ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಗೆಬಗೆಯ ಅನುಭವಗಳ ಬನಾರಸ್‌!

Last Updated 10 ಡಿಸೆಂಬರ್ 2022, 19:30 IST
ಅಕ್ಷರ ಗಾತ್ರ

ಉತ್ತರ ಭಾರತದ ಪ್ರಸಿದ್ಧ ಯಾತ್ರಾ ಸ್ಥಳಗಳಲ್ಲಿ ಪ್ರಮುಖವಾದುದು ಕಾಶಿ-ವಾರಾಣಸಿ. ದೇವರ ನಾಡೆಂದೇ ಕರೆಸಿಕೊಳ್ಳುವ ಕಾಶಿ, ಹಿಂದೂಗಳಿಗೆ ಅತ್ಯಂತ ಪವಿತ್ರ ಯಾತ್ರಾ ಸ್ಥಳ. ಹಿಂದೆಲ್ಲಾ ಇಳಿವಯಸ್ಸಿನಲ್ಲಿ ಕಾಲ್ನಡಿಗೆಯಲ್ಲಿ ಕಾಶಿ ದರ್ಶನಕ್ಕೆ ಹೊರಡುವವರಲ್ಲಿ ಮರಳಿ ಬರುವುದಿಲ್ಲ ಎಂಬ ಮಾತು ಕೂಡ ಇತ್ತು. ಇದಕ್ಕೆ ಕಾರಣ, ಅಲ್ಲಿಗೆ ಸಾಗಲು ಸರಿಯಾಗಿ ಇರದಿದ್ದ ವ್ಯವಸ್ಥೆ.

ಆದರೆ, ಕಾಶಿ ಈಗ ಹಿಂದೆಂದಿಗಿಂತಲೂ ವಿಸ್ತಾರವಾಗಿದೆ. ವ್ಯವಸ್ಥಿತ ಯಾತ್ರಾ ಸ್ಥಳವಾಗಿ ಬದಲಾಗಿದೆ. ಉತ್ತರದಲ್ಲಿ ವಾರಾಣಸಿ ಅಥವಾ ಬನಾರಸ್‌ ಎಂದು ಕರೆಸಿಕೊಳ್ಳುವ ಕಾಶಿ ಈಗ ಜನರಿಗೆ ಮೊದಲಿಗಿಂತಲೂ ಹತ್ತಿರವಾಗಿದೆ. ಕಿರಿದಾದ ರಸ್ತೆಗಳು, ಸಾಂಪ್ರದಾಯಿಕ ಜೀವನಶೈಲಿಯನ್ನು ಉಳಿಸಿಕೊಳ್ಳುತ್ತಲೇ ಹೊಸತನಕ್ಕೆ ತೆರೆದುಕೊಂಡಿದೆ. ಒಂದೆಡೆ ಚಿಕ್ಕ ಚಿಕ್ಕ ಗಲ್ಲಿಗಳಲ್ಲಿ ಕಿಕ್ಕಿರಿದು ಸಾಗುವ ಜನಸಾಗರವಿದ್ದರೆ, ಇನ್ನೊಂದೆಡೆ ಬೃಹತ್‌ ಮಾಲ್‌ಗಳು, ಅಂಗಡಿಗಳು ದೇಶ–ವಿದೇಶಗಳ ಪ್ರವಾಸಿಗರ ಬೇಡಿಕೆಗಳನ್ನು ಈಡೇರಿಸಲು ಸಜ್ಜಾಗಿವೆ. ಈಗ ಇಲ್ಲಿಗೆ ಭೇಟಿ ನೀಡುವವರು ಎರಡೂ ವಿಧದ ಬನಾರಸ್‌ನ ಅನುಭವ ಪಡೆಯಬಹುದು.

ಇಲ್ಲಿನ ಪುರಾತನ ಹಾಗೂ ಕಿರಿದಾದ ಗಲ್ಲಿಗಳಲ್ಲಿ ಸಾಗುತ್ತಾ ಅದರ ಇಕ್ಕೆಲಗಳಲ್ಲಿ ಇರುವ ಸಣ್ಣ ಅಂಗಡಿಗಳಲ್ಲಿ ಶಾಪಿಂಗ್‌ನ ವಿಶಿಷ್ಟ ಅನುಭವ ಪಡೆಯಬಹುದು. ಇಲ್ಲಿನ ಸಾಲುಸಾಲು ಅಂಗಡಿಗಳಲ್ಲಿ ಗ್ರಂಧಿಗೆ ಸಾಮಾನುಗಳ ಜತೆಗೆ ಬನಾರಸ್‌ನ ವಿಶೇಷ ಖಾದ್ಯಗಳು ದೊರೆಯುತ್ತವೆ. ರಬ್ಡಿ, ರಸ್‌ಮಲಾಯ್‌, ಹಾಲು, ವಿವಿಧ ಚಾಟ್‌ನ ಸವಿಯನ್ನು ಇಲ್ಲಿ ಸವಿಯುವ ಮಜವೇ ಬೇರೆ. ಗೂಡಿನ ಗಾತ್ರದ ಅಂಗಡಿಗಳಲ್ಲಿ ವ್ಯಾಪಾರ ಮಾಡುವ ಸಣ್ಣ ವ್ಯಾಪಾರಿಗಳು, ಹೆಚ್ಚಾಗಿ ಅದೇ ಕಟ್ಟಡದ ಮೇಲಂತಸ್ತುಗಳಲ್ಲಿ ವಾಸಿಸುತ್ತಾರೆ. ಹೊರಗಿನಿಂದ ಕಿರಿದಾಗಿ ಕಾಣಿಸುವ ಮನೆಗಳು ಒಳಗೆ ವಿಶಾಲವಾಗಿರುತ್ತವೆ.

ಇಲ್ಲಿನ ಲಸ್ಸಿ ಹಾಗೂ ಬಗೆಬಗೆಯ ಪಾನ್‌ಗಳನ್ನು ಸವಿಯಲು ಮರೆತರೆ ನೀವು ಕಾಶಿಯನ್ನು ಪೂರ್ಣವಾಗಿ ಆಸ್ವಾದಿಸಿಲ್ಲ ಎಂದೇ ಲೆಕ್ಕ. ಇಲ್ಲಿನ ಹೋಟೆಲ್‌ಗಳಲ್ಲಿ ಸಿಗುವ ಪೂರಿ ಕಚೋರಿಯ ರುಚಿಯೂ ವಿಭಿನ್ನವಾಗಿರುತ್ತದೆ. ಇಲ್ಲಿನ ಗಲ್ಲಿ ರಸ್ತೆಗಳಲ್ಲಿ ಸಂಚರಿಸುವ ಅನುಭವವನ್ನು ಪ್ರವಾಸಿಗರು ಮಿಸ್‌ ಮಾಡಿಕೊಳ್ಳುವಂತಿಲ್ಲ.

ಕಾಶಿಗೆ ದೇವರ ನಾಡು ಎಂಬ ಹೆಸರು ದೊರಕಿರುವುದು ಸುಮ್ಮನೆ ಅಲ್ಲ. ಮುಖ್ಯ ಆಕರ್ಷಣೆಯಾದ ವಿಶ್ವನಾಥ ಮಂದಿರದ ಜೊತೆಗೆ, ಅದರ ಪಕ್ಕದಲ್ಲೇ ಇರುವ ಅನ್ನಪೂರ್ಣೇಶ್ವರಿ ದೇಗುಲ, ಕಾಶಿ ವಿಶಾಲಾಕ್ಷಿ ದೇಗುಲ, ಕಾಲ ಭೈರವ, ತ್ರಿದೇವ್‌, ದುರ್ಗಾ, ಹನುಮಾನ್‌ ಮಂದಿರ, ಶ್ರೀ ರಾಮಮಂದಿರ, ಸಂಕಟ ಮೋಚನ್‌ ಮಂದಿರ ಸೇರಿ ಹಲವು ದೇಗುಲಗಳಿಗೆ ನೀವು ಭೇಟಿ ನೀಡಬಹುದು.

ಕಾಶಿ ವಿಶ್ವನಾಥ ದೇಗುಲ ದೇಶದ 12 ಜ್ಯೋತಿರ್ಲಿಂಗಗಳಲ್ಲಿ ಒಂದು. ಇಲ್ಲಿ ದೇಶ-ವಿದೇಶಗಳಿಂದ ಜನ ಬರುತ್ತಾರೆ. ಇಲ್ಲಿನ ಪ್ರಮುಖ ದೇಗುಲವಾದ ಕಾಶಿ ವಿಶ್ವನಾಥ ದೇವರ ದರ್ಶನಕ್ಕೆ ಜನ ನಸುಕಿನ 2 ಗಂಟೆಯಿಂದಲೇ ಸರತಿಯಲ್ಲಿ ನಿಂತು ಕಾಯುತ್ತಾರೆ. ಸಂಪ್ರದಾಯದ ಪ್ರಕಾರ, ಕಾಶಿ ವಿಶ್ವನಾಥನ ದರ್ಶನ ಪಡೆದ ನಂತರ ಅಲ್ಲೇ ಸಮೀಪದಲ್ಲಿನ ಕಾಲಭೈರವ ದೇವರ ದರ್ಶನ ಪಡೆಯಬೇಕು. ಇಲ್ಲಿನ ಬನಾರಸ್‌ ವಿಶ್ವವಿದ್ಯಾಲಯದಲ್ಲಿ ಕೂಡ ಒಂದು ಪ್ರತ್ಯೇಕ ವಿಶ್ವನಾಥನ ದೇಗುಲವಿದೆ.

ಕಾಶಿಯ ಇನ್ನೊಂದು ಪ್ರಮುಖ ಆಕರ್ಷಣೆಯೆಂದರೆ ಗಂಗಾರತಿ. ಇಲ್ಲಿನ ಅಸ್ಸಿಘಾಟ್‌ನಲ್ಲಿ ಐದರಿಂದ ಏಳು ಪಂಡಿತರು ಪ್ರತೀ ಸಂಜೆ ಗಂಗಾನದಿಗೆ ಆರತಿ ಬೆಳಗುತ್ತಾರೆ. ಇದೊಂದು ಅಪರೂಪದ ದೃಶ್ಯ. ಮುಸ್ಸಂಜೆ ವೇಳೆಗೆ ಅಸ್ಸಿ ಘಾಟ್‌ಗೆ ಹೋದಲ್ಲಿ ಇದರ ಆನಂದ ಸವಿಯಬಹುದು. ಇಲ್ಲವೇ, ಎದುರಿನ ಘಾಟ್‌ಗಳಲ್ಲಿ ನಿಲ್ಲಿಸಿರುವ ದೋಣಿಗಳಲ್ಲಿ ಕುಳಿತು ಅದ್ಧೂರಿ ಗಂಗಾರತಿಗೆ ಸಾಕ್ಷಿಯಾಗಬಹುದು.

ಆದರೆ, ಕಳೆದ ಕೆಲ ವಾರಗಳಲ್ಲಿ ಭಾರಿ ಮಳೆಯಾಗಿ ಘಾಟ್‌ ಒಳಗೆಲ್ಲಾ ನೀರು ನುಗ್ಗಿದ್ದರಿಂದ, ಗಂಗಾರತಿಯನ್ನು ಸ್ಥಗಿತಗೊಳಿಸಲಾಗಿತ್ತು. ಈಗ ಐದರ ಬದಲಿಗೆ, ಒಂದು ಅಥವಾ ಮೂರು ಆರತಿಗಳನ್ನು ಮಾಡಲಾಗುತ್ತದೆ. ಆದ್ದರಿಂದ ನೀವು ಕಾಶಿ ಪ್ರಯಾಣ ಬೆಳೆಸುವುದಾದರೆ, ಗಂಗಾರತಿ ನಡೆಯುತ್ತಿದೆಯೇ ಎಂಬುದನ್ನು ಖಾತರಿಪಡಿಸಿಕೊಂಡು ಹೋಗುವುದು ಉತ್ತಮ.

ಗಂಗಾರತಿಗೂ ಮೊದಲು ಅಲ್ಲಿನ ದೋಣಿ ವಿಹಾರಕ್ಕೆ ಅವಕಾಶವಿರುತ್ತದೆ. ಇದರಲ್ಲಿ ಕುಳಿತು ಅಸ್ಸಿ ಘಾಟ್‌, ರಾಜ ಹರಿಶ್ಚಂದ್ರಘಾಟ್‌, ಮಣಿಕರ್ಣಿಕಾ ಘಾಟ್‌ ಸೇರಿದಂತೆ ಹಲವು ಘಾಟ್‌ಗಳನ್ನು ವೀಕ್ಷಿಸಿ, ಅವುಗಳ ಆಸಕ್ತಿಕರ ಕತೆಗಳನ್ನು ಕೂಡ ಕೇಳಬಹುದು. ಇದೆಲ್ಲವೂ ಮುಗಿದ ಮೇಲೆ ಸಂಜೆ ಹೊತ್ತು ಅಲ್ಲಿನ ಹೋಲ್‌ಸೇಲ್‌ ಮಾರುಕಟ್ಟೆಗಳಲ್ಲಿ ತಿರುಗಾಡಿ ನಿಮಗಿಷ್ಟವಾದ ವಸ್ತುಗಳ ಶಾಪಿಂಗ್‌ ಮಾಡಬಹುದು. ಜೊತೆಗೆ, ಇಲ್ಲಿ ಬನಾರಸ್‌ ರೇಷ್ಮೆ ಕಾರ್ಖಾನೆಗಳಿದ್ದು, ಅಲ್ಲಿ ಕಡಿಮೆ ಬೆಲೆಗೆ ಉತ್ತಮ ಬನಾರಸ್‌ ದುಪಟ್ಟಾ, ಸೀರೆಗಳನ್ನು ಖರೀದಿಸಬಹುದು.

ಕಾಶಿಯ ಗಂಗಾನದಿಯಲ್ಲಿ ದೋಣಿ ವಿಹಾರಕ್ಕೆ ಕರೆದೊಯ್ಯುವ ವ್ಯಕ್ತಿ, ಅಲ್ಲಿನ ಘಾಟ್‌ಗಳ ಪರಿಚಯಿಸುತ್ತಾ, ರಾಜಹರಿಶ್ಚಂದ್ರ ಘಾಟ್‌ ಬಳಿ, ಹರಿಶ್ಚಂದ್ರನ ಜೀವನ ಚರಿತ್ರೆಯ ವಿವರ ನೀಡಲು ಆರಂಭಿಸುತ್ತಾನೆ. ನಿಮಗೆ ಆ ಕಥೆ ತಿಳಿದಿದೆ ಎಂದರೂ ಆತ ಬಿಡುವುದಿಲ್ಲ. ಕೊನೆಗೆ, ಹರಿಶ್ಚಂದ್ರನ ಆಡಳಿತದಲ್ಲಿದ್ದ ಗುಪ್ತ ದಾನದ ವಿಷಯಕ್ಕೆ ಬಂದು ಮಾತು ನಿಲ್ಲುತ್ತದೆ. ಆಗ ಆತ, ದೋಣಿಯ ಮಾಲೀಕರಿಗೆ ತಿಳಿಯದಂತೆ ತಮಗೆ ಗುಪ್ತ ದಾನ ನೀಡುವುದಾದರೆ ನೀಡಬಹುದು ಎಂಬ ಪ್ರಸ್ತಾವ ಮುಂದಿಡುತ್ತಾನೆ!

ಇದು ಇಲ್ಲಿನ ಒಂದು ಉದಾಹರಣೆಯಷ್ಟೆ. ಇಲ್ಲಿ ಹೆಜ್ಜೆ ಹೆಜ್ಜೆಗೂ ಇಂತಹ ಅನುಭವಗಳು ದೊರೆಯುತ್ತವೆ. ದೇಶ ವಿದೇಶಗಳಿಂದ ಪ್ರತಿವರ್ಷ ಲಕ್ಷಾಂತರ ಜನರನ್ನು ಆಕರ್ಷಿಸುವ ಕಾಶಿ ಇಲ್ಲಿನ ಜನರ ದುರ್ವರ್ತನೆಗಳಿಂದಲೂ ಆಗಾಗ್ಗೆ ಸುದ್ದಿಯಾಗುತ್ತಲೇ ಇರುತ್ತದೆ. ಆಟೊ ಚಾಲಕರು ಒಂದು ಕಿ.ಮೀ. ದೂರದ ಪ್ರದೇಶಕ್ಕೂ 100 ರೂಪಾಯಿಗಿಂತ ಕಡಿಮೆಗೆ ಬರಲು ಒಪ್ಪುವುದಿಲ್ಲ. ನೀವು ದೇವರ ದರ್ಶನಕ್ಕೆಂದು ಮುಂಜಾನೆ ಎದ್ದು ದೇಗುಲದ ಹೊರಗೆಯೇ ಸರತಿಯಲ್ಲಿ ನಿಂತಿದ್ದರೆ, ಹಣೆಗೆ ನಾಮ, ಗಂಧ ಹಚ್ಚಿ ಹಣ ಕೇಳುವವರೂ ಇದ್ದಾರೆ!

ದೇಗುಲದ ಒಳಗೆ ಸರತಿಯಿಲ್ಲದೆ ಕಡಿಮೆ ದರದಲ್ಲಿ ನೇರ ದರ್ಶನ ಮಾಡಿಸುವ ಆಮಿಷವೊಡ್ಡುವ ಏಜೆಂಟರು ಸಿಗುತ್ತಾರೆ. ಆದರೆ, ಒಳಹೋದ ಮೇಲೆ, ಬೇರೊಂದು ಪೂಜೆ ಹೆಸರಲ್ಲಿ ಇಲ್ಲವೇ ಪಿತೃಪಕ್ಷದಲ್ಲಿ ಹಿರಿಯರಿಗೆ ದಾನ ಎಂಬಿತ್ಯಾದಿ ನೆಪ ಹೇಳಿ ₹5,000ದವರೆಗೆ ಬೇಡಿಕೆ ಇಡುತ್ತಾರೆ. ಎಲ್ಲೆಂದರಲ್ಲಿ ಅಡ್ಡ ಹಾಕಿ ಆಟೊ, ದೋಣಿ ಸವಾರಿ ಬೇಕೇ ಎಂದು ಕೇಳುವವರ ಬಗ್ಗೆಯೂ ಎಚ್ಚರದಿಂದ ಇರಬೇಕು.

ಕಾಶಿಯ ಹೊಸ ಆಕರ್ಷಣೆಯೆಂದರೆ ಇತ್ತೀಚೆಗೆ ಉದ್ಘಾಟನೆಗೊಂಡ ಕಾಶಿ ಕಾರಿಡಾರ್‌. ಇದು ಯಾತ್ರಿಕರಿಗೆ ನೇರವಾಗಿ ಗಂಗಾ ತಟದ ಘಾಟ್‌ನಿಂದ ವಿಶ್ವನಾಥ ದೇಗುಲ ಪ್ರವೇಶಿಸಲು ಅನುವು ಮಾಡಿಕೊಡುತ್ತದೆ. ಮೊದಲು ಗಲ್ಲಿಗಳನ್ನು ಬಳಸಿ ದೇಗುಲ ಪ್ರವೇಶಿಸಬೇಕಾಗಿತ್ತು. ಈಗ ಕೇವಲ ಘಾಟ್‌ನಿಂದ 400 ಮೀಟರ್‌ ಅಂತರದಲ್ಲಿ ದೇಗುಲದ ದ್ವಾರ ದೊರೆಯಲಿದೆ. ಈ ಕಾರಿಡಾರ್‌ ಯೋಜನೆಯ ಒಟ್ಟು ವೆಚ್ಚ ₹800 ಕೋಟಿ. ಈ ಸ್ಥಳದಲ್ಲಿದ್ದ 1,400 ಅಂಗಡಿಗಳು, ಬಾಡಿಗೆ ಕಟ್ಟಡಗಳು ಹಾಗೂ ಮನೆ ಮಾಲೀಕರಿಗೆ ಪುನರ್ವಸತಿ ಕಲ್ಪಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT