ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅತ್ತಿವೇರಿ ಪಕ್ಷಿಧಾಮ

Last Updated 12 ಜೂನ್ 2019, 19:30 IST
ಅಕ್ಷರ ಗಾತ್ರ

ಹಾವೇರಿ ಜಿಲ್ಲೆಗೆ ಸೇರಿರುವ ಅತ್ತಿವೇರಿ ಪಕ್ಷಿಧಾಮ ಹುಬ್ಬಳ್ಳಿಯಿಂದ ಸುಮಾರು 45 ಕಿ.ಮೀ ದೂರ ವಿದೆ. ಹುಬ್ಬಳ್ಳಿಯಿಂದ ಮುಂಡಗೋಡು (ಉತ್ತರ ಕನ್ನಡ ಜಿಲ್ಲೆ)ಗೆ ಹೋಗುವ ದಾರಿಯಲ್ಲಿದೆ.

‘ಅತ್ತಿವೇರಿ’ ಹೆಸರೇ ಸೂಚಿಸುವಂತೆ ಅತ್ತಿ ಹಣ್ಣು ಹೆಚ್ಚಾಗಿ ಬೆಳೆಯುತ್ತಿದ್ದ ಪ್ರದೇಶ. ಕೆರೆಯ ಸುತ್ತಲಿನ ಭೂ ಪರಿಸರ ಪಕ್ಷಿಗಳ ಆವಾಸಸ್ಥಾನಕ್ಕೆ ಹೇಳಿ ಮಾಡಿಸಿದಂತಿದೆ.

ಅತ್ತಿವೇರಿ 2.23 ಚದರ ಕಿ.ಮೀ ವಿಸ್ತಿರ್ಣ ದಲ್ಲಿದೆ. ಇದು ಹಾವೇರಿ ಜಿಲ್ಲೆಗೆ ಸೇರಿದ್ದರೂ, ಧಾರವಾಡ, ಹಾವೇರಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳ ಸರಹದ್ದುಗಳನ್ನು ಬೆಸೆದುಕೊಂಡಿದೆ. ಪಶ್ಚಿಮ ಘಟ್ಟಗಳ ಸಾಲುಗಳು ಮುಗಿದು ಅತ್ತ ನಿತ್ಯಹರಿದ್ವರ್ಣವೂ ಅಲ್ಲ. ಇತ್ತ ಕುರುಚುಲು ಅಲ್ಲ ಎನ್ನುವಂತಹ ಅರಣ್ಯ ಪ್ರದೇಶದ ನಡುವೆ 22 ವಿವಿಧ ದೇಶಗಳ 79 ಪ್ರಭೇದದ ವಲಸೆ ಹಕ್ಕಿಗಳಿಗೆ ಆಶ್ರಯ ನೀಡುತ್ತಿದೆ.

ಪಟ್ಟೆ ಬಾತು, ನೀಲಿರೆಕ್ಕೆಯ ಬಾತು, ಸೂಜಿಬಾಲದ ಬಾತು ಹಾಗೂ ವಿವಿಧ ಬಗೆಯ ಉಲ್ಲಂಕಿ, ಉಲಿಯಕ್ಕಿಗಳು ಇಲ್ಲಿಗೆ ಬರುವ ವಲಸೆ ಹಕ್ಕಿಗಳಲ್ಲಿ ಪ್ರಮುಖವಾದವು. ಬಲೂಚಿಸ್ಥಾನದಿಂದ ಚಿಕ್ಕ ಗಾತ್ರದ ಬ್ಲಿಥ್ ರೀಡ್ ವಾರಬ್ಲರ್ ಹಕ್ಕಿಗಳು ಇಲ್ಲಿಗೆ ಬರುತ್ತವೆ. ಇಲ್ಲಿಯವರೆಗೆ ರಾಜ್ಯದಲ್ಲಿ ಕಂಡುಬಂದಿರುವ 495 ಪ್ರಭೇದಗಳ ಪೈಕಿ 207 ಹಕ್ಕಿಗಳನ್ನು ನಾವು ಈ ಕೆರೆಯ ಪ್ರದೇಶದಲ್ಲಿ ಕಾಣಬಹುದು.

ಕೆರೆಯ ನೀರು, ಜೌಗು, ಏರಿ ಹಾಗೂ ಸುತ್ತಲಿನ ಅರಣ್ಯದಲ್ಲಿರುವ ವಿವಿಧ ಬಗೆಯ ಹೂವು ಹಣ್ಣುಗಳು ಹಕ್ಕಿಗಳನ್ನು ಆಕರ್ಷಿಸುತ್ತಿವೆ. ಸುರಕ್ಷತೆ, ಹವಾಮಾನ ಹಾಗೂ ಆಹಾರಗಳಿಗಾಗಿ ದೇಶ, ವಿದೇಶಗಳಿಂದ ಬರುವ ಪಕ್ಷಿ ಮಿತ್ರರ ಜತೆಗೆ ಸ್ಥಳೀಯ ಪಕ್ಷಿಗಳೂ ನೆಲೆಸಿರುತ್ತವೆ. ಹೀಗಾಗಿ ಅತ್ತಿವೇರಿ ಪಕ್ಷಿಗಳ ಭಾವೈಕ್ಯದ ಬೀಡಾಗಿದೆ.

ಪಕ್ಷಿ ವೀಕ್ಷಣೆ ಹವ್ಯಾಸ ರಾಜ್ಯದಲ್ಲಿ ಪರಿಸರ ಪ್ರವಾಸೋದ್ಯಮ ಬೆಳವಣಿಗೆಗೆ ಮಹತ್ವ ತಂದುಕೊಟ್ಟಿತು. ದಶಕಗಳಿಂದೀಚೆಗೆ, ಈ ಹವ್ಯಾಸದ ಪ್ರಮಾಣ ಹೆಚ್ಚಾಗಿದೆ. ಅತ್ತಿವೇರಿ ಸಮೀಪದ ಹುಬ್ಬಳ್ಳಿಯ ನಾರ್ಥ್‌ ಕರ್ನಾಟಕ ಬರ್ಡ್ಸ್‌ ನೆಟ್‌ವರ್ಕ್‌ ಹಾಗೂ ಕೈಗಾದ ಕೈಗಾ ಬರ್ಡ್ಸ್‌ನಂತಹ ಸಂಸ್ಥೆಗಳು ಸಾರ್ವಜನಿಕರಲ್ಲಿ ಹಾಗೂ ವಿದ್ಯಾರ್ಥಿಗಳಲ್ಲಿ ಪಕ್ಷಿ ವೀಕ್ಷಣೆ ಹವ್ಯಾಸ ಬೆಳೆಸಲು ಶ್ರಮಿಸುತ್ತಿವೆ.

ಹತ್ತಾರು ವರ್ಷಗಳಿಂದ ಪಕ್ಷಿಗಳ ಕುರಿತು ಅಧ್ಯಯನ ಮಾಡಿರುವ ಸ್ಥಳೀಯ ಮಹೇಶ್ ಯಮೋಜಿಯವರ ‘ಪಕ್ಷಿನೋಟ’ ಎಂಬ ಅತ್ತಿವೇರಿ ಹಕ್ಕಿಗಳ ಮಾಹಿತಿಯಿರುವ ಪುಸ್ತಕ ವನ್ನು ಜಾನಪದ ವಿಶ್ವವಿದ್ಯಾಲಯ ಹೊರತಂದಿದೆ.

ಅರಣ್ಯ ಇಲಾಖೆಯೂ ಅಲ್ಲಲ್ಲಿ ವಾರ್ಷಿಕ ಹಕ್ಕಿ ಹಬ್ಬಗಳನ್ನು ಆಚರಿಸುತ್ತಿದೆ. ಈ ನಿಟ್ಟಿನಲ್ಲಿ ಪಕ್ಷಿ ಪ್ರೇಮಿಗಳು ಹಾಗೂ ಪ್ರವಾಸಿಗರಿಗಾಗಿ ಅತ್ತಿವೇರಿ ಕೆರೆಯ ಪ್ರವೇಶ ದ್ವಾರದಲ್ಲಿಯೇ ಇಲಾಖೆ ಉದ್ಯಾನವನವನ್ನು ನಿರ್ಮಿಸಿದೆ. ಅಲ್ಲೇ, ಕ್ಯಾಂಟಿನ್‌, ಶೌಚಾಲಯ, ಕುಡಿಯುವ ನೀರು ಸೌಲಭ್ಯವಿದೆ. ಭದ್ರತೆ, ಹಕ್ಕಿಗಳ ಮಾಹಿತಿ ನೀಡುವುದು ಹಾಗೂ ಪಾರ್ಕಿಂಗ್ ವ್ಯವಸ್ಥೆ ಮಾಡಿದೆ. ಪ್ರವಾಸಿಗರಿಗಾಗಿ ಬೆಳಿಗ್ಗೆ 6 ರಿಂದ ಸಂಜೆ 6 ರವರೆಗೂ ಪಕ್ಷಿಧಾಮವನ್ನು ವೀಕ್ಷಣೆಗೆ ಅವಕಾಶ ಕಲ್ಪಿಸಿದೆ.

ಅತ್ತಿವೇರಿಯನ್ನು ನೋಡಲು ಬರುವ ದೂರದ ಪ್ರವಾಸಿಗರು ಪಕ್ಷಿಧಾಮದ ಸಮೀಪವಿ ರುವ ಮುಂಡಗೋಡಿನ ಟಿಬೇಟಿಯನ್ ಕಾಲೊನಿ, ಶಿಗ್ಗಾವಿಯ ರಾಕ್ ಗಾರ್ಡನ್‌, ಜಾನಪದ ವಿಶ್ವವಿದ್ಯಾಲಯದ ವಸ್ತು ಸಂಗ್ರ ಹಾಲಯ, ಹಾನಗಲ್‌ನ ಓಂಕಾರೇಶ್ವರ ಗುಡಿ, ಶಿರಸಿಯ ಯಾಣ, ಯಲ್ಲಾಪುರದ ಜೇನುಕಲ್ಲು ಗುಡ್ಡಗಳಿಗೂ ಭೇಟಿ ಕೊಡಬಹುದು. ಅತ್ತಿವೇರಿ ಪ್ರವಾಸಕ್ಕೆ ಸ್ವಂತ ವಾಹನದಲ್ಲಿ ತೆರಳಿದರೆ ಒಳಿತು.

ಹೋಗುವುದು ಹೇಗೆ?
ಬೆಂಗಳೂರಿಂದ ಹುಬ್ಬಳ್ಳಿ, ಮುಂಡಗೋಡು ಮೂಲಕ ಅತ್ತಿವೇರಿ ತಲುಪಬಹುದು ಹುಬ್ಬಳ್ಳಿವರೆಗೆ ರೈಲು, ಬಸ್‌ ಮತ್ತು ವಿಮಾನದ ವ್ಯವಸ್ಥೆ ಇದೆ. ಹುಬ್ಬಳ್ಳಿ– ಅತ್ತಿವೇರಿಗೆ ಬಸ್‌ ಸೌಲಭ್ಯವಿದೆ.

ಊಟ–ವಸತಿ: ಅತ್ತಿವೇರಿ ಸಮೀಪದಲ್ಲಿ ಯಲ್ಲಾಪುರ ಟೌನ್‌ ಇದೆ. ಇಲ್ಲಿ ಹೋಟೆಲ್‌, ಲಾಡ್ಜ್‌ಗಳಿವೆ. ಊಟ–ವಸತಿಗೆ ಇಲ್ಲಿ ಅವಕಾಶವಿದೆ.

ಪ್ರವಾಸಕ್ಕೆ ಸೂಕ್ತ ಸಮಯ: ನವೆಂಬರ್‌ನಿಂದ ಫೆಬ್ರವರಿವರೆಗೆ

**


ಹುಬ್ಬಳ್ಳಿಯಿಂದ ಬಸ್ ಹತ್ತಿ ಪಕ್ಷಿಧಾಮದ ತಿರುವಿನಲ್ಲಿ ಕೋರಿಕೆಯ ಮೇರೆಗೆ (ಅಲ್ಲಿ ನಿಲ್ದಾಣ ಇಲ್ಲ) ಇಳಿದುಕೊಳ್ಳಬೇಕು. ಅಲ್ಲಿಂದ ಪಕ್ಷಿಧಾಮಕ್ಕೆ 4 ಕಿ.ಮೀ ದೂರ. ನಡೆದೇ ಹೋಗಬೇಕು. ಬೇರೆ ಯಾವುದೇ ಸರ್ಕಾರಿ ಸಾರಿಗೆ ವಾಹನಗಳಿಲ್ಲ. ಮುಂಡಗೋಡ್‌ನಿಂದ ಆಟೊದಲ್ಲಿ ಹೋಗಬಹುದು. ಹೋಗಿ–ಬರಲು 36 ಕಿ.ಮೀ ಆಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT