ಶನಿವಾರ, ನವೆಂಬರ್ 26, 2022
24 °C

ಬಂಗಾಲದ ಮನೋಲೋಕದೊಳಗೆ.. ಡಾ.ಕೆ.ಎಸ್‌. ಪವಿತ್ರ ಲೇಖನ

ಡಾ.ಕೆ.ಎಸ್‌. ಪವಿತ್ರ Updated:

ಅಕ್ಷರ ಗಾತ್ರ : | |

Prajavani

ಕೋಲ್ಕತ್ತದ ನೇತಾಜಿ ಸುಭಾಷ್‍ಚಂದ್ರ ಬೋಸ್ ವಿಮಾನ ನಿಲ್ದಾಣದಲ್ಲಿ ಇಳಿದಾಗ ಬೆಳಗಿನ 9 ಗಂಟೆ. ಬೆಂಗಾಲಿಗಳ ಕೋಲ್ಕತ್ತ, ರವೀಂದ್ರರ ಅನುವಾದಿತ ಕನ್ನಡ ಕಾದಂಬರಿಗಳಲ್ಲಿ ಓದಿ ಓದಿ ನನ್ನ ಮಟ್ಟಿಗೆ ಇನ್ನೂ ಹಳೆಯ ಕಲ್ಕತ್ತೆಯೇ ಆಗಿ ಉಳಿದಿತ್ತು. ನಿಲ್ದಾಣದ ಹೊರಗೆ ಕಾಲಿಡುವಾಗಲೇ ಕಾಳೀಮಾತೆಯ ಮೆರವಣಿಗೆಯ ಸುಂದರ ಚಿತ್ರಕಲೆ ಕಣ್ಣು ಸೆಳೆದಿತ್ತು. ‘ಕಾಲೀ-ಬೆಂಗಾಲೀ-ಸೈರೆಯಾಟ್ರೀ’ ಎಂದು ನಗುತ್ತಲೇ ಅದರ ಫೋಟೊ ಕ್ಲಿಕ್ಕಿಸಿದ್ದೆ. ನಾನು ಅಲ್ಲಿ ಎರಡು ದಿನಗಳ ಠಿಕಾಣಿ ಹೋಡಲು ಕಾರಣ ಸೃಜನಶೀಲತೆ-ಮಾನಸಿಕ ಆರೋಗ್ಯದ ಬಗೆಗಿನ ಸಮ್ಮೇಳನ.

ಸಮ್ಮೇಳನಕ್ಕೆ ಸಂಪನ್ಮೂಲ ವ್ಯಕ್ತಿಯಾಗಿ ಬಂದಿದ್ದರೂ ಕೋಲ್ಕತ್ತದಲ್ಲಿ ನನಗಿದ್ದ ಆಕರ್ಷಣೆಗಳು ಹಲವು. ಇನ್ನೇನು ದುರ್ಗಾಪೂಜೆಗಿದ್ದದ್ದು ಕೆಲವೇ ದಿನಗಳು. ಎಂದಿಗೂ ಆಕರ್ಷಕವೇ ಎನಿಸುವ ಗಿಜಿಗುಡುವ ಗರಿಯಾಹಟ್‌ಗಳು, ದೊಖಿನಾಪನ್‍ಗಳು ತುಂಬಿ ತುಳುಕುತ್ತಿದ್ದವು. ‘ದುರ್ಗಾಪೂಜೆಯವರೆಗೆ ಪ್ರತಿದಿನ ತೆರೆದಿದೆ’ ಎಂಬ ಫಲಕ ಹೊತ್ತ ಅಂಗಡಿಗಳು. ದುರ್ಗೆಯ ಮೂರ್ತಿಗಳು ಮೊರಗಳಲ್ಲಿ ಎಲ್ಲ ಸೈಜುಗಳಲ್ಲಿ ಕಂಗೊಳಿಸುತ್ತಿದ್ದವು.

ಕೋಲ್ಕತ್ತ ಮನೋವೈದ್ಯಕೀಯಕ್ಕೂ ಬಹು ಹತ್ತಿರದ್ದೇ. ಸ್ವಾತಂತ್ರ್ಯಪೂರ್ವದ ಕಾಲದಲ್ಲಂತೂ ಈಸ್ಟ್ ಇಂಡಿಯಾ ಕಂಪನಿಯ ಕೇಂದ್ರ ಸ್ಥಾನವಿದ್ದದ್ದು ಕೋಲ್ಕತ್ತದಲ್ಲಾದ್ದರಿಂದ, ಭಾರತದ ಮನೋವೈದ್ಯಕೀಯ ಚರಿತ್ರೆಯಲ್ಲಿ ಬಂಗಾಲದ್ದು ಬಹುಪಾಲು. ಇನ್ನು ಸಾಂಸ್ಕೃತಿಕವಾಗಿ ಬೆಂಗಾಲಿಗಳನ್ನು ಯಾವ ಯಾವ ಕ್ಷೇತ್ರದಲ್ಲಿ ಹೆಸರಿಸದಿರಬಹುದು?! ನನ್ನ ಸುತ್ತಮುತ್ತಲಿದ್ದ ಬೆಂಗಾಲಿ ಮನೋವೈದ್ಯ-ಕಲಾವಿದರ ಹೆಸರುಗಳೇ ಸುಂದರ ಕವಿತೆಯೊಂದರ ಶೀರ್ಷಿಕೆಗಳಂತೆ ಇದ್ದವು. ಅಭಿರುಚಿ ಶಯನ್ ದೀಪ್, ಶುದ್ಧೇಂದು, ದೇವಶಿಶು, ಶರ್ಮಿಷ್ಠಾ, ದೇವಲೀನಾ, ಅನಿರುದ್ಧ... ಇವೆಲ್ಲವೂ ಬೆಂಗಾಲಿಗಳ ಬಾಯಲ್ಲಿ ಸುದ್ಧೇಂದೂ, ದೇಬಸೀಸ್, ಅರೊಬಿಂದೋ ಆಗಿರುವುದು ಮಾತ್ರ ನಗು ಬರಿಸುತ್ತಿತ್ತು.

ಹಿಂದೊಮ್ಮೆ ಕೋಲ್ಕತ್ತದ ವೈದ್ಯಕೀಯ ಸಮ್ಮೇಳನದಲ್ಲಿ ಸಂಜೆ ನಡೆಯುವ ಮನರಂಜನಾ ಕಾರ್ಯಕ್ರಮಕ್ಕೆ ‘ಕಬಿತಾ ವಾಚನ್’ ಇಟ್ಟಿದ್ದರು. ಆವೇಶ ಪೂರಿತವಾಗಿ ಕವಿತೆಯನ್ನು ‘ಕಲಾವಿದೆ’ಯೊಬ್ಬಳು ವಾಚನ ಮಾಡಿದ್ದನ್ನು ನೋಡಿ ನಾವೆಲ್ಲ ಬೆರಗಾಗಿದ್ದೆವು. ನಮ್ಮಲ್ಲಿ ನಡೆಯುವ ಕವಿಗೋಷ್ಠಿಗಳಂತಿರಲಿಲ್ಲ ಅದು! ಸಂಗೀತ-ನೃತ್ಯಗಳಂತೆ ಜರ್ಬಾಗಿ, ಇಡೀ ರಂಗಮಂದಿರ ಮೊಳಗುವ ಹಾಗೆ ಈ ‘ಕಬಿತಾ ವಾಚನ್’ ನಡೆದಿತ್ತು, ಇನ್ನು ರಬೀಂದ್ರ ಸಂಗೀತ್ ಬಗ್ಗೆ ಹೇಳುವುದೇನು? ಬೆಂಗಾಲಿ ಕವಿಯೊಬ್ಬರ ಸಂಗೀತ ಪ್ರಕಾರವನ್ನೇ ಸೃಷ್ಟಿಸುವ, ಪ್ರಚಾರ ಮಾಡುವ ಧೈರ್ಯ ಬೆಂಗಾಲಿಗಳಲ್ಲದೇ ಮತ್ತ್ಯಾರಿಗೆ ಸಾಧ್ಯವಾದೀತು?
ಇದೇ ಪ್ರವೃತ್ತಿಯನ್ನು ಮುಂದುವರಿಸಿ ‘ನಜರುಲ್ ಗೀತಿ’ ಎಂಬ ಗೀತಪ್ರಕಾರವನ್ನು ಕವಿ ಕಾಜೀ ನಜರುಲ್ ಇಸ್ಲಾಂರ ಗಜಲ್‍ಗಳನ್ನು ಆಧರಿಸಿ ಕಟ್ಟಿದ್ದಾರೆ. ನಮ್ಮ ಕನ್ನಡದಲ್ಲೂ ಬೇಕಷ್ಟು ಕವಿಗಳಿಲ್ಲವೇ? ಆದರೆ ಅವರ ಕಾವ್ಯವನ್ನೇ ಆಧರಿಸಿ ಸಂಗೀತ ಪ್ರಕಾರವನ್ನು ನಮಗೆ ಮಾಡಲು ಸಾಧ್ಯವಾಗಿಲ್ಲವಲ್ಲ?! ಬೆಂಗಾಲಿಗಳ ಇಂಥ ಸೃಜನಶೀಲ ಐಡಿಯಾಗಳಿಗೆ ಕೊನೆಯೇ ಇಲ್ಲ! ಇತ್ತೀಚಿನ ಇನ್ನೊಂದು ಪ್ರಕಾರದ ಸಂಗೀತ ‘ಜೀಬೋನ್‍ಮುಖಿಗಾನ್’ ಎಂದು ಗೆಳೆಯ - ಮಾತುಗಾರ ಅಭಿರುಚಿ ಚಟರ್ಜಿ (ಚ್ಯಾಟರ್‌ ಜೀ!) ಹೇಳಿದ. ಅದು ಏನಿರಬಹುದು? ‘ಜೀವನ್ಮುಖಿ ಸಂಗೀತ’ ಜೀವನದ ಬಗೆಗಿನ ಸಂಗೀತವಂತೆ ಅದು. ಸಿನಿಮಾ ಕ್ಷೇತ್ರವನ್ನೇ ಗಮನಿಸಿದರೂ ಅಷ್ಟೆ. ರಾಷ್ಟ್ರ ಪ್ರಶಸ್ತಿಗಳಲ್ಲಿ ಬೆಂಗಾಲಿ ಸಿನಿಮಾಗಳದ್ದೇ ಸಿಂಹಪಾಲು (ಈವರೆಗೆ 22 ಪ್ರಶಸ್ತಿ).

ಬೆಂಗಾಲಿಗಳ ಸೃಜನಶೀಲತೆ ಕಲೆ-ಚಿತ್ರ ವಿಚಿತ್ರ ಔಟ್ ಆಫ್ ಬಾಕ್ಸ್ ಆಲೋಚನೆಗಳ ಮೂರ್ತರೂಪವಾಗಿ ಅಂದಿನ ಸಮ್ಮೇಳನ. ಒಂದೆಡೆ ಅತಿ ಶಿಸ್ತು-ಇನ್ನೊಂದೆಡೆ ಯಾರಿಗೂ ‘ಕೇರ್’ ಮಾಡದ ಅಶಿಸ್ತುಗಳ ಅಪೂರ್ವ ಸಮ್ಮಿಳನ. ಹೊರಗಿನ ಪ್ರದರ್ಶನದಲ್ಲಿ ಮಾನಸಿಕ ಆರೋಗ್ಯ ಸಮಸ್ಯೆಗಳಿಂದ ನರಳುವವರು ತಮ್ಮ ಸೃಜನಶೀಲತೆಯಿಂದ ಮಾಡಿರುವ ವಸ್ತುಗಳ ಪ್ರದರ್ಶನ ಮಾರಾಟ. ಆ ಪ್ರದರ್ಶನದಲ್ಲಿಯೂ ಚಿತ್ರಕಲೆಯದ್ದೇ ಸಿಂಹಪಾಲು. ನನ್ನೊಡನೆ ಸಂಪನ್ಮೂಲ ವ್ಯಕ್ತಿಗಳಾಗಿ ಬಂದವರಲ್ಲಿ ಕೆಲವರು ಖ್ಯಾತನಾಮ ಕಲಾವಿದರಾದರೆ, ಇನ್ನು ಕೆಲವರು ಮನೋವೈದ್ಯ- ಕಲಾವಿದರು. ಅವರ ವೇಷಭೂಷಣಗಳೂ ಅಷ್ಟೆ. ಕೆಲವರು ಧೋತಿಯುಟ್ಟೇ ಬಂದಿದ್ದರೆ, ಕೆಲವರು ತಲೆಗೆ ಒಂದು ಟರ್ಬನ್ ಸುತ್ತಿಕೊಂಡು ವರ್ಣಮಯವಾಗಿ ತಮ್ಮದೇ ಸ್ಟೈಲ್ ಮಾಡಿಕೊಂಡಿದ್ದರು.

ಬೆಂಗಾಲಿಗಳು ಅವರು ಯಾವ ಕ್ಷೇತ್ರದವರೇ ಆಗಲಿ, ಮೈಕಿನಲ್ಲಿ ಮಾತನಾಡುವಾಗ ಆವೇಶಪೂರಿತವಾಗಿ ಮಾತನಾಡುತ್ತಾರೆ! ತಮ್ಮ ಅಭಿಪ್ರಾಯವನ್ನು ಸಾಧಿಸದೇ ಬಿಡುವುದಿಲ್ಲ ಮತ್ತು ಮಾತನಾಡುತ್ತಾ ಅವರು ಮಗ್ನರಾದರೆಂದರೆ ಸಭಿಕರಲ್ಲಿ ಕೆಲ ಬೆಂಗಾಲಿಗಳಷ್ಟೇ ಇದ್ದರೂ ಇಂಗ್ಲಿಷಿನಿಂದ ಯಾವ ಸಂಕೋಚ-ಮುಜುಗರಗಳಿಲ್ಲದೆ ಅವರು ಬಂಗಾಲಿಯಲ್ಲೇ ಮಾತನಾಡಲು ಆರಂಭಿಸಿಬಿಡುತ್ತಾರೆ! ಕೃಷ್ಣಾನಂದ ಕಾಮತರ ಪ್ರಸಿದ್ಧ ಪುಸ್ತಕ ‘ವಂಗದರ್ಶನ’ದಲ್ಲಿ ಬೆಂಗಾಲಿಗಳ ವೈಶಿಷ್ಟ್ಯ-ವೈಚಿತ್ರ್ಯಗಳನ್ನು 57 ಅಂಶಗಳಾಗಿ ಪಟ್ಟಿ ಮಾಡಿದ್ದಾರೆ. ಆ ಪಟ್ಟಿಗೆ ಇವುಗಳನ್ನೂ ಸೇರಿಸಬಹುದು ಎನಿಸಿತು.

ಬೆಂಗಾಲಿಗಳು ಕೇವಲ ಪ್ರತಿಭಾಶಾಲಿಗಳಲ್ಲ. ಸೃಜಿಸುವ ಪ್ರತಿಭೆಯ ಜೊತೆಗೆ ತಮಗೆ ಬೇಕಾದ ದಾರಿ ಹುಡುಕುವ, ಛಲಬಿಡದೆ ಸಾಧಿಸುವ, ‘ರೈಟ್ ಕನೆಕ್ಷನ್ಸ್’ ಸಾಧಿಸುವ ಪ್ರತಿಭೆಯೂ, ಜಾಣತನವೂ ಅವರಲ್ಲಿದೆ. ಖ್ಯಾತ ನೃತ್ಯಗಾತಿ – ಚಿತ್ರಕಲಾವಿದೆ ಅಲೋಕಾನಂದ ರಾಯ್‍ ಅವರ ಪ್ರಯತ್ನವನ್ನೇ ನೋಡಿದರೆ ಇದು ಸುಸ್ಪಷ್ಟ. ಸೆರೆಯಲ್ಲಿರುವ ಬಂಧಿಗಳ ಕಲಾ ತಂಡ ಕಟ್ಟಿದ್ದಾರೆ ಅಲೋಕಾನಂದ. 2007ರಿಂದ ಕೋಲ್ಕತ್ತದ ಜೈಲು ನಂತರ ಜಗತ್ತಿನಾದ್ಯಂತ ಹಲವು ಸೆರೆಮನೆಯ ವಾಸಿಗಳಿಗೆ ನೃತ್ಯ-ಕಲರಿಪಯಟ್ಟುಗಳ ಮುಖಾಂತರ ಅಲೋಕಾನಂದ ರಾಯ್ ಕಲೆಯನ್ನು ‘ಬಂಧಿತ ಮನಸ್ಸು’ಗಳನ್ನು ಬಿಡುಗಡೆ ಮಾಡುತ್ತಿದ್ದಾರೆ.

ರವೀಂದ್ರನಾಥ ಟ್ಯಾಗೋರರ ‘ವಾಲ್ಮೀಕಿ ಪ್ರತಿಭಾ’ ಎಂಬ ನೃತ್ಯ ರೂಪಕವನ್ನು ಇವರ ಮುಖಾಂತರ ಮಾಡಿಸಿದ್ದಾರೆ. ದಸ್ಯು ರತ್ನಾಕರನೆಂಬ ಡಕಾಯಿತ ವಾಲ್ಮೀಕಿಯೆಂಬ ಮಹರ್ಷಿಯಾಗಿ ಬದಲಾವಣೆ ಹೊಂದಿದ ಕಥೆ ಅಪರಾಧಗಳನ್ನು ಮಾಡಿ ಬಂಧಿತವಾದ ಮನಸ್ಸುಗಳಿಗೆ ಪರಿವರ್ತನೆಯ ಮಾದರಿಯಾದೀತು ಎಂಬ ಅಲೋಕಾನಂದ ರಾಯರ ಪರಿಕಲ್ಪನೆ ಮನಮುಟ್ಟಿತು. ಅವರು ವಿವರಿಸಿದ ಕೆಲವು ಅನುಭವಗಳು ಕಲೆ ಹೇಗೆ ಮಾನವ ಸಂಬಂಧಗಳನ್ನು ಬೆಸೆಯಬಹುದು ಎಂಬುದಕ್ಕೆ ನಿದರ್ಶನಗಳಾದವು.
‘ಒಂದು ದಿನ ಶೀಟುಗಳ ಕೆಳಗೆ, ಕೋಲ್ಕತ್ತೆಯ ಬೇಗೆ ತಡೆಯುತ್ತಾ ಅಭ್ಯಾಸ ಮಾಡಿಸುತ್ತಿದ್ದೆ. ಸೆರೆಯಲ್ಲಿದ್ದ ಗಂಡುಮಕ್ಕಳಿಗೂ ಒತ್ತಾಯದಿಂದ ಹೆಣ್ಣು ಮಕ್ಕಳ ಸ್ವತ್ತು ಎಂದು ಸಮಾಜ ಭಾವಿಸಿರುವ ನೃತ್ಯ ಕಲಿಸುತ್ತಿದ್ದೆ. ಸಮರ ಕಲೆ ಕಲರಿಪಯಟ್ಟು ಅವರಿಗೆ ಸೂಕ್ತ ಎಂದು ಆರಿಸಿದ್ದೆ. ಒಬ್ಬ 20-22ರ ವಯಸ್ಸಿನ ಯುವಕ ತಲೆ ತಿರುಗಿ ಬಿದ್ದ. ಎಲ್ಲರಿಗೆ ಮಾಡುವಂತೆ ನೀರು ಕುಡಿಸಿ, ತಲೆಗೆ ತಣ್ಣೀರು ತಟ್ಟಿದ ಮೇಲೆ ಆತ ಚೇತರಿಸಿಕೊಂಡ. ದಿಟ್ಟಿಸಿ ನೋಡಿದ. 2-3 ದಿನಗಳ ನಂತರ ಮತ್ತೆ ತರಗತಿಗೆಂದು ಹೋದಾಗ ಆತ ಬಂದು ಒಂದು ‘ಥ್ಯಾಂಕ್‍ಯೂ’ ಎಂದು ಬರೆದ ಚೀಟಿ ಕೊಟ್ಟ.

‘ಹೆಣ್ಣುಮಕ್ಕಳು ಮಾತನಾಡುವಂತೆ, ಕೈ ಹಿಡಿದುಕೊಂಡಂತೆ, ಅಪ್ಪಿಕೊಳ್ಳುವಂತೆ, ಅಳುವಂತೆ ಮಾಡುವುದು, ಗಂಡು ಮಕ್ಕಳಿಗೆ ಸುಲಭವಲ್ಲ. ‘ಅವರು ಅಳಬಾರದು, ದುಃಖ ತೋರಿಸಬಾರದು’ ಎಂದು ಸಮಾಜ ವಿಧಿಸಿದೆ. ಆ ಹುಡುಗ ಕಣ್ಣೀರು ತಡೆಹಿಡಿದ. ನಾನೆಂದೆ ‘ಅರೆ ಏಕೆ, ನಾನೇನು ದೊಡ್ಡದು ಮಾಡಿದೆ? ಬೇರೆಯವರು ತಲೆತಿರುಗಿ ಬಿದ್ದರೆ ಯಾರೂ ಮಾಡಬಹುದಾದ ಕೆಲಸವಷ್ಟೆ!’ ಆತನೆಂದ: ‘ಸೆರೆಯಲ್ಲಿರುವ ನಮ್ಮನ್ನು ಯಾರೂ ಮುಟ್ಟುವುದಿಲ್ಲ. ಹೆದರುತ್ತಾರೆ. ನನ್ನಮ್ಮ ನನ್ನನ್ನು ಸ್ಪರ್ಶಿಸಿದ್ದು ಬಿಟ್ಟರೆ, ನನಗೀಗ ನೆನಪಿರುವುದು ನಿಮ್ಮ ಸ್ಪರ್ಶವೇ!’ ಇದೇ ಸ್ಫೂರ್ತಿಯಿಂದ ಇಂದು ಅಲೋಕಾನಂದ ರಾಯ್ ಸ್ಥಾಪಿಸಿರುವ ಸಂಸ್ಥೆಯ ಹೆಸರು ‘ಟಚ್ ವರ್ಲ್ಡ್‌’.

ನಾಟಕ ಸಿನಿಮಾ-ಚಿತ್ರಕಲೆಯ ಜಗತ್ತಿನ ಬೆಂಗಾಲಿ ಪ್ರತಿಭಾಶೀಲರು ತಮ್ಮ ಅನುಭವಗಳನ್ನು ಮನೋವೈದ್ಯಕೀಯ ನೆಲೆಯಿಂದ ವಿವರಿಸಿದರು. ನಾನು ವಿವರಿಸಿ ನರ್ತಿಸಿದ ಕನ್ನಡ ಕವಿತೆಗಳನ್ನು ಪಡೆದು, ಅದರ ಇಂಗ್ಲೀಷ್ ಅರ್ಥಕೇಳಿ, ಬಂಗಾಲಿಯಲ್ಲಿ ಅನುವಾದಿಸುತ್ತೇವೆ ಎಂದರು.

ಸಮ್ಮೇಳನ ಮುಗಿಸಿ ಬೇಲೂರು ಮಠಕ್ಕೆ ಹೋದಾಗ ಮತ್ತೆ ಬಂಗಾಲದ ಶಿಸ್ತು-ಅಚ್ಚುಕಟ್ಟುತನ ಜೊತೆಗೇ ನದಿಗೆ ಪೇಪರ್-ತಿಂಡಿ ಎಸೆಯುವ, ಎಲ್ಲೆಂದರಲ್ಲಿ ಉಳುಗುವ ಅಶಿಸ್ತು-ಕೊಳಕುತನ ನನ್ನ ಮುಂದಿತ್ತು. ಚಂದದ ಟೆರ‍್ರಾಕೋಟಾ, ಬಟ್ಟೆಯ ಕಲೆಗಾರಿಕೆಯ ಆಭರಣಗಳು, ಸುತ್ತಮುತ್ತಲ ಬಡತನ, ಜನಜಂಗುಳಿ, ಹೇರಳ ‘ಬ’ ‘ಓ’ ಕಾರಗಳ ಮಧ್ಯೆ ‘ಕಾಳಿಮಾತಾ’ ನಿರ್ಭಯೆಯಾಗಿ ನಿಂತಿದ್ದಳು. ಸೃಜನಶೀಲದ ಬಂಗಾಲದ ಪ್ರತಿಭೆಗೆ ‘ಕಾಳಿಮಾತಾ’ ಕಾರಣಳೋ ಅಥವಾ ಬೆಂಗಾಲಿಗಳ ಸೃಜನಶೀಲ ಚಿತ್ರ-ವಿಚಿತ್ರ ಪ್ರತಿಭೆಯೇ ದೊಡ್ಡ ಕಂಗಳ, ನಮ್ಮ ಮನಸ್ಸು ಹೊಕ್ಕಿ ನೋಡುವ ದುರ್ಗಾ ಮಾತಾಳನ್ನು ಸೃಷ್ಟಿಸಿದೆಯೋ ಅರ್ಥವಾಗದೆ ದಕ್ಷಿಣೇಶ್ವರದ ಕಾಳಿ ಮಂದಿರದ ಮುಂಚೆ, ಗಂಗಾನದಿಯ ದಡದಲ್ಲಿ ‘ಕಾಲೀ- ಬೆಂಗಾಲೀ -ಕ್ರಿಯೇಟಿವಿಟಿ’, ಎಂದು ಗುನುಗುತ್ತಾ ನಿಂತೇ ಇದ್ದೆ!

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು