ಗುರುವಾರ , ಅಕ್ಟೋಬರ್ 21, 2021
29 °C

ಪ್ರವಾಸ: ಮ್ಯಾಂಗ್ರೋವ್ ಮತ್ತು ಮುಸ್ಸಂಜೆ

ಆದರ್ಶ ಬಿ.ಎಸ್‌. Updated:

ಅಕ್ಷರ ಗಾತ್ರ : | |

ಹೊನ್ನಾವರ ಪೇಟೆಯಿಂದ ಮೂರ್ನಾಲ್ಕು ಕಿಲೊ ಮೀಟರ್ ಸಾಗಿ, ಅಲ್ಲಿ ಮರದ ಹಲಗೆಗಳಿಂದ ಮಾಡಿದ ಸೇತುವೆಯಲ್ಲಿ ಹಕ್ಕಿಗಳ ಇಂಚರ ಕೇಳುತ್ತಾ, ಚಿಟ್ಟೆಗಳ ಕಲರವ ನೋಡುತ್ತಾ ಸಾಗಿದರೆ ಕಣ್ಮುಂದೆ ಹೊಸ ಲೋಕವೇ ತೆರೆದುಕೊಳ್ಳುತ್ತದೆ. ಕಾಂಡ್ಲಾ ವನದಿಂದಲೇ ನಿರ್ಮಾಣವಾದ ದ್ವೀಪದೊಳಗೆ ಸಾಗುತ್ತದೆ ನಡಿಗೆ....

**

ಇನ್‌ಸ್ಟಾಗ್ರಾಂನಲ್ಲಿ ಇತ್ತೀಚೆಗೆ ಹೊನ್ನಾವರ ಹೆಚ್ಚು ಸುದ್ದಿಯಲ್ಲಿತ್ತು. ಏನಕ್ಕೆ ಎಂದು ಕೆದಕಿ ನೋಡಿದಾಗ ‘ಕಾಂಡ್ಲಾ ವಾಕ್’ ಬಗ್ಗೆ ಕುತೂಹಲ ಮೂಡಿತು. ಹೊನ್ನಾವರದಲ್ಲೇ ಮಾವನ ಮನೆಯಿರುವಾಗ, ಈ ತಾಣಕ್ಕೆ ಹೋಗದೆ ಇರಲಾದೀತೇ? ಹೀಗೆಂದು ನಿರ್ಧರಿಸಿ ಒಂದು ಸಂಜೆಗೆ ಆಟೊ ಹತ್ತಿ ಹೊರಟಿದ್ದಾಯ್ತು.

ಹೊನ್ನಾವರ ಪೇಟೆಯಿಂದ ಮೂರ್ನಾಲ್ಕು ಕಿಲೊ ಮೀಟರ್ ಸಾಗಿದರೆ, ಎಡಕ್ಕೆ ಕಾಂಡ್ಲಾ ವಾಕ್‌ಗೆ ದಾರಿ ಕಾಣಸಿಗುತ್ತದೆ. ಆ ದಿನ ಭಾನುವಾರವಾದ್ದರಿಂದ ಜನಸಂದಣಿ ತುಸು ಹೆಚ್ಚೇ ಇದ್ದಂತೆ ಕಾಣುತ್ತಿತ್ತು. ಮನೆಗೆ ಹತ್ತಿರದ ಸ್ಥಳವಾದ್ದರಿಂದ ಹೆಚ್ಚೇನೂ ತೊಂದರೆ ಇರಲಿಲ್ಲ. ತುಸು ದೂರ ಸಾಗುತ್ತಿದ್ದಂತೆಯೇ ‘ಶರಾವತಿ ಕಾಂಡ್ಲಾ ವನ - ಮ್ಯಾಂಗ್ರೋವ್’ ಎಂಬ ದೊಡ್ಡದಾದ ಫಲಕ ಕಂಡಿತು. ಆ ಬೋರ್ಡಿನ ಬಳಿಯಂತೂ ಜನ ಕಿಕ್ಕಿರಿದು ಫೋಟೊ ತೆಗೆದುಕೊಳ್ಳುತ್ತಿದ್ದರು. ಇದೇ ಸರಿಯಾದ ಸಂದರ್ಭ ಎಂದು ನಾವು ಕಾಂಡ್ಲಾ ವಾಕ್ ಕಡೆಗೆ ಸಾಗಿದೆವು.

ಮರದ ಹಲಗೆಗಳಿಂದ ಮಾಡಿದ ಬಣ್ಣದ ಹಾದಿ ನಿಸರ್ಗದ ನೋಟಕ್ಕೆ ಹೇಳಿ ಮಾಡಿಸಿದಂತಿದೆ. ದಾರಿಯುದ್ದಕ್ಕೂ ಕಾಣುವ ಮಾಹಿತಿ ಫಲಕಗಳು ಮ್ಯಾಂಗ್ರೋವ್ ಕಾಡುಗಳ ಬಗ್ಗೆ ಸಾಕಷ್ಟು ಜ್ಞಾನ ನೀಡುತ್ತವೆ. ಓದುತ್ತ ಸಾಗಿದರೆ ಅಲ್ಲಲ್ಲಿ ಹಕ್ಕಿಗಳ ಇಂಚರ ಕೇಳಿಸುತ್ತದೆ. ಕಣ್ಣ ಮುಂದೆಯೇ ಒಂದಷ್ಟು ಚಿಟ್ಟೆಗಳು ಹಾರಿ ಹೋಗುತ್ತವೆ. ಇಕ್ಕೆಲಗಳಲ್ಲಿ ಹಬ್ಬಿದ ಮ್ಯಾಂಗ್ರೋವ್ ಕಾಡುಗಳನ್ನು ನೋಡುವುದೇ ಅಚ್ಚರಿಯ ಸಂಗತಿ. ಸ್ಥಳೀಯ ಆಡಳಿತ ಸ್ವಚ್ಛತೆಯ ಬಗ್ಗೆ ಕಾಳಜಿ ವಹಿಸಿದ್ದು, ಪ್ರವಾಸಿಗರಿಗೆ ಸ್ವಚ್ಛತೆಯನ್ನು ಕಾಯ್ದುಕೊಳ್ಳುವಂತೆ ಪ್ರೇರೇಪಿಸುತ್ತದೆ. ತುಸು ದೂರ ಸಾಗಿದ ಮೇಲೆ ಮರದ ಹಾದಿ ಮುಗಿದು ಮಣ್ಣಿನ ಹಾದಿ ಆರಂಭವಾಗುತ್ತದೆ.


-ಮರದ ಸೇತುವೆಯ ನಡಿಗೆಯಲ್ಲಿ ಕಾಂಡ್ಲಾ ವನ ಕಂಡಿದ್ದು ಹೀಗೆ

ಅತ್ತಿತ್ತ ಕಣ್ಣು ಹಾಯಿಸಿದರೆ ಒಂದು ಪುಟ್ಟ ಮ್ಯಾಂಗ್ರೋವಿನ ದ್ವೀಪ ಕಾಣಸಿಗುತ್ತದೆ. ಒಂದಷ್ಟು ದೋಣಿಗಳು, ನೀರು ಮತ್ತು ಈಜುತ್ತಿರುವ ಬೆಳ್ಳಕ್ಕಿಗಳು- ಒಂದು ಸುಂದರ ನೋಟ ಸೃಷ್ಟಿಯಾಗುತ್ತದೆ. ಹೀಗೆಯೇ ಮುಂದೆ ಸಾಗಿದರೆ ಒಂದು ಪುಟ್ಟ ಸೇತುವೆ. ಸೇತುವೆಯನ್ನು ದಾಟುತ್ತಿದ್ದಂತೆಯೇ ಪುಟ್ಟ ದ್ವೀಪ ಮತ್ತಷ್ಟು ತೆರೆದುಕೊಳ್ಳುತ್ತದೆ. ಇದು ಅಂತಿಂಥ ದ್ವೀಪವಲ್ಲ. ಮ್ಯಾಂಗ್ರೋವ್ ನಿರ್ಮಿಸಿದ ದ್ವೀಪ. ದ್ವೀಪವನ್ನು ಸುತ್ತುವ ಹಾದಿ ಕಡಿದಾಗಿದ್ದು, ತುಸು ಎಚ್ಚರದಿಂದ ಸಾಗದಿದ್ದರೆ ಅಪಾಯ ಸಂಭವಿಸುವ ಸಾಧ್ಯತೆಯೂ ಇದೆ. ದ್ವೀಪವನ್ನೊಮ್ಮೆ ಸುತ್ತಿ ಬಂದಮೇಲೆ ವಿಶ್ರಾಂತಿಗೆಂದು ಗೃಹವೊಂದನ್ನು ನಿರ್ಮಿಸಲಾಗಿದೆ. 

ನಿಸರ್ಗದೆಡೆಗೆ ಕುತೂಹಲ ಹೊಂದಿದವರಿಗೆ ಹಾಗೂ ಸುಂದರ ಸಂಜೆಯನ್ನು ಪರಿಸರದೊಂದಿಗೆ ಕಳೆಯಲು ಇಚ್ಛಿಸುವವರಿಗೆ ಇದೊಂದು ಹೇಳಿ ಮಾಡಿಸಿದ ತಾಣವಾಗಿದೆ. ಇಲ್ಲಿಂದ 10 ನಿಮಿಷದ ನಡಿಗೆಯಲ್ಲಿ ಕಾಸರಕೋಡು ಬೀಚ್ ತಲುಪಬಹುದು. ಹಸಿರ ಹಂದರದ ಕಥೆಯನ್ನು ಕಡಲ ಅಲೆಗಳಿಗೆ ಬಣ್ಣಿಸಿ ಹೇಳಬಹುದು. ಸಂಜೆ ಸೂರ್ಯನೂ ಕಥೆ ಕೇಳುತ್ತಲೇ ಮರೆಯಾಗಬಹುದು.


-ನಿಸರ್ಗದ ಕನ್ನಡಿಯಲ್ಲಿ ಕಾಂಡ್ಲಾ ವನ

ಮ್ಯಾಂಗ್ರೋವ್ ಎಂದರೇನು?
ಕಡಲ ತೀರದ ಕಠಿಣ ಸ್ಥಿತಿಗಳಲ್ಲಿಯೂ ಬದುಕಬಲ್ಲ, ಲವಣದ ಅಂಶ ಹೆಚ್ಚಿದ್ದರೂ ಸಹಿಸಿಕೊಳ್ಳಬಲ್ಲ, ಒತ್ತಟ್ಟಾಗಿ ದಟ್ಟವಾಗಿ ಬೆಳೆಯುವ ವಿಶೇಷ ರೀತಿಯ ಕಾಡುಗಳಿಗೆ ಮ್ಯಾಂಗ್ರೋವ್ ಎಂದು ಕರೆಯುತ್ತಾರೆ. 2.50 ಕೋಟಿ ವರ್ಷಗಳ ಹಿಂದೆ ಮ್ಯಾಂಗ್ರೋವ್ ಕಾಡುಗಳ ಮೊದಲ ಪಳೆಯುಳಿಕೆ ಸಿಕ್ಕಿತ್ತು ಎಂದು ದಾಖಲಿಸಲಾಗಿದೆ. ಈ ಮರಗಳು ಸಂಕೀರ್ಣ ಬೇರುಗಳನ್ನು ಹೊಂದಿದ್ದು, ಹೆಚ್ಚಿನ ತೇವಾಂಶದಲ್ಲೂ, ಲವಣದ ಅಂಶವಿರುವ ಮಣ್ಣಿನಲ್ಲೂ ಬದುಕಬಲ್ಲವು. ಮ್ಯಾಂಗ್ರೋವ್ ಕಾಡುಗಳು ಶಾಶ್ವತವಾಗಿ ನೀರಿನಲ್ಲಿ ಮುಳುಗಿರುವುದರಿಂದ, ಅವುಗಳ ಆವಾಸಸ್ಥಾನದಲ್ಲಿ ಆಮ್ಲಜನಕದ ಅಂಶ ಕಡಿಮೆಯಿರುತ್ತದೆ. ಹಾಗಾಗಿ ಹೊರಚಾಚಿದ ಬೇರುಗಳಿಂದಲೇ ಬದುಕಲು ಬೇಕಾಗುವ ಅನಿಲಗಳನ್ನು ಅವು ಹೀರಿಕೊಳ್ಳುತ್ತವೆ. ಆ ಅನಿಲಗಳನ್ನು ಬೇರುಗಳಲ್ಲೇ ಹಿಡಿದಿಟ್ಟುಕೊಳ್ಳುವ ಈ ಮರಗಳು, ಪ್ರವಾಹದ ಸಮಯದಲ್ಲಿ ಮತ್ತೆ ಬಳಸಿಕೊಳ್ಳುತ್ತವೆ. ಎಂಥದ್ದೇ ಸಂಕೀರ್ಣ ಪರಿಸರದಲ್ಲೂ ಬದುಕಲು ಕಲಿಯಬಲ್ಲ ನಿಸರ್ಗದ ಅಚ್ಚರಿಗಳಿಗೆ ಸಾಟಿಯೇನು?

ಒಂದಷ್ಟು ಮಾಹಿತಿ
ಕಾಂಡ್ಲಾ ವಾಕ್ ಹೊನ್ನಾವರ ಪೇಟೆಯಿಂದ 3–4 ಕಿಲೊ ಮೀಟರ್ ದೂರದಲ್ಲಿದೆ. ಸ್ವಂತ ವಾಹನ, ಆಟೊ ಅಥವಾ ಬಸ್ಸಿನ ಮೂಲಕ ಸುಲಭವಾಗಿ ಇಲ್ಲಿಗೆ ತಲುಪಬಹುದು. ಪಾರ್ಕಿಂಗ್ ವ್ಯವಸ್ಥೆ ಸುಸಜ್ಜಿತವಾಗಿದೆ. ಪ್ರವೇಶಿಸುವ ಮುನ್ನ ಹಸಿವು ನೀಗಿಸಲು ಪುಟ್ಟ ಕ್ಯಾಂಟೀನ್ ಒಂದನ್ನು ತೆರೆಯಲಾಗಿದೆ. ಪ್ರವೇಶ ದರ ಒಬ್ಬ ವ್ಯಕ್ತಿಗೆ ಹತ್ತು ರೂಪಾಯಿ. ಕ್ಯಾಮೆರಾ ಬಳಸಲು ನಿರ್ಬಂಧಗಳಿಲ್ಲ. ಉತ್ತರ ಕನ್ನಡ ಜಿಲ್ಲೆಗೆ ಪ್ರವಾಸಕ್ಕೆಂದು ಬರುವವರಿಗೆ ಕಾಂಡ್ಲಾ ವನ ಒಂದು ಸುಂದರ ಸಂಜೆಯನ್ನು ಕಟ್ಟಿಕೊಡಬಲ್ಲದು ಎಂಬುದರಲ್ಲಿ ಅತಿಶಯೋಕ್ತಿಯಿಲ್ಲ. 


-ನಡೆದು ನಡೆದೂ ಸುಸ್ತಾದಾಗ ವಿಶ್ರಾಂತಿ ಪಡೆಯಲು ಹೀಗೊಂದು ಕುಟೀರ...

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು