‘ಜಲದುರ್ಗ ಕೋಟೆ’

7

‘ಜಲದುರ್ಗ ಕೋಟೆ’

Published:
Updated:

ರಾಯಚೂರು ಜಿಲ್ಲೆಯ ಲಿಂಗಸುಗೂರಿನಿಂದ ಮಧ್ಯಾಹ್ನ 12ಕ್ಕೆ ಬೈಕ್ ಹತ್ತಿಸಿಕೊಂಡ ಗೆಳೆಯ ಅರ್ಧಗಂಟೆಯಲ್ಲಿ ಒಂದು ಜಾಗಕ್ಕೆ ಕರೆದುಕೊಂಡು ಹೋದ. ಅಲ್ಲಿ, ಎತ್ತ ನೋಡಿದರೂ ಕಣ್ಣು ಹಾಯಿಸಿದಷ್ಟು ಬರಿ ಗುಡ್ಡ ಬಂಡೆಗಲ್ಲುಗಳು, ಕಾಲು ಇಟ್ಟಲೆಲ್ಲ ಹಸಿರ ಹೊದಿಕೆ, ಎತ್ತರಕ್ಕೆ ಬೆಳೆದ ಮರಗಳು, ಪಾಳು ಬಿದ್ದಿರುವ ಕೋಟೆಗಳ ಅವಶೇಷಗಳು, ಬುರುಜು, ಪಕ್ಕಕ್ಕೆ ಪ್ರಶಾಂತವಾಗಿ ಹರಿಯುತ್ತಿರುವ ಕೃಷ್ಣಾ ನದಿ. ಇಷ್ಟೆಲ್ಲ ನೋಡಿದರೂ, ಈ ಸ್ಥಳ ಯಾವುದು ಎಂದು ತಿಳಿಯಲಿಲ್ಲ. ಆದರೆ ಅಲ್ಲಿನ ಸೌಂದರ್ಯ ಮಾತ್ರ ಆಕರ್ಷಣೀಯವಾಗಿತ್ತು.

ಇಷ್ಟೆಲ್ಲ ನೋಡಿದ ಮೇಲೆ ಕುತೂಹಲ ತಣಿಯಲಿಲ್ಲ. ಪಕ್ಕದಲ್ಲಿದ್ದ ಗೆಳೆಯನನ್ನು ‘ಯಾವುದು ಈ ಸ್ಥಳ’ ಅಂತ ಕೇಳಿದೆ. ‘ಇದು ಜಲದುರ್ಗ ಕೋಟೆ’ ಎಂದ ಗೆಳೆಯ. ಕೋಟೆ ಎಂದಾಕ್ಷಣ, ಅದಕ್ಕೊಂದು ಇತಿಹಾಸ ಇರಲೇ ಬೇಕಲ್ಲವೇ. ನನ್ನ ಕುತೂಹಲ ಮತ್ತೆ ಇಮ್ಮಡಿಸಿತು. ಪಕ್ಕದ ಹಳ್ಳಿಯವರಲ್ಲಿ ಈ ಕುರಿತು ವಿಚಾರಿಸಿದಾಗ ಶತಮಾನಗಳಷ್ಟು ಹಿಂದೆ ಕೋಟೆಯಾಳಿದ ಅರಸರು ಮತ್ತು ಸ್ಥಳ ವಿಶೇಷವನ್ನು ಅವರು ತೆರೆದಿಟ್ಟರು.

ಕೃಷ್ಣಾ ನದಿ ತೀರದಲ್ಲಿದೆ ಈ ಐದು ಸುತ್ತಿನ ಕೋಟೆ ಜಲದುರ್ಗ. 12ನೇ ಶತಮಾನದ ಆಸುಪಾಸಿನಲ್ಲಿ ದೇವಗಿರಿಯ ಯಾದವರು ಈ ಕೋಟೆ ನಿರ್ಮಾಣ ಆರಂಭಿಸಿದರು. ಅವರ ನಂತರ ಬಂದ ಬಹುಮನಿ ಸುಲ್ತಾನರು ಹಾಗೂ ವಿಜಯನಗರದ ಅರಸರು ಈ ಕೋಟೆಯ ಅಭಿವೃದ್ಧಿ ಕಾರ್ಯ ಮುಂದುವರಿಸಿದರು. 1489 ರಿಂದ 1686 ರವರೆಗೆ ಆಳ್ವಿಕೆ ನಡೆಸಿದ್ದ ವಿಜಾಪುರ ಸುಲ್ತಾನರಲ್ಲಿ ಆದಿಲ್‌ಶಾಹಿ ಈ ಕೋಟೆಯನ್ನು ಪೂರ್ಣಗೊಳಿಸಿದರು. ಕೋಟೆಯನ್ನು ಸೈನ್ಯ ಬೀಡುಬಿಡಲು ಹಾಗೂ ಕೈದಿಗಳನ್ನು ಬಂಧಿಸಿಡಲು ಬಳಸುತ್ತಿದ್ದರು. ಇಲ್ಲಿನ ಕಾವಲು ಗೋಪುರದ ಮೇಲೆ ನಿಂತುಕೊಂಡು ಸೈನಿಕರು ರಾತ್ರಿ ವೇಳೆ ದಿವಟಿಗೆಯ ಬೆಳಕಿನಲ್ಲಿ ಕಾವಲು ಕಾಯುತ್ತಿದ್ದರು.

ಇಷ್ಟು ಹೊರತುಪಡಿಸಿ, ಕೋಟೆಯ ಕುರಿತು ನಿಖರ ಮಾಹಿತಿ ನೀಡುವ ದಾಖಲೆಗಳು ಅಲ್ಲಿ ಲಭ್ಯವಾಗಲಿಲ್ಲ. ಆದರೆ ಕೋಟೆಯನ್ನು ಸುತ್ತಿದಾಗ ಕಂಡದ್ದು ಒಂದು ಕಡೆ ಕಾವಲು ಗೋಪುರ, ಇನ್ನೊಂದು ಕಡೆ ಬೃಹತ್ ಸಿಡಿಲು ಬಾವಿಗಳು. ಮತ್ತೊಂದು ಕಡೆ ಈಶ್ವರ, ಗಂಗಾಧರ, ಮಂಡೆಲಮ್ಮ, ಬಸವಣ್ಣ, ಆಂಜನೇಯ, ಸಂಗಮೇಶ್ವರ ದೇವಾಲಯಗಳು. ವಿಶೇಷವೆಂದರೆ ಇಲ್ಲಿನ ದೇವಾಲಯಗಳು ಇಂಡೋ ಸಾರ್ಸನಿಕ್ ಶೈಲಿಯಲ್ಲಿವೆ.

ಈ ದೇವಾಲಯಗಳ ಮುಂಭಾಗದಲ್ಲಿ ಶಾಸನಗಳಿವೆ. ಈ ದೇವಾಲಯಕ್ಕೆ ಹಿಂದೂ ಮತ್ತು ಮುಸ್ಲಿಂ ಭಕ್ತರಿದ್ದಾರೆ. ಸಂಗಮೇಶ್ವರ ಗುಡಿಯ ಪಕ್ಕದಲ್ಲಿ ಸಿಡಿಲು ಬಾವಿ ಇದೆ. ಸಿಡಿಲು ಹೊಡೆದಾಗ ಈ ಬಾವಿ ನಿರ್ಮಾಣವಾಗಿರುವ ಕಾರಣ, ಅದಕ್ಕೆ ಆ ಹೆಸರು ಬಂದಿದೆ. ಆದರೆ, ನೋಡುವುದಕ್ಕೆ ತೋಡಿದ ಬಾವಿಯಂತೆ ಕಾಣುತ್ತದೆ.

ನೆಲದಿಂದ 500 ರಿಂದ 600 ಅಡಿ ಎತ್ತರದಲ್ಲಿರುವ ಕೋಟೆಯ ಮೇಲೆ ಗೋಲಾಕಾರದ ತೊಟ್ಟಿಲು ಕಟ್ಟಲಾಗಿದೆ. ಆಗಿನ ಕಾಲದಲ್ಲಿ ಮರಣದಂಡನೆಗೆ ಗುರಿಯಾದ ಅಪರಾಧಿಗಳನ್ನು ಆ ತೊಟ್ಟಿಲಿನಲ್ಲಿ ಕೂರಿಸಿ ಅದನ್ನು ಪಕ್ಕದಲ್ಲಿ ಹರಿಯುತ್ತಿ
ರುವ ನದಿಗೆ ತಳ್ಳಲಾಗುತ್ತಿತ್ತು ಎಂದು ಸ್ಥಳೀಯರು ಹೇಳುತ್ತಾರೆ. ಈಗ ತೊಟ್ಟಿಲು ಹಾಳಾಗಿದೆ.

ಜಲದುರ್ಗ ಕೇವಲ ಕಲ್ಲು – ಕಟ್ಟಡಗಳ ಜಾಗವಷ್ಟೇ ಅಲ್ಲ, ಇಲ್ಲಿನ ನೆಲದಲ್ಲಿ ಗಿಡಮೂಲಿಕೆಗಳಿವೆ. ರಾಜರ ಕಾಲದಲ್ಲಿ ಇದು ಗಿಡಮೂಲಿಕೆಗಳ ಕಾಡಾಗಿತ್ತಂತೆ. ನಾಟಿ ವೈದ್ಯರು, ಇಲ್ಲಿಂದ ಗಿಡಮೂಲಿಕೆಗಳನ್ನು ಸಂಗ್ರಹಿಸುತ್ತಾರಂತೆ.

ಇಂಥ ಕಲಾತ್ಮಕ ಕೋಟೆಯ ಬಗ್ಗೆ ಇನ್ನಷ್ಟು ಮಾಹಿತಿಗಳು ಲಭ್ಯವಾಗುವಂತಾದರೆ, ಇದನ್ನೊಂದು ಐತಿಹಾಸಿಕ ಪ್ರವಾಸೋದ್ಯಮ ತಾಣವನ್ನಾಗಿ ರೂಪಿಸಲು ಸಾಧ್ಯವಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !