರ್ಜುನ ಮಹಾಸ್ವಾಮಿಗಳ ಅಡ್ಡಪಲ್ಲಕ್ಕಿ ಉತ್ಸವದ ಮೆರುಗು.

ಕಾರ್ತಿಕ ಅಮಾವಾಸ್ಯೆಯಂದು (ಡಿ.2) ದೀಪೋತ್ಸವಕ್ಕೆ ವಿಶೇಷ ಕಳೆ. ಅಂದು ಕಂಚಿನ ದೀಪ ರಥವನ್ನು ಮಠದ ಎದುರಿನ ಬಯಲಿನಲ್ಲಿ ಎಳೆದು ಮುಂದಕ್ಕೆ ಸಾಗಿಸಲಾಗುತ್ತದೆ. ಮೂರೂವರೆ ಶತಮಾನಗಳಷ್ಟು ಹಳೆಯದಾದ ಈ ದೀಪದ ರಥ ಪ್ರತಿ ವರ್ಷ ಮಠದಲ್ಲಿ ನಡೆಯುವ ಕಾರ್ತೀಕ ದೀಪೋತ್ಸವದ ಕೇಂದ್ರ ಬಿಂದುವಾಗಿ ಭಕ್ತರು ಮತ್ತು ಪ್ರವಾಸಿಗರನ್ನು ಸೆಳೆಯುತ್ತಿದೆ. ಸುಮಾರು ಆರು ಅಡಿ ಎತ್ತರದ ಈ ದೀಪ ರಥ ಸಂಪೂರ್ಣ ಕಂಚಿನಿಂದ ನಿರ್ಮಿತವಾಗಿದೆ.

ದೇವಾಲಯಗಳಲ್ಲಿರುವ ಮರದ ರಥದ ಮಾದರಿಯಲ್ಲಿ ರಚಿಸಲ್ಪಟ್ಟಿರುವ ಇದರಲ್ಲಿ ಧಾರ್ಮಿಕ ಮೌಲ್ಯಗಳನ್ನು ಬಿಂಬಿಸುವ ಚಿತ್ರಗಳ ಕೆತ್ತನೆಯಿದೆ. ಇದರ ತಳಭಾಗದ ಪೀಠದಲ್ಲಿ ಗಣಪತಿ ಮತ್ತು ಶಿವಲಿಂಗ ಹಾಗೂ ಸುತ್ತಲೂ ಸಾಲಾಗಿ ನಂದಿಯ ವಿಗ್ರಹಗಳಿವೆ. ರಥದ ನಾಲ್ಕೂ ಮೂಲೆಗಳಲ್ಲಿ ಐರಾವತದ ಕೆತ್ತನೆಯಿದ್ದು ಇವುಗಳ ಮೇಲ್ಭಾಗದಲ್ಲಿ ಸಿಂಹ, ಮೊಲ, ನಾಗದೇವತೆಗಳು ರಾರಾಜಿಸುತ್ತಿದೆ.

ಪೀಠದ ಮೇಲೆ ರಥದ ಪತಾಕೆಯನ್ನು ಹೋಲುವ ಏಳು ಅಂತಸ್ತುಗಳಿವೆ. ಮೊದಲ ಅಂತಸ್ತಿನಲ್ಲಿ ಅಷ್ಠದಿಕ್ಪಾಲಕರು ಮತ್ತು ವೀರಭದ್ರ ಸ್ವಾಮಿಯ ಮೂರ್ತಿ ಇದೆ. ಶಿಖರ ಭಾಗದಲ್ಲಿ ಕಮಲ ದಳಗಳೊಂದಿಗೆ ರಾರಾಜಿಸುವ ಅತ್ಯಾಕರ್ಷಕ ಕಳಶವಿದೆ.

ಈ ರಥದಲ್ಲಿ ಬಿಂಬಿತವಾಗಿರುವ ದೀಪಲಕ್ಷ್ಮಿಯ ಚಿತ್ರ ಲೋಹ ಶಿಲ್ಪದಲ್ಲಿಯೇ ಅತ್ಯದ್ಭುತವೆನಿಸುವಂತಿದೆ. ರಥದ ಪೀಠದ ಸುತ್ತಲೂ ಮೂರು ಸಾಲುಗಳಲ್ಲಿ ೬೬, ಮಧ್ಯೆ ೧೬ ಹಾಗೂ ಉಳಿದ ಅಂತಸ್ತುಗಳಲ್ಲಿ ಪ್ರತಿಯೊಂದರಲ್ಲೂ ೮ ದೀಪಲಕ್ಷ್ಮಿಯರ ಪ್ರತಿಮೆಗಳಿವೆ. ಕಾಲಿನಲ್ಲಿ ಅಂದಿಗೆ, ಕಿರುಗೆಜ್ಜೆ, ತೊಳಬಂದಿ, ಬಳೆ ಹಾಗೂ ಕಿರೀಟಗಳಿಂದ ಸರ್ವಾಲಂಕೃತ ಈ  ದೀಪ ಲಕ್ಷ್ಮಿಯರ ಹಸ್ತದಲ್ಲಿ ಜ್ಯೋತಿಯಿದೆ.

ಕೆಳದಿ ಅರಸ ಇಮ್ಮಡಿ ಸೋಮಶೇಖರ ನಾಯಕ ಮುರುಘರಾಜೇಂದ್ರ ಮಹಾ ಸಂಸ್ಥಾನದ ಅಂದಿನ ಸ್ವಾಮಿಗಳ ಪರಮ ಭಕ್ತನಾಗಿದ್ದು ಮಠದ ಅಭ್ಯುದಯಕ್ಕೆ ನಿರಂತರ ನೆರವು ನೀಡಿದ್ದನು. ಶ್ರೀಮಠದಲ್ಲಿ ವರ್ಷಾನುವರ್ಷ ಕಾರ್ತಿಕ ದೀಪೋತ್ಸವ ವೈಭವದಿಂದ ನಡೆಯಲು ಹಲವು ದಾನ ದತ್ತಿ ನೀಡಿದ್ದನು. ಈ ಹಿನ್ನೆಲೆಯಲ್ಲಿ ಈತ ೧೬೭೧ರಲ್ಲಿ ಕಂಚಿನ ರಥ ನಿರ್ಮಿಸಿ ಆಗಿನ ಪೀಠಾಧಿಪತಿ ಇಮ್ಮಡಿ ಗುರುಸಿದ್ಧ ಸ್ವಾಮೀಜಿಯವರಿಗೆ ಅರ್ಪಿಸಿದ್ದನು ಎಂದು ದಾಖಲೆಗಳಿಂದ ತಿಳಿದು ಬಂದಿದೆ.

ಈ ಮಠದ ವ್ಯಾಪ್ತಿಯಲ್ಲಿ ಪುರಾಣ ಪ್ರಸಿದ್ಧ ಗವಿ ಮಠವಿದೆ. ಈ ಗವಿ ಮಠ ಜಂಬಿಟ್ಟಿಗೆಯ ನೆಲದೊಳಗೆ ವಿಶಿಷ್ಟ ರಚನೆಯನ್ನು ಹೊಂದಿದ ಗುಹೆಗಳಿವೆ. ಪ್ರಾಚೀನ ಕಾಲದಲ್ಲಿ ಕಾಳಾಮುಖ ಶೈವ ಮುನಿಗಳು ಇಲ್ಲಿ ಕಠಿಣ ತಪಸ್ಸು ಆಚರಿಸುತ್ತಿದ್ದರೆಂದು ತಿಳಿಸುತ್ತದೆ ಶಾಸನ.
ಮಲೆನಾಡು ಮತ್ತು ಹೊರ ಜಿಲ್ಲೆಗಳಿಂದ ಸಂಗ್ರಹಿಸಿದ ಹಲವು ಪ್ರಾಚೀನ ವಸ್ತುಗಳು ಮತ್ತು ತಾಳೆಗರಿ ಗ್ರಂಥಗಳನ್ನೊಳಗೊಂಡ ಸುಸಜ್ಜಿತ ವಸ್ತು ಸಂಗ್ರಹಾಲಯ ಸಹ ಈ ಮಠದಲ್ಲಿದೆ.

ದೀಪೋತ್ಸವಕ್ಕೆ ಬಂದ ಭಕ್ತಾದಿಗಳಿಗೆ ಇವುಗಳ ವೀಕ್ಷಣೆ ಮಾಡುವ ಅವಕಾಶವೂ ಇದೆ. ಇದರ ಜೊತೆಗೆ ವಸ್ತು ಪ್ರದರ್ಶನ ಮತ್ತು ಮಾರಾಟ, ಜೂಡೋ ಸ್ಪರ್ಧೆ, ಶರಣಸಾಹಿತ್ಯ ಸಾಂಸ್ಕೃತಿಕ ಸಮ್ಮೇಳನ, ಶಿವಾನುಭವಗೋಷ್ಠಿ ಸೇರಿದಂತೆ ವಿವಿಧ ಮನರಂಜನಾ ಕಾರ್ಯಕ್ರಮಗಳೂ ನಡೆಯಲಿವೆ.

ಶಿವಮೊಗ್ಗ-- ಮತ್ತು ಜೋಗ ಮಾರ್ಗದ ರಾಷ್ಟ್ರೀಯ ಹೆದ್ದಾರಿ ೨೦೬ ರಲ್ಲಿ ಶಿವಮೊಗ್ಗದಿಂದ ೪೬ ಕೀ.ಮೀ.ದೂರದಲ್ಲಿ ಈ ಮಠವಿದೆ. ತಾಲ್ಲೂಕು ಕೇಂದ್ರವಾದ ಸಾಗರದಿಂದ ೨೭ ಕಿ.ಮೀ.ದೂರದಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT