ಸೋಮವಾರ, 13 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವನೌಷಧಗಳ ‘ಬನಜಾಲಯ’

Last Updated 7 ಡಿಸೆಂಬರ್ 2015, 19:30 IST
ಅಕ್ಷರ ಗಾತ್ರ

ನೈಸರ್ಗಿಕ ವಿಕೋಪಗಳಿಗೆ ಪರಿಸರ ನಾಶ ಮತ್ತು ಅತಿಯಾದ ಮಾನವನ ಹಸ್ತಕ್ಷೇಪವೇ ಕಾರಣ ಎಂಬ ಕೂಗು ಇಂದು ಸಾಮಾನ್ಯವಾಗಿಬಿಟ್ಟಿದೆ. ಈ ನಡುವೆ ಪರಿಸರ ಸಂರಕ್ಷಣೆಯ ಹಾದಿಯಲ್ಲಿ ಹಲವಾರು ಹೋರಾಟಗಳೂ ನಡೆಯುತ್ತಿವೆ. ಪರಿಸರವನ್ನು ಉಳಿಸಲು ಕೆಲವು ಪರಿಸರಪ್ರೇಮಿಗಳು ಶ್ರಮಿಸುತ್ತಲಿದ್ದಾರೆ.

ಇಂಥವರಲ್ಲಿ ಗುರುತಿಸಿಕೊಂಡಿದ್ದಾರೆ   ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ಕೊಡ್ಲುತೋಟದ ಬನಜಾಲಯದ ರಮೇಶ. ಪರಿಸರ ಸಂರಕ್ಷಣೆಯನ್ನೇ ತಮ್ಮ ಜೀವನವನ್ನಾಗಿಸಿಕೊಂಡ ಇವರ ಮನೆ ‘ಬನಜಾಲಯ’ ಅಪರೂಪದ ಪರಿಸರ ಕ್ಷೇತ್ರವಾಗಿದೆ.

ಸಾಗರದಿಂದ ಆವಿನಹಳ್ಳಿ ರಸ್ತೆಯಲ್ಲಿ ಕೇವಲ ಸುಮಾರು ಆರು ಕಿ.ಮೀ.ದೂರದಲ್ಲಿರುವ ಬನಜಾಲಯ ವನೌಷಧ, ಗಿಡಮರಗಳ ಪಳೆಯುಳಿಕೆ , ವೈವಿಧ್ಯಮಯ ಸಸ್ಯ, ಎಲೆ, ಬೀಜಗಳನ್ನು ಸಂಗ್ರಹದಿಂದ ಪರಿಸರ ಪ್ರೇಮಿಗಳು ಮತ್ತು ಪರಿಸರ ಅಧ್ಯಯನಾಸಕ್ತರಿಗೆ ಆಕರ್ಷಕ ತಾಣವಾಗಿದೆ. ಸುಮಾರು 32ವರ್ಷಗಳಿಂದ ರಮೇಶ ಹಾಗೂ ಅವರ ಕುಟುಂಬದವರು ಪರಿಸರ ಉಳಿಸುವ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ಮನೆಯ ಪ್ರವೇಶದ್ವಾರದಲ್ಲೇ ಇವರ ಈ ಪ್ರೀತಿಯ ಅರಿವು ಉಂಟಾಗುತ್ತದೆ. ಮನೆಯ ಮುಂಭಾಗದಲ್ಲಿ ಕಾಡಿನ ಜಾತಿಯ ಗಿಡ, ಮರ, ಬಳ್ಳಿಗಳು ತುಂಬಿಕೊಂಡಿವೆ. ಇವರ ಮನೆಯಲ್ಲಿ 900 ಕ್ಕೂ ಅಧಿಕ ವಿಭಿನ್ನ ಜಾತಿಯ ಬೀಜಗಳ ಸಂಗ್ರಹವಿದೆ. ಇಂತಹ ಬೀಜಗಳನ್ನು ಚಿಕ್ಕ ಚಿಕ್ಕ ಪ್ಲಾಸ್ಟಿಕ್ ಕವರಗಳಲ್ಲಿ ನೇತು ಹಾಕಿ ಇವುಗಳ ಉಪಯೋಗ ಮತ್ತು ಮಹತ್ವದ ಬಗ್ಗೆ ಮಾಹಿತಿ ಪ್ರದರ್ಶಿಸಿದ್ದಾರೆ.

ಬಗೆ ಬಗೆಯ ಎಲೆಗಳು, ಹಕ್ಕಿಯ ಗೂಡುಗಳು, ಕಾಡುಹಂದಿಯ ಕೋರೆಹಲ್ಲುಗಳು, ಹಾವಿನ ಪೊರೆಗಳು, ವಿವಿಧ ಮರ ಬಳ್ಳಿಗಳ ಬೇರುಗಳು ಇತ್ಯಾದಿಗಳಿದ್ದು ಅಧ್ಯಯನಾಸಕ್ತರನ್ನು ಸದಾ ಕೈ ಬೀಸಿ ಕರೆಯುವಂತಿದೆ. ಕೇದಿಗೆಹೊಡೆ, ಲೂಥಿಕಾಯಿ, ಪಿಸ್ತಕಾಯಿ ಸಿಪ್ಪೆಗಳಿಂದ ತಯಾರಿಸಿದ ಚಿತ್ತಾಕರ್ಷಕ ಕಸೂತಿಗಳು ಇವರ ಮನೆಯ ಗೋಡೆಯನ್ನು ಅಲಂಕರಿಸಿವೆ. ಸತತ 30 ವರ್ಷಗಳಿಂದ ಸುತ್ತಲಿನ ಕಾಡಿನಲ್ಲಿ ಸಿಕ್ಕ  ಮರಗಿಡ ಬಳ್ಳಿ ಮತ್ತು ಪ್ರಾಣಿ ಪಕ್ಷಿಗಳ ಪಳೆಯುಳಿಕೆ ಸಂಗ್ರಹಿಸಿದ್ದಾರೆ. ಸತ್ತ ಪ್ರಾಣಿ ಪಕ್ಷಿಗಳ ಮೂಳೆ, ಕೊಂಬೆ, ಗರಿ ಇತ್ಯಾದಿ ಸಂಗ್ರಹಿಸಿದೆ.

ಇವರ ಮನೆಯ ಸುತ್ತ ಸುಮಾರು 50 ಎಕರೆ ವಿಸ್ತೀರ್ಣದ ಕಾಡು ಇದೆ. ಇಲ್ಲಿ ಒಣಗಿ ಬಿದ್ದ ಮರದ ರೆಂಬೆ, ಕೊಂಬೆ ಎಲೆಗಳನ್ನು ಮಾತ್ರ ಬಳಸುವ ಇವರು ಯಾರೂ  ಇವುಗಳನ್ನು ಕಡಿಯದಂತೆ ನೋಡಿಕೊಳ್ಳುತ್ತಿದ್ದಾರೆ. ಇವರ ಈ ಸಂಗ್ರಹಾಲಯ ಸುತ್ತಮುತ್ತಲು ಹೆಸರುವಾಸಿಯಾದ ಕಾರಣ ನಿತ್ಯ ಹಲವು ಜನ ಇಲ್ಲಿಗೆ ಬರುತ್ತಾರೆ. ಕುಟುಂಬದ ಪರಂಪರೆಯಂತೆ ಹಲವು ಕಾಯಿಲೆಗಳಿಗೆ ಗಿಡ ಮೂಲಿಕೆಗಳ ಔಷಧ ನೀಡುವ ಇವರು ಗಿಡಮೂಲಿಕೆಯ ಔಷಧಗಳ ಮಹತ್ವ ತಿಳಿಸುತ್ತಾರೆ.  ಇವರ ಕುಟುಂಬಸ್ಥರು ಇದೇ ಮನೆಯಲ್ಲಿ ವಾಸವಾಗಿದ್ದು ಮನೆಯ ಪಡಸಾಲೆ, ಜಗುಲಿ, ದೇವರ ಕೋಣೆಗಳ ಗೋಡೆ, ಮನೆಯ ಮುಂಭಾಗದ ಕಂಬಗಳು ಎಲ್ಲವೂ ಪರಿಸರದ ಗಿಡ ಮರಗಳ ಪಳೆಯುಳಿಕೆಗಳು ಮತ್ತು ಸಸ್ಯದ ಎಲೆ ಬೇರು ಇತ್ಯಾದಿಗಳಿಂದ ತಯಾರಿಸಲ್ಪಟ್ಟ ಕರಕುಶಲ ವಸ್ತುಗಳಿಂದ ಅಲಂಕೃತಗೊಂಡಿದೆ. ಮನೆಯ ಉಪ್ಪರಿಗೆಯಲ್ಲಿ ಬಗೆ ಬಗೆಯ ಬೀಜ ,ಬೇರು, ಹಕ್ಕಿಗಳ ಗರಿ, ಹಾವಿನ ಪೊರೆ ಇತ್ಯಾದಿ ವಿಶಿಷ್ಟ ವಸ್ತುಗಳ ಸಂಗ್ರಹಾಲಯವಿದೆ.

ಸಂಪರ್ಕಕ್ಕೆ 9341278212
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT