ಭಾನುವಾರ, ಆಗಸ್ಟ್ 14, 2022
20 °C

ಮಜೋಲಿ ಮಾಯಾನಗರಿ...

ಶ್ರೀಧರ್ ಎಸ್. ಸಿದ್ದಾಪುರ Updated:

ಅಕ್ಷರ ಗಾತ್ರ : | |

Prajavani

ಬ್ರಹ್ಮಪುತ್ರ, ಲೂಯಿಟ್ (ಕಿರ್‍ಕಿಟಿಯಾ) ನದಿಗಳ ಬಳಸು ಹಾರದಂತಿರುವ ದ್ವೀಪ ಅಸ್ಸಾಂನ ಮನೋಹರ ಮಜೋಲಿಯನ್ನು ಜೀವನದಲ್ಲಿ ಒಮ್ಮೆಯಾದರೂ ನೋಡಲೇಬೇಕು. ಇಲ್ಲಿನ ಮಿಶಿಂಗ್‌ ಸಮುದಾಯದ ಬಿಡಾರಗಳಲ್ಲೊಮ್ಮೆ ಆತಿಥ್ಯವನ್ನು ಸ್ವೀಕರಿಸಬೇಕು. ರಾಸ್‌ ಲೀಲಾದ ಸೊಬಗು ಸವಿದರಂತೂ ನಿಮ್ಮಷ್ಟು ಅದೃಷ್ಟಶಾಲಿಗಳೇ ಬೇರಿಲ್ಲ!

***

ಮಿಸ್ಟೀರಿಯಸ್ ಮಜೋಲಿ...
ಪಿಸುಗುಡುವ ಆಕಾಶ; ನಿರಭ್ರ ನೀರ ಚಿಲುಮೆಯಲಿ ಬಿದ್ದ ಹೂ ಮಳೆಯ ನೀಲಾಕಾಶ. ಎಳೆದಿಟ್ಟ ಮೀನು ಹಿಡಿವ ಛತ್ರಿಗಳು. ಇಬ್ಬನಿಯಲಿ ಮಿಂದ ರಸ್ತೆ. ಸೂರ್ಯಪ್ಪಂಗೆ ಮೋಡದ ಮರೆ. ರೇಡಿಯೊದಲಿ ಬರುತಿರೊ ಯಾವುದೋ ಅಸ್ಸಾಮಿ ಹಾಡು. ಗೋಪಾಲಕರ ಮೆರವಣಿಗೆ. ದನಕರುಗಳ ಗಂಟೆಯ ನಾದ. ‘ಹೇಗಿದೆ ನಮ್ಮ ಮಜೋಲಿ’ ಎಂಬ ಸೈಕಲ್ ಸವಾರರ ಮುಗ್ಧ ಪ್ರಶ್ನೆ. ಬ್ರಹ್ಮಪುತ್ರ, ಲೂಯಿಟ್ (ಕಿರ್‍ಕಿಟಿಯಾ) ನದಿಗಳ ಬಳಸು ಹಾರದಂತಿರುವ ದ್ವೀಪ ಅಸ್ಸಾಂನ ಮನೋಹರ ಮಜೋಲಿ.

ಸೋಮಾರಿ ಸೂರ್ಯಣ್ಣ ಕಣ್ಣು ಬಿಟ್ಟಿರಲಿಲ್ಲ. ನಾವು ತಿಂಡಿ ಮುಗಿಸಿ ಮಿಶಿಂಗ್ ಸಮುದಾಯದವರ ವಿಶಿಷ್ಟ ಬಿಡಾರಗಳಿಗೆ ಲಗ್ಗೆ ಇಟ್ಟಿದ್ದೆವು. ಅಸ್ಸಾಂನಲ್ಲಿ ಬ್ರಹ್ಮಪುತ್ರ ಸೃಜಿಸಿರುವ ಸುಂದರ ದ್ವೀಪವೇ ಮಜೋಲಿ. ಇಲ್ಲಿನ ಆಚರಣೆ, ಜೀವನ, ಬಟ್ಟೆ ಎಲ್ಲವೂ ಭಿನ್ನ.

ಜೋರ್ಹಾಟ್‍ನ ನಿಮತಿ ಘಾಟ್‍ನಿಂದ ಲಾಂಚ್‍ನಲಿ ಇಪ್ಪತ್ತು ನಿಮಿಷ ದಾಟ ಬೇಕಾದಷ್ಟು ಹರವಿಕೊಂಡ ನದಿ ಪಾತ್ರ. ನದಿಯೋ ಸಮುದ್ರವೋ ಎಂದು ತಿಳಿಯದಷ್ಟು ವಿಸ್ತಾರ. ಫೆರಿಯಲ್ಲಿ ಕುಳಿತರೆ ವಿಚಿತ್ರ ವಾಸನೆ! ಹೊಟ್ಟೆ ತುಂಬಿದರೆ ಮುಗಿದೇ ಹೋಯಿತು. ವಿಚಿತ್ರ ದೋಣೆಯಲಿ ಮೀನುಗಾರರ ಮೀನ ಬೇಟೆ. ಪೆಟ್ರೋಲ್ ಬ್ಯಾರಕ್ ತುಂಬಿಸಿಕೊಂಡು ಹೊರಟ ಭಾರತೀಯ ತೈಲ ನಿಗಮದವರ ಫೆರಿಗಳು. ನೂರಾರು ವರುಷಗಳಿಂದ ಈ ಪುಣ್ಯ ಭೂಮಿಯಲ್ಲಿ ಆಚರಿಸುವ ವಿಶಿಷ್ಟ ಹಬ್ಬ ರಾಸ್‌ ಲೀಲಾಗೆ ಹೋದಾಗ ಕಂಡ ಅಸ್ಸಾಂನ ಮಜೋಲಿಯ ಅಪೂರ್ವ ನೋಟ ಇದು. ಇಲ್ಲಿ ವಾಸಿಸುವ ಭಿನ್ನ ಸಮುದಾಯವೇ ಮಿಶಿಂಗ್. ಮೂಲತಃ ಮೀನುಗಾರರು. ಅವರ ಹಾಡು ಪಾಡುಗಳ ಸುಂದರ ಕಥಾನಕ. ಹರಿಕಥೆ ಶುರು ಮಾಡೋಣವೇ?


ಮಜೋಲಿಯಲ್ಲಿ ಬ್ರಹ್ಮಪುತ್ರ ನದಿಯ ಹಿನ್ನೀರು ಸೃಷ್ಟಿಸಿರುವ ಸೊಬಗು

ಮಜೋಲಿಯ ಮಿಶಿಂಗ್ ಸಮುದಾಯ
ಶತಮಾನಗಳಿಂದ ಇಲ್ಲೇ ವಾಸವಾಗಿರುವ ಇವರು ರೂಪಿಸಿಕೊಂಡ ವಿಚಿತ್ರ ಆಚರಣೆಗಳು, ಜೀವನ ವಿಧಾನಗಳು ನೋಡಲು ಸಿಕ್ಕಿದ್ದು ನಮ್ಮ ಗೆಳೆಯ ಸುಭಾಸ್ ಬಿಸ್ವಾಸ್ ಮತ್ತು ನಾಗರಾಜ್‍ ಅವರ ಸಹಕಾರದಿಂದ. ಅನೇಕ ಬುಡಕಟ್ಟುಗಳು 1,150 ಚದರ ಕಿಲೊ ಮೀಟರ್ ವಿಸ್ತೀರ್ಣದಲಿ ನೆಲೆ ಕಂಡುಕೊಂಡಿವೆ. ಈ ಸಮುದಾಯದವರು ಸೂರ್ಯ–ಚಂದ್ರನನ್ನು ದೇವರಂತೆ ಆಧರಿಸುತ್ತಾರೆ. ಬಿದಿರು ಇವರ ಪ್ರಧಾನ ಜೀವನ ಆಧಾರ ಸರಕು. ಬಿದಿರಿನಿಂದ ಮಾಡಿದ ಅತಿ ಸರಳ ಅಟ್ಟಣಿಗೆಯ ಮನೆ. ಬಿದಿರ ಗೋಡೆಗೆ ಮಣ್ಣಿನ ಮುಚ್ಚಿಗೆ. ಹುಲ್ಲಿನ ಮಾಡು. ಬಿದಿರಿನಿಂದ ಮಾಡಿದ ವಿಶಿಷ್ಟ ಬುಟ್ಟಿಗಳು. ಏರಿಸಿ ಇಳಿಸಬಹುದಾದ ವಿಶಿಷ್ಟ ಮನೆ! ಬ್ರಹ್ಮಪುತ್ರ ನದಿಯ ನೀರಿಳಿದಾಗ ಮನೆಯನ್ನು ಕೆಳಗಿಳಿಸುವರು! ಮನೆಯೊಳಗೆ ಹೋಗಬೇಕಾದರೆ ಏಣಿಯೊಂದು ಬೇಕೇ ಬೇಕು.

ಇಲ್ಲಿ ಮೀನು ಹಿಡಿಯುವ ಕ್ರಮವೂ ವಿಶಿಷ್ಟ. ಎರಡು ಬಿದಿರ ಕಂಬಗಳಿಗೆ ಅಡ್ಡಲಾಗಿ ಬಿದಿರ ಕೋಲುಗಳು. ಅವಕ್ಕೆ ದೊಡ್ಡದಾದ ಬಲೆಯೊಂದನ್ನು ಕಟ್ಟಿ ಬ್ರಹ್ಮಪುತ್ರ ನದಿಯಲಿ ಇಳಿ ಬಿಡುವರು. ಬಲೆ ತುದಿಗೊಂದು ಹಗ್ಗ ಸಿಕ್ಕಿಸುವರು. ಗಂಟೆಗಳ ಕಾಲ ಕಾದು ಮೀನುಗಳು ಬಲೆಯ ಮೇಲೆ ಓಡಾಡುತ್ತಲೇ ಹಗ್ಗ ನಿಧಾನಕ್ಕೆ ಮೇಲೆತ್ತುವರು. ಕೆಲವೊಮ್ಮೆ ಹೊಟ್ಟೆ ತುಂಬುವಷ್ಟು ಮೀನು ಕೆಲವೊಮ್ಮೆ ಖಾಲಿ ಕೈ.ರಾಸ್‌ ಲೀಲಾದ ಸೊಬಗನ್ನು ಬಲ್ಲವರೇ ಬಲ್ಲರು

ಇವರ ದೋಣಿಗಳಂತೂ ಕರೀನಾ ಕಪೂರನ ಸೊಂಟಕ್ಕಿಂತಲೂ ಸಪೂರ. ಕುಳಿತರೆ ಅಲುಗುವ ಪುಟಾಣಿ ದೋಣಿಯಲಿ ಜೀವ ಕಿಸೆಯೊಳಗಿಟ್ಟು ಒಂದೆರಡು ಪರ್ಲಾಂಗ್ ಪ್ರಯಾಣಿಸಿದ ಅನುಭವವಂತೂ ಅನನ್ಯ. ಯಾವಾಗ ಇಳಿದೇನೋ ಎಂಬ ಆತಂಕ.  ದೊಡ್ಡ ದೊಡ್ಡ ಲಾಂಚ್‍ಗಳಂತೂ ಬ್ರಹ್ಮಪುತ್ರದಲ್ಲಿ ಕಿಲೊ ಮೀಟರ್‌ಗಟ್ಟಲೆ ಪ್ರಯಾಣಿಸುತ್ತವೆ. ಅಂತಹ ದೋಣಿಗಳಲ್ಲೂ ನಾವೊಂದು ಸುತ್ತು ಹೊಡೆದು ಬಂದೆವು.

ಯಾರಲ್ಲೂ ಕಲಿಯದೆ ಕೊಳಲು ನುಡಿಸುವುದರಲ್ಲಿ ಇವರದು ಎತ್ತಿದ ಕೈ. ಮನೆಯ ಹೆಣ್ಣು ಮಕ್ಕಳೆಲ್ಲಾ ಸೇರಿ ಶಾಲುಗಳನ್ನು, ದಂತ, ಅರಶಿನ ಬಣ್ಣದ ಅಸ್ಸಾಂ ಸೀರೆಗಳನ್ನು ನೇಯುವುದು ಇವರ ಉಪ ಕಸುಬು. ಇವರು ನೇಯುವ ಶಾಲುಗಳು, ಸೀರೆಗಳು ಇವರಂತೆ ಬಹಳ ನಾಜೂಕು. ಇಲ್ಲಿನ ಸೀರೆಗಳು ವಿದೇಶದಲ್ಲೂ ತಮ್ಮತನ ಕಾಯ್ದುಕೊಂಡಿವೆ. ತಮ್ಮದೇ ಆದ ನೇಕಾರರ ಸೊಸೈಟಿ ನಿರ್ಮಿಸಿಕೊಂಡಿದ್ದಾರೆ ಸ್ಥಳೀಯರು. ಮನೆಗೆ ಅಗತ್ಯವಾದ ಮಡಿಕೆಗಳನ್ನು ಇವರೇ ತಯಾರಿಸುವರು. ಚಕ್ರ ಬಳಸದೆಯೇ ಮಡಿಕೆ ತಯಾರಿಸುವ ವಿಧಾನ ಅಚ್ಚರಿ ಹುಟ್ಟಿಸುತ್ತದೆ. ಈ ವಿಧಾನ ಹರಪ್ಪ ಮಹಿಂಜೋದಾರೊದಲ್ಲಿನ ವಿಧಾನಕ್ಕೆ ಅತಿ ಸಮೀಪವಿದೆ ಎನ್ನುತ್ತಾರೆ ಸಂಶೋಧಕರು!

ರಾಸ್ ಲೀಲಾ ಹಬ್ಬವು ಇವರ ವಿಶಿಷ್ಟ ದೇವಾಲಯಗಳಲ್ಲಿ ಆಚರಿಸಲ್ಪಡುತ್ತದೆ. ಇವರ ದೇವಾಲಯಗಳನ್ನು ಸತ್ರ ಎಂದು ಕರೆಯುತ್ತಾರೆ. ಕಮಲಾ ಬರಿ ಸತ್ರ ಒಂದು ವಿಶಿಷ್ಟ ದೇವಾಲಯವಾಗಿದ್ದು, ಕಲೆ ಮತ್ತು ಕುಸುರಿಗೆ ಪ್ರಖ್ಯಾತಿಯನ್ನು ಹೊಂದಿದೆ. ಗುರು ಶ್ರೀ ಶಂಕರ್ ದೇವ್ ಅವರು 1500ನೆಯ ಇಸವಿಯ ಸುಮಾರಿಗೆ ಇದನ್ನು ಸ್ಥಾಪಿಸಲಾಗಿದೆ ಎಂದು ಹೇಳಲಾಗುತ್ತದೆ. ಇಲ್ಲಿ ಗರುಡನ ದೊಡ್ಡ ಮುಖವಾಡವೊಂದನ್ನು ಮಾಡಿಡಲಾಗಿದೆ. ರಾಸ್ ಲೀಲಾದ ಸಮಯದಲ್ಲಿ ಇಲ್ಲಿ ವಿಶೇಷವಾದ ದೋಣಿಯೊಂದನ್ನು ನಿರ್ಮಿಸಲಾಗುತ್ತದೆ. ಅಂತಹ ದೋಣಿ ನಿರ್ಮಾಣಕ್ಕೆ ಸಾಕ್ಷಿಯಾದುದು ನಮ್ಮ ಸುದೈವ. ಇದರಲ್ಲಿ ಕೃಷ್ಣ, ತನ್ನ ಪ್ರೇಯಸಿ ರಾಧಾಳೊಂದಿಗೆ ನೃತ್ಯ ಮಾಡುತ್ತಾ ಬರುವಂತೆ ಚಿತ್ರಿಸುತ್ತಾರೆ. ಇಲ್ಲಿನ ಎಲ್ಲಾ ಸತ್ರಗಳಿಗೂ ಒಂದಕ್ಕೊಂದು ಹೋಲಿಕೆಗಳಿವೆ. ಇವರ ಪೂಜಾ ವಿಧಾನಗಳೂ ವಿಭಿನ್ನ. ನಿಯೋ ವೈಷ್ಣವ ಪಂಗಡಕ್ಕೆ ಇಲ್ಲಿನ ಅರ್ಚಕರು ಸೇರಿದವರಾಗಿದ್ದಾರೆ. ಹೆಚ್ಚಿನವರು ಬ್ರಹ್ಮಚಾರಿಗಳು. ಗಾರಮುರ್ಹ ಸತ್ರದಲಿ ಅರ್ಚಕರು ಸೇರಿ ಯಾವುದೋ ಮಂತ್ರ ಪಠಣದಲಿ ತೊಡಗಿದ್ದರು. ಡೋಲಕ್ ಬಳಸಿ ಇವರು ಮಾಡುವ ಅತ್ಯಾಕರ್ಷಕ ನೃತ್ಯ ನಮ್ಮ ಕ್ಯಾಮೆರಾವನ್ನು ತಣಿಸಿತು. ತೋಪು ತುಪಾಕಿಗಳನ್ನು ಸಂಗ್ರಹಿಸಿಟ್ಟ 'ಗಾರಮುರ್ಹ' ಸತ್ರ (ವಿಶಿಷ್ಟ ದೇವಾಲಯ) ಬಹಳ ವಿಶಿಷ್ಟವಾಗಿದೆ. 


ನೀವೂ ಒಮ್ಮೆ ಬನ್ನಿ ಸರ್‌ ನಮ್ಮೂರಿನ ಈ ಕಟ್ಟಿಗೆಯ ಸೇತುವೆ ದಾಟಿ...

ಕೃಷ್ಣನ ಲೀಲೆಗಳನ್ನು ತೋರಿಸುವ ಒಂದು ವಿಶಿಷ್ಟ ಹಬ್ಬ ರಾಸ್‌ ಲೀಲಾ. ನವೆಂಬರ್ ತಿಂಗಳಿನಲ್ಲಿ ಈ ಹಬ್ಬವನ್ನು ಆಚರಿಸಲಾಗುತ್ತದೆ. ಎಲ್ಲಾ ಸತ್ರಗಳಲ್ಲಿ ಈ ಹಬ್ಬವನ್ನು ವಿಶಿಷ್ಟವಾಗಿ ಆಚರಿಸುತ್ತಾರೆ. ಊರಿನ ತುಂಬಾ ಹಬ್ಬದ ದಿನ ಹಚ್ಚುವ ಹಣತೆ ಬಹಳ ವಿಭಿನ್ನ. ಕಮಲಾ ಬರಿ ಸತ್ರದಲ್ಲಿ ದೋಣಿಗಳನ್ನು ನಿರ್ಮಿಸಿ ಅದರಲ್ಲಿ ಕೃಷ್ಣ ವೇದಿಕೆಗೆ ಬರುವಂತೆ ಮಾಡುವ ಕ್ರಮ ಅನನ್ಯ. ಭಿನ್ನವಾದ ಬೆಳಕಿನ ವ್ಯವಸ್ಥೆ ಹಬ್ಬದ ದಿನ ಊರಿನವರಿಗೆ ಹಾಗೂ ಅತಿಥಿಗಳಿಗೆ ಪುಷ್ಕಳವಾದ ಭೋಜನದ ವ್ಯವಸ್ಥೆ ಇರುತ್ತದೆ. ಪ್ರತಿ ಸಂಜೆ ನಾಟಕಗಳು, ಸತ್ರದ ಬ್ರಹ್ಮಚಾರಿಗಳಿಂದ ವಿಶಿಷ್ಟ ನೃತ್ಯ ಹಾಗೂ ಕೃಷ್ಣನ ರಾಸ ಲೀಲೆಗಳನ್ನು ಪದ್ಯಗಳೊಂದಿಗೆ ಆಡಿ ತೋರಿಸುವರು. ಹಬ್ಬದ ಹಿಂದಿನ ದಿನದಿಂದಲೇ ಪ್ರದರ್ಶನಕ್ಕಾಗಿ ಅಭ್ಯಾಸ ನೋಡಬಹುದು ಜೊತೆಗೆ ಭತ್ತದ ಬಯಲಾಗಿರುವ ಮಜೋಲಿಯಲಿ ಊಟವಂತು ಬಲು ಕಡಿಮೆ ದರದಲ್ಲಿ ಲಭ್ಯ ಮತ್ತು ಬಲು ರುಚಿಕರ. ಕೇವಲ ಹತ್ತು ರೂಪಾಯಿಗೆ ರೊಟ್ಟಿ ಮತ್ತು ಚಹಾ ಲಭ್ಯ. ವಿದೇಶಿ ಹಕ್ಕಿಗಳೂ ಸಾವಿರ ಸಾವಿರ ಸಂಖ್ಯೆಯಲ್ಲಿ ನವೆಂಬರ್‌–ಡಿಸೆಂಬರ್‌ ಸಮಯದಲ್ಲಿ ಇಲ್ಲಿಗೆ ಆಗಮಿಸುತ್ತವೆ. ಭಿನ್ನ ಸಂಸ್ಕೃತಿ, ಭಿನ್ನ ಪರಿಸರದ ಮಜೋಲಿ ಬಲು ವಿಶಿಷ್ಟವಾಗಿ ನಿಲ್ಲುತ್ತದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು