ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಾಲ್‍ಹೌಸಿ ಚೆಲುವಿನ ಚಿತ್ರಗಳ ಅರಸಿ

Last Updated 14 ಆಗಸ್ಟ್ 2021, 19:30 IST
ಅಕ್ಷರ ಗಾತ್ರ

ಬ್ರಿಟಿಷ್‌ ಆಡಳಿತದ ಕಾಲದಲ್ಲಿ ಬಹುದೊಡ್ಡ ಸೇನಾ ಬಿಡಾರವಾಗಿದ್ದ ಡಾಲ್‌ಹೌಸಿಯ ಪ್ರಾಕೃತಿಕ ಸೌಂದರ್ಯ ಅನುಪಮವಾದುದು. ಭಾರತದ ಸ್ವಿಟ್ಜರ್ಲೆಂಡ್‌ ಎಂದೇ ಖ್ಯಾತಿಯಾದ ಖಜ್ಜಿಯಾ ಇರುವುದು ಇಲ್ಲಿಯೇ. ಸುಭಾಷ್‌ಚಂದ್ರ ಬೋಸ್‌ ಅವರು ತಿಂಗಳುಪರ್ಯಂತ ವಿಶ್ರಾಂತಿ ಪಡೆದ ಪ್ರದೇಶವೂ ಇಲ್ಲಿದೆ. ಇತಿಹಾಸದ ಮೆಲುಕು ಹಾಕುತ್ತಾ ಈ ರಮಣೀಯ ತಾಣದಲ್ಲಿ ಸುತ್ತಾಡುವ ಮಜವೇ ಬೇರೆ.

**
ಹಿಮಾಚಲ ಪ್ರದೇಶದ ಚಂಬಾ ಜಿಲ್ಲೆಯ ಹಲವು ಗಿರಿಧಾಮಗಳಲ್ಲಿ ಡಾಲ್‍ಹೌಸಿ ತುಂಬಾ ಪ್ರಸಿದ್ಧ. ಬ್ರಿಟಿಷರು ತಮ್ಮ ಸೇನಾ ತುಕಡಿಗಳಿಗೆ ಆರೋಗ್ಯಕರ ವಸತಿ ನೆಲೆಯನ್ನು ಹುಡುಕುತ್ತಿದ್ದಾಗ ಹಿಮಾಲಯದ ತಪ್ಪಲಲ್ಲಿನ ಪ್ರಕೃತಿ ಸೌಂದರ್ಯ ಮತ್ತು ತಂಪಾದ ಹಿತಕರ ಹವಾಮಾನದ ಡಾಲ್‍ಹೌಸಿ ಅವರನ್ನು ಸೆಳೆದಿತ್ತು. ಬ್ರಿಟಿಷರ ಅಧೀನದಲ್ಲಿದ್ದ ಚಂಬಾ ರಾಜನ ಆಡಳಿತಕ್ಕೊಳಪಟ್ಟಿದ್ದ ಈ ಪ್ರದೇಶವನ್ನು ತಮ್ಮ ವಶಕ್ಕೆ ಪಡೆದು 1854ರಲ್ಲಿ ಇದನ್ನು ಸೇನಾ ನೆಲೆಯಾಗಿಯೂ ಗಿರಿಧಾಮವಾಗಿಯೂ ರೂಪಿಸಿದರು. ಭಾರತದ ಆಗಿನ ಗವರ್ನರ್ ಜನರಲ್ ಡಾಲ್‍ಹೌಸಿಯಾದ್ದರಿಂದ ಅವನದೇ ಹೆಸರಿನಿಂದ ಇದನ್ನು ಕರೆಯಲಾಯಿತು. ಹಿಮಾವೃತ ದೌಲಾಧರ್ ಶ್ರೇಣಿಗಳೆಡೆಯಲ್ಲಿ ಐದು ಬೆಟ್ಟ ಪ್ರದೇಶಗಳನ್ನೊಳಗೊಂಡಿರುವ ಡಾಲ್‍ಹೌಸಿಯು ಹಸಿರು ಮುಕ್ಕಳಿಸುವ ದಟ್ಟ ಕಾಡುಗಳು, ಕಣಿವೆಗಳು, ಹುಲ್ಲುಗಾವಲುಗಳು, ಜಲಪಾತಗಳಿಂದ ಮನಸ್ಸನ್ನು ಮೋಡಿಗೊಳಪಡಿಸುವ ತಾಣ.

ಎಲ್ಲೆಲ್ಲಿ ನೋಡಿದರೂ ಸೂಚಿಪರ್ಣ ಮರಗಳನ್ನು ಹೊತ್ತ ಬೆಟ್ಟಗಳನ್ನೇ ಹೊಂದಿರುವ ಡಾಲ್‍ಹೌಸಿಯ ಸಮೀಪದಲ್ಲಿ ಅಪರೂಪವೆಂಬಂತಿರುವ ವಿಶಾಲ ಮೈದಾನದ ಪ್ರದೇಶವೇ ಖಜ್ಜಿಯಾರ್. ಈ ಮೈದಾನದ ಬಳಿ ಪಚ್ಚೆ ಹಾಸಿನಂತಹ ಸರೋವರವಿದೆ. ಇದರ ಸುತ್ತ ಬೆಳೆದಿರುವ ಜೊಂಡಿನ ಮೇಲೆ ನಡೆಯುವಾಗ ವೆಲ್ವೆಟ್ ಹಾಸಿನ ಮೇಲೆ ನಡೆದಂತೆನಿಸುತ್ತದೆ. ಕಣ್ಣಿಗೆ ತಂಪೆನಿಸುವ ಹಸಿರು ಪಚ್ಚೆಯ ತರಹದ ಈ ವಿಶಾಲ ಮೈದಾನದಲ್ಲಿ ನಡೆದಾಡುತ್ತಾ, ಹುಲ್ಲಿನ ಮೇಲೆ ಉರುಳಾಡುತ್ತಾ ಪ್ರಕೃತಿಯ ಮಡಿಲ ಮಗುವಾಗಿ ಪ್ರವಾಸಿಗರು ಸಂಭ್ರಮಿಸುತ್ತಾರೆ.

-ಕಾಲಾಟಾಪ್‍ನ ಅರಣ್ಯ ವಿಶ್ರಾಂತಿಧಾಮ
-ಕಾಲಾಟಾಪ್‍ನ ಅರಣ್ಯ ವಿಶ್ರಾಂತಿಧಾಮ

ಬೆತ್ತದ ಬುಟ್ಟಿಗಳಲ್ಲಿ ಹೂಗಳ ನಡುವೆ ಮುದ್ದಾದ ಮೊಲಗಳನ್ನಿರಿಸಿ, ಅವುಗಳನ್ನು ಹಿಡಿದುಕೊಂಡು ಫೋಟೊ ತೆಗೆಸಿಕೊಳ್ಳಿರೆಂದು ಒತ್ತಾಯಿಸುವವರು ಇಲ್ಲಿದ್ದಾರೆ. ಹಿಮಾಚಲ ಪ್ರದೇಶದ ಸಾಂಪ್ರದಾಯಿಕ ದಿರಿಸು ಧರಿಸಿಯೂ ಫೋಟೊ ತೆಗೆಸಿಕೊಳ್ಳಬಹುದು. ಹಸುಗಳು, ಕುರಿಗಳು ಹಾಯಾಗಿ ಹುಲ್ಲು ಮೇಯುತ್ತಿರುತ್ತವೆ. ಇಲ್ಲಿ ಹಲವಾರು ಬಾಲಿವುಡ್ ಸಿನಿಮಾಗಳ ಚಿತ್ರೀಕರಣ ನಡೆದಿದೆ. 1992ರಲ್ಲಿ ಇಲ್ಲಿಗೆ ಬಂದಿದ್ದ ವಿಲ್ಲಿ ಟಿ ಬ್ಲೇಜರ್ ಎಂಬ ಸ್ವಿಟ್ಜರ್ಲೆಂಡಿನ ವೈಸ್ ಕೌನ್ಸಿಲರ್, ಖಜ್ಜಿಯಾರನ್ನು ಮಿನಿ ಸ್ವಿಟ್ಜರ್ಲೆಂಡ್‌ ಎಂದು ಘೋಷಿಸಿದ ಘೋಷಣಾ ಫಲಕ ಸಮೀಪದ ಕಾಲಾಟಾಪ್‍ನಲ್ಲಿದೆ.

ಖಜ್ಜಿಯಾರ್ ಸರೋವರದ ಸಮೀಪದಲ್ಲಿ ಖಜ್ಜಿನಾಗ್ ದೇವಾಲಯವಿದೆ. ಇದರಿಂದಲೇ ಸ್ಥಳವು ಖಜ್ಜಿಯಾರ್ ಎನಿಸಿಕೊಂಡಿರುವುದು. ಚಿನ್ನಲೇಪಿತ ಗುಮ್ಮಟದೊಂದಿಗೆ ಹಿಂದೂ ಮುಸ್ಲಿಂ ಸಮ್ಮಿಶ್ರಣ ಶೈಲಿಯ ಶಿಲ್ಪಕಲೆಯ ದೇಗುಲದಲ್ಲಿ ಸುಂದರವಾದ ಮರದ ಕೆತ್ತನೆಗಳಲ್ಲಿ ಪಾಂಡವರು ಕೌರವರ ವಿಗ್ರಹಗಳಿವೆ. ಶಿವನೊಂದಿಗೆ ಇಲ್ಲಿ ಹಿಡಿಂಬೆಗೂ ಪೂಜೆಯಿದೆ.

ಖಜ್ಜಿಯಾರಿಂದ ಮೂರು ಕಿ.ಮೀ. ದೂರದಲ್ಲಿ ಸಮುದ್ರ ಮಟ್ಟದಿಂದ 2500 ಮೀ. ಎತ್ತರದಲ್ಲಿರುವ ಕಾಲಾಟಾಪ್ ವನ್ಯಜೀವಿಧಾಮಕ್ಕೆ ಚಾರಣಪ್ರಿಯರು ನಡೆದೇ ಹೋಗುತ್ತಾರೆ. ಎತ್ತರೆತ್ತರಕ್ಕೇರುವ ದೇವದಾರು, ಪೈನ್, ಓಕ್ ಮರಗಳನ್ನೊಳಗೊಂಡ ಬೆಟ್ಟದ ದಾರಿ, ಏಕಮುಖ ಸಂಚಾರ ಮಾತ್ರ ಸಾಧ್ಯವಾಗುವಂಥದ್ದು. ಕರಡಿ, ಚಿರತೆಗಳಿವೆ ಎಂಬ ಎಚ್ಚರಿಕೆಯ ಫಲಕಗಳನ್ನು ಹೊತ್ತ ದೂಳಿನ ರಸ್ತೆಯ ಇನ್ನೊಂದು ಬದಿ ತಳ ಕಾಣದಂಥ ಪ್ರಪಾತ. ಸೂರ್ಯಕಿರಣ ಇಲ್ಲಿ ನೆಲ ತಾಕುತ್ತಿರಲಿಲ್ಲವಾದುದರಿಂದಲೇ ಕಾಲಾಟಾಪ್ ಎಂಬ ಹೆಸರಂತೆ. ಹಸಿರ ಸಾಮ್ರಾಜ್ಯದಲ್ಲಿ ದೂರದಲ್ಲಿ ಹಿಮಾವೃತ ಬೆಳ್ಳಿ ಬೆಟ್ಟಗಳ ಸರಣಿ ಕಣ್ಮನ ತುಂಬುತ್ತದೆ. 1925ರಲ್ಲಿ ಸ್ಥಾಪಿತವಾದ, ಒಳ್ಳೆಯ ನಿರ್ವಹಣೆ ಇರುವ ಒಂದು ಅರಣ್ಯ ವಿಶ್ರಾಂತಿಧಾಮ ಇಲ್ಲಿದ್ದು ಪ್ರವಾಸಿಗರಿಗೆ ದುಬಾರಿಯಲ್ಲದ ಬೆಲೆಗೆ ಬಾಡಿಗೆಗೆ ಸಿಗುತ್ತದೆ.

ಡಾಲ್‍ಹೌಸಿ ಸಮೀಪದಲ್ಲಿ ಫೂಲ್‍ಪುಂಜ ಎಂಬ ಸ್ಥಳವಿದ್ದು, ಇಲ್ಲಿ ಸುಭಾಷ್‍ಚಂದ್ರಬೋಸರು 1937ರಲ್ಲಿ ಆರೋಗ್ಯ ಸುಧಾರಣೆಗಾಗಿ ಐದು ತಿಂಗಳು ತಂಗಿದ್ದರು. ಇದಕ್ಕಾಗಿ ಅವರನ್ನು ಸೆರೆಮನೆಯಿಂದ ಬಿಡುಗಡೆ ಮಾಡಲಾಗಿತ್ತು. ಡಾಲ್‍ಹೌಸಿಯಿಂದ ಒಂದು ಕಿ.ಮೀ. ದೂರದಲ್ಲಿ ಇಂದು ಸುಭಾಷ್ ಬೌಲಿ ಎಂದೇ ಕರೆಯಲಾಗುವ ಸ್ಥಳವಿದೆ. ಸುಭಾಷ್‍ಚಂದ್ರಬೋಸರು ಫೂಲ್‍ಪುಂಜದಿಂದ ಕಾಲ್ನಡಿಗೆಯಲ್ಲಿ ಪ್ರತಿದಿನವೂ ಬೆಳಿಗ್ಗೆ ಬಂದು, ಇಲ್ಲಿನ ನೈಸರ್ಗಿಕ ಚಿಲುಮೆಯ ನೀರನ್ನೇ ಕುಡಿದು, ಇಲ್ಲಿ ಕುಳಿತು ಧ್ಯಾನ ಮಾಡುತ್ತಿದ್ದರಂತೆ. ಆ ಸ್ಥಳದಲ್ಲಿ ಒಂದು ಸ್ಮಾರಕ ನಿರ್ಮಿಸಲಾಗಿದೆ. ಆ ಕುರಿತ ಒಂದು ಫಲಕವಿದೆ.

ನಾವು ಡಾಲ್‍ಹೌಸಿಯಿಂದ ಸುಭಾಷ್ ಬೌಲಿಗೆ ನಡೆದೇ ಬಂದೆವು. ದಟ್ಟಕಾಡಿನ ನಡುವಿನ ನಿರ್ಜನವಾದ ಇಕ್ಕಟ್ಟಾದ ಕಚ್ಚಾ ರಸ್ತೆ. ಎಡಕ್ಕೆ ಆಳವಾದ ಪ್ರಪಾತ. ಬೆಳಗಿನಿಂದ ಪ್ರವಾಸ ಮಾಡಿ ದಣಿದಿದ್ದೆವು. ಹಿಂದಿರುಗುವ ಸಮಯದಲ್ಲಿ ಸಂಜೆಗತ್ತಲೂ ಆವರಿಸುತ್ತಿದ್ದಾಗ ವಾಹನ ತಾರದೇ ತಪ್ಪು ಮಾಡಿದೆವು ಎಂದು ಮಾತಾಡಿಕೊಳ್ಳುತ್ತಿದ್ದಾಗಲೇ ನಮ್ಮ ಪಕ್ಕದಲ್ಲಿ ದೊಡ್ಡದೊಂದು ಇನ್ನೋವಾ ಕಾರು ಬಂದು ನಿಂತಿತು. ಕಾರನ್ನು ಚಲಾಯಿಸುತ್ತಿದ್ದಾತ ನಗುಮುಖದಿಂದ ‘ಹತ್ತಿಕೊಳ್ಳುತ್ತೀರಾ’ ಎಂದಾಗ ಇಬ್ಬರು ಚಿಕ್ಕ ಮಕ್ಕಳನ್ನೊಳಗೊಂಡು ಎಂಟು ಜನರೂ ಹತ್ತಿಕೊಂಡೆವು. ಆತ್ಮೀಯವಾಗಿ ಮಾತನಾಡುತ್ತಾ ನಮ್ಮ ರೆಸಾರ್ಟ್ ಬಳಿಯೇ ಇಳಿಸಿ ಬೀಳ್ಕೊಂಡ ಅವರ ಸೌಜನ್ಯಕ್ಕೆ ಮಾರುಹೋದೆವು.

ಡಾಲ್‍ಹೌಸಿ ನಗರದ ಮಾಲ್ ರೋಡ್‍ನಲ್ಲಿ ಪ್ರಸಿದ್ಧವಾದದ್ದು ಗಾಂಧಿಚೌಕ. ಚೌಕದ ಗಾಂಧಿ ಪ್ರತಿಮೆಯ ಎದುರಲ್ಲೇ 1863ರಲ್ಲಿ ನಿರ್ಮಿಸಿದ ಸೇಂಟ್ ಜಾನ್ಸ್ ಚರ್ಚ್ ಇದೆ. ಸುತ್ತ ವೈವಿಧ್ಯಮಯ ಅಂಗಡಿಗಳು, ಕಾಫಿಕೆಫೆ, ಬೇಕರಿಗಳು. ಪ್ರವಾಸಿಗರು ಲಗ್ಗೆಯಿಡುವುದು ಇಂಡೊ ಟಿಬೆಟನ್ ಮಾರ್ಕೆಟ್‍ಗೆ. ರಸ್ತೆಯ ಎರಡೂ ಪಕ್ಕಗಳಲ್ಲಿ ರೈಲು ಡಬ್ಬಿಗಳನ್ನು ಜೋಡಿಸಿಟ್ಟಂತಿರುವ ಅಂಗಡಿಗಳಲ್ಲಿ ಆಕರ್ಷಕವಾದ ವಿಧವಿಧದ ವಸ್ತುಗಳನ್ನು ಮಾರಾಟ ಮಾಡಲಾಗುತ್ತದೆ.

-ಜೋರ್ಬಿಂಗ್-ದೊಡ್ಡ ಚೆಂಡೊಳಗೆ ತೂರಿ ಉರುಳಾಡುವ ಆಟ
-ಜೋರ್ಬಿಂಗ್-ದೊಡ್ಡ ಚೆಂಡೊಳಗೆ ತೂರಿ ಉರುಳಾಡುವ ಆಟ

ನಗರದಲ್ಲಿ ನೇತಾಜಿ ಜನ್ಮ ಶತಮಾನೋತ್ಸವ ಸಂದರ್ಭದಲ್ಲಿ ನಿರ್ಮಿಸಿದ ಅಮೃತಶಿಲೆಯ ಎತ್ತರದ ಪೀಠದ ಮೇಲೆ ಸುಭಾಷ್ ಚಂದ್ರಬೋಸರ ಭವ್ಯ ಪ್ರತಿಮೆ ಇದೆ. ‘ಸ್ವಾತಂತ್ರ್ಯವೆಂದರೆ ರಾಜಕೀಯ ಪಾರತಂತ್ರ್ಯದಿಂದ ಮುಕ್ತಿ ಮಾತ್ರವೇ ಅಲ್ಲ; ವರ್ಗಭೇದ, ಜಾತಿಭೇದ, ಮತೀಯ ಭೇದಗಳ ನಿರ್ಮೂಲನವೇ ಸ್ವಾತಂತ್ರ್ಯ’ ಎಂಬ, ಪೀಠದಲ್ಲಿ ಕೆತ್ತಿರುವ ಅವರ ಮಾತು ಇನ್ನೂ ಈಡೇರಬೇಕಾದ ಆಶಯವಾಗಿಯೇ ಉಳಿದಿದೆಯಲ್ಲ ಎಂಬ ವಿಷಾದವುಂಟಾಗುತ್ತದೆ.

ಡಾಲ್‍ಹೌಸಿ ಭಾರತ ಸೇನೆಯ ಪ್ರಮುಖ ನೆಲೆಗಳಲ್ಲೊಂದು. ರಾವಿ ನದಿ ದಡದ ಚಂಬಾ ಮಿಲಿಟರಿ ಪ್ರದೇಶದಲ್ಲಿ ಪ್ರಯಾಣಿಸುತ್ತಿದ್ದಾಗ ಅಲ್ಲಿನ ಅಚ್ಚುಕಟ್ಟಾದ ರಸ್ತೆ, ಕಟ್ಟಡಗಳು, ತಾನೇತಾನಾಗಿ ಬೆಳೆವ ಹೂವು, ಹಸಿರು ಗಿಡಗಳು ಸಾಲದೆಂಬಂತೆ ಮರದ ಪಟ್ಟಿಕೆಗಳ ಚೌಕಾಕಾರದ ಪೆಟ್ಟಿಗೆಗಳಲ್ಲಿ ಹೂಕುಂಡಗಳನ್ನಿಟ್ಟು ಸರಪಳಿಗಳ ಮೂಲಕ ಅವನ್ನು ನೇತು ಹಾಕಿದ ಮರದ ಸ್ಟ್ಯಾಂಡುಗಳು ಕಂಡುಬಂದವು.

ಡಾಲ್‍ಹೌಸಿಗೆ ಬರಲು ಪಠಾಣ್‍ಕೋಟ್, ಕಾಂಗ್ರಾ, ಧರ್ಮಶಾಲಾ, ಅಮೃತಸರದಿಂದ ನೂರಾರು ಕಿ.ಮೀ.ನ ರಸ್ತೆ ಸಂಚಾರ ಅನಿವಾರ್ಯ. ಪರ್ವತ ಶ್ರೇಣಿಗಳ ಘಟ್ಟದ ಮಾರ್ಗದಲ್ಲಿ ಕಚ್ಚಾ ರಸ್ತೆಯಲ್ಲಿನ ಪ್ರಯಾಣ ಸ್ವಲ್ಪಮಟ್ಟಿಗೆ ಮೂಳೆಗಳನ್ನು ಪದ ಹೇಳಿಸುವುದಾದರೂ, ಡಾಲ್‍ಹೌಸಿ ತಲುಪುತ್ತಲೇ ಇಲ್ಲಿನ ವನರಾಶಿ, ಕಣಿವೆಗಳು, ಕಣಿವೆಗಳೆಡೆಯಲ್ಲಿನ ಕಟ್ಟಡಗಳು, ಮನೆಗಳು ರಾತ್ರಿಯಲ್ಲಿ ಬೀರುವ ಬೆಳಕಿನಿಂದ ನಕ್ಷತ್ರ ಲೋಕವನ್ನೇ ಧರೆಗಿಳಿಸಿದಂತಹ ದೃಶ್ಯಗಳು ಪಟ್ಟ ಕಷ್ಟಗಳನ್ನೆಲ್ಲ ನಗಣ್ಯವಾಗಿಸಿಬಿಡುತ್ತವೆ. ಡಾಲ್‍ಹೌಸಿ ಮನದಲ್ಲಿ ಮರೆಯಲಾಗದ ಮುದ ನೀಡುವ ನೆನಪುಗಳನ್ನುಳಿಸುವ ತಾಣ.

ಚಿತ್ರಗಳು: ಕೆ.ಎನ್.ದಿವಿಜ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT