ಗುಂಡ್ಲುಪೇಟೆ: ಕೃಷಿ ಹೊಂಡದ ನೀರಿನಿಂದ ತರಾವರಿ ಬೆಳೆ

7
ಸ್ನಾತಕೋತ್ತರ ಪದವಿ ಮಾಡಿಯೂ ಕೃಷಿ ಬಗ್ಗೆ ಒಲವು, ಹಂಗಳ ರೈತನ ಸಾಧನೆ

ಗುಂಡ್ಲುಪೇಟೆ: ಕೃಷಿ ಹೊಂಡದ ನೀರಿನಿಂದ ತರಾವರಿ ಬೆಳೆ

Published:
Updated:
Prajavani

ಗುಂಡ್ಲುಪೇಟೆ: ಮನಸ್ಸಿದ್ದರೆ ಏನು ಬೇಕಾದರೂ ಸಾಧನೆ ಮಾಡಬಹುದು ಎಂಬುದಕ್ಕೆ ಮಾದರಿಯಾಗಿದ್ದಾರೆ ತಾಲ್ಲೂಕಿನ ಹಂಗಳ ಗ್ರಾಮ ರೈತ ಮಹದೇವಪ್ಪ. 

ಸ್ನಾತಕೋತ್ತರ ಪದವಿ (ಎಂ.ಎ) ಮತ್ತು ಬಿಇಡಿ ಮಾಡಿ, ಸಿವಿಲ್‌ ಪೊಲೀಸ್‌ ಹುದ್ದೆಗೆ ಆಯ್ಕೆಯಾಗಿದ್ದರೂ ಅದನ್ನು ತ್ಯಜಿಸಿ ಕೃಷಿಯಲ್ಲೇ ಜೀವನ ರೂಪಿಸಿಕೊಂಡು ಮಹದೇವಪ್ಪ ಅವರು ಸಂತೃಪ್ತ ಜೀವನ ನಡೆಸುತ್ತಿದ್ದಾರೆ. 

ತರಾವರಿ ಬೆಳೆ: 20 ಎಕರೆ ಜಮೀನಿನಲ್ಲಿ ತರಕಾರಿ ಬೆಳೆಗಳಾದ ಬೀಟ್‍ರೂಟ್, ಆಲೂಗೆಡ್ಡೆ, ಬೀನ್ಸ್, ಟೊಮೆಟೊ, ಮೆಣಸಿನಕಾಯಿ, ಬಾಳೆ, ಆವರೆ ಹಾಗೂ ರಾಗಿ, ಹುರುಳಿ, ಸೀಸನ್ ಅವಧಿಯಲ್ಲಿ ಸೂರ್ಯಕಾಂತಿ, ಜೋಳವನ್ನು ಬೆಳೆಯುತ್ತಾರೆ. ದಿನದ ನಿರ್ವಹಣೆಗಾಗಿ ಹಸುಗಳನ್ನು ಸಾಕಿದ್ದಾರೆ. ಮೊಲದ ಫಾರಂ ಮಾಡಿ, ಮಾರುಕಟ್ಟೆ ಸಿಗದೆ ತಾತ್ಕಾಲಿಕವಾಗಿ ನಿಲ್ಲಿಸಿದ್ದಾರೆ.

ತಾಲ್ಲೂಕು ಮಳೆಯಾಶ್ರಿತ ಪ್ರದೇಶವಾಗಿರುವುದರಿಂದ ಮಳೆಗಾಲದಲ್ಲಿ ಮಾತ್ರ ಎಲ್ಲ ಕೊಳವೆಬಾವಿಗಳಲ್ಲಿ ನೀರು ಇರುತ್ತದೆ. ಬೇಸಿಗೆ ಆರಂಭವಾಗುತ್ತಿದ್ದಂತೆ ಅನೇಕ ಕೊಳವೆಬಾವಿಗಳು ನಿಷ್ಕ್ರಿಯವಾಗುತ್ತವೆ. ಇಂತಹ ಪ್ರದೇಶದಲ್ಲಿ ಕೃಷಿ ಹೊಂಡಗಳನ್ನು ಮಾಡಿಕೊಂಡು ನೀರಿನ ಮಿತಬಳಕೆಯಲ್ಲಿ ವರ್ಷವಿಡೀ ತರಾವರಿ ಬೆಳೆಗಳನ್ನು ಬೆಳೆಯುತ್ತಾರೆ ಮಹದೇವಪ್ಪ.

ಹನಿ ನೀರಾವರಿ ವ್ಯವಸ್ಥೆ ಮಾಡಿಕೊಂಡು ಬೆಳೆಗಳಿಗೆ ನೀರು ಹಾಯಿಸುತ್ತಾರೆ. ದಿನನಿತ್ಯ ಅವಶ್ಯಕತೆ ಇರುವಷ್ಟು ಕೂಲಿಯಾಳುಗಳನ್ನು ಕರೆದುಕೊಂಡು ಉತ್ತಮವಾಗಿ ಕೃಷಿ ಮಾಡುತ್ತಿದ್ದಾರೆ.

‘2001ರಲ್ಲಿ ಗುಂಡ್ಲುಪೇಟೆಯಲ್ಲಿ ಪದವಿಯನ್ನು ಮುಗಿಸಿದ ಸಂದರ್ಭದಲ್ಲಿ ಸಿವಿಲ್ ಪೊಲೀಸ್ ಹುದ್ದೆಗೆ ಅರ್ಜಿ ಸಲ್ಲಿಸಿ ಆಯ್ಕೆಯಾಗಿತ್ತು. ಅ ಸಂದರ್ಭದಲ್ಲಿ ನಮ್ಮ ಜಮೀನಿನಲ್ಲಿ ಬೆಳೆದ ಬೆಳೆಗಳನ್ನು ತಮಿಳುನಾಡಿನ ಮೆಟ್ಟುಪಾಳ್ಯಂ ಮಾರುಕಟ್ಟೆಗೆ ದಿನನಿತ್ಯ ತೆಗೆದುಕೊಂಡು ಹೋಗಲು ಬಾಡಿಗೆಗೆ ಮಹೀಂದ್ರ ಪಿಕಪ್ ತೆಗೆದುಕೊಳ್ಳಬೇಕಾಗಿತ್ತು. ಅಲ್ಲದೇ, ಆ ಸಂದರ್ಭದಲ್ಲಿ ಪಿಕಪ್ ವಾಹನಗಳು ಕಡಿಮೆ ಇದ್ದವು. ಬೆಳೆಗಳನ್ನು ಮಾರುಕಟ್ಟೆಗೆ ಸಕಾಲದಲ್ಲಿ ಪೂರೈಸಲು ಸಾಧ್ಯವಾಗುತ್ತಿರಲಿಲ್ಲ, ಆಗ ನಾನೇ ಸ್ವಂತವಾಗಿ ಮಹಿಂದ್ರ ಪಿಕಪ್‌ ವಾಹನಗಳನ್ನು ತೆಗೆದುಕೊಂಡು ಮಾರುಕಟ್ಟೆಗೆ ಬೆಳೆಗಳನ್ನು ತೆಗೆದುಕೊಂಡು ಹೋಗಬೇಕಾಯಿತು. ಬಳಿಕ ಪೂರ್ಣ ಪ್ರಮಾಣದಲ್ಲಿ ಕೃಷಿಗೆ ತೊಡಗಿಸಿಕೊಂಡೆ’ ಎಂದು ಕೃಷಿಗೆ ಕಾಲಿಟ್ಟ ಬಗೆಯನ್ನು ಮಹದೇವಪ್ಪ ವಿವರಿಸಿದರು.

‘ಲಾಭ– ನಷ್ಟ ಇದ್ದದ್ದೇ’
‘ಕೃಷಿಯಲ್ಲಿ ಲಾಭ–ನಷ್ಟ ಇದ್ದೇ ಇರುತ್ತದೆ. ಒಂದು ಬೆಳೆಯಲ್ಲಿ ನಷ್ಟವಾದರೆ ಮತ್ತೊಂದರಲ್ಲಿ ಲಾಭ ಬರುತ್ತದೆ. ಇದು ಸಮಸ್ಯೆಯಾಗುವುದಿಲ್ಲ. ಮಾರುಕಟ್ಟೆಯಲ್ಲಿ ಸರಿಯಾದ ಬೆಲೆ ಸಿಗುವುದಿಲ್ಲ. ಜೊತೆಗೆ ದಲ್ಲಾಳಿಗಳ ಹಾವಳಿಯಿಂದ ರೈತರು ನಷ್ಟ ಅನುಭವಿಸುವಂತಾಗಿದೆ. ಬೆಳೆದ ಬೆಲೆಗೆ ಉತ್ತಮ ಬೆಲೆ ಸಿಕ್ಕರೆ, ಯಾರೂ ಕೃಷಿಯಿಂದ ವಿಮುಕ್ತರಾಗುವುದಿಲ್ಲ’ ಎಂದು ರೈತರ ಪರಿಸ್ಥಿತಿಯನ್ನು ಅವರು ವಿವರಿಸಿದರು.

‘ಕೃಷಿ ಮಾಡಲು ಜಮೀನಿನಲ್ಲಿ ನೀರು ಚೆನ್ನಾಗಿರಬೇಕು. ನಮ್ಮ ಜಮೀನಿನಲ್ಲಿ 10ಕ್ಕೂ ಹೆಚ್ಚು ಕೊಳವೆಬಾವಿ ಕೊರೆಸಿದ್ದೆವು. ಆದರೂ ನೀರಿಗೆ ಸಮಸ್ಯೆ ಇತ್ತು. ಬಳಿಕ ಕೃಷಿಹೊಂಡವನ್ನು ನಿರ್ಮಾಣ ಮಾಡಿಕೊಂಡು ವ್ಯವಸಾಯ ಮಾಡುತ್ತಿದ್ದೇನೆ’ ಎಂದು ಮಹದೇವಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು.


ಮಹದೇವಪ್ಪ ಅವರ ಜಮೀನಿನಲ್ಲಿ ಬೀಟ್‌ರೂಟ್‌ ಬೆಳೆ

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !