ಬುಧವಾರ, 15 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಟೂರಿನ ಆರೂಢ ಧಾಮ

Last Updated 4 ಫೆಬ್ರುವರಿ 2019, 19:30 IST
ಅಕ್ಷರ ಗಾತ್ರ

ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲ್ಲೂಕಿನ ಮಂಟೂರು ಒಂದು ಪುಟ್ಟ ಹಳ್ಳಿ. (ಮುಧೋಳದಿಂದ 14 ಕಿ.ಮೀ ದೂರದಲ್ಲಿ ಹಾಗೂ ಬಾಗಲಕೋಟೆಯಿಂದ 49 ಕಿ.ಮೀ ದೂರದಲ್ಲಿದೆ). ಒಂದು ಕಾಲದಲ್ಲಿ ಕಬ್ಬು ಬೆಳೆಗೆ ಹೆಸರುವಾಸಿಯಾಗಿದ್ದ ಮಂಟೂರು, ಈಗ ಆರೂಢ ಧಾಮ ಮತ್ತು ಶಿವನ ಪ್ರತಿಮೆ ಮೂಲಕ ಇನ್ನೊಂದು ರೀತಿಯ ಪ್ರಸಿದ್ದಿ ಪಡೆಯುತ್ತಿದೆ.

ಮಂಟೂರು ಪ್ರವೇಶಿಸುತ್ತಿದ್ದಂತೆಯೇ ಕಾಣಿಸುವುದು ಕೆರೆ ಮಧ್ಯದಲ್ಲಿ ಶಿವನ ಸುಂದರವಾದ ಬೃಹತ್ ಪ್ರತಿಮೆ. ಮುಂದೆ ಎದುರಾಗುವುದೇ ಆರೂಢ ಧಾಮ.‌ ಧಾಮದ ಒಳಗೆ ಅಡಿಯಿಡುತ್ತಿದ್ದಂತೆಯೇ ಸಂಗೀತ ಕಾರಂಜಿ ನಿಮ್ಮನ್ನು ಸ್ವಾಗತಿಸುತ್ತದೆ. ಸಂಗೀತಕ್ಕೆ ತಕ್ಕಂತೆ ಕಾರಂಜಿಯಲ್ಲಿ ನೀರು ನರ್ತಿಸುತ್ತದೆ. ಇಂಥ ಸೊಬಗನ್ನು ಕ್ಯಾಮೆರಾದಲ್ಲಿ ಸೆರೆಹಿಡಿಯುವ ಸೊಗಸೆ ಬೇರೆ. ಅದಕ್ಕಾಗಿಯೇ ಇಲ್ಲಿ ಪ್ರತ್ಯೇಕ ಫೋಟೊ ಗ್ಯಾಲರಿಯ ಕೋಣೆಯನ್ನು ನಿರ್ಮಿಸಿದ್ದಾರೆ. ಇಲ್ಲಿಂದ 12 ಬಗೆಯ ಫೋಟೊಗಳನ್ನು ತೆಗೆಯಲು ಸಾಧ್ಯವಿದೆ.

ಕಾರಂಜಿ ನೋಡಿ ಮುಂದೆ ಹೆಜ್ಜೆ ಹಾಕಿದರೆ, ಮತ್ಸ್ಯಾಲಯ ಸಿಗುತ್ತದೆ. ಇಲ್ಲಿ ತರಹೇವಾರಿ ಮೀನುಗಳ ಪರಿಚಯವಾಗುತ್ತದೆ. ಮುಂಭಾಗದಲ್ಲಿ ಗಾಜಿನ ಮನೆಯಿದೆ. ಅದರೊಳಗೆ ಹೊಕ್ಕರೆ ಎಲ್ಲಿಂದ ಆಚೆ ಬರಬೇಕು ಎನ್ನುವುದು ತಿಳಿಯುವುದೇ ಇಲ್ಲ. ಅಂತ ವಿಚಿತ್ರ ತಾಣವದು. ಅಲ್ಲಿನ ಒಂದು ಕೋಣೆಯಲ್ಲಿ ವಿವಿಧ ಬಗೆಯ ಕನ್ನಡಿಗಳನ್ನು ಇರಿಸಲಾಗಿದೆ. ಈ ಕೊಠಡಿ ಹೊಕ್ಕವರು ಕನ್ನಡಿ ಎದುರು ನಿಂತು, ಅಂದ, ಚಂದ ಆಕಾರದ ಬಗ್ಗೆ ವಿಶ್ಲೇಷಿಸುತ್ತಿರುತ್ತಾರೆ.

ಆರೂಡಧಾಮದಲ್ಲಿ ಜುರಾಸಿಕ್‌ ಪಾರ್ಕ್‌ ಇದೆ. ಅದರಲ್ಲಿ ಚಲಿಸುವ ಡೈನೋಸಾರ್‌ಗಳ ಪ್ರಾತ್ಯಕ್ಷಿಕೆಗಳಿವೆ. ಡೈನೋಸಾರ್ ಚಲನೆ ಮತ್ತು ಶಬ್ದ ಹೊಂದಾಣಿಕೆಯಾಗುತ್ತದೆ. ಹೀಗಾಗಿ ನೋಡುಗರಿಗೆ ಕೊಂಚ ಭಯ ಹುಟ್ಟಿದರೂ ಹುಟ್ಟಬಹುದು. ಜತೆಗೆ, ಭೂತದ ಮನೆ. ಆ ಮನೆ ಹೊಕ್ಕರೆ ನಿಜವಾಗಿಯೂ ಭೂತದ ಮನೆಗೆ ಹೋಗಿ ಬಂದವೇನೋ ಎಂಬಂತ ಅನುಭವವಾಗುತ್ತದೆ. ಭೂತದ ಮನೆಯಲ್ಲಿ 6 ಕೃತಕ ಭೂತಗಳು ಹಾಗೂ ಇಬ್ಬರು ವೇಷಧಾರಿ ಭೂತಗಳನ್ನು ನೋಡಬಹುದು. ಕತ್ತಲ ಕೋಣೆಯಲ್ಲಿ ಗವಿಯಂತೆ ಭಾಸವಾಗುವ ಭೂತದ ಮನೆಗೆ ಹೋಗಲು ಗುಂಡಿಗೆ ಗಟ್ಟಿ ಇರಬೇಕು. ಆದ್ದರಿಂದಲೇ ಹೃದ್ರೋಗಿಗಳಿಗೆ ಹಾಗೂ ಗರ್ಭಿಣಿಯರಿಗೆ ಈ ಮನೆಗೆ ಪ್ರವೇಶ ನಿಷಿದ್ಧ. ಅದರ ಮುಂದಿನ ಭಾಗವೇ ಕಾಡು ಯಾನ. ಅಲ್ಲಿ ಕೃತಕ ಕಾಡಿನ ಮಧ್ಯೆ ಕೆಲವು ಕೃತಕ ಪ್ರಾಣಿಗಳು ಮನುಷ್ಯರ ಮೇಲೆ ಬಂದಂತೆ ಕಾಣುತ್ತವೆ.

ಇವೆಲ್ಲವನ್ನೂ ನೋಡಿ ಭಯಪಟ್ಟು ನಡುಗುವವರಿಗೆ ಧನಾತ್ಮಕ ಭಾವನೆ ನೀಡುವುದಕ್ಕಾಗಿ ಒಂದು ದೇವಸ್ಥಾನ ನಿರ್ಮಿಸಿದ್ದಾರೆ. ಆ ದೇವಸ್ಥಾನದ ಮೆಟ್ಟಿಲುಗಳನ್ನು ಏರಿ ಹೋಗುತ್ತಿದ್ದರೆ, ಯಾವುದೋ ಒಂದು ದೇವಲೋಕಕ್ಕೆ ಹೋಗುತ್ತಿದ್ದೇವೆ ಎಂದು ಅನ್ನಿಸದೇ ಇರದು. ಇಲ್ಲಿಯೂ ಕತ್ತಲಿನಲ್ಲಿ ಸಂಚರಿಸಬೇಕು. ಇಲ್ಲಿ ವೈಷ್ಣವಿ ದೇವಿ, ಲಕ್ಷ್ಮೀ, ಋಷಿಮುನಿಗಳು, ಹೀಗೆ ಹಲವಾರು ದೇವರುಗಳ ಭಂಗಿಯನ್ನು ಇಲ್ಲಿ ವೀಕ್ಷಿಸಬಹುದು.

ಒಟ್ಟಿನಲ್ಲಿ ಮಂಟೂರಿನ ಆರೂಢ ಧಾಮದ ಕುರಿತು ಹೇಳುವುದನ್ನು ಕೇಳುವುದಕ್ಕಿಂತ ಅಲ್ಲಿ ಹೋಗಿ ನೋಡಿ, ಆ ಪ್ರತಿ ಕ್ಷಣವನ್ನು ಅನುಭವಿಸಿದಾಗಲೇ ನಮಗೆ ಅದರ ವಿಶಿಷ್ಟತೆ ಹಾಗೂ ಸೌಂದರ್ಯದ ಪರಿಚಯ ಮಾಡಿಕೊಳ್ಳಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT