ಗುರುವಾರ , ಮೇ 26, 2022
26 °C

ನೂತ್ತಿ ಪೂ ರಂಡು ರುಬಾ..! ಮೀನಾಕ್ಷಿ ದೇವಿಯ ಮಧುರೆ ಕುರಿತು ಕೆ.ಎಸ್ ಪವಿತ್ರ ಲೇಖನ

ಡಾ. ಕೆ.ಎಸ್. ಪವಿತ್ರ Updated:

ಅಕ್ಷರ ಗಾತ್ರ : | |

(ತಮಿಳನ್ನು ‘ಭಾಷೆ-ಸಂಸ್ಕೃತಿ’ಯಾಗಿ ಕುತೂಹಲದಿಂದ ಗಮನಿಸುವಂತೆ ಮಾಡಿದ್ದು ಮಾತ್ರ ಮದ್ರಾಸಲ್ಲ! ‘ತೂಂಗಾ ನಗರಿ’ - ನಿದ್ರೆ ಮಾಡದ ನಗರ ಎಂಬ ಬಿಡುವಿರದ, ಮೀನಾಕ್ಷಿ ದೇವಿಯ ಮಧುರೆ. ಮದ್ರಾಸ್‍ಗಿಂತ ಬಹು ಭಿನ್ನವಾದ ನಗರ ಇದು. ಇಲ್ಲಿಯ ಮೀನಾಕ್ಷಿ ದೇವಾಲಯದ ವೈಭವವೇ ಬೇರೆ)

ನಾನು ಹುಟ್ಟಾ ಕನ್ನಡಿಗಳು. ನಮ್ಮ ಮನೆ ಮಾತಂತೂ ‘ಹಳಗನ್ನಡ’ವೆಂದೇ ಭಾಸವಾಗುವ ಹವ್ಯಕ ಕನ್ನಡ. ಕನ್ನಡದಲ್ಲಿಯೇ ಓದಿ-ಬರೆದು-ಮಾತನಾಡಿದರೂ 7ನೇ ತರಗತಿಯವರೆಗೆ ಕನ್ನಡ ಮಾಧ್ಯಮಕ್ಕೆ ಕಚ್ಚಿಕೊಂಡರೂ ನನಗೆ ಭಾಷೆಗಳ ಬಗ್ಗೆ ಮೊದಲಿಂದ ಅದೇನೋ ಕುತೂಹಲ. ಅದರಲ್ಲಿಯೂ ತಮಿಳೆಂದರೆ ಕನ್ನಡದ್ದೇ ಇನ್ನೊಂದು ಅವತಾರ ಎಂಬಂತೆ ಆಕರ್ಷಣೆ. ಬಾಲ್ಯದಲ್ಲಿ ನೃತ್ಯ ಕಲಿಯುವಾಗ ಆಗ ಪ್ರಚಲಿತವಿದ್ದ ತಮಿಳು ಪದಂಗಳು, ‘ವರ್ಣಂ’ಗಳು ಇವೆಲ್ಲವೂ ಅದಕ್ಕೆ ಕಾರಣವಿರಬಹುದೇನೋ. ನೃತ್ಯದಿಂದ ತಮಿಳಿನ ಪ್ರೀತಿ ಬೆಳೆಯಿತೋ ಅಥವಾ ತಮಿಳಿನ ಬಗ್ಗೆ ಬೆಳೆದ ಕುತೂಹಲದಿಂದ ನೃತ್ಯದ ಪ್ರೀತಿ ಹೆಚ್ಚಾಯಿತೋ ಹೇಳಲು ಸಾಧ್ಯವಿಲ್ಲ.

ಬಿ.ಜಿ.ಎಲ್. ಸ್ವಾಮಿಯವರ ‘ತಮಿಳು ತಲೆಗಳ ನಡುವೆ’, ‘ಹಸುರು ಹೊನ್ನು’, ‘ಬೆಳದಿಂಗಳಲ್ಲಿ ಅರಳಿದ ಮೊಲ್ಲೆ ಮತ್ತು ಇತರ ಪ್ರಬಂಧಗಳು’ ಈ ಮೂರೂ ಪುಸ್ತಕಗಳನ್ನು ಓದುವಾಗಲೂ ಅಷ್ಟೆ. ತಮಿಳರ ಅತಿ ಸ್ವಾಭಿಮಾನ, ಭಾಷಾ ಪ್ರೀತಿ, ಸ್ವಲ್ಪ ಹೆಡ್ಡತನ ಇವುಗಳನ್ನು ಓದಿ ನಗುವುದರ ಜೊತೆಗೆ ನಮ್ಮ ಕನ್ನಡಿಗರಲ್ಲಿ ಹಾಗಿಲ್ಲವಲ್ಲ ಎಂದು ಅಸೂಯೆ, ಸ್ವಲ್ಪ ಸಮಾಧಾನಗಳೆರಡೂ ಮೂಡಿದ್ದವು. ಆದರೆ ‘ತಮಿಳು’ ಪ್ರೀತಿ ಕಡಿಮೆಯಾಗಲಿಲ್ಲ! ತಮಿಳು ಸಂಸ್ಕೃತಿಯನ್ನು ಇಷ್ಟು ಸೊಗಸಾಗಿ ಪರಿಚಯಿಸಿದ ಸಸ್ಯಶಾಸ್ತ್ರ, ತಮಿಳು ಕಾವ್ಯ, ಸಂಶೋಧನೆಗಳ ಜೊತೆಗೆ ಒಂದು ಭಾಷೆಯ ಬಗ್ಗೆ ಇಷ್ಟೆಲ್ಲಾ ಆಯಾಮಗಳನ್ನು ತೆರೆದಿಟ್ಟ ಬಿ.ಜಿ.ಎಲ್. ಸ್ವಾಮಿಯವರ ಖಾಯಂ ಅಭಿಮಾನಿಯಾಗಿಬಿಟ್ಟೆ.

ಈಗಲೂ ‘ಮದ್ರಾಸ್’ಗೆ ನೃತ್ಯದ ವಿವಿಧ ಕಾರ್ಯಗಳಿಗಾಗಿ, ವೈದ್ಯಕೀಯ ಸಮ್ಮೇಳನಗಳಿಗಾಗಿ ಹೋಗುವುದು ನನಗೆ ಪ್ರಿಯ ಚಟುವಟಿಕೆಗಳಲ್ಲೊಂದು. ಈಗ ತಮಿಳರು ಕರೆಯುವಂತೆ ‘ಚೆನ್ನೈ’ ಅಷ್ಟು ಸುಲಭವಾಗಿ ಬಾಯಿಗೆ ಬರದಿದ್ದರೂ ಬಿಸಿಲಿನ ಝಳ ಎಂದಿಗೂ ಜೋರಾಗಿಯೇ ಇದ್ದರೂ ‘ಚೆನ್ನೈ’ ಚೆನ್ನಾದ ನಗರವೆಂದೇ ನನಗನ್ನಿಸುತ್ತದೆ. ಚೆನ್ನೈನ ಮೈಲಾಪೂರ ಎಂಬ ಭಾಗದ ಸುತ್ತಮುತ್ತ ಸುತ್ತಾಡುವುದು ಬೇರೆಯವರಿಗೆ ತಲೆನೋವು ತರಿಸಬಹುದು. ಆದರೆ, ನನಗೆ ಅದು ಕುಣಿದಾಡುವಷ್ಟು ಹರ್ಷ ತರುವ ಕೆಲಸ. ಸಾಲಾಗಿ ಟೆಂಪಲ್ ಆಭರಣಗಳನ್ನು ಮಾರುವ ಅಂಗಡಿಗಳು, ಯಾವ ವೇಷಭೂಷಣ/ನೃತ್ಯಕ್ಕೆ ಸಂಬಂಧಿಸಿದ ಏನನ್ನೂ ಹೋಲ್‍ಸೇಲ್ ರೇಟಿಗೆ ಮಾರುವ ದೊಡ್ಡ ಅಂಗಡಿಗಳು, ಕೆಲವೇ ಗಂಟೆಗಳಲ್ಲಿ ಡ್ರೆಸ್ ಹೊಲಿದುಕೊಡುವ ಟೈಲರ್‌ಗಳು, ಇವುಗಳ ಜೊತೆಗೆ ಅಲ್ಲೇ ಇರುವ ಕಪಾಲೀಶ್ವರ ದೇವಸ್ಥಾನ. ನಟರಾಜನಿಗೆ ಕೈ ಮುಗಿದು ಹೊರಬಂದು ಸ್ವಲ್ಪ ದೂರ ನಡೆದರೆ, ಅಲ್ಲೇ ಇರುವ ಕರ್ಪಗಂಬಾಳ ಮೆಸ್, ಕೀರವಡಾ, ಕಾಫಿ, ಪುಡಿ ದೋಸಾ ತಿನ್ನುವಾಗ ನಿಮ್ಮ ಪಕ್ಕದ ಟೇಬಲ್‍ನಲ್ಲಿ ಯಾವ ವಿಶ್ವವಿಖ್ಯಾತ ಸಂಗೀತಗಾರರೂ ಇರಬಹುದು! ನಿಮಗೆ ಗುರುತಿಸುವ ಪರಿಣತಿ ಇರಬೇಕಷ್ಟೆ.

ತಮಿಳರ ಬಟ್ಟೆಗಳ ವ್ಯಾಪಾರದ ಜಾಣತನ ಎಂಥ ಶಾಪಿಂಗ್ ನಿರಾಸಕ್ತರನ್ನೂ ಆಕರ್ಷಿಸದಿರಲು ಸಾಧ್ಯವೇ ಇಲ್ಲ. ಈಗ ಎಲ್ಲೆಡೆ ಬಟ್ಟೆಯ ಅಂಗಡಿಗಳೂ ಆನ್‍ಲೈನ್ ತಾಣಗಳೂ ಇರಬಹುದು. ಆದರೆ ಮದ್ರಾಸಿನ ಟಿ. ನಗರದ ಜನಜಂಗುಳಿ, ಬಟ್ಟೆಯ ಅಂಗಡಿಯ ವಿವಿಧ ತಂತ್ರಗಳು, ವರ್ಣಮಯ ಜಗತ್ತನ್ನು ಅನುಭವಿಸಬೇಕೆಂದರೆ ಮದ್ರಾಸ್‍ಗೆ ಹೋಗೇ ನೋಡಬೇಕು. ಟಿ. ನಗರದ ದೊಡ್ಡ ಬಟ್ಟೆ ಅಂಗಡಿಗಳಿಂದ ಸೆಟ್ ಖರೀದಿಸಿ ಎದುರಿನ ಬೀದಿಗಳನ್ನು ಹೊಕ್ಕರೆ, ಬ್ಲೌಸ್ /ಚೂಡಿದಾರ ಹೊಲಿದು ಕೊಡುವವರ ತಂಡಗಳೇ ನಮ್ಮ ಮೇಲೆ ಹಾರಿ ಬೀಳುತ್ತವೆ. ಗಂಟೆಗಳೊಳಗೆ ಹೊಲಿದೂ ಕೊಡುತ್ತಾರೆ. ಅದೂ ಬೇರೆಡೆ ಹೊಲಿಯುವ ಅರ್ಧರೇಟಿಗೆ.

ಇವೆಲ್ಲಾ ತಮಿಳಿನ ಬಗ್ಗೆ ನನ್ನ ಆಕರ್ಷಣೆ ಹೆಚ್ಚಿಸಲು ಭಾಗಶಃ ಕಾರಣಗಳಾದರೂ ನಾನು ಕುತೂಹಲದಿಂದ ತಮಿಳನ್ನು ‘ಭಾಷೆ-ಸಂಸ್ಕೃತಿ’ಯಾಗಿ ಗಮನಿಸುವಂತೆ ಮಾಡಿದ್ದು ಮಾತ್ರ ಮದ್ರಾಸಲ್ಲ! ‘ತೂಂಗಾ ನಗರಿ’ - ನಿದ್ರೆ ಮಾಡದ ನಗರ ಎಂಬ ಬಿಡುವಿರದ, ಮೀನಾಕ್ಷಿ ದೇವಿಯ ಮಧುರೆ. ಮದ್ರಾಸ್‍ಗಿಂತ ಬಹು ಭಿನ್ನವಾದ ನಗರ ಇದು. ಇಲ್ಲಿಯ ಮೀನಾಕ್ಷಿ ದೇವಾಲಯದ ವೈಭವವೇ ಬೇರೆ. ಊರ ತುಂಬ ಇರುವ ಇತರ ‘ಕೋಯಿಲ್’ಗಳೆಲ್ಲವೂ ಮೀನಾಕ್ಷಿ ದೇವಾಲಯದ ಭಾಗಗಳೇ ಎಂಬಂತೆ ನನಗನ್ನಿಸುತ್ತದೆ. ದೇವಾಲಯದ ದೊಡ್ಡ ಪ್ರಾಂಗಣ, ನಾಲ್ಕು ದಿಕ್ಕುಗಳ ದ್ವಾರಗಳು, ಪುರೋಹಿತರು ಕೈಯಲ್ಲಿ ಹಿಡಿದು ಮೀನಾಕ್ಷಿಯ ಎದುರಿಗೆ, ಸುಂದರೇಶನ ಎದುರಿಗೆ ಆಶೀರ್ವಾದ ಮಾಡುವಾಗ ಹಾಕುವ ದಪ್ಪ ಗುಲಾಬಿಯ ಹಾರ ಎಲ್ಲವೂ ಮೀನಾಕ್ಷಿ-ಸುಂದರೇಶರ ಭವ್ಯತೆಯನ್ನು ಮನಸ್ಸಿನಲ್ಲಿ ಮೂಡಿಸುತ್ತವೆ. ಮೀನಾಕ್ಷಿಯಾದರೂ ಅಷ್ಟೆ, ಸ್ತ್ರೀಸಬಲತೆಯ ರೂಪವಾಗಿ, ತಂದೆ ಮಲಯಧ್ವಜನ ತರಬೇತಿಯಲ್ಲಿ ಯುದ್ಧಕಲೆಯನ್ನು ಕಲಿತವಳು. ಜಗತ್ತನ್ನೇ ಗೆದ್ದು, ನಂತರ ಸುಂದರೇಶ ರೂಪಿಯಾದ ಶಿವನನ್ನು ವರಿಸಿ, ಜಗನ್ಮಾತೆಯಾದವಳು. ಇದು ಪುರಾಣದ ಕಥೆ.

ನನಗೆ ಮಧುರೆಯ ಇನ್ನೊಂದು ಪ್ರಮುಖ ಕೊಂಡಿಯೆಂದರೆ ಇತಿಹಾಸದ ಕಥೆಯಾದ ತಮಿಳು ಕಾವ್ಯ ‘ಶಿಲಪ್ಪದಿಕಾರಂ’ನ ‘ಕನ್ನಗಿ’ಯದು. ಕಾಲ್ಬಳೆಯ ಕಥೆಯಾಗಿ, ನೃತ್ಯಕ್ಕೆ ಹತ್ತಿರವಾದಂತಹ ತಮಿಳು ಮಹಾಕಾವ್ಯವಿದು. ಕೋವಲನ್ ಎಂಬ ತರುಣ, ಪತ್ನಿ ಕನ್ನಗಿಯನ್ನು ಬಿಟ್ಟು, ಮಾಧವಿ ಎಂಬ ನರ್ತಕಿಯಲ್ಲಿ ಮೋಹಿತನಾಗಿ, ಎಲ್ಲವನ್ನೂ ಕಳೆದು, ಕನ್ನಗಿಯ ಬಳಿಗೆ ವಾಪಸ್ಸಾಗುತ್ತಾನೆ. ಕನ್ನಗಿ-ಕೋವಲನ್ ತಮ್ಮ ಊರಾದ ಕಾವೇರಿ ಪಟ್ಟಣಂನಿಂದ ಮಧುರೆಗೆ ಬರುತ್ತಾರೆ. ಒಂದೂ ಕಾಸಿರದ ಕೋವಲನ್‍ಗೆ ವಜ್ರಗಳಿರುವ ತನ್ನ ಕಾಲ್ಬಳೆಯನ್ನು ಕನ್ನಗಿ ಮಾರಲು ನೀಡುತ್ತಾಳೆ. ಮಾರಲು ಹೋದ ಕೋವಲನ್ ರಾಜಪರಿವಾರದ ಆಭರಣ ಕದ್ದಿರಬಹುದು ಎಂಬ ಸಂಶಯಕ್ಕೆ ಒಳಗಾಗಿ, ಬಂಧಿತನಾಗಿ ಮರಣದಂಡನೆಗೊಳಗಾಗುತ್ತಾನೆ. ಸುದ್ದಿ ಕೇಳಿ ಕನ್ನಗಿ ರಾಜನ ಮುಂದೆ ಹೋಗಿ ನ್ಯಾಯ ಬೇಡುತ್ತಾಳೆ. ಮುತ್ತುಗಳಿರುವ ರಾಣಿಯ ಕಾಲ್ಬಳೆಯನ್ನೂ, ವಜ್ರಗಳಿರುವ ತನ್ನ ಕಾಲ್ಬಳೆಯನ್ನೂ ರಾಜನ ಮುಂದೆ ಎತ್ತಿ ಹಿಡಿಯುತ್ತಾಳೆ. ಪಶ್ಚಾತ್ತಾಪದಿಂದ ರಾಜ ಪರಿತಪಿಸುತ್ತಾ ಪ್ರಾಣ ತ್ಯಜಿಸುತ್ತಾನೆ. ತನ್ನ ನೈತಿಕತೆಯ ಬಲದಿಂದ ಕನ್ನಗಿ ಇಡೀ ಮಧುರೆಯನ್ನು ಹೊತ್ತಿ ಉರಿಯುವಂತೆ ಮಾಡುತ್ತಾಳೆ.

ಕುತೂಹಲಕರ ಅಂಶವೆಂದರೆ ಪುರಾಣ-ಇತಿಹಾಸದ ಈ ಎರಡೂ ಕಥೆಗಳಲ್ಲಿ ‘ಸ್ತ್ರೀಸ್ತನ’ ಒಂದು ಪ್ರಮುಖ ಅಂಶವಾಗಿರುವುದು. ಮೀನಾಕ್ಷಿ ಮಗುವಾಗಿ ಯಜ್ಞದಲ್ಲಿ ಮಲಯಧ್ವಜನಿಗೆ ದೊರಕಿದಾಗ ಅವಳಿಗೆ ಮೂರು ಸ್ತನಗಳಿರುತ್ತವೆ. ಅವುಗಳಲ್ಲಿ ಒಂದು ಆಕೆ ಮದುವೆಯಾಗುವ ಶಿವ ಎದುರಿಗೆ ಬಂದಾಗ ಮಾಯವಾಗುತ್ತದೆ ಎನ್ನುತ್ತದೆ ಅಶರೀರವಾಣಿ. ಅದೇ ಕನ್ನಗಿಯ ಕಥೆಯಲ್ಲಿ, ಪತಿಯ ಸಾವಿನಿಂದ, ಆತನಿಗಾದ ಅನ್ಯಾಯದಿಂದ ನೊಂದ ಕನ್ನಗಿ ಸ್ವತಃ ತನ್ನ ಒಂದು ಸ್ತನವನ್ನು ಕತ್ತರಿಸಿ ಮಧುರೆಯ ಮೇಲೆ ಎಸೆಯುತ್ತಾಳೆ. ಅದರಿಂದ ಮಧುರೆ ಹೊತ್ತಿ ಉರಿಯುತ್ತದೆ. ಸ್ತನ ಎಂಬುದು ಸ್ತ್ರೀತ್ವದ ಗುರುತಾಗಿರುವಂತೆಯೇ, ತಾಯ್ತನದ ಸಂಕೇತವೂ ಹೌದು. ಮಧುರೆಯ ಮೀನಾಕ್ಷಿ ದೇವಾಲಯದ ಸುತ್ತ ಕಮಲದಳಗಳಂತೆ ಹರಡಿಕೊಂಡಿರುವ ಇಡೀ ನಗರಿ ಪ್ರತಿಬಾರಿ ಹೋದಾಗ ನನಗೆ ಸ್ತ್ರೀತ್ವದ ಸಬಲತೆ-ಉಗ್ರತೆ-ತಾಯ್ತನದ ಮೃದುತ್ವಗಳನ್ನು ಏಕಕಾಲದಲ್ಲಿ ನೆನಪಿಸುತ್ತದೆ.

ಯಾವುದೇ ಭಾಷೆಯನ್ನು, ದೇಶದಂತೆ ಸ್ತ್ರೀಲಿಂಗದಿಂದ, ತಾಯಿ ಎಂಬಂತೆ ಭಾವಿಸಿಯೇ ಸಂಬೋಧಿಸುವುದು ವಾಡಿಕೆ. ಹಾಗಾಗಿಯೇ ದ್ರಾವಿಡ ಭಾಷೆಗಳನ್ನು ಅಕ್ಕ-ತಂಗಿ ಎಂದು ಕರೆದರೆ ಅದು ಸರಿಯೇ. ಚೆನ್ನೈನ ಕೆಲವು ಹೋಟೆಲುಗಳಲ್ಲಿ ಊಟಕ್ಕೆ ಹೋದರೆ ಹೊರಗೆ ಒಂದು ಸಾಂಪ್ರದಾಯಿಕ ಮಾದರಿಯ ಕುಟೀರದಲ್ಲಿ ಪಾಟ್ಟಿಯೊಬ್ಬಳು ತಿಂಡಿಗಳನ್ನು ಮಾಡುತ್ತ ಕುಳಿತಿರುತ್ತಾಳೆ. ಅವಳು ಮಾಡುವ ರುಚಿಯಾದ ತಿಂಡಿಗಳು, ನಮ್ಮ ಮಲೆನಾಡಿನ ಮನೆಗಳನ್ನು ನೆನಪಿಗೆ ತರುತ್ತವೆ. ಮಧುರೆಯ ದೇವಸ್ಥಾನಗಳಲ್ಲಿ 10 ರೂಪಾಯಿಗೊಂದರಂತೆ ದೊರೆಯುವ ದೊನ್ನೆಗಳ ಚಕ್ರ ಪೊಂಗಲ್, ಖಾರ ಪೊಂಗಲ್, ಮೆದುವಡಾ, ಪುಳಿಯೋಗರೆಗಳ ಪ್ರಸಾದ ನಮಗೂ ರುಚಿಯೆನಿಸುತ್ತದೆ. ಗಮನವಿಟ್ಟು ಆಲಿಸಿದರೆ, ತಮಿಳು ನುಡಿಗಳೆಲ್ಲವನ್ನೂ ಕನ್ನಡವಾಗಿ ಅರ್ಥ ಮಾಡಿಕೊಳ್ಳಲು ಸಾಧ್ಯವಿದೆ! ಕನ್ನಡದ ‘ಬೀಡು’ ತಮಿಳಿನ ‘ವೀಟ್ಟು’, ಕನ್ನಡದ ‘ಬಳಕೆ’, ತಮಿಳಿನ ‘ಪಳಕಂ’ ಹೀಗೆ ಕನ್ನಡ-ತಮಿಳು ಜೊತೆ ಜೊತೆಯಾಗಿ ಮುನ್ನಡೆಯುತ್ತವೆ.

ಮಧುರೆಯ ದೇವಾಲಯದ ಸುತ್ತಮುತ್ತ ಓಡಾಡುವಾಗ, ತುಂಬು ಬಿಳಿಗೂದಲ ಹಿರಿಯ ಮಹಿಳೆ ಬಂದು ಮತ್ತೆ ಮತ್ತೆ ‘ನೂತ್ತಿ ಪೂ ರಂಡು ರುಬಾ’ (ನೂರು ಹೂವು ಎರಡು ರೂಪಾಯಿ) ಎಂದು ಬೆನ್ನು ಹತ್ತುತ್ತಾಳೆ. ಪರಿಮಳ ಬೀರುವ ‘ಮಲ್ಲಿ ಪೂ’ ಮಾಲೆಯನ್ನು, ತಾನೇ ಬುಟ್ಟಿಯಿಂದ ತೆಗೆದ ಹೇರ್ ಪಿನ್ನು ತೆಗೆದು ತಲೆಗೆ ಸಿಕ್ಕಿಸಿಯೇ ನಕ್ಕು, ಕಾಸು ತಾನಾಗಿ ಕೇಳದೆ, ಸುಮ್ಮನೇ ನಿಲ್ಲುತ್ತಾಳೆ. ‘ನೂತ್ತಿ ಪೂ, ರಂಡು ರುಬಾ’ ಅನುರಣಿಸುವ ಆ ಕ್ಷಣಗಳಲ್ಲಿ ನಮ್ಮ ಕನ್ನಡಮ್ಮ, ತಮಿಳು ತಂಗಚ್ಚಿ, ಕನ್ನಗಿ, ಮೀನಾಕ್ಷಿ, ಕರ್ಪಗಂಬಾಳ್ ನಮ್ಮದೇ ಮುಖಗಳಾಗಿ ಮನಸ್ಸಿನಲ್ಲಿ ಮಿಂಚಿ ಮಾಯವಾಗುತ್ತಾರೆ! ‘ಭಾಷೆ’ ‘ಸಂಸ್ಕೃತಿ’ ಎಂಬ ಸ್ತ್ರೀಮುಖಗಳನ್ನು ಮತ್ತೆ ಮತ್ತೆ ನೆನಪಿಸುತ್ತಾರೆ!

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು