ಶುಕ್ರವಾರ, 4 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕಂಡಿರಾ ಮಲಿಯಾಬಾದ್ ಕಲ್ಲಾನೆಗಳನು! ರಾಯಚೂರು ಜಿಲ್ಲೆಯ ವಿಶಿಷ್ಠ ಸ್ಥಳ

Published : 14 ಸೆಪ್ಟೆಂಬರ್ 2024, 22:43 IST
Last Updated : 14 ಸೆಪ್ಟೆಂಬರ್ 2024, 22:43 IST
ಫಾಲೋ ಮಾಡಿ
Comments

ಕರ್ನಾಟಕದ ಕೃಷ್ಣಾ ಮತ್ತು ತುಂಗಾ ನದಿಗಳ ನಡುವಿನ ಅಂಗಳವಾದ ರಾಯಚೂರು ಐತಿಹಾಸಿಕ ತಾಣವಾಗಿದೆ. ಇಲ್ಲಿ ನಮಗೆ ಇತಿಹಾಸದ ಕುರುಹುಗಳು ಇಂದಿಗೂ ಕಾಣಸಿಗುತ್ತವೆ. ರಾಯಚೂರಿನಿಂದ ದಕ್ಷಿಣಕ್ಕೆ ಹತ್ತು ಕಿಲೊಮೀಟರ್‌ ಅಂತರದಲ್ಲಿರುವ ಪುರಾತನ ಗ್ರಾಮ ಮಲಿಯಬಾದ್ ಸಿಗುತ್ತದೆ. ಹಳೆಯ ಮಲಿಯಬಾದ್ ಮತ್ತು ಹೊಸ ಮಲಿಯಾಬಾದ್ ಎಂಬ ಎರಡು ಗ್ರಾಮಗಳಿದ್ದು, ಹಳೆಯ ಮಲಿಯಾಬಾದ್ ಇತಿಹಾಸ ಕುರಿತು ಆಸಕ್ತಿ ಹೊಂದಿರುವವರ ಗಮನ ಸೆಳೆಯುತ್ತದೆ.

ಈ ಮಲಿಯಾಬಾದ್ ಗ್ರಾಮವು ತನ್ನ ಒಡಲಲ್ಲಿ ಎರಡು ಸುತ್ತಿನಕೋಟೆಗಳನ್ನು, ಪುರಾತನ ದೇವಾಲಯಗಳನ್ನು, ವೀರಗಲ್ಲುಗಳನ್ನು, ಶಾಸನಗಳನ್ನು, ನಾಗಶಿಲ್ಪಗಳನ್ನು, ಭಗ್ನಗೊಂಡ ಇತರೆ ಶಿಲ್ಪಗಳನ್ನು, ಇನ್ನಿತರ ಅವಶೇಷಗಳನ್ನು ಅಲ್ಲದೆ ಸುತ್ತಲೂ ಬೆಟ್ಟ ಗುಡ್ಡ, ಅರಣ್ಯ, ವಿವಿಧ ಪ್ರಾಣಿ-ಪಕ್ಷಿಗಳನ್ನು, ಬೆಟ್ಟದ ರಾಮೇಶ್ವರ ದೇವಾಲಯ, ಗೋ ಶಾಲೆಯನ್ನು ಇಟ್ಟುಕೊಂಡಿದೆ.

ರಾಯಚೂರಿಗೂ ಆನೆಗಳಿಗೂ ನಂಟಿದೆ!

ರಾಯಚೂರು ನಗರದ ಹೃದಯ ಭಾಗವಾದ ತೀನ್ ಕಂದಿಲ್ ವೃತ್ತದಲ್ಲಿ ಐತಿಹಾಸಿಕವಾದ ಒಂದು ದೊಡ್ಡ ಆನೆಯ ಜೊತೆ ಎರಡು ಪುಟ್ಟದಾದ ಮರಿಯಾನೆಗಳ ಮೂರ್ತಿಗಳನ್ನು ಇಂದಿಗೂ ಕಾಣಬಹುದು. ರಾಯಚೂರು ನಗರಸಭೆಯು ತನ್ನ ಲಾಂಛನವಾಗಿ ಅಲಂಕೃತ ಆನೆಯ ಚಿತ್ರವನ್ನು ಹೊಂದಿದೆ. ಇತಿಹಾಸ ಪ್ರಸಿದ್ಧ ಮಲಿಯಾಬಾದ್‌ನಲ್ಲಿ ಕಲ್ಲಾನೆಗಳೂ ಇವೆ.

ಎಲ್ಲರ ಚಿತ್ತ ಸೆಳೆಯುವ ಮಲಿಯಾಬಾದ್‌ನ ಕಲ್ಲಾನೆಗಳ ವಿಶೇಷತೆ ಬಗ್ಗೆ ಹೇಳಬೇಕೆಂದರೆ ದಕ್ಷಿಣಾಭಿಮುಖವಾಗಿ ಕೆತ್ತಿರುವ ಮರಿಯಾನೆಗಳು ಏಕಶಿಲೆಯಲ್ಲಿ ಪ್ರತ್ಯೇಕವಾಗಿ ನಾಲ್ಕು ಅಡಿ ಎತ್ತರ ಹಾಗೂ ನಾಲ್ಕು ಅಡಿ ಅಗಲ ಹೊಂದಿದ್ದು ಈ ಕಲ್ಲಾನೆಗಳ ಕೊರಳಲ್ಲಿ ಸರ, ಗಂಟೆ, ಸರಪಳಿ, ಹೂವಿನಹಾರಗಳು, ಸೊಂಡಿಲಲ್ಲಿ ಹೂವು, ಕಾಲುಗಳಿಗೆ ಗೆಜ್ಜೆಗಳು ಕೊರೆಗಳಿಗೂ ಅಲಂಕಾರವನ್ನು ಕಾಣಬಹುದು. ಸೂಕ್ಷ್ಮ ಕೆತ್ತನೆಗಳು, ಕುಸರಿ ಕೆಲಸಗಳು ಆನೆಗಳ ಸೌಂದರ್ಯವನ್ನು ಇಮ್ಮಡಿಗೊಳಿಸಿವೆ. ಕಲ್ಲಾನೆಗಳು ನಯನ ಮನೋಹರವಾಗಿವೆ. ಬಟಾಬಯಲಿನಲ್ಲಿ ಬಿಸಿಲು, ಮಳೆ, ಗಾಳಿಗೆ ಸೆಡ್ಡು ಹೊಡೆದು ಹೊಲದಲ್ಲಿ ನಿಂತಿರುವ ಇವುಗಳು, ಒಂದು ಕಾಲನ್ನು ಮೇಲೆತ್ತುವ ಮೂಲಕ ನಡೆಯುಂತೆ ಕಾಣುತ್ತವೆ. ಆನೆಯ ಪಕ್ಕ ಯಾವುದೋ ಕಟ್ಟಡವಿದ್ದ ಭಗ್ನ ಅವಶೇಷಗಳನ್ನು ಕಾಣಬಹುದು. ಇತಿಹಾಸ ತಜ್ಞರ ಪ್ರಕಾರ ಇದು ವಿಷ್ಣು ದೇವಾಲಯವೆಂದು ಹೇಳಲಾಗುತ್ತದೆ. ದೇವಾಲಯದ ಮುಂದೆ ಮೆಟ್ಟಿಲುಗಳ ಎರಡು ಬದಿಗಳಲ್ಲಿ ಇಂತಹ ಕಲ್ಲಾನೆಗಳನ್ನು ಕೆತ್ತಿಸಿ ಸ್ಥಾಪಿಸಲಾಗುತ್ತಿತ್ತು ಎಂದು ಸಹ ಹೇಳಲಾಗುತ್ತದೆ.

ಕೆಲ ಪ್ರವಾಸಿಗರು ಕಲ್ಲಾನೆಗಳ ಮೇಲೆ ಏನೇನೋ ಕೆತ್ತುವುದರ ಮೂಲಕ ಐತಿಹಾಸಿಕ ಕುರುಹುಗಳ ಕಲಾತ್ಮಕತೆಗೆ ಧಕ್ಕೆ ಉಂಟು ಮಾಡುತ್ತಿದ್ದಾರೆ. ನಿಧಿಯಾಸೆಗೆ ಕೆಲ ಕಿಡಿಗೇಡಿಗಳು ಕಲ್ಲಾನೆಗಳನ್ನು ಭಗ್ನಗೊಳಿಸುತ್ತಿದ್ದಾರೆ. ಅತ್ಯಂತ ಭಾರವಾದ ಈ ಎರಡು ಕಲ್ಲಾನೆಗಳು ಬಾಗಿವೆ, ನೆಲಕ್ಕೆ ಒರಗುವ ಹಂತದಲ್ಲಿವೆ. ಇವುಗಳ ಸಂರಕ್ಷಣಾ ಕಾರ್ಯ ಕೂಡಲೇ ನಡೆಯಬೇಕಾಗಿದೆ. ಐತಿಹಾಸಿಕ ಕ್ಷೇತ್ರವಾದ ಮಲಿಯಾಬಾದ್‌ನಲ್ಲಿ ಮತ್ತಷ್ಟು ಸಂಶೋಧನೆ ನಡೆಯಬೇಕು. ಇಲ್ಲಿನ ನಿಖರ, ಸಮಗ್ರ ಇತಿಹಾಸ ಬೆಳಕಿಗೆ ಬರಬೇಕು. ಕಲ್ಲಾನೆಗಳನ್ನು ಮುಂದಿನ ಪೀಳಿಗೆಗಾಗಿ ಉಳಿಸಿಕೊಳ್ಳಬೇಕು.

ಕಲ್ಲಾನೆಗಳು
ಕಲ್ಲಾನೆಗಳು

ಇತಿಹಾಸ ಹೇಳುವ ಶಾಸನಗಳು

ಒಂಬತ್ತನೇ ಶತಮಾನದಿಂದ ಆರಂಭವಾಗುವ ಇಲ್ಲಿನ ಇತಿಹಾಸ ಕುರಿತು ಹೇಳುವ ಎರಡು ಶಾಸನಗಳಿವೆ. ಅಲ್ಲದೆ ಕೋಟೆಯ ಬೃಹದಾಕಾರದ ಕಲ್ಲುಗಳ ಮೇಲೆ ರೇಖಾಚಿತ್ರಗಳನ್ನು ಮತ್ತು ಉಬ್ಬುಶಿಲ್ಪಗಳನ್ನು ಕಾಣಬಹುದು. ಇವು ಚರಿತ್ರೆಗೆ ಪೂರಕವಾಗಿ ಮಾಹಿತಿ ಒದಗಿಸುತ್ತವೆ. ಹದಿಮೂರನೇ ಶತಮಾನದಲ್ಲಿ ರಾಯಚೂರು ಕೋಟೆಯನ್ನು ಕಾಕತೀಯ ರಾಣಿ ರುದ್ರಮ್ಮ ದೇವಿಯ ಕಾಲದಲ್ಲಿ ನಿರ್ಮಿಸಲಾಯಿತು. ಹದಿನಾರನೇ ಶತಮಾನದಲ್ಲಿ ಮೊದಲು ಮುಸ್ಲಿಂ ರಾಜರ ವಶದಲ್ಲಿದ್ದು 1520ರಲ್ಲಿ ಶ್ರೀಕೃಷ್ಣ ದೇವರಾಯ ರಾಯಚೂರು ಕೋಟೆಯನ್ನು ಗೆದ್ದುಕೊಂಡ ನಂತರ ಇದು ವಿಜಯನಗರ ಆಡಳಿತಕ್ಕೆ ಒಳಪಟ್ಟಿತು. 13 ಮತ್ತು 14ನೇ ಶತಮಾನದಲ್ಲಿ ಕಾಕತೀಯರು ಹೊರ ಕೋಟೆ ಮತ್ತು ಹೊರ ಕೋಟೆಯ ನಿರ್ಮಾಣ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT