ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರವಾಸ: ಲಕ್ಷದ್ವೀಪ ಒಂದು ಆಲಾಪ!

Last Updated 29 ಮೇ 2021, 19:30 IST
ಅಕ್ಷರ ಗಾತ್ರ

ಪತ್ರಿಕೆಗಳನ್ನು ತಿರುವಿ ಹಾಕಿದರೆ ಈಗ ನಿತ್ಯ ಲಕ್ಷದ್ವೀಪದ ಸುದ್ದಿ. ಈ ಕೇಂದ್ರಾಡಳಿತ ಪ್ರದೇಶದಲ್ಲಿ ರಾಜಕೀಯದ ತಳಮಳ. ಏನೇನೋ ಆಡಳಿತಾತ್ಮಕ ಬದಲಾವಣೆಗಳಿಗೆ ಅಲ್ಲೀಗ ಪ್ರತಿರೋಧದ ಗಾಳಿ ಬೀಸುತ್ತಿದೆ. ತನ್ನ ಸುತ್ತಲಿನ ಸ್ವಚ್ಛ ಸಾಗರದಷ್ಟೇ ಪ್ರಶಾಂತವಾಗಿದ್ದ ಈ ಮನಮೋಹಕವಾದ ದ್ವೀಪಕ್ಕೆ ಕೆಲವು ತಿಂಗಳ ಹಿಂದೆ ಪ್ರವಾಸಕ್ಕೆ ಹೋದಾಗ ಕಂಡು, ಕೇಳಿದ ನೋಟಗಳು ಎಷ್ಟೊಂದು ಸೊಗಸು!

ಕೋಟ್ಯಂತರ ವರ್ಷಗಳ ವಿಕಾಸ ಪಥದಲ್ಲಿ ನಾವು ವಾಸಿಸುತ್ತಿರುವ ಭೂಮಿಯು ಅನೇಕಾನೇಕ ವಿಸ್ಮಯಗಳಿಗೆ ಸಾಕ್ಷಿಯಾಗಿದೆ. ಅಂತಹ ವಿಸ್ಮಯಗಳಲ್ಲಿ ಕೇಂದ್ರಾಡಳಿತ ಪ್ರದೇಶವಾದ ಲಕ್ಷದ್ವೀಪವೂ ಒಂದು. ಸಾವಿರಾರು ದ್ವೀಪಗಳು ಸೇರಿ ಲಕ್ಷದ್ವೀಪವೆಂಬ ಹೆಸರು ಪಡೆದುಕೊಂಡಿರುವ ಇಲ್ಲಿಯ ಒಟ್ಟು ಮೂವತ್ತಾರು ಮಧ್ಯಮಗಾತ್ರದ ದ್ವೀಪಗಳಲ್ಲಿ ಹತ್ತು ದ್ವೀಪಗಳು ಮಾತ್ರ ಮಾನವ ವಾಸಕ್ಕೆ ಯೋಗ್ಯವಾಗಿವೆ. ಈ ಮೂವತ್ತಾರು ದ್ವೀಪಗಳ ಒಟ್ಟು ಸುತ್ತಳತೆ 36.69 ಚದರ ಕಿಲೊ ಮೀಟರ್‌ನಷ್ಟಿದ್ದು ಕೇರಳದ ದಕ್ಷಿಣ ಭಾಗದ ಅರಬ್ಬಿ ಸಮುದ್ರದ ತೀರದಿಂದ ಇನ್ನೂರರಿಂದ ನಾಲ್ಕುನೂರು ಕಿಲೊಮೀಟರ್ ದೂರದಲ್ಲಿ ಈ ದ್ವೀಪಗಳು ಚಾಚಿಕೊಂಡಿವೆ.

ಸಮುದ್ರದ ಒಳಗಿಂದ ಬೆಂಕಿಯುಂಡೆಯಂತೆ ಉಕ್ಕಿ ಹೊರಹೊಮ್ಮುವ ಲಾವಾರಸವೇ ದ್ವೀಪಗಳ ರಚನೆಗೆ ಮೂಲಕಾರಣವೆಂದು ವಿಜ್ಞಾನಿಗಳು ಗುರುತಿಸಿದ್ದಾರಾದರೂ ಇದರ ಜೊತೆಗೆ, ಇನ್ನೂ ಮೂರು ಕಾರಣಗಳನ್ನು ಅವರು ಕೊಡುತ್ತಾರೆ. ಅವುಗಳೆಂದರೆ ಉಪಖಂಡಗಳ ಘರ್ಷಣೆ, ಹಿಮನದಿಗಳ ಹಿಮ್ಮೆಟ್ಟುವಿಕೆ ಮತ್ತು ಮಣ್ಣಿನ ಮಡ್ಡಿಯ ಶೇಖರಣೆ. ಅಂದರೆ ಉದಾಹರಣೆಗಾಗಿ ಹೇಳಬೇಕೆಂದರೆ ನೀರು ತುಂಬಿದ ಒಂದು ಗಾಜಿನ ಅಥವಾ ಪ್ಲಾಸ್ಟಿಕ್ ಬಾಟಲಿಯನ್ನು ಅನೇಕ ದಿನ ಮುಟ್ಟದೆ ಹಾಗೆಯೇ ಇಟ್ಟರೆ ತಳದಲ್ಲಿ ಮಣ್ಣಿನ ಬಣ್ಣದ ಚಿಕ್ಕ ಪದರ ರಚನೆಯಾಗುವುದನ್ನು ನಾವೆಲ್ಲಾ ನೋಡಿಯೇ ಇರುತ್ತೇವೆ. ಇದನ್ನೇ ‘ಸೆಡಿಮೆಂಟ್ ಡಿಪಾಸಿಷನ್’ ಅನ್ನುತ್ತಾರೆ.

ಲಾವಾರಸ ಸ್ಫೋಟಗೊಂಡಾಗ ಅದು ನೀರಿನ ಮೇಲ್ಮೈಗೆ ತಂದೆರಚುವ ಕೆಸರೇ ದ್ವೀಪಗಳ ಉದಯಕ್ಕೆ ಮುಖ್ಯ ಕಾರಣವೆನ್ನುತ್ತಾರೆ ವಿಜ್ಞಾನಿಗಳು. ಆಳದಿಂದ ಸಮುದ್ರದ ಮೇಲ್ಮೈಗೆ ಚಿಮ್ಮುವ ಮೊದಲಿನ ಲಾವಾರಸಕ್ಕೆ ‘ಸೀ ಮೌಂಟ್’ ಅನ್ನುತ್ತಾರೆ. ಹಾಗೆ ರಚನೆಯಾದ ಮಣ್ಣಿನ ಪದರದ ಮೇಲೆ ಸತ್ತ ದೈತ್ಯ ಜಲಚರ ಪ್ರಾಣಿಗಳ ಅವಶೇಷಗಳು ಬಂದು ಸೇರಿಕೊಳ್ಳುತ್ತವೆ. ಅಲ್ಲಿ ನಿಧಾನಕ್ಕೆ ಹುಲ್ಲು ಬೆಳೆಯತೊಡಗುತ್ತದೆ. ನಂತರ ಮರಗಿಡ ಬೆಳೆಯುತ್ತವೆ. ಇಂತಹ ಒಂದು ವಿಸ್ಮಯ ಏರ್ಪಡಲು ಸಾವಿರಾರು ವರ್ಷಗಳೇ ತೆಗೆದುಕೊಳ್ಳುತ್ತವೆ. ಕೆಲವೊಮ್ಮೆ ಹೀಗೆ ರಚನೆಯಾದ ದ್ವೀಪಗಳು ಪ್ರಕೃತಿಯ ವೈರುಧ್ಯಗಳಿಂದ ಕಾಣೆಯಾದ ಉದಾಹರಣೆಗಳೂ ಇವೆ.

ಕ್ರಿಸ್ತಪೂರ್ವ 1500ರಷ್ಟು ಹಿಂದೆಯೇ ಲಕ್ಷದ್ವೀಪದಲ್ಲಿ ಮಾನವರು ವಾಸವಾಗಿದ್ದ ಬಗ್ಗೆ ಪುರಾವೆಗಳಿವೆ. ಅಂತೆಯೇ ಏಳನೇ ಶತಮಾನದಲ್ಲೇ ಮುಸ್ಲಿಂ ಮಿಷನರಿಗಳು ಈ ದ್ವೀಪದಲ್ಲಿದ್ದ ಸಾಕ್ಷ್ಯಗಳಿವೆ. ಕ್ರಿ.ಶ 1799ರವರೆಗೆ ಟಿಪ್ಪು ಸುಲ್ತಾನನ ಆಡಳಿತಕ್ಕೆ ಒಳಪಟ್ಟಿದ್ದ ಲಕ್ಷದ್ವೀಪ ನಂತರ ಬ್ರಿಟಿಷರ ಪಾಲಾಯಿತು. ಸ್ವಾತಂತ್ರ್ಯಾನಂತರ 1956ರಲ್ಲಿ ನಮ್ಮ ದೇಶದ ಕೇಂದ್ರಾಡಳಿತ ಪ್ರದೇಶವಾಗಿ ಗುರುತಿಸಲ್ಪಟ್ಟಿತು.

ಇಲ್ಲಿಯ ಜನರ ಧರ್ಮದ ಬಗ್ಗೆ ಅನೇಕ ಕಥೆಗಳಿದ್ದು, ಕೇರಳದ ಕೊಚ್ಚಿಯ ಕೊನೆಯ ರಾಜ ಚೆರಮಾನ್ ಪೆರುಮಾಳ್ ದ್ವೀಪಕ್ಕೆ ಬಂದಾಗ ಅರಬ್ ವ್ಯಾಪಾರಿಗಳ ಪ್ರಭಾವಕ್ಕೆ ಒಳಗಾಗಿ ಮತಾಂತರವಾಗಿದ್ದಾನೆ ಎಂಬುದು ಅವುಗಳಲ್ಲಿ ಒಂದು. ಇಲ್ಲಿಯ ಬಹುತೇಕ ಜನರನ್ನು ಬ್ರಿಟಿಷರು ತೆಂಗಿನಕಾಯಿ ಆಯಲು ಕೇರಳ ಮತ್ತು ಮಂಗಳೂರು ಕಡೆಯಿಂದ ಕರೆದುಕೊಂಡು ಹೋಗಿದ್ದರೆಂದು ಹೇಳಲಾಗುತ್ತದೆ. ಮೂಲದಲ್ಲಿ ಕರಾವಳಿ ತೀರದಿಂದ ಸಮುದ್ರದಲ್ಲಿ ತೇಲಿಕೊಂಡು ಹೋದ ತೆಂಗಿನ ಕಾಯಿಗಳಿಂದಲೇ ದ್ವೀಪಗಳಲ್ಲಿ ತೆಂಗಿನ ಮರ ಹುಟ್ಟಿಕೊಂಡವೆಂದೂ ಹೇಳಲಾಗುತ್ತದೆ.

ದ್ವೀಪವಾಸಿಗಳು ತುಂಬಾ ಸ್ನೇಹಜೀವಿಗಳಾಗಿದ್ದು, ಬಹುತೇಕರು ಮುಸ್ಲಿಂ ಜನಾಂಗಕ್ಕೆ ಸೇರಿದವರು. ನಮ್ಮ ದೇಶವನ್ನು ‘ಮೈನ್ ಲ್ಯಾಂಡ್’ ಎಂದು ಅಪಾರವಾಗಿ ಪ್ರೀತಿಸುವವರು. ಅಂತೆಯೇ ಅಲ್ಲಿಯ ಬಹಳಷ್ಟು ಯುವಕರು ನಮ್ಮ ಸೇನಾಪಡೆಗೆ ಸೇರಿಕೊಂಡಿದ್ದಾರೆ. ಆಶ್ಚರ್ಯವೆಂದರೆ ಇಲ್ಲಿ ಕಳ್ಳತನವೇ ಇಲ್ಲ. ಸಣ್ಣಪುಟ್ಟ ಜಗಳ ಮತ್ತು ಹೊಡೆದಾಟಗಳನ್ನು ಹೊರತುಪಡಿಸಿದರೆ ದ್ವೀಪಕ್ಕೆ ನ್ಯಾಯಾಂಗ ವ್ಯವಸ್ಥೆಯ ಅಗತ್ಯವೇ ಇಲ್ಲವೆನಿಸುತ್ತದೆ. ಹಾಗಾಗಿ ಲಕ್ಷದ್ವೀಪದ ರಾಜಧಾನಿ ಕವರಟಿಯಲ್ಲಿ ತಿಂಗಳಿಗೊಮ್ಮೆ ಮಾತ್ರ ಕೋರ್ಟಿನ ಕಲಾಪ ನಡೆಯುತ್ತದೆ. ಕೇರಳದಿಂದ ಹೈಕೋರ್ಟಿನ ನ್ಯಾಯಾಧೀಶರು ಹೆಲಿಕಾಪ್ಟರ್‌ನಲ್ಲಿ ಹೋಗಿ ಒಂದು ದಿನದ ಮಟ್ಟಿಗೆ ಕಲಾಪ ನಡೆಸಿ ಬರುತ್ತಾರೆ!

ಇಲ್ಲಿಯ ಮುಖ್ಯ ದ್ವೀಪಗಳೆಂದರೆ ಕವರಟಿ, ಕಲ್ಪೇನಿ, ಮಿನಿಕಾಯ್, ಅಗಟಿ, ಕಡಮಟ್ಟಿ, ತಿನ್ನಿಕಾರ್ ಮತ್ತು ಬಂಗಾರಂ. ಪ್ರಮುಖ ದ್ವೀಪವಾದ ‘ಕೊಡಮಾಟ್’ ಅನ್ನು ಹಿಂದೆ ‘ಲಖ್‍ದೀವ್ ಮಿನಿಕಾಯ್’ ದ್ವೀಪವೆಂದು ಕರೆಯುತ್ತಿದ್ದರು.

ಲಕ್ಷದ್ವೀಪವು ಪ್ರಕೃತಿಯ ಒಂದು ಸುಂದರ ಕೊಡುಗೆಯಾಗಿದ್ದು ನಿಸರ್ಗ ಪ್ರೇಮಿಗಳನ್ನು ಕೈಬೀಸಿ ಕರೆಯುತ್ತದೆ. ಅಲ್ಲಿ ಎಲ್ಲಿ ನೋಡಿದರೂ ತೆಂಗಿನಮರಗಳು ಮತ್ತು ಸುತ್ತಲೂ ತುಂಬಾ ಶುಭ್ರವಾದ ಬೀಚ್‍ಗಳನ್ನು ಕಾಣಬಹುದು. ದ್ವೀಪಗಳ ಅಂಚಿನಿಂದ ಒಂದೆರಡು ಕಿ.ಮೀ.ವರೆಗೆ ದೋಣಿಯಲ್ಲಿ ಸಂಚರಿಸಿ ನೋಡಿದರೂ ಇಪ್ಪತ್ತರಿಂದ ಮೂವತ್ತು ಅಡಿ ಆಳದವರೆಗೂ ಸಮುದ್ರದ ತಳ ಕಾಣುತ್ತದೆ. ನೀರು ತಿಳಿಯಾದ ನೀಲಿ ಬಣ್ಣದಿಂದ ಕೂಡಿರುತ್ತದೆ. ಗ್ಲಾಸ್ ಬಾಟಮ್ ದೋಣಿಗಳಲ್ಲಿ ಸಮುದ್ರದ ಮೇಲೆ ಬಹು
ದೂರ ಸಾಗಿ ತಿಳಿ ನೀರಿನ ಸಮುದ್ರದ ತಳದಲ್ಲಿರುವ ‘ಕೋರಲ್ ರೀಫ್’ಗಳನ್ನು ಕಾಣಬಹುದು.

ಇಲ್ಲಿಯ ಇನ್ನೊಂದು ವಿಶೇಷವೆಂದರೆ ಲಕ್ಷದ್ವೀಪಕ್ಕೆ ವಿದೇಶಿ ಪ್ರವಾಸಿಗರಿಗೆ ಪ್ರವೇಶಾವಕಾಶವಿಲ್ಲ! ನಾವು ಅಲ್ಲಿಗೆ ಪ್ರವಾಸ ಹೋಗಬೇಕೆಂದರೂ ಕೊಚ್ಚಿಯಲ್ಲಿರುವ ಪ್ರವಾಸ ಅಭಿವೃದ್ಧಿ ನಿಗಮದಿಂದ ಅಗತ್ಯವಾಗಿ ಅನುಮತಿ ಪಡೆಯಬೇಕಾಗುತ್ತದೆ. ಕೊಚ್ಚಿಯಿಂದ ವಿಮಾನದಲ್ಲಿ ಅಗಟಿ ದ್ವೀಪಕ್ಕೆ ಒಂದು ಗಂಟೆಯ ಪ್ರಯಾಣವಾದರೆ, ಹಡಗಿನಲ್ಲಿ ಕೊಚ್ಚಿಯಿಂದ 14ರಿಂದ 20 ಗಂಟೆಯವರೆಗೆ ಪಯಣಿಸಬೇಕಾಗುತ್ತದೆ. ಕೊಚ್ಚಿ ಮತ್ತು ಕಲ್ಲಿಕೋಟೆಯಿಂದ ಸಹ ಅನೇಕ ಹಡಗುಗಳು ಪ್ರವಾಸಿಗರನ್ನು ಕರೆದೊಯ್ಯುತ್ತವೆ. ರಾಜಧಾನಿ ಕವರಟಿಯಲ್ಲಿ ಕಾಣಲು ಸುಂದರ ಮಸೀದಿಗಳಿದ್ದು, ಆಭರಣಗಳಿಂದ ಅಲಂಕೃತವಾದ ಉಜ್ರಾ ಮಸೀದಿ ಪ್ರವಾಸಿಗರ ಕೇಂದ್ರ ಬಿಂದು. ಅಲ್ಲಿ ಸುಂದರವಾದ ಮೆರೀನ್ ಅಕ್ವೇರಿಯಂ ಸಹ ಇವೆ. ಇತರ ದ್ವೀಪಗಳಲ್ಲಿ ಸುಂದರವಾದ ವಾಚ್ ಟವರುಗಳು, ಸ್ಕೂಬಾ ಮತ್ತು ಅಂಡರ್ ವಾಟರ್ ಡೈವಿಂಗ್‍ಗಳು ಮತ್ತು ಕೋರಲ್ ರೀಫ್ ವೀಕ್ಷಣೆಯ ವಿಶೇಷ ದೋಣಿಗಳು ಪ್ರವಾಸಿಗರನ್ನು ಆಕರ್ಷಿಸುತ್ತವೆ. ಒಂದು ದ್ವೀಪದಿಂದ ಇನ್ನೊಂದು ದ್ವೀಪಕ್ಕೆ ಹಡಗಿನಲ್ಲೇ ಪ್ರಯಾಣಿಸಬೇಕಾಗುತ್ತದೆ.

ದ್ವೀಪಗಳ ಸುತ್ತಲೂ ಆಳವಾದ ನೀರಿಲ್ಲದ ಕಾರಣ ಬಂದರು ನಿರ್ಮಾಣಕ್ಕೆ ಅವಕಾಶವಿಲ್ಲದೆ ಹಡಗುಗಳನ್ನು ದೂರ ಸಮುದ್ರದ ಮಧ್ಯದಲ್ಲಿ ಲಂಗರು ಹಾಕಿ ನಿಲ್ಲಿಸಲಾಗುತ್ತದೆ. ಅಲ್ಲಿಂದ ಮೋಟರ್ ಬೋಟುಗಳಲ್ಲಿ ಆಳ ಸಮುದ್ರದ ಮೇಲೆ ದ್ವೀಪಕ್ಕೆ ಪ್ರಯಾಣಿಸುವುದೇ ಒಂದು ರೋಮಾಂಚಕ ಅನುಭವ. ಒಂದು ಬೆಂಕಿಪೊಟ್ಟಣದಿಂದ ಹಿಡಿದು ಪ್ರತಿಯೊಂದು ಆಹಾರ ಧಾನ್ಯದವರೆಗೆ ಎಲ್ಲಾ ವಸ್ತುಗಳನ್ನು ಕೊಚ್ಚಿಯಿಂದ ತರಿಸಿಕೊಂಡರೂ ತುಂಬಾ ಕಡಿಮೆ ಬೆಲೆಗೆ ದ್ವೀಪದಲ್ಲಿ ಹೊಟ್ಟೆ ತುಂಬಾ ಮೀನೂಟವನ್ನು ಒದಗಿಸುತ್ತಾರೆ. ನಮ್ಮ ಮಂಗಳೂರಿನಿಂದಲೂ ಹಣ್ಣು–ದಿನಸಿ ಸಾಮಗ್ರಿಗಳು ಹೋಗುತ್ತವೆ.

ಬೇರೆ ದ್ವೀಪಗಳಿಗೆ ಹೋಲಿಸಿದರೆ ಲಕ್ಷದ್ವೀಪ ನವನಾಗರೀಕತೆಯ ಹೊಡೆತಕ್ಕೆ ಸಿಗದೆ, ನೈಸರ್ಗಿಕ ಸೌಂದರ್ಯವನ್ನು ಜೋಪಾನವಾಗಿ ಕಾಪಾಡಿಕೊಂಡು ಬಂದಿರುವ ಮನಮೋಹಕ ತಾಣ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT