ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಳ್ಳಿ ಸೊಗಡಿನ ಬಳ್ಳಿ ಹಿಡಿದು

Last Updated 23 ಫೆಬ್ರುವರಿ 2015, 19:30 IST
ಅಕ್ಷರ ಗಾತ್ರ

ಬದಲಾಗುತ್ತಿರುವ ಜೀವನಶೈಲಿಗೆ ಗ್ರಾಮ್ಯದ ಸೊಗಡೇ ಬೇಡವೆಂದು ಅದಕ್ಕೆ ಬೆನ್ನುಹಾಕಿ ಯುವಶಕ್ತಿಯೆಲ್ಲ ಪಟ್ಟಣದೆಡೆಗೆ ಪಯಣ ಬೆಳೆಸುತ್ತಿರುವ ಈ ಹೊತ್ತಿನಲ್ಲಿ, ಬಲಿಯಾಗುತ್ತಿರುವ ಹಳ್ಳಿ ಬದುಕಿನ ಸುಸ್ಥಿರತೆ, ಸಾಂಪ್ರದಾಯಿಕ ಜ್ಞಾನ ಹಾಗೂ ಪರಿಸರದ ಕುರಿತ ಕಾಳಜಿಯನ್ನು ಮರುಕಳಿಸುವ ಪ್ರಯತ್ನವೊಂದು ದಕ್ಷಿಣ ಕನ್ನಡ ಜಿಲ್ಲೆ, ಬಂಟ್ವಾಳ ತಾಲ್ಲೂಕಿನಲ್ಲಿ ಸದ್ದಿಲ್ಲದೇ ಮೊಳಕೆಯೊಡೆದು ಚಿಗುರಿ ನಿಂತಿದೆ.

ಕೃಷಿ ಈಗ ಜೀವನ್ಮುಖಿಯಾಗಿ ಉಳಿದಿಲ್ಲ. ನಾವೀಗ ಸುಖದ ತಪ್ಪು ಕಲ್ಪನೆಯ ಹಿಂದೆ ಬಿದ್ದು ಆರೋಗ್ಯ, ನೆಮ್ಮದಿ ಎರಡನ್ನೂ ಕಳೆದುಕೊಳ್ಳುತ್ತಿದ್ದೇವೆ. ಅದಕ್ಕೆ ತಕ್ಕಂತೆ ನಮ್ಮ ಆಹಾರ ಪದ್ಧತಿಯಲ್ಲೂ ಬದಲಾವಣೆಯಾಗಿದೆ. ಮೊದಲೆಲ್ಲ ಅಡುಗೆ ಪ್ರಾರಂಭಿಸುವ ಸ್ವಲ್ಪ ಹೊತ್ತು ಮೊದಲು ಹಿತ್ತಿಲಲ್ಲಿ, ತೋಟದೊಳಗೆ ಓಡಾಡಿ ನಾಲ್ಕಾರು ಕುಡಿ, ತರಕಾರಿಗಳನ್ನು ಆಯ್ದು ತರುವುದು ಸಾಮಾನ್ಯವಾಗಿತ್ತು. ಮಾವು, ಹಲಸು, ಸೊಪ್ಪು ತರಕಾರಿ, ಗಡ್ಡೆ ಹೀಗೆ ಲಭ್ಯತೆ ಹಾಗೂ ಋತುಮಾನಕ್ಕನುಸಾರವಾಗಿ ಆಹಾರದ ಆಯ್ಕೆ.

ಆ ಜಾಣ್ಮೆ ಈಗ ಮರೆಯಾಗಿದೆ. ಮಾರುಕಟ್ಟೆ ಅವಲಂಬನೆ ಹೆಚ್ಚಿದೆ. ಇದರಿಂದಾಗಿ ಗ್ರಾಮೀಣ ಬದುಕಿನ ಒರತೆ ಬತ್ತುವ ಆತಂಕ ಎದುರಾಗಿದೆ. ಹೀಗಾಗಬಾರದೆಂಬ ಹಂಬಲದೊಂದಿಗೆ ಸುಮಾರು ಇಪ್ಪತ್ತು ಕುಟುಂಬಗಳು ಕೃಷಿ ಚಟುವಟಿಕೆಯನ್ನು ಗರಿಗೆದರುವಂತೆ ಮಾಡಿವೆ. ಈ ಭಾಗದಲ್ಲಿ ಕೆಲ ವರ್ಷಗಳಿಂದ ಕೃಷಿಕರನ್ನು ಜೊತೆಗೂಡಿಸುವ ಕಾರ್ಯಕ್ರಮಗಳು ಅಲ್ಲೊಂದು ಇಲ್ಲೊಂದು ಜರುಗಿದರೂ, ಇವನ್ನು ವ್ಯವಸ್ಥಿತವಾಗಿ ಮಾಡಬೇಕೆಂಬ ಹೊಳಹು ಮೂಡಿದ್ದು 2011ರಲ್ಲಿ.

ಇದರ ಪರಿಣಾಮ ಏಪ್ರಿಲ್ 2012ರಲ್ಲಿ ಮುಳಿಯ ಗ್ರಾಮದ ವೆಂಕಟಕೃಷ್ಣ ಅವರ ಮನೆಯಲ್ಲಿ ಜರುಗಿದ ಕೃಷಿ ಸಮಾರಂಭವೊಂದರಲ್ಲಿ ಈ ಒಕ್ಕೂಟ ‘ಹಲಸು ಸ್ನೇಹಿ ಕೂಟ’ ಎಂಬ ಹೆಸರಿನಲ್ಲಿ ಅಸ್ತಿತ್ವಕ್ಕೆ ಬಂತು. ಪ್ರಾರಂಭದಲ್ಲಿ ಪರಿಸರ ಮತ್ತು ಮನುಷ್ಯನ ಆರೋಗ್ಯಕ್ಕೆ ಹಲಸಿನ ಅಗತ್ಯದ ಅರಿವು ಮೂಡಿಸುವ ಕಾರ್ಯಕ್ರಮ ಗಳನ್ನು ಆಯೋಜಿಸಿದರು. ಬಳಕೆಯಲ್ಲಿನ ಹೆಚ್ಚಳ, ತಳಿ ಸಂರಕ್ಷಣೆ ಹಾಗೂ ಮೌಲ್ಯವರ್ಧನೆಗೆ ಹೆಚ್ಚು ಒತ್ತು ನೀಡಲಾಯಿತು.

ಹಲಸಿನ ಕುರಿತ ಕೀಳರಿಮೆಯನ್ನು ಹೋಗಲಾಡಿಸಿ ಅದನ್ನು ಮತ್ತಷ್ಟು ಜನರ ಮನದ ಬಳಿ ತರಬೇಕೆನ್ನುವ ಆಶಯ ಸಫಲವಾದದ್ದೂ ಹೌದು. ಈ ಚಟುವಟಿಕೆಗಳಲ್ಲಿ ಸುತ್ತಲ ಹತ್ತು ಹಳ್ಳಿಗಳ ಜನರು ಸಕ್ರಿಯವಾಗಿ ಭಾಗವಹಿಸಿದ್ದು ಇದಕ್ಕೆ ಪುರಾವೆ. ಈ ಕಾರ್ಯಕ್ರಮಗಳಲ್ಲಿ ಜನರು ಉತ್ಸಾಹದಿಂದ ಪಾಲ್ಗೊಳ್ಳು ವುದನ್ನು ಗಮನಿಸಿದ ಈ ಸಮಾನ ಆಸಕ್ತರ ಬಳಗ ತಮ್ಮ ಚಟುವಟಿಕೆಯನ್ನು ವಿಸ್ತರಿಸಲು ಯೋಚಿಸಿತು.

‘ಕಳೆದೆರಡು ವರ್ಷಗಳಲ್ಲಿ ಕೃಷಿಗೆ ಪೂರಕವಾದ ಎಂಟು ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಅವುಗಳಲ್ಲಿ ಮೂರು ಹಲಸು ಮೇಳ, ಒಂದು ಗಡ್ಡೆ ಮೇಳ, ಒಂದು ಸಿರಿಧಾನ್ಯ ಮೇಳ, ಒಂದು ತರಕಾರಿ ಮೇಳ ಒಳಗೊಂಡಿವೆ. ‘ಹಣ್ಣು ತನ್ನಿ - ತಿನ್ನೋಣ ಬನ್ನಿ’ ಎಂಬ ಇನ್ನೊಂದು ಕಾರ್ಯಕ್ರಮದಲ್ಲಿ ಅಪರೂಪವಾಗುತ್ತಿರುವ ಕಾಡು ಹಣ್ಣುಗಳ ಮಹತ್ವದ ಅರಿವು ಮೂಡಿಸುವ ಪ್ರಯತ್ನ ನಡೆಯಿತು’ ಎನ್ನುತ್ತಾರೆ ಬಳಗದ ಸದಸ್ಯ ಕಡಂಬಿಲ ಕೃಷ್ಣಪ್ರಸಾದ್. 

ಸಾಧ್ಯತೆಗಳ ಅನಾವರಣ
ವಿಷಯದ ಆಧಾರದಲ್ಲಿ ಕಾರ್ಯಕ್ರಮಗಳನ್ನು ಅರ್ಧ ಅಥವಾ ಒಂದು ದಿನವೆಂದು ನಿಗದಿ ಮಾಡಲಾಗುತ್ತದೆ. ಪ್ರತಿ ಕಾರ್ಯಕ್ರಮಕ್ಕೆ ಕನಿಷ್ಠ ಮೂರು ತಿಂಗಳ ಪರಿಶ್ರಮ ಅಗತ್ಯ. ಮುಳಿಯ ವೆಂಕಟಕೃಷ್ಣ ಈ ಪ್ರಯತ್ನದ ರೂವಾರಿ. ಪರಿಕಲ್ಪನೆಯಿಂದ ಹಿಡಿದು ಸಂಯೋಜನೆಯವರೆಗೆ ಹೆಚ್ಚಿನ ಕೆಲಸವನ್ನು ಅವರೇ ಹೆಗಲಿಗೇರಿಸಿಕೊಳ್ಳುತ್ತಾರೆ.

ಸ್ನೇಹಿತರ ಆಸಕ್ತಿಗೆ ಅನುಗುಣವಾಗಿ ಗಿಡಗಳ ಸಂಗ್ರಹ, ಅಗತ್ಯ ವಸ್ತುಗಳನ್ನು ಹೊಂದಿಸುವುದು... ಹೀಗೆ ಜವಾಬ್ದಾರಿಗಳನ್ನು ಹಂಚುತ್ತಾರೆ. ಇವರ ಜೊತೆಗೆ ಬಳಗದ ಕೆಲ ಕೃಷಿಕರು ಅವರವರ ಕೆಲಸ ನಡುವೆಯೇ, ಸಮಯ ಹೊಂದಿಸಿಕೊಂಡು ಸಮಾಜಕ್ಕೆ, ಜನರ ಆಲೋಚನೆ, ಜೀವನ ಕ್ರಮಕ್ಕೆ ಹೊಸ ದಿಕ್ಕು-ದಿಸೆ ನೀಡಬಲ್ಲ, ಸದ್ಯದ ಅಗತ್ಯದ ವಿಷಯಗಳನ್ನು ಚರ್ಚಿಸುತ್ತಾರೆ.

   ಪುಣಚ ಗ್ರಾಮದ ಮಲ್ಯ ಶಂಕರ ನಾರಾಯಣ ಭಟ್- ಸುಮಾ ಅವರ ಮನೆಯ ಅಂಗಳದಲ್ಲಿ ಆಯೋಜಿಸಲಾಗಿದ್ದ ‘ವರ್ಷವಿಡೀ ತರಕಾರಿ’ ಶೀರ್ಷಿಕೆಯ ಕಾರ್ಯಕ್ರಮದಲ್ಲಿ ಬಹುಬಗೆ ತರಕಾರಿ ಕೃಷಿಕರ ಗೆಲುವಿಗೆ ಹೇಗೆ ಸಹಕಾರಿ ಎಂಬ ಕುರಿತು ವಿಚಾರ ವಿನಿಮಯ ಮಾಡಲಾಯಿತು. ಅಲ್ಪಾವಧಿ-ದೀರ್ಘಾವಧಿ, ಗಿಡ-ಬಳ್ಳಿ ಹೀಗೆ ವಿವಿಧ ತರಕಾರಿಗಳ ಸಂಯೋಜನೆಯಿಂದ ಎಲ್ಲಾ ಋತುವಿನಲ್ಲಿಯೂ ಹಿತ್ತಿಲಲ್ಲಿ ಆಹಾರದ ಕೊಯ್ಲು ಸಿಗುವಂತೆ ಮಾಡುವ ಕುರಿತು ಚರ್ಚಿಸಲಾಯಿತು.

ದಿನವಿಡೀ ನಡೆದ ಮಾತುಕತೆಯಲ್ಲಿ ಬೀಜ ಸಂರಕ್ಷಣೆ ಮತ್ತು ಬೀಜೋಪಚಾರ, ಸಸಿ ನಾಟಿ, ಕೀಟ ನಿರ್ವಹಣೆ, ಕೊಯ್ಲು, ತರಕಾರಿ ಸಂಗ್ರಹಿಸಿಡುವ ವಿಧಾನಗಳು, ಮಾರುಕಟ್ಟೆ ಸಾಧ್ಯತೆಗಳು, ಮೌಲ್ಯವರ್ಧನೆ... ಹೀಗೆ ನಾಲ್ಕಾರು ವಿಷಯಗಳ ಬಗ್ಗೆ ಸಾವಯವ ಪದ್ಧತಿಯ ಸಾಂಪ್ರದಾಯಿಕ ಹಾಗೂ ಆಧುನಿಕ ವಿಧಾನಗಳ ಮಾಹಿತಿ ಮಂಥನ ನಡೆಯಿತು.

ದಿನಬಳಕೆಯ ಸೊಪ್ಪು-ತರಕಾರಿಗಳನ್ನು ಹಿತ್ತಿಲಲ್ಲಿ ಬೆಳೆಯುವ ಮೂಲಕ ಆಹಾರ ಸ್ವಾವಲಂಬನೆಯೆಡೆಗೆ ಹೆಜ್ಜೆ ಹಾಕುವುದರೊಂದಿಗೆ, ಆರೋಗ್ಯವನ್ನೂ ಕಾಪಾಡಬಹುದು ಎಂಬ ವಿಚಾರವೂ ಜನರ ಮನ ತಟ್ಟಿತು. ತರಕಾರಿ ಬೆಳೆಯಲ್ಲಿ ವಿವಿಧ ಪ್ರಯೋಗಗಳನ್ನು ಮಾಡಿರುವ ಮಲ್ಯ ಕುಟುಂಬ ಆ ದಿನದ ಕಾರ್ಯಕ್ರಮಕ್ಕಾಗಿ ತಮ್ಮ ಅಂಗಳದಲ್ಲಿ 20ಕ್ಕೂ ಹೆಚ್ಚು ವಿಧದ ತರಕಾರಿಗಳನ್ನು ಬೆಳೆದಿದ್ದರು. 
ಏಪ್ರಿಲ್ 2014ರಲ್ಲಿ ಭತ್ತ ಕೇಂದ್ರಿತ ಆಹಾರದ ಬಳಕೆಯುಳ್ಳ ದಕ್ಷಿಣ ಕನ್ನಡ ಜಿಲ್ಲೆಗೆ ಸಿರಿಧಾನ್ಯಗಳನ್ನು ಪರಿಚಯಿಸಿದ ಹಿರಿಮೆ ಈ ಬಳಗದ್ದು.

ಸಿರಿಧಾನ್ಯಗಳು ಪರಿಸರದ ಮೇಲಿನ ಒತ್ತಡವನ್ನು ಕಡಿಮೆ ಮಾಡುವುದರ ಜೊತೆಗೆ ಹವಾಮಾನ ಬದಲಾವಣೆಯ ವೈಪರೀತ್ಯಗಳನ್ನು ಎದುರಿಸಿ ಜನರಿಗೆ ಪೌಷ್ಟಿಕ ಆಹಾರ ನೀಡುತ್ತದೆ ಎನ್ನುವ ಮಾಹಿತಿ ಎಲ್ಲರಿಗೂ ದೊರೆಯಿತು. ಅಕ್ಕಿಯ ಬದಲು ಸಿರಿಧಾನ್ಯಗಳನ್ನು ಬಳಸಿ ಮಾಡಿದ ಸ್ಥಳೀಯ ಆಹಾರ ವೈವಿಧ್ಯ ಸಭಿಕರ ಮನಸೆಳೆಯಿತು.

ಮೆದುಳಿಗೆ ಮೇವು
ಈ ಚಟುವಟಿಕೆಗಳಿಗೆ ಜನರ ಸ್ಪಂದನದಿಂದ ಸ್ಫೂರ್ತಿಗೊಂಡ ಆಯೋಜಕರು ಒಂದು ಕಾರ್ಯಕ್ರಮ ಮುಗಿಯುವ ಮೊದಲೇ ಇನ್ನೊಂದು ಕಾರ್ಯಕ್ರಮದ ರೂಪುರೇಷೆ ಸಿದ್ಧಪಡಿಸಿಕೊಂಡಿರುತ್ತಾರೆ. ಇನ್ನಿತರ ಸಾಮಾಜಿಕ, ಕೃಷಿ ಕಾರ್ಯಕ್ರಮಗಳಿಗೆ ಹೋಲಿಸಿದರೆ ಮಹಿಳಾ ಪ್ರಾತಿನಿಧ್ಯವೂ ಇಲ್ಲಿ ಹೆಚ್ಚು. ‘ಈ ಒಟ್ಟೂ ಚಟುವಟಿಕೆಯ ಭಾಗವಾಗಿರಲು ನನಗೆ ಹೆಮ್ಮೆ ಇದೆ. ಇದು ಸಮಾನ ಮನಸ್ಕರನ್ನು ಭೇಟಿಯಾಗಲು ಅವಕಾಶ ಮಾಡಿಕೊಡುತ್ತದೆ.

ವಿಚಾರ ವಿನಿಮಯದಿಂದ ದೊರೆಯುವ ಒಂದು ಹೊಸ ಹೊಳಹು ಸಾಧನೆಯ ಹುರುಪು ಮೂಡಿಸುತ್ತದೆ. ಇದು ನಮ್ಮ ಒಟ್ಟೂ ಬೆಳವಣಿಗೆಗೆ ಸಹಕಾರಿ’ ಎನ್ನುತ್ತಾರೆ ಬಳಗದ ದಿವ್ಯಾ ಪ್ರಸಾದ್. ‘ಮಂಚಿ ಊರಿನ ಕಜೆ ಮನೆಯಲ್ಲಿ ಜರುಗಿದ ‘ಬಲು ಉಪಕಾರಿ ಗಡ್ಡೆ ತರಕಾರಿ’ ಕಾರ್ಯಕ್ರಮದಲ್ಲಿ ಒಟ್ಟುಗೂಡಿದ ಗಡ್ಡೆ-ಗೆಣಸು 50ಕ್ಕೂ ಹೆಚ್ಚು. ಅದೊಂದು ಅಪರೂಪದ ಅನುಭವ. ಆಹಾರ ಭದ್ರತೆಯ ಸಾಧ್ಯತೆಗಳ ಮಿಂಚು ತೋರಿದ್ದು ಈ ಮಣ್ಣಿನಡಿಯ ತರಕಾರಿಗಳು’ ಎನ್ನುತ್ತಾರೆ ಐ.ಟಿ ಉದ್ಯೋಗಿಯಾಗಿದ್ದುಕೊಂಡೇ ಕೃಷಿಯಲ್ಲೂ ತೊಡಗಿಸಿಕೊಂಡಿರುವ ವಸಂತ್ ಕಜೆ.   

ಇನ್ನೊಂದು ವೇದಿಕೆಯಲ್ಲಿ ಔಷಧೀಯ ಸಸ್ಯಗಳ ಗುರುತಿಸುವಿಕೆ, ಬಳಕೆಯ ಬಗ್ಗೆ ಸಂವಾದ ನಡೆಯಿತು. ಕಳೆದ ಜನವರಿಯಲ್ಲಿ ಜರುಗಿದ ‘ಊಟಕ್ಕಿರಲಿ, ಸೊಪ್ಪು ತರಕಾರಿ’ ಕಾರ್ಯಾಗಾರದಲ್ಲಿ ಪ್ರಕೃತಿ ಒದಗಿಸಿರುವ ವಿವಿಧ ಸೊಪ್ಪುಗಳ ಪ್ರದರ್ಶನವಿತ್ತು. ನೂರಕ್ಕೂ ಹೆಚ್ಚು ತರಹದ ಸೊಪ್ಪುಗಳನ್ನು ಅಲ್ಲಿ ಒಟ್ಟುಗೂಡಿಸಲಾಗಿತ್ತು. ಅಡುಗೆ ಮನೆಯಲ್ಲೂ ಸೊಪ್ಪಿನದೇ ಸಾಮ್ರಾಜ್ಯ.

ಸೂಕ್ತ ಮಾಹಿತಿ, ಪ್ರಾಯೋಗಿಕ ಅನುಭವ ವಿನಿಮಯ, ಪೂರಕ ಆಹಾರ, ಮನೆಗೆ ಮರಳುವಾಗ ಕೈಯಲ್ಲಿ ಒಂದಷ್ಟು ಗಿಡಗಳು - ಹೀಗೆ ಎಲ್ಲಾ ವಿಧದಲ್ಲೂ ಭಾಗವಹಿಸುವವರಿಗೆ ಅನುಕೂಲವಾಗುವಂತೆ ಚಟುವಟಿಕೆಗಳು ಇರುತ್ತವೆ. ಕಾರ್ಯಕ್ರಮದ ಅಗತ್ಯಕ್ಕೆ ಅನುಸಾರವಾಗಿ ಸಣ್ಣ ಮೊತ್ತದ ಶುಲ್ಕ ನಿಗದಿಪಡಿಸಲಾಗುತ್ತದೆ. ಕೆಲ ಕಾರ್ಯಕ್ರಮಗಳಿಗೆ ತೋಟಗಾರಿಕಾ ಇಲಾಖೆ ಹಾಗೂ ಕೃಷಿ ವಿಶ್ವವಿದ್ಯಾಲಯ ಹೆಗಲು ಕೊಟ್ಟಿವೆ. ಸುತ್ತಲ ಊರುಗಳ ಆಸಕ್ತರು ಪಾಲ್ಗೊಳ್ಳುತ್ತಾರೆ. 

ಈ ಪ್ರಯತ್ನ ‘ಹಳ್ಳಿ ಬದುಕು ನಿಂತ ನೀರಲ್ಲ’ ಎಂಬುದನ್ನು ಒತ್ತಿ ಹೇಳುತ್ತದೆ. ‘ಪಟ್ಟಣಗಳಲ್ಲಿರುವಂತೆ ಬೇಸರವಾದಾಗ ತಿರುಗಾಡಲು ಮಾರಾಟ ಮಳಿಗೆ, ಹೋಟೆಲ್‌ಗಳು ಇಲ್ಲಿ ಇರದಿರಬಹುದು. ಆದರೆ ಜೀವನದ ಸವಿ ಅದರಲ್ಲಷ್ಟೆ ಇಲ್ಲವಲ್ಲ. ಸಂತಸವನ್ನು ಹುಡುಕುವ, ಹಂಚುವ ಹಾದಿಯಲ್ಲಿ ಇದು ಮೊದಲ ಹೆಜ್ಜೆ’ ಎನ್ನುತ್ತಾರೆ ಬಳಗದ ಸದಸ್ಯರು. ಕೃಷಿ ಸಮುದಾಯಕ್ಕೆ ಸಂಭ್ರಮದ ಹೊಸ ರೀತಿಯನ್ನು ತಿಳಿಸಿಕೊಟ್ಟ, ಸುಸ್ಥಿರತೆಯೆಡೆಗೆ ಹೆಜ್ಜೆಯಿಡಲು ಪ್ರೇರೇಪಿ ಸಿದ ಈ ಮಂದಿಯ ಜೀವನಶೈಲಿಯಲ್ಲೂ ಬದಲಾವಣೆ ಗಳಾಗಿವೆ. ಮನೆಯ ಸಮಾರಂಭಗಳಲ್ಲೂ ಸ್ಥಳೀಯವಾಗಿ ಸಿಗುವ ನಿರ್ವಿಷ ತರಕಾರಿಗಳ ಬಳಕೆಗೇ ಆದ್ಯತೆ.

ಕೃಷಿ- ಸಂತಸ
‘ಈ ಕಾರ್ಯಾಗಾರಗಳು ಪಟ್ಟಣವಾಸಿಗಳ ಗಮನ ಸೆಳೆದಿದೆ. ನಮ್ಮ ಅಪಾರ್ಟ್‌ಮೆಂಟ್‌ನಲ್ಲಿನ ಚಿಕ್ಕ ಜಾಗದಲ್ಲೇ ಗಿಡಗಳನ್ನು ಹಬ್ಬಿಸಿದ್ದೇನೆ’ ಎನ್ನುತ್ತಾರೆ ಕಾರ್ಯಾಗಾರವೊಂದರಲ್ಲಿ ಭಾಗವಹಿಸಿದ ಮಂಗಳೂರಿನ ಮಮತಾ. ಪ್ರತಿ ಕಾರ್ಯಕ್ರಮವೂ ರೈತರಿಗೆ ತಮ್ಮ ಬೆಳೆಗಳನ್ನು ಪ್ರದರ್ಶಿಸುವ ಅವಕಾಶ ನೀಡುತ್ತದೆ. ಹಣ್ಣು, ತರಕಾರಿ ಗಳ ಅಪರೂಪದ ತಳಿಗಳ ಪ್ರದರ್ಶನ ಕಡ್ಡಾಯ.

ಗಿಡಗಳ ವಿನಿಮಯದ ಜೊತೆಗೆ ಇದು ಪಾಲ್ಗೊಂಡವರನ್ನು ತರಕಾರಿ ಬೆಳೆಯಲು ಪ್ರೇರೇಪಿಸುತ್ತದೆ. ದೇಸೀ ಆಹಾರದ ಮಹತ್ವದ ಅರಿವಾಗಿ ಅದರ ಮೇಲಿನ ಒಲವು ಹೆಚ್ಚಾದಂತೆ ಊರವರು ಸಂರಕ್ಷಣಾ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವಂತೆ ಮಾಡಿದೆ.
‘ಕೃಷಿಕರೊಳಗಿನ ಕ್ರಿಯಾಶೀಲತೆಯನ್ನು ಒರೆಗೆ ಹಚ್ಚುವ ಈ ಸರಣಿ ಕಾರ್ಯಕ್ರಮಗಳು ಈ ಭಾಗದ ಜನರ ಜೀವನದೃಷ್ಟಿ ಬದಲಾಯಿಸಿ ಮತ್ತಷ್ಟು ಉತ್ಸಾಹದಿಂದ ಕೃಷಿಯಲ್ಲಿ ತೊಡಗಿಸಿಕೊಳ್ಳಲು ಪ್ರೇರಣೆ ನೀಡಿದೆ.

ಜನರು ಕೃಷಿಯಲ್ಲಿ ಖುಷಿ ಕಾಣುತ್ತಿದ್ದಾರೆ. ಪರಸ್ಪರ ಬಾಂಧ್ಯವ ಬೆಳೆದಿದೆ. ಎಲ್ಲಕ್ಕಿಂತ ಹೆಚ್ಚಾಗಿ ಈ ಕಾರ್ಯಕ್ರಮಗಳು ನಮಗೆ ಸಮಾಧಾನ, ಸಾರ್ಥಕತೆ ನೀಡುತ್ತಿದೆ. ಸಕಾರಾತ್ಮಕವಾಗಿ ಬದುಕು ಕಟ್ಟಿಕೊಳ್ಳಲು ಇಂತಹ ಚಟುವಟಿಕೆಗಳ ಕೊಡುಗೆ ದೊಡ್ಡದು’ ಎನ್ನುತ್ತಾರೆ ಮುಳಿಯ ವೆಂಕಟಕೃಷ್ಣ.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT