ಬುಧವಾರ, 22 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರವಾಸ: ನಂದಾದೇವಿ ರಾಷ್ಟ್ರೀಯ ಉದ್ಯಾನದ ಹೂಕಣಿವೆಯ ಚಂದುಳ್ಳಿ ಚೆಲುವೆಯರು!

ರಹಮತ್ ತರಿಕೇರಿ ಅವರ ಲೇಖನ
Published 13 ಏಪ್ರಿಲ್ 2024, 21:04 IST
Last Updated 13 ಏಪ್ರಿಲ್ 2024, 21:04 IST
ಅಕ್ಷರ ಗಾತ್ರ

‘ಗಿರಿಜಾ ಕಲ್ಯಾಣ’ ಹುಟ್ಟಿದ ಹಂಪಿ ಸೀಮೆಯಿಂದ, ಶಿವನನ್ನು ವರಿಸಲು ಪಾರ್ವತಿಯೇ ಬೆಳೆಸಿದ ಹೂದೋಟದಂತಿರುವ ಪುಷ್ಪಕಣಿವೆಗೆ ಹೋಗಬೇಕೆಂದು ಬಹಳ ಕಾಲದಿಂದ ತಪಿಸುತ್ತಿದ್ದೆ. ಅನೇಕ ಸಲ ಹಿಮಾಲಯದ ಚಾರಣಕ್ಕೆ ಹೋದರೂ ಅದೆಂತೊ ಇದು ತಪ್ಪಿಸಿಕೊಳ್ಳುತಿತ್ತು. ನಂದಾದೇವಿ ರಾಷ್ಟ್ರೀಯ ಉದ್ಯಾನದಲ್ಲಿರುವ ಈ ಕಣಿವೆಯ ದರ್ಶನವಿಲ್ಲದೆ ಹಿಮಾಲಯ ಚಾರಣ-ಯಾತ್ರೆ ಅಪೂರ್ಣ. 12 ವರ್ಷಗಳಿಗೊಮ್ಮೆ ಪಶ್ಚಿಮಘಟ್ಟದಲ್ಲಿ ಮೈದೋರುವ ನೀಲಕುರಿಂಜಿ ತಾನೊಂದೇ ಮೆರೆಯುತ್ತದೆ. ಆದರೆ ಪುಷ್ಪಕಣಿವೆಯಲ್ಲಿ ಅರಳುವುದು 600ಕ್ಕೂ ಹೆಚ್ಚು ಪ್ರಭೇದದ ಹೂವು. ಆಗಸ್ಟ್ ಮೊದಲ ವಾರದಲ್ಲಿ ಬಹುಪಾಲು ಹೂ ಅರಳುತ್ತದೆ. ತುಸು ಮುಂಚೆ ಹೋದರೆ ಇನ್ನೂ ಮೊಗ್ಗು; ಕೊಂಚ ತಳುವಿದರೆ ಹೂವುದುರಿದ ಗಿಡಗಳ ಕಂಕಾಲ ದರ್ಶನ.

ವರ್ಷದಲ್ಲಿ ಹದಿನೈದು ದಿನ ವರ್ಣರಂಜಿತ ಸ್ವರ್ಗವನ್ನು ಸೃಷ್ಟಿಸುವ ಈ ಕೋಮಲ ಹೂಗಳಿರುವುದು ಅತ್ಯಂತ ಕಠಿಣ ಹವಾಮಾನದ ಪರ್ವತಗಳ ಮೇಲೆ. 12,000 ಅಡಿ ಎತ್ತರದಲ್ಲಿ. ಅಲ್ಲಿಗೆ ಮುಟ್ಟುವುದೂ ಸರಳವಲ್ಲ. ಬದರಿ ಹಾದಿಯಲ್ಲಿರುವ ಗೋವಿಂದಘಾಟಿನಲ್ಲಿ ಇಳಿದು, 14 ಕಿ.ಮೀ ಗಂಗಾರಿಯಾದ ಬೇಸ್‌ಕ್ಯಾಂಪಿಗೆ ನಡೆಯಬೇಕು. ಅಲ್ಲಿಂದ ಮತ್ತೆ 4 ಕಿ.ಮೀ ಕಠಿಣ ನಡಿಗೆ. ಆದರೆ ಈ ಕಠಿಣಹಾದಿ ಭೋರ್ಗರೆವ ನದಿ ಮತ್ತು ಜಲಪಾತಗಳ ನಡುವೆ, ತೊಗಟೆ ಸುಲಿದುಕೊಂಡು ನಿಂತ ಭೂರ್ಜ್ವವೃಕ್ಷದ ಕಾಡಿನೊಳಗೆ ಹಾಯುತ್ತದೆ. ಒಂದು ಬಗೆಯ ಆಹ್ಲಾದಕರ ಕಷ್ಟದ ಚಾರಣ. ಹಾದಿಯುದ್ದಕ್ಕೂ ಹೂಗಿಡ ಗಾಳಿಗೆ ತಲೆಯಲುಗಿಸಿ ಸ್ವಾಗತಿಸುತ್ತವೆ. ನಾನು ಅವುಗಳಲ್ಲಿ ತಲ್ಲೀನನಾದಾಗೆಲ್ಲ ‘ಕಣಿವೆಯಲ್ಲಿ ಅಪಾರ ಹೂಗಳಿವೆ. ಮಧ್ಯಾಹ್ನದೊಳಗೆ ಹೂವಿನ ಕಣಿವೆಯನ್ನು ತೊರೆಯಬೇಕು. ಹಿಮಪಾತ ಇಲ್ಲವೆ ಮಳೆಗೆ ಸಿಗಬಹುದು’ ಎಂದು ಗೈಡು ಅವಸರಿಸುತ್ತಿದ್ದನು.

ಹಿಮಾಲಯದ ಎಲ್ಲ ಚಾರಣಗಳಲ್ಲೂ ಹೂವು ಕಾಣಿಸುತ್ತವೆ. ಯಾರೊ ಮರೆತು ಹೂಗುಚ್ಛ ಬಿಟ್ಟುಹೋದಂತಿದ್ದ ಅವುಗಳ ಪಟಗಳನ್ನು ಹಿಂದೆ ತೆಗೆದಿದ್ದೆ. ಅದರಲ್ಲೂ ಅಡವಿಗೆ ಬೆಂಕಿಬಿದ್ದಂತೆ ಅರಳುವ ಕೆಂಪು ಬುರಾಂಶ್, ನಮ್ಮ ಮುತ್ತುಗವನ್ನು ನೆನಪಿಸುತ್ತದೆ. ಆದರೆ ಹೂಗಣಿವೆಯ ಪರಿಯೇ ಬೇರೆ. ಇಲ್ಲಿ ಹಿಮಾಲಯ ಸೀಮೆಯ ಸಮಸ್ತ ಹೂಗಳು ಮಾತಾಡಿಕೊಂಡು ಪರಿಸೆ ಸೇರುತ್ತವೆ. ಸುತ್ತ ಗೋಡೆಗಟ್ಟಿದಂತೆ ಪರ್ವತಗಳು. ನಡುವೆ ತೊಟ್ಟಲಂತಿರುವ ಪಚ್ಚೆಯ ಹಾಸಿಗೆಯಂತಿರುವ ಹುಲ್ಲುಗಾವಲು. ಅದರೊಳಗೆ ಲಕ್ಷಲಕ್ಷ ಹೂಗಳ ದರಬಾರು.

ಹಾದಿಯಲ್ಲಿ ಅಡ್ಡಸಿಗುವ ಪರ್ವತವೊಂದನ್ನು ಹತ್ತಿ ಇಳುಕಲನ್ನು ಇಳಿಯುತ್ತಿದ್ದಂತೆ ಚಕ್ಕನೆ ವಿಶಾಲ ಹೂಗಣಿವೆ ಮೈದೋರುತ್ತದೆ. ಆಗಸದಿಂದ ಹಸಿರುಹುಲ್ಲಿನ ಮೇಲೆ ಸುರಿದ ಕೆಂಪು ಹಳದಿ ನೀಲಿ ಬಿಳಿ ಅರಿಸಿಣ ರಕ್ತದ ಹನಿಗಳೇ ಅರಳಿದಂತೆ. ಇವನ್ನು ‘ವಜ್ರಮುಖವ ಚಾಚಿ ಮುತ್ತುವ’ ಸುತ್ತುವ ಸಹಸ್ರಾರು ಜೇನ್ನೊಣಗಳು. (ಹಾದಿಯಲ್ಲಿ ಪರ್ವತಗಳ ಕಲ್ಲುಛಾವಣಿಗಳಲ್ಲಿ ಕಂಡ ದೊಡ್ಡದೊಡ್ಡ ಜೇನುಹುಟ್ಟುಗಳು ಇವುಗಳ ಕಾಮಗಾರಿಯ ಫಲಗಳು). ಪರ್ವತ ಹುಲ್ಲು ಹೂವು ದುಂಬಿ ಹೊಳೆ ಹಿಮಪಾತ ಚಳಿ ಬಿಸಿಲು ಮಳೆಗಳ ಪರಸ್ಪರ ನಂಟಿನ ಬಹುತ್ವ.

ಹೂಗಣಿವೆಯಲ್ಲಿ ಹಿಮಾಲಯದ ವಿಶಿಷ್ಟ ಹೂವಾದ ಬ್ರಹ್ಮಕಮಲವಿಲ್ಲ. ಅದಕ್ಕಾಗಿ ಸನಿಹದಲ್ಲಿರುವ 15,000 ಅಡಿ ಎತ್ತರವಿರುವ ಹೇಮಕುಂಡ ಸಾಹೇಬ್ ಗುರುದ್ವಾರಕ್ಕೆ ಹೋಗಬೇಕು. ಶಿಖರಗಳ ತುಂಬ ಹೊಂಗಳಸ ಊರಿದಂತೆ ತಿಳಿಹಳದಿ ಕಮಲ. ಇನ್ನೂ ಪಕಳೆರೆಕ್ಕೆ ಬಿಚ್ಚುತ್ತಿರುವ ದೊಡ್ಡ ಕೋಸುಗಡ್ಡೆ; ಬಾಕುಗಳಂತೆ ಸೆಟೆದ ಗರಗಸದ ಮುಳ್ಳಿನ ಹಸಿರೆಲೆಗಳ ನಡುವೆ ಇಟ್ಟ ಆಕಾಶಬುಟ್ಟಿ. ನಿಂತು ಆಸ್ವಾದಿಸಬೇಕೆಂದರೆ ಮನುಷ್ಯ ಮಾತ್ರರಾದವರು ಸಹಿಸಲಾಗದ ಭೀಕರ ಚಳಿ. ಸದಾ ಮಂಜು. ಸಂಜೆ ಹಿಮಪಾತ. ತಾಪಮಾನ ಶೂನ್ಯಕ್ಕೆ ಇಳಿಯುತ್ತದೆ. ಅಲ್ಲೂ ಮಧ್ಯಾಹ್ನದ ಹೊತ್ತಿಗೆ ಚಾರಣಿಗರು ಯಾತ್ರಿಗರು ಪರ್ವತವಿಳಿದು ಕೆಳಗೆ ಹೋಗಲೇಬೇಕು.

ಹೇಮಕುಂಡದಲ್ಲಿ ಆಸುಪಾಸಿನ ಹಿಮಗಲ್ಲುಗಳು ಜಿನುಗಿ ಜಲಪಾತಗಳಾಗಿ ಧುಮುಕಿ ನಿರ್ಮಾಣವಾದ ಬೆಳ್ಳಿಯ ಅಚ್ಛೋದ ಸರೋವರವಿದೆ. ಅದು ತುಂಬಿ ನೀರು ಹೊರಚೆಲ್ಲಿ ಹೊಳೆಯಾಗಿ ಕೆಳಕ್ಕೆ ಇಳಿಯುತ್ತದೆ- ದೂರದ ಬಂಗಾಳ ಕೊಲ್ಲಿಯ ಸಹಸ್ರಾರು ಕಿಲೊಮೀಟರ್‌ ಪಯಣಕ್ಕೆ.

ಹಿಮಾಲಯವೆಂದರೆ ಹಿಮಪರ್ವತ ಶಿಖರ ಕಾಡು ನದಿಗಳ ಸಂಗಮವೆಂದೇ ತಿಳಿವಳಿಕೆ. ಆದರೆ ಗಗನಚುಂಬಿ ಶಿಖರಗಳ ಜತೆ ನೆಲಚುಂಬಿ ಹೂಲೋಕವೂ ಇಲ್ಲಿದೆ. ಇವುಗಳ ಚೆಲುವನ್ನು ಕಾಣಲು, ಆಗಸದೊಂದಿಗೆ ಆಟವಾಡುವ ಶಿಖರಗಳನ್ನೂ ದೇವದಾರು ವೃಕ್ಷಗಳನ್ನೂ ಕತ್ತೆತ್ತಿ ನೋಡುವಂತೆ ನಡೆಹಾದಿಯ ಆಜುಬಾಜಿನ ನೆಲವನ್ನೂ ಗಮನಿಸಬೇಕು. ಹಿಮಾಲಯ ಭವ್ಯವೆನಿಸುವುದು ತನ್ನ ಧೀರೋದಾತ್ತ ಶಿಖರಗಳಿಂದ ಮಾತ್ರವಲ್ಲ, ತನ್ನಡಿಯ ಹೂವು ಹುಲ್ಲುಗಳಿಂದ. ಹಿಮಾಲಯದ ಬೃಹತ್ತಿನ ಅಹಮಿಕೆಗೆ ತಿವಿಯಲೆಂದೊ ಶಿಖರಗಳ ಏಕತಾನತೆ ಮುರಿಯಲೆಂದೊ ಅಥವಾ ಸಿಂಗರಿಸಲೆಂದೊ ನಿಸರ್ಗವೇ ಸೃಷ್ಟಿಸಿರುವ ಬಣ್ಣಗಳ ಜಗತ್ತಿದು. ಈ ಜಗತ್ತಿನ ಅಧ್ಯಯನಕ್ಕಾಗಿ ಬಂದು, ಕಾಲುಜಾರಿ ಬಿದ್ದು ನಿಧನಳಾದ ಒಬ್ಬ ಸಸ್ಯವಿಜ್ಞಾನಿಯ ಗೋರಿಯೊಂದು ಅಲ್ಲಿದೆ- ಪುಷ್ಪಪ್ರೇಮವೂ ದುರಂತ ಮರಣವೂ ಒಟ್ಟಿಗೆ ಸಂಭವಿಸಿದಂತೆ. ಆಕೆಯ ಸಮಾಧಿ ಹೂವಿನ ಋತುಮಾನದಲ್ಲಿ ನಿಸರ್ಗವೇ ಸಲ್ಲಿಸುವ ಪುಷ್ಪಾಂಜಲಿಯಂತೆ ಬಿದ್ದಹೂವುಗಳಿಂದ ಮುಚ್ಚಿ ಹೋಗುತ್ತದೆ.

ಹೂವುಗಳೆಲ್ಲ ಉದುರಿದ ಬಳಿಕ ಕಣಿವೆ ಹಿಮದ ಸಮಾಧಿಯಲ್ಲಿ ಧ್ಯಾನಕ್ಕೆ ಸಲ್ಲುತ್ತದೆ. ಮತ್ತೆ ಬೇಸಿಗೆಯ ಬಿಸಿಲಿಗೆ ಹಿಮಕರಗಿ, ಕೊಚ್ಚೆಕೆಸರಿನ ನೆಲದೊಳಗಿಂದ ಉದುರಿದ ಬೀಜಗಳು ಅಂಕುರವಾಗಿ ಗಿಡವಾಗಿ ಹೂತಳೆಯುತ್ತವೆ. ಇದೊಂದು ಜೀವಸಾವುಗಳ ಕಟುಮಧುರ ಆವರ್ತನ.

ಹೂಕಣಿವೆಯಲ್ಲಿ ಬಣ್ಣವೇ ಹಸಿರಿನ ಮೇಲೆ ಚೆಲ್ಲಿದಂತೆ ಹಿಮಹೊದ್ದು ನಲಿಯುವ ಪುಟ್ಟ ಹೂವುಗಳ ಲೋಕ...
ಚಿತ್ರಗಳು: ರಹಮತ್ ತರೀಕೆರೆ ಸತ್ಯಜಿತ್ ದಂಡಗಿ ಕಲೀಮ್ ಉಲ್ಲಾ
ಹೂಕಣಿವೆಯಲ್ಲಿ ಬಣ್ಣವೇ ಹಸಿರಿನ ಮೇಲೆ ಚೆಲ್ಲಿದಂತೆ ಹಿಮಹೊದ್ದು ನಲಿಯುವ ಪುಟ್ಟ ಹೂವುಗಳ ಲೋಕ... ಚಿತ್ರಗಳು: ರಹಮತ್ ತರೀಕೆರೆ ಸತ್ಯಜಿತ್ ದಂಡಗಿ ಕಲೀಮ್ ಉಲ್ಲಾ
ಹೂಕಣಿವೆಯಲ್ಲಿ ಬಣ್ಣವೇ ಹಸಿರಿನ ಮೇಲೆ ಚೆಲ್ಲಿದಂತೆ ಹಿಮಹೊದ್ದು ನಲಿಯುವ ಪುಟ್ಟ ಹೂವುಗಳ ಲೋಕ...
ಚಿತ್ರಗಳು: ರಹಮತ್ ತರೀಕೆರೆ ಸತ್ಯಜಿತ್ ದಂಡಗಿ ಕಲೀಮ್ ಉಲ್ಲಾ
ಹೂಕಣಿವೆಯಲ್ಲಿ ಬಣ್ಣವೇ ಹಸಿರಿನ ಮೇಲೆ ಚೆಲ್ಲಿದಂತೆ ಹಿಮಹೊದ್ದು ನಲಿಯುವ ಪುಟ್ಟ ಹೂವುಗಳ ಲೋಕ... ಚಿತ್ರಗಳು: ರಹಮತ್ ತರೀಕೆರೆ ಸತ್ಯಜಿತ್ ದಂಡಗಿ ಕಲೀಮ್ ಉಲ್ಲಾ
ಹೂಕಣಿವೆಯ ಸನಿಹದಲ್ಲಿರುವ ಹೇಮಕುಂಡ ಸರೋವರ 
ಹೂಕಣಿವೆಯ ಸನಿಹದಲ್ಲಿರುವ ಹೇಮಕುಂಡ ಸರೋವರ 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT