ಉತ್ತರ ಅಮೆರಿಕ ಪ್ರವಾಸದ ಸಮಯದಲ್ಲಿ, ಅರಿಜೋನಾದಲ್ಲಿರುವ ‘ಗ್ರ್ಯಾಂಡ್ ಕ್ಯಾನನ್’ಗೆ ಭೇಟಿ ನೀಡಬೇಕೆಂಬ ಹಂಬಲ ಅನೇಕರ ಮನಸ್ಸಿನಲ್ಲಿ ಇರುತ್ತದೆ. ನನ್ನ ಕನಸೂ ಅದೇ ಆಗಿತ್ತು. ಆದರೆ ಕಾಲಮಿತಿಯಿಂದಾಗಿ ಸಾಧ್ಯವಾಗಿರಲಿಲ್ಲ. ಆದರೂ ಪ್ರಕೃತಿ ತನ್ನದೇ ರೀತಿಯಲ್ಲಿ ನನ್ನ ಹಂಬಲವನ್ನು ತೀರಿಸುವ ಅದ್ಭುತ ಮಾರ್ಗವನ್ನು ತೋರಿಸಿಕೊಟ್ಟಿತು. ಇತ್ತೀಚೆಗೆ ಕೈಗೊಂಡ ಗುಜರಾತ್ ಪ್ರವಾಸದ ವೇಳೆ ಅಸಾಧ್ಯವೆನಿಸಿದ್ದ ಕನಸು ನನಸಾಯಿತು. ಭಾರತದ ಮಣ್ಣಿನಲ್ಲಿಯೇ ಒಂದು ‘ಗ್ರ್ಯಾಂಡ್ ಕ್ಯಾನನ್’ ಕಾಣುವ ಅವಕಾಶ ದೊರೆಯಿತು!

ಗುಜರಾತಿನ ಪಶ್ಚಿಮ ಭಾಗದಲ್ಲಿರುವ ‘ಭುಜ್’ ಪಟ್ಟಣದಿಂದ ಕೇವಲ 32 ಕಿಲೋಮೀಟರ್ ಅಂತರದಲ್ಲಿರುವ ‘ಕಾದಿಯಾ ಧ್ರೋ’ ಪ್ರಕೃತಿಯ ವಿಚಿತ್ರ ವಿನ್ಯಾಸದ ಒಂದು ಕಣಿವೆ. ಸ್ಥಳೀಯರು ಅದನ್ನು ಪ್ರೀತಿಯಿಂದ ‘ಇಂಡಿಯಾಸ್ ಗ್ರ್ಯಾಂಡ್ ಕ್ಯಾನನ್’ ಎಂದು ಕರೆಯುತ್ತಾರೆ.

ಕಚ್ ಭಾಷೆಯಲ್ಲಿ ‘Kadiya’ ಎಂದರೆ ಕಾರಿಗ (artisan) ಮತ್ತು ‘Dhro’ ಎಂದರೆ ಸಣ್ಣ ಕೆರೆ (small pond). ಬಣ್ಣ ಬಣ್ಣದ ಜೇಡಿಮಣ್ಣಿನ ಪದರಕಲ್ಲುಗಳು ಮತ್ತು ಮರಳುಗಲ್ಲುಗಳಿಂದ ತುಂಬಿರುವ ಈ ಪ್ರದೇಶದ ಭೂದೃಶ್ಯವನ್ನು ನೋಡಿದರೆ, ಅದು ನಿಜಕ್ಕೂ ಒಬ್ಬ ಕುಶಲಕರ್ಮಿಯ ಕೈಚಳಕದ ಕಲಾಕೃತಿಯಂತೆ ಕಾಣುತ್ತದೆ.

ಭೈಯಾದ್ ನದಿ ವರ್ಷದಲ್ಲಿ ಸುಮಾರು ಐದರಿಂದ ಆರು ತಿಂಗಳು ಹರಿದು ನಂತರ ಕಾದಿಯಾ ಧ್ರೋ ಪ್ರದೇಶದ ಸುತ್ತಲೂ ಚದುರಿಕೊಂಡಿರುವ ಸಣ್ಣ ಕೆರೆಗಳಾಗಿ ಪರಿವರ್ತನೆಗೊಳ್ಳುತ್ತದೆ. ಈ ಕೆರೆಗಳು ಮೀನುಗಳಿಗೂ, ಮೊಸಳೆಗಳಿಗೂ ವಾಸಸ್ಥಳವೆಂದು ಪ್ರಸಿದ್ಧವಾಗಿವೆ. ಆದ್ದರಿಂದ ಇಲ್ಲಿ ನೀರಿಗಿಳಿಯುವುದು ಅಪಾಯಕಾರಿ.

ಬೆಳಿಗ್ಗೆ ಪ್ರವಾಸಿಗರನ್ನು ಹೊತ್ತ ಬಸ್ ಭುಜ್ ಪಟ್ಟಣದಿಂದ ಪ್ರಯಾಣ ಆರಂಭಿಸಿದಾಗ ಸುತ್ತಮುತ್ತಲಿನ ಬಯಲು ಪ್ರದೇಶಗಳು ಮೌನದಲ್ಲೇ ತಮ್ಮ ಕಥೆ ಹೇಳುತ್ತಿದ್ದಂತೆಯೇ ಕಂಡವು. ಮಣ್ಣಿನ ಬಣ್ಣ ಬದಲಾವಣೆ, ಬಂಡೆಗಳ ಆಕೃತಿ ಮತ್ತು ತಂಪಾದ ಗಾಳಿ ಆ ಪ್ರದೇಶ ನಿಧಾನವಾಗಿ ವಿಶಿಷ್ಟ ವಾತಾವರಣವನ್ನು ಸೃಷ್ಟಿಸಿತು.

ಸುಮಾರು ಒಂದು ಗಂಟೆಯ ಪ್ರಯಾಣದ ನಂತರ ನಾವು ಕೊಡ್ಕಿ ಹಳ್ಳಿ ತಲುಪಿದೆವು. ಇಲ್ಲಿಂದ ‘ಕಾದಿಯಾ ಧ್ರೋ’ ತಲುಪಲು ಉಬ್ಬು ತಗ್ಗುಗಳಿಂದ ಕೂಡಿದ ಸುಮಾರು ಐದು ಕಿಲೋಮೀಟರ್ ಕಚ್ಚಾ ರಸ್ತೆಯಲ್ಲಿ ಜೀಪ್ಗಳಲ್ಲೇ ಸಾಗಬೇಕು. ನಾವು ‘ಕೊಡ್ಕಿ’ ತಲುಪಿದಾಗ ‘ಕಾದಿಯಾ ಧ್ರೋ’ಗೆ ನಮ್ಮನ್ನು ಕರೆದುಕೊಂಡು ಹೋಗಲು ಕಾಯ್ದಿರಿಸಿದ್ದ ಜೀಪ್ಗಳು ನಮಗಾಗಿ ಕಾಯುತ್ತಿದ್ದವು.

ಉಬ್ಬು ತಗ್ಗುಗಳ ಕಚ್ಚಾ ರಸ್ತೆಯಲ್ಲಿ ಸಾಗುವಾಗ ದೋಣಿಯಲ್ಲಿ ಪಯಣಿಸುವಾಗ ಓಲಾಡುವಂತೆ ಓಲಾಡುತ್ತಿದ್ದೆವು. ಜೀಪ್ಗಳು ಚಲಿಸುತ್ತಿರುವಾಗ ಏಳುತ್ತಿದ್ದ ಕೆಂಪನೆಯ ದೂಳು ನಮ್ಮನ್ನಾವರಿಸಿತ್ತು. ಕೊನೆಗೂ ಕಣಿವೆಯ ಅಂಚಿಗೆ ತಲುಪಿದೆವು. ಅಲ್ಲಿಂದ ಕಾಣುವ ದೃಶ್ಯ ನಮ್ಮನ್ನು ಮಂತ್ರಮುಗ್ಧರನ್ನಾಗಿಸಿತು. ಭೂಮಿಯ ಬಣ್ಣದ ಪದರಗಳು ಹರಡಿಕೊಂಡಿದ್ದವು. ಸಾವಿರಾರು ವರ್ಷಗಳು ಗಾಳಿ, ಮಳೆ ಮತ್ತು ನದಿಯ ನೀರಿನ ಕೊರೆತದಿಂದ ರೂಪುಗೊಂಡ ಆ ಕಣಿವೆಗಳು ಮತ್ತು ಸೂರ್ಯ ಕಿರಣಗಳಲ್ಲಿ ಹೊಳೆಯುವ ಕಲ್ಲುಗಳ ನೋಟ ಪ್ರಕೃತಿಯ ಶಿಲ್ಪಕೌಶಲದ ಜೀವಂತ ಸಾಕ್ಷಿಗಳಾಗಿದ್ದವು.

ಸ್ಥಳೀಯರ ಪ್ರಕಾರ, ಅನೇಕ ಶತಮಾನಗಳ ಹಿಂದೆ ಇಲ್ಲಿ ಹರಿಯುತ್ತಿದ್ದ ಭೈಯಾದ್ ನದಿ ತನ್ನ ಪಥವನ್ನು ಬದಲಾಯಿಸುತ್ತಾ ಭೂಮಿಯನ್ನು ಆಳವಾಗಿ ಕತ್ತರಿಸಿಕೊಂಡು ಹೋಯಿತು. ಈಗ ಆ ನದಿ ಒಣಗಿದರೂ, ಅದರ ಗುರುತುಗಳು ಕಣಿವೆಯ ಪ್ರತಿ ಕಲ್ಲಿನ ಮೇಲೆ ಸ್ಪಷ್ಟವಾಗಿ ಉಳಿದಿವೆ. ಕೆಲವೆಡೆ ಕಲ್ಲಿನ ಮೇಲಿನ ಕಬ್ಬಿಣದ ರೇಖೆಗಳು ಸೂರ್ಯನ ಪ್ರಖರವಾದ ಬೆಳಕಿಗೆ ಹೊಳೆಯುತ್ತಾ ಕಣಿವೆಗೆ ವಿಶಿಷ್ಟ ಆಕರ್ಷಣೆಯನ್ನು ನೀಡುತ್ತವೆ. ಮಳೆಗಾಲದಲ್ಲಿ ಕೆಲವು ದಿನಗಳು ನದಿ ಹರಿಯುತ್ತದಂತೆ. ಮಿಕ್ಕ ದಿನಗಳಲ್ಲಿ ನೀರಿನ ಹರಿವು ಕ್ಷೀಣಿಸುತ್ತದೆ.

ನಾವು ಕಣಿವೆಯ ಅಂಚಿನಲ್ಲಿ ನಿಂತು ಆ ಮೌನದ ದೃಶ್ಯವನ್ನು ಹೆಚ್ಚು ಹೊತ್ತು ನೋಡುತ್ತಿದ್ದೆವು. ಗಾಳಿಯ ಹಾದಿಯಲ್ಲಿ ದೂರದಿಂದ ಕೇಳಿಬರುತ್ತಿದ್ದ ಪಕ್ಷಿಗಳ ಇಂಚರ ಪ್ರಕೃತಿಯ ಸಂಗೀತದ ಭಾಗವಾಗಿದ್ದವು. ಆ ಕ್ಷಣದಲ್ಲಿ ನನ್ನೊಳಗಿನ ಅಮೆರಿಕದ ಗ್ರ್ಯಾಂಡ್ ಕ್ಯಾನನ್ನ ಹಂಬಲ ಸಂಪೂರ್ಣವಾಗಿ ಕರಗಿಹೋಯಿತು. ‘ನೀನು ನೋಡಬೇಕೆಂದು ಹಂಬಲಿಸುತ್ತಿದ್ದ ಅದ್ಭುತ ಇಲ್ಲಿ ನಿನ್ನದೇ ನೆಲದಲ್ಲಿ ಇದೆ, ನೋಡು’ ಎಂದು ಪ್ರಕೃತಿಯು ನನಗೆ ಸಾರಿ ಹೇಳಿದಂತೆ ಭಾಸವಾಯಿತು.

ನಾವೆಲ್ಲರೂ ಕಣಿವೆಯ ನಡುವೆ ಸಾಗಿದೆವು. ಬಂಡೆಗಳು, ನದಿ ಹಾದಿ ಎಲ್ಲವೂ ಚಿತ್ರಕಲೆಯಂತಿದ್ದವು. ಪ್ರಮುಖ ಸ್ಥಳವೆಂದರೆ ನದಿ ಹರಿಯುವ ಆ ವಿಶಾಲ ಕಣಿವೆ–ಅದು ನಿಜಕ್ಕೂ ಭೂಮಿಯ ಒಂದು ವಿಸ್ಮಯ. ಒಂದು ಕಡೆ ಕಲ್ಲಿನಲ್ಲಿ ಕೊರೆದ ವೃತ್ತಾಕಾರದ ಬಾವಿ ನಮ್ಮಲ್ಲಿ ಅಚ್ಚರಿ ಮೂಡಿಸಿತು. ನದಿಯ ನೀರಿನ ಕೊರೆತದಿಂದ ರೂಪ ತಳೆದಿರುವ ಬಾವಿ ನೂರಾರು ಅಡಿಗಳ ಅಳವಿದೆಯೆಂದು ನಮ್ಮ ಗೈಡ್ ಹೇಳಿದರು.ಕಣಿವೆಯ ಮತ್ತೊಂದು ಪಾರ್ಶ್ವದಲ್ಲಿರುವ ಪುಟ್ಟ ಜಲಪಾತ ನಮ್ಮನ್ನು ಆಕರ್ಷಿಸಿತು. ಎಲ್ಲರೂ ಮಿಂದು ಆನಂದಪಟ್ಟೆವು.

ಸಂಜೆಯ ಹೊತ್ತಿಗೆ ಸೂರ್ಯನ ಕಿರಣಗಳು ಕಣಿವೆಯ ಮೇಲಿಂದ ಹರಿದು ಬರುವಾಗ ಬಣ್ಣದ ಪದರಗಳು ಬಂಗಾರದ ಹೊಳಪಿನಿಂದ ಮೆರೆಯುತ್ತಿದ್ದವು. ಕೆಲ ಕ್ಷಣಗಳು ಎಲ್ಲವೂ ನಿಶ್ಚಲವಾಗಿ ನಿಂತಂತಾಯಿತು. ಹಿಂತಿರುಗುವಾಗ, ಆ ಮೌನದ ಕಣಿವೆಯ ಸ್ಮರಣೆ ಮನಸ್ಸಿನಲ್ಲಿ ಶಾಶ್ವತವಾಗಿ ಅಚ್ಚಳಿಯದಂತೆ ಉಳಿಯಿತು. ನಾವು ಅನೇಕ ಬಾರಿ ದೂರದ ದೇಶಗಳಲ್ಲಿ ಅಚ್ಚರಿಗಳನ್ನು ಹುಡುಕುತ್ತೇವೆ, ಆದರೆ ನಮ್ಮದೇ ದೇಶದ ಮಣ್ಣಿನೊಳಗೂ ಅದೆಷ್ಟೋ ಅದ್ಭುತಗಳು ಅಡಗಿವೆ ಎಂಬುದನ್ನು ಈ ಪ್ರಯಾಣ ನನಗೆ ಮತ್ತೆ ನೆನಪಿಸಿತು.

ಈ ಯಾನ ನನಗೆ ಕೇವಲ ಒಂದು ಪ್ರವಾಸವಾಗಿರಲಿಲ್ಲ, ಅದು ಪ್ರಕೃತಿಯೊಂದಿಗೆ ನಡೆದ ಆಂತರಿಕ ಸಂಭಾಷಣೆಯಾಗಿತ್ತು. ‘ಸೌಂದರ್ಯ ಅಂದರೆ ಸ್ಥಳದಲ್ಲಲ್ಲ, ಅದು ನೋಡುವ ದೃಷ್ಟಿಯಲ್ಲಿ ಇದೆ’ ಎಂಬ ಅರಿವು ಮನಸ್ಸಿನಲ್ಲಿ ಆಳವಾಗಿ ಮೂಡಿತು. ಭುಜ್ನ ಸಮೀಪದ ಈ ‘ಭಾರತದ ಗ್ರ್ಯಾಂಡ್ ಕ್ಯಾನನ್’– ಪ್ರಕೃತಿಯ ಬಣ್ಣ, ಮೌನ ಮತ್ತು ಮಹತ್ವದ ಅಪರೂಪದ ಸಂಗಮ– ಜೀವನದ ಒಂದು ಅಮೂಲ್ಯ ಅನುಭವವಾಗಿ ಉಳಿಯಿತು.

‘ಕಾದಿಯಾ ಧ್ರೋ’ ಖಂಡಿತವಾಗಿಯೂ ಭೇಟಿ ನೀಡಬೇಕಾದ ಸ್ಥಳ. ನಾವು ಅದನ್ನು ಪ್ರಕೃತಿಯ ಸಹಜ ಸೌಂದರ್ಯದಲ್ಲಿ ಕಂಡೆವು. ಪ್ರವಾಸಿಗರ ಹೆಚ್ಚುತ್ತಿರುವ ಭೇಟಿ ಕಾರಣದಿಂದ, ಇನ್ನೂ ಒಂದು ದಶಕದ ನಂತರ ಅದು ತನ್ನ ಮೂಲ ಸ್ವರೂಪವನ್ನು ಕಳೆದುಕೊಳ್ಳಬಹುದು ಎಂಬ ಭಾವನೆ ಉಂಟಾಯಿತು. ಆದರೆ ನಾವು ನೋಡಿದ ಕಾದಿಯಾ ಧ್ರೋ ನಿಜಕ್ಕೂ ಅಪರೂಪದ ನೈಸರ್ಗಿಕ ಕಣಿವೆ– ‘ಭಾರತದ ಗ್ರ್ಯಾಂಡ್ ಕ್ಯಾನನ್’ ಎಂಬ ಬಿರುದಿಗೆ ತಕ್ಕಂತದ್ದು. ಈ ಸ್ಥಳವನ್ನು ವೀಕ್ಷಿಸಲು ನವೆಂಬರ್ನಿಂದ ಫೆಬ್ರುವರಿವರೆಗೆ ಸಮಯ ಸೂಕ್ತ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.