ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರವಾಸ: ಭೂಗತ ಪ್ರಪಂಚದ ರಾಣಿ

Last Updated 19 ಜೂನ್ 2021, 19:30 IST
ಅಕ್ಷರ ಗಾತ್ರ

ಸ್ಲೋವೆನಿಯಾದ ಈ ಗುಹೆಗೆ ಮಾರು ಹೋಗದವರೇ ಇಲ್ಲ. ಈ ಗುಹೆಯೊಳಗೆ ಗಿರಿ, ಕಂದರಗಳಿವೆ, ಝುಳು, ಝುಳು ಮಂಜುಳ ನಿನಾದ ಹೊರಡಿಸುತ್ತಾ ಹರಿಯುವ ನದಿ ಇದೆ. ತೆರೆದ ರೈಲಿನಲ್ಲಿ ಆ ಸೊಬಗನ್ನು ಕಣ್ತುಂಬಿಕೊಳ್ಳುತ್ತಾ ವಿಹರಿಸುವ ಆನಂದ ಶಬ್ದಗಳಿಗೆ ನಿಲುಕದ್ದು!

ಮಧ್ಯ ಯುರೋಪಿನ ಸ್ಲೊವೇನಿಯಾದ ಒಂದು ಪುಟ್ಟ ನಗರ ಕ್ರಾನ್. ಕೆಲಸದ ನಿಮಿತ್ತ, ಸಹೋದ್ಯೋಗಿಗಳಾದ ಪ್ರಭಂಜನ್ ಮತ್ತು ವಿಶ್ವೇಶ್‌ ಅವರೊಂದಿಗೆ ಕ್ರಾನ್‌ಗೆ ಹೋಗಿದ್ದೆ. ಅಲ್ಲಿನ ಸೆಂಟ್ರಲ್ ಅಪಾರ್ಟ್‌ಮೆಂಟ್ ರೇಜಾ ಹೋಟೆಲ್‌ನಲ್ಲಿ ನಾವು ತಂಗಿದ್ದೆವು.

ವಾರಾಂತ್ಯದ ರಜಾದಿನಗಳಲ್ಲಿ ಯಾವುದಾದರೂ ವಿಶಿಷ್ಟ ಪ್ರದೇಶಕ್ಕೆ ಭೇಟಿ ನೀಡಬೇಕೆಂಬ ಅಭಿಲಾಷೆ ನಮ್ಮದಾಗಿತ್ತು. ಅದರಂತೆ ನಾವಿದ್ದ ನಗರದಿಂದ ಸುಮಾರು 86 ಕಿ.ಮೀ. ದೂರವಿರುವ ‘ಭೂಗತ ಪ್ರಪಂಚದ ರಾಣಿ’ ಎಂದೇ ಪ್ರಖ್ಯಾತವಾಗಿರುವ ‘ಪೋಸ್ಟಾಯ್ನ್ ಕೇವ್‌’ ವೀಕ್ಷಿಸಬೇಕೆಂದು ತೀರ್ಮಾನಿಸಿದೆವು. ನೈಋತ್ಯ ಸ್ಲೊವೇನಿಯಾದಲ್ಲಿರುವ 24,340 ಮೀಟರ್ ಉದ್ದ ಹಾಗೂ 115 ಮೀಟರ್‌ ಆಳದ ಗುಹೆ ಇದು. ದೇಶದ ಎರಡನೇ ಅತಿ ಉದ್ದದ ಗುಹೆಯೆಂಬ ಹೆಗ್ಗಳಿಕೆಗೆ ಇದು ಪಾತ್ರವಾಗಿದ್ದು, ಪ್ರಸಿದ್ಧ ಪ್ರವಾಸಿ ತಾಣಗಳಲ್ಲಿ ಒಂದಾಗಿದೆ.

ಕ್ರಾನ್‌ನಿಂದ ಲುಬ್ಲಾನ ಮಾರ್ಗವಾಗಿ ‘ಪೋಸ್ಟಾಯ್ನ್ ಕೇವ್’ಗೆ 90 ನಿಮಿಷಗಳ ಪಯಣ. ಅತ್ಯಂತ ಕಡಿಮೆ ವಾಹನ ಸಂಚಾರವಿರುವ ರಸ್ತೆ. ಕ್ರಾನ್ ಮತ್ತು ಲುಬ್ಲಾನ ನಡುವೆ ಪೈನ್ ಮರಗಳ ಕಾಡಿನೊಳಗಿನ ಸಂಚಾರ ಮನಸ್ಸಿಗೆ ಮುದ ನೀಡುತ್ತದೆ. ತದನಂತರ ವಿಶಾಲವಾದ ಹೊಲ ಗದ್ದೆಗಳು ಅವುಗಳ ಹಿಂದೆ ಹಿಮಾಚ್ಛಾದಿತ ಪರ್ವತಗಳು. ನೋಡಲು ಕ್ಯಾನ್ವಾಸ್‌ನಲ್ಲಿ ಚಿತ್ರ ಬರೆದಂತೆ ಕಾಣುತ್ತವೆ.

ಒಂದು ದಿನದಲ್ಲಿ ‘ಪೋಸ್ಟಾಯ್ನ್ ಕೇವ್’ ವೀಕ್ಷಿಸಬಹುದು. ಪ್ಯಾಕೇಜ್ ಟೂರ್‌ಗೆಂದೇ ಪ್ರತ್ಯೇಕ ಬಸ್‌ಗಳೂ ಇವೆ. ಗುಹೆಯನ್ನು ವೀಕ್ಷಿಸಲು 40 ಯೂರೊಗಳನ್ನು ನೀಡಿ ಟಿಕೆಟ್ ಖರೀದಿಸಬೇಕು. ಗುಹೆಯೊಳಗೆ ರೈಲಿನಲ್ಲಿ ತೆರಳಬೇಕು. ಸ್ಲೊವೇನಿಯಾ, ಡಚ್, ಜರ್ಮನ್ ಹಾಗೂ ಇಂಗ್ಲಿಷ್‌ ಹೀಗೆ ನಾಲ್ಕು ಭಾಷೆಗಳನ್ನು ಮಾತನಾಡುವ ಗೈಡ್‌ಗಳು ಲಭ್ಯ.

ಗುಹೆಯೊಳಗೆ ರೈಲು ಪಯಣ!
ಗುಹೆಯನ್ನು ಸಂಪೂರ್ಣವಾಗಿ ವೀಕ್ಷಿಸಲು ಆರು ಗಂಟೆಗಳ ಸಮಯ ತಗಲುತ್ತದೆ. ಡಬಲ್ ಟ್ರ್ಯಾಕ್ ಹೊಂದಿರುವ ವಿಶ್ವದ ಏಕೈಕ ಗುಹೆ ಇದಾಗಿದ್ದು, 50-60 ಮಂದಿ ಕುಳಿತುಕೊಳ್ಳಲು ಆಸನ ವ್ಯವಸ್ಥೆಯಿರುವ ತೆರೆದ ರೈಲಿನಲ್ಲಿ ಪ್ರಯಾಣಿಸುವ ಅನುಭವ ಮುದ ನೀಡುತ್ತದೆ. ರೈಲಿನಲ್ಲಿ ಕುಳಿತು ಗುಹೆಯೊಳಗೆ ಸುಮಾರು 3.7 ಕಿ.ಮೀ ಕ್ರಮಿಸಬೇಕು. ಪ್ರವಾಸಿಗರು ನೋಡಬೇಕಾದ ಮುಖ್ಯವಾದ ಸ್ಥಳಗಳಲ್ಲಿ ಬಣ್ಣ ಬಣ್ಣದ ಲೈಟ್‌ಗಳು ಉರಿಯುತ್ತವೆ. ಅಲ್ಲಿ ರೈಲನ್ನು ನಿಲ್ಲಿಸುವ ಗೈಡ್ ಕಂ ಡ್ರೈವರ್ ಆ ಪ್ರದೇಶದ ವಿಶೇಷವನ್ನು ವಿವರಿಸುತ್ತಾನೆ. ಹೀಗೆ ಗುಹೆಯ ಹಲವು ಭಾಗಗಳನ್ನು ನೋಡಿದ ಮೇಲೆ ರೈಲು ‘ಸೆಂಟ್ರಲ್ ಮೇನ್ ಹಾಲ್’ ಎಂದು ಕರೆಯಲ್ಪಡುವ ಪ್ರದೇಶವನ್ನು ತಲುಪುತ್ತದೆ.

ದೇಶ ವಿದೇಶಗಳ ಪ್ರವಾಸಿಗರು ‘ಪೋಸ್ಟಾಯ್ನ್ ಕೇವ್’ಗೆ ಭೇಟಿಯಿತ್ತ ನೆನಪಿಗಾಗಿ ತಮ್ಮ ನೆಂಟರಿಷ್ಟರಿಗೆ ನೀಡಲು ನೆನಪಿನ ಕಾಣಿಕೆಗಳನ್ನು ಇಲ್ಲಿ ಖರೀದಿಸಬಹುದು. ಇಲ್ಲಿ ಎಲ್ಲವೂ ಅಚ್ಚುಕಟ್ಟು. ದಣಿದು ಬಂದವರು ವಿಶ್ರಮಿಸಿಕೊಳ್ಳಲು ಆಸನಗಳ ವ್ಯವಸ್ಥೆ, ಉಚಿತ ವಾಶ್ ರೂಂಗಳು ಇವೆ. ಇಲ್ಲಿಂದ ಮುಂದೆ 3 ಕಿ.ಮೀ. ದೂರ ಕಾಲುದಾರಿಯಲ್ಲಿ ನಡೆದುಕೊಂಡೇ ಗುಹೆಯನ್ನು ವೀಕ್ಷಿಸಬೇಕು.

ನೈಸರ್ಗಿಕ ಕೌತುಕ
‘ಪಿವ್ಕಾ’ ನದಿಯ ನೀರಿನ ಹರಿವಿನಿಂದ ಹಲವು ದಶಲಕ್ಷ ವರ್ಷಗಳಿಂದ ಈ ಗುಹೆ ರೂಪತಾಳಿದ್ದು, ಸುಣ್ಣದ ಕಲ್ಲಿನಿಂದ ಕೂಡಿದ ಪ್ರದೇಶದಲ್ಲಿ ಭೂಮಿಯಲ್ಲಿರುವ ಸುಣ್ಣ ಕರಗಿ ವಿವಿಧ ಆಕಾರಗಳ ರಚನೆಗಳು ರೂಪುಗೊಂಡಿವೆ. ಚಿತ್ತಾಕರ್ಷಕ ರಚನೆಗಳಿಂದ ಕೂಡಿದ ಗುಹೆ ಸ್ವರ್ಗಸದೃಶ ನೈಸರ್ಗಿಕ ಕೌತುಕವಾಗಿದೆ. ಭೂಮಿಯ ಮೇಲ್ಮೈಯಲ್ಲಿರುವಂತೆ ಇಲ್ಲಿಯೂ ಎತ್ತರದ ಪರ್ವತಗಳು, ಕಲರವವನ್ನು ಉಂಟುಮಾಡುವ ನದಿಗಳಿವೆ. ಈ ಗುಹೆಯನ್ನು ಅನ್ವೇಷಕರ ಹಾಗೂ ಗುಹೆಗಳ ವೈಜ್ಞಾನಿಕ ಅಧ್ಯಯನ ನಡೆಸುವವರ ತೊಟ್ಟಿಲೆಂದೇ ಹೇಳಬಹುದು. ಬಣ್ಣಬಣ್ಣದ ವಿದ್ಯುತ್ ದೀಪಗಳ ಬೆಳಕಿನಿಂದ ನೈಸರ್ಗಿಕವಾಗಿ ರೂಪುಗೊಂಡಿರುವ ರಚನೆಗಳ ಅಂದ ಇಮ್ಮಡಿಗೊಳ್ಳುತ್ತದೆ. ಈ ರಚನೆಗಳು ಚಿತ್ರ ವಿಚಿತ್ರವಾಗಿದ್ದು, ಕೆಲವು ಕಡೆ ಪ್ರಾಣಿಗಳನ್ನು ಹೋಲುವಂತಿವೆ. ಕೆಲವು ಕಡೆ ಶುಭ್ರವಾದ ನೀರು ತೊಟ್ಟಿಕ್ಕುತ್ತಿರುತ್ತದೆ. ಒಳಗೆ ಹರಿಯುತ್ತಿರುವ ಪಿವ್ಕಾ ನದಿಯನ್ನು ದಾಟಿಹೋಗಲು ಸೇತುವೆಯನ್ನು ಸಹ ನಿರ್ಮಿಸಲಾಗಿದೆ.

ಪೋಸ್ಟಾಯ್ನ್ ಕೇವ್‌ನ ಡ್ಯಾನ್ಸ್ ಹಾಲ್ ಚಾವಣಿಯಿಂದ ನೇತಾಡುವ ಅದ್ಭುತ ಮುರಾನೋ ಗ್ಲಾಸ್ ಗೊಂಚಲುಗಳು ಕಾಲ್ಪನಿಕ ಲೋಕವನ್ನು ಸೃಷ್ಟಿಸುತ್ತವೆ. ಗುಹೆಗಳನ್ನು ಸಂಪರ್ಕಿಸುವ ಹಾದಿಗಳು ಹಾಗೂ ಸೈಫನ್‌ಗಳನ್ನು ಒಟ್ಟಾರೆಯಾಗಿ ವೀಕ್ಷಿಸಬಯಸುವ ಪ್ರವಾಸಿಗರು ಕಾಲುದಾರಿಯಲ್ಲಿ ನಡೆದುಕೊಂಡು ಹಾಗೂ ಕೆಲವು ಕಡೆ ಈಜಿಕೊಂಡೇ ಹೋಗಬೇಕಾಗುತ್ತದೆ.

ಈ ಗುಹೆಯು 1213ರಿಂದಲೂ ಇತ್ತೆಂದು ಗುಹೆಯಲ್ಲಿ ಕಾಣಸಿಗುವ ಗೀಚುಬರಹದಿಂದ ತಿಳಿದುಬರುತ್ತದೆ. ಮೊದಲ ಪ್ರವಾಸಿ ಗೈಡ್ ಆರ್ಚ್ ಡ್ಯೂಕ್ 1819ರಲ್ಲಿ ಈ ಗುಹೆಗಳಿಗೆ ಭೇಟಿ ನೀಡಿದ್ದನಂತೆ. ಪ್ರವಾಸಿಗರನ್ನು ಆಕರ್ಷಿಸಲು 1884ರಲ್ಲಿ ವಿದ್ಯುದೀಕರಣ ಮಾಡಲಾಯಿತಂತೆ. 20ನೇ ಶತಮಾನದಲ್ಲಿ ಗ್ಯಾಸ್ ಲೋಕೊಮೋಟಿವ್‌ಅನ್ನು ಪರಿಚಯಿಸಿ ತದನಂತರ ವಿದ್ಯುತ್‌ಗೆ ಪರಿವರ್ತಿಸಲಾಯಿತು. ಪ್ರಸ್ತುತ 5.3 ಕಿ.ಮೀ ಗುಹೆ ಮಾತ್ರ ಪ್ರವಾಸಿಗರ ವೀಕ್ಷಣೆಗೆ ಮುಕ್ತವಾಗಿದೆ.

ಎರಡನೇ ಮಹಾಯುದ್ಧದ ಸಮಯದಲ್ಲಿ ಜರ್ಮನ್ ಆಕ್ರಮಣ ಪಡೆಗಳು ಸುಮಾರು ಸಾವಿರ ಬ್ಯಾರಲ್‌ಗಳಷ್ಟು ವಿಮಾನ ಇಂಧನವನ್ನು ಸಂಗ್ರಹಿಸಲು ಈ ಗುಹೆಯನ್ನು ಬಳಸಿದ್ದು, ಅವುಗಳನ್ನು 1944 ಏಪ್ರಿಲ್ ತಿಂಗಳಲ್ಲಿ ಸ್ಲೊವೇನಿಯನ್‌ ಪಂಗಡಗಳು ನಾಶಪಡಿಸಿದಾಗ ಏಳು ದಿನಗಳವರೆಗೆ ಬೆಂಕಿಯ ಜ್ವಾಲೆ ಗುಹೆಯಿಂದ ಹೊರಬಂದು ಗುಹೆಯ ಬಹುಪಾಲು ನಾಶವಾಯಿತಂತೆ. 1990ರ ದಶಕದಲ್ಲಿ ವಿಶ್ವದ ಅತಿ ಹೆಚ್ಚು ಪ್ರವಾಸಿಗರು ಸಂದರ್ಶಿಸಿದ ತಾಣವೆಂಬ ಹೆಗ್ಗಳಿಕೆಗೆ ಈ ಗುಹೆ ಪಾತ್ರವಾಯಿತು. ವಿಶ್ವದ ಏಕೈಕ ಭೂಗತ ಅಂಚೆ ಕಚೇರಿ ಈ ಗುಹೆಯಲ್ಲಿರುವುದು ಮತ್ತೊಂದು ವಿಶೇಷವೆಂದೇ ಹೇಳಬಹುದು.

ಗುಹೆಯ ಒಂದು ಭಾಗದಲ್ಲಿ ‘ವಿವೇರಿಯಂ’ ಇದೆ. ಶತಮಾನಗಳಿಂದಲೂ ಈ ಗುಹೆಯಲ್ಲಿ ವಾಸಿಸುತ್ತಿದ್ದ ಹಲವು ಪ್ರಾಣಿಗಳು ಹಾಗೂ ಜಲಚರಗಳನ್ನು ಗಾಜಿನ ತೊಟ್ಟಿಗಳಲ್ಲಿ ಇರಿಸಿದ್ದಾರೆ. ವಿವರಗಳುಳ್ಳ ಫಲಕಗಳನ್ನು ತೂಗುಹಾಕಲಾಗಿದ್ದು ಪ್ರವಾಸಿಗರು ಜಲಚರಗಳ ಮಾಹಿತಿಯನ್ನು ಪಡೆದುಕೊಳ್ಳಬಹುದು. ಪ್ರಚಲಿತದಲ್ಲಿರುವ ದಂತಕತೆಯ ಪ್ರಕಾರ ‘ಬೇಬಿ ಡ್ರ್ಯಾಗನ್’ ಎಂದೇ ಪ್ರಸಿದ್ಧಿಯಾಗಿರುವ ‘ಓಲ್ಮ್’ಗಳು ಪ್ರವಾಸಿಗರನ್ನು ಆಕರ್ಷಿಸುತ್ತವೆ. ಎರೆ ಹುಳುವಿನಂತೆ ಕಾಣುವ ತಿಳಿ ಕೆಂಪುಬಣ್ಣದ ಜಲವಾಸಿ ಇದಾಗಿದ್ದು, ಯುರೋಪಿನ ಗುಹೆಗಳಲ್ಲಿ ಮಾತ್ರ ಕಂಡುಬರುವ ಪ್ರಭೇದವಾಗಿದೆ. ಈ ಪ್ರಾಣಿಗಳು ಉಭಯಚರಿಗಳಾಗಿದ್ದರೂ, ಇಲ್ಲಿ ಸಂಪೂರ್ಣ ಜಲಚರಿಗಳು. ಹತ್ತು ವರ್ಷಗಳ ಕಾಲ ಆಹಾರವಿಲ್ಲದೆ ಬದುಕಬಲ್ಲ ಈ ಪ್ರಾಣಿಗಳ ವಾಸ, ಜೀವನ ಹಾಗೂ ಸಂತಾನೋತ್ಪತ್ತಿ ಎಲ್ಲವೂ ನೀರಿನಲ್ಲೇ ಆಗುವುದು ವಿಶೇಷ. 2016 ಜನವರಿ 30ರಂದು ಹೆಣ್ಣು ಓಲ್ಮ್ 50 ಮರಿಗಳಿಗೆ ಜನ್ಮ ನೀಡಲು ಪ್ರಾರಂಭಿಸಿದ ಘಟನೆ ವಿಶ್ವದೆಲ್ಲೆಡೆ ಸುದ್ದಿಯಾಯಿತು.

ಪಾರಂಪರಿಕ ತಾಣವಾಗಿ ಗುರುತಿಸಲ್ಪಟ್ಟಿರುವ ‘ಪೋಸ್ಟಾಯ್ನ್ ಕೇವ್’ ಸಾರ್ವಜನಿಕ ರಜಾದಿನಗಳನ್ನು ಒಳಗೊಂಡಂತೆ ವರ್ಷವಿಡೀ ಪ್ರವಾಸಿಗರ ವೀಕ್ಷಣೆಗೆ ತೆರೆದಿರುತ್ತದೆ. ಗುಹೆಯನ್ನು ವೀಕ್ಷಿಸಲು ಸುಮಾರು ಆರು ಗಂಟೆಗಳ ಸಮಯ ತಗಲುತ್ತದೆ. ಸಂದರ್ಶಕರು 17 ಭಾಷೆಗಳಲ್ಲಿ ಲಭ್ಯವಿರುವ ಆಡಿಯೊ ಗೈಡ್‌ಗಳನ್ನು ಬಳಸಬಹುದಾಗಿದೆ. ಗುಹೆಯೊಳಗಿನ ತಾಪಮಾನ ಸದಾಕಾಲ 10 ಡಿಗ್ರಿ ಸೆಂಟಿಗ್ರೇಡ್‌ನಲ್ಲಿ ಸ್ಥಿರವಾಗಿರುತ್ತದೆ. ಆದುದರಿಂದ ಸಂದರ್ಶಕರು ಬೆಚ್ಚನೆಯ ಉಡುಪು ಹಾಗೂ ಶೂಗಳನ್ನು ಹಾಕಿಕೊಳ್ಳಲೇಬೇಕು.

ಕಳೆದ 200 ವರ್ಷಗಳಲ್ಲಿ 3.9 ಕೋಟಿಗೂ ಅಧಿಕ ಪ್ರವಾಸಿಗರು ಈ ಗುಹೆಯನ್ನು ವೀಕ್ಷಿಸಿದ್ದು, ಅತ್ಯಂತ ಗಣ್ಯ ವ್ಯಕ್ತಿಗಳು ಗುಹೆಯ ಬಗ್ಗೆ ತಮ್ಮ ಅನಿಸಿಕೆಗಳನ್ನು ‘ಗೋಲ್ಡನ್ ಬುಕ್ ಆಫ್‌ ವಿಸಿಟರ್ಸ್’ನಲ್ಲಿ ಹಂಚಿಕೊಂಡಿದ್ದಾರೆ.

ಪೋಸ್ಟೋಜ್ನಾ ಗುಹೆ
ಪೋಸ್ಟೋಜ್ನಾ ಗುಹೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT