ಮಂಗಳವಾರ, 28 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರವಾಸಕ್ಕೆ ಹೋಗುವ ಮನಸಾಗಿದೆಯೇ? ಇವುಗಳನ್ನು ಪಾಲಿಸಿ...

Last Updated 1 ಸೆಪ್ಟೆಂಬರ್ 2022, 9:40 IST
ಅಕ್ಷರ ಗಾತ್ರ

ಪ್ರವಾಸ..!! ಪ್ರವಾಸವೆಂದರೆ ಯಾರಿಗೆ ತಾನೆ ಇಷ್ಟವಿಲ್ಲ ಹೇಳಿ. ಇಂದಿನ ಒತ್ತಡದ ಬದುಕಿನ ಮಧ್ಯೆ ಕಾಲಾವಕಾಶ ಸಿಕ್ಕರೆ ಮನಸ್ಸನ್ನು ಹಗುರ ಮಾಡಿಕೊಳ್ಳಲು, ಉಲ್ಲಾಸಭರಿತಗೊಳಿಸಲು ಪ್ರವಾಸವನ್ನು ಆಯ್ಕೆ ಮಾಡಿಕೊಳ್ಳುತ್ತೇವೆ.

ಇನ್ನೂ ಕೆಲವರು ಪ್ರವಾಸಕ್ಕೆ ಹೋಗುವುದನ್ನೇ ತಮ್ಮ ಪ್ಯಾಷನ್‌ ಮಾಡಿಕೊಂಡಿರುತ್ತಾರೆ. ಇನ್ನೂ ಕೆಲವರಿಗೆ ಪ್ರವಾಸಕ್ಕೆ ಹೋಗುವ ಆಸೆ ಇದ್ದರೂ ಕೋವಿಡ್‌ನಂಥ ಮಹಾಮಾರಿಯಿಂದ ಈ ಆನಂದವನ್ನು ಒಂದು ವರ್ಷಗಳ ಕಾಲ ಹಿಡಿದಿಟ್ಟುಕೊಳ್ಳುವಂತಾಗಿತ್ತು. ಆದರೆ ಈಗ ಪ್ರವಾಸಕ್ಕೆ ನಮ್ಮನ್ನು ತೆರೆದಿಡುವ ಸಮಯ ಬಂದಿದೆ. ಕೆಲವರಿಗೆ ಪ್ರವಾಸ ಹೋಗುವುದೆಂದರೆ ಇಷ್ಟ. ಆದರೆ, ಅದಕ್ಕೆ ಸೂಕ್ತ ರೀತಿಯಲ್ಲಿ ಯೋಜನೆ ರೂಪಿಸುವಲ್ಲಿ ವಿಫಲವಾಗುವುದರಿಂದ ತಮ್ಮ ಪ್ರವಾಸದ ಯೋಜನೆಯನ್ನೇ ಕೈ ಬಿಟ್ಟುಬಿಡುತ್ತಾರೆ. ಇನ್ನೂ ಕೆಲವರು, ಸಮಯದ ಅಭಾವದ ನೆಪಹೊಡ್ಡಿ ಪ್ರವಾಸವನ್ನು ಮುಂದೂಡುತ್ತಾ ಸಾಗುತ್ತಾರೆ. ಇದರಿಂದ ನೀವು ಅಂದುಕೊಂಡ ಪ್ರವಾಸವನ್ನು ಅನುಭವಿಸಲು ಸಾಧ್ಯವಿಲ್ಲ. ಹಾಗಿದ್ದರೆ ಅಂದುಕೊಂಡು ಪ್ರವಾಸವನ್ನು ಮಾಡುತ್ತಿರುವ ಯೋಜನೆಗಳೇನು? ಇಲ್ಲಿವೆ ಒಂದಷ್ಟು ಟ್ರಿಕ್ಸ್‌..!


ಫೋಮೋನಿಂದ ಹೊರಬನ್ನಿ

ಫೋಮೋ ಎಂದರೆ ಫಿಯರ್‌ ಆಫ್‌ ಮಿಸ್ಸಿಂಗ್‌ ಔಟ್‌.. ನಾನು ಅನುಭವಿಸಬೇಕಾದದ್ದು ತಪ್ಪಿಹೋಗಬಹುದೇನೋ ಎಂಬ ಭಯವನ್ನೇ ಫೋಮೋ ಎನ್ನಲಾಗುತ್ತದೆ. ಈ ಫೋಮೋ ಭಯ ಪ್ರವಾಸ ಮಾಡುವವರಲ್ಲಿಯೇ ಒಂದು ಕೈ ಹೆಚ್ಚೇ ಇರಲಿದೆ. ಇಡೀ ವಿಶ್ವವನ್ನೇ ಸುತ್ತುವ ಬಯಕೆ ಇದ್ದರೂ ಸೂಕ್ತ ಪ್ಲಾನಿಂಗ್‌ ಇಲ್ಲದ ಕಾರಣ ತಾವು ಅಂದುಕೊಂಡು ಜಾಗ ಅಥವಾ ಪ್ರದೇಶಗಳನ್ನು ಭೇಟಿ ನೀಡಲು ಸಾಧ್ಯವಾಗುವುದಿಲ್ಲ. ಪ್ರತಿಬಾರಿ ಪ್ಲಾನ್‌ ಮಾಡಿದರೂ ಅದು ಕಾರ್ಯಗತವಾಗದೇ ಇದ್ದಾಗ ಎಂಥವರಲ್ಲೂ ಈ ಫೋಮೋ ಆವರಿಸಿಬಿಡುತ್ತದೆ. ಹೀಗಾಗಿ ಟ್ರಾವೆಲ್‌ಗಾಗಿಯೇ ಇರುವ ಕೆಲವು ತಂಡಗಳೊಂದಿಗೆ ಸದಸ್ಯತ್ವ ಪಡೆದುಕೊಳ್ಳಿ. ಅದಕ್ಕೆ ತಕ್ಕಂತೆ ಹಣಕಾಸಿನ ವ್ಯವಸ್ಥೆ ಮಾಡಿಕೊಂಡಿರಿ. ಫೋಮೋ ಭಯವನ್ನು ಹೋಗಲಾಡಿಸಲು ಇರುವ ಏಕೈಕ ಮಾರ್ಗವೆಂದರೆ ಮಾನಸಿಕವಾಗಿ ದೃಢವಾಗಿರುವುದು. ಯಾವುದೇ ಒಂದು ನಿರ್ಧಾರ ಕೈಗೊಂಡರೆ ಅದನ್ನು ಸಾಧಿಸುವವರೆಗೂ ಕೈ ಬಿಡಬಾರದು. ಆಗ ಮಾತ್ರವೇ ಈ ಫೋಮೋ ಫಿಯರ್‌ ನಿಮ್ಮಿಂದ ದೂರವಾಗಲು ಸಾಧ್ಯ. ಪ್ರವಾಸದ ಒಂದು ಯೋಜನೆ ಕೈ ಬಿಟ್ಟರೂ ಪ್ರತಿ ಯೋಜನೆ ಅನೇಕ ಕಾರಣಗಳಿಂದ ಕೈ ತಪ್ಪಿ ಹೋಗುತ್ತಲೇ ಇರುತ್ತದೆ.

ಹೊಸ ಜಾಗಗಳನ್ನು ಅನ್ವೇಶಿಸಿ

ಪ್ರವಾಸ ನಿಮ್ಮನ್ನು ಮಾನಸಿಕ ಹಾಗೂ ದೈಹಿಕವಾಗಿಯೂ ರೀಚಾರ್ಚ್‌ ಆಗಲು ಕಾರಣವಾಗುತ್ತದೆ. ಪ್ರವಾಸ ಎನ್ನುವುದು ಕೇವಲ ಸುತ್ತಲಿನ ಪ್ರದೇಶವಷ್ಟೇ ಅಲ್ಲ ಅಥವಾ ಈಗಾಗಲೇ ಪ್ರಸಿದ್ಧಿ ಹೊಂದಿದ ಜಾಗ ಮಾತ್ರವಲ್ಲ. ಕೆಲವೊಂದು ಪ್ರದೇಶಗಳು ಪ್ರಸಿದ್ಧಿಯಾಗಿರದಿದ್ದರೂ ನಯನ ಮನೋಹರವಾಗಿರುತ್ತವೆ. ಅಂತಹ ಜಾಗಗಳ ಬಗ್ಗೆ ಅನ್ವೇಷಣೆ ನಡೆಸಿ. ಇಂಥ ಪ್ರವಾಸಗಳು ನಿಮ್ಮನ್ನು ಹೆಚ್ಚು ಕ್ರಿಯಾಶೀಲವಾಗಿರಿಸುತ್ತವೆ. ಇಂತಹ ಪ್ರವಾಸಗಳು ನಿಮಗೆ ಪ್ರತಿ ಬಾರಿ ಪ್ರವಾಸಕ್ಕೆ ಹೋಗಲು ಉತ್ತೇಜಿಸುತ್ತವೆ. ಇತ್ತೀಚಿನ ದಿನಗಳಲ್ಲಿ ಈ ಸಾಂಪ್ರದಾಯಕ ಪ್ರವಾಸಕ್ಕಿಂತ ಅಸಂಪ್ರದಾಯಕ ಪ್ರವಾಸಗಳೇ ಹೆಚ್ಚು ಮುನ್ನಲೆಗೆ ಬರುತ್ತದೆ. ಸಾಂಪ್ರದಾಯವೆಂದರೆ ಈಗಾಗಲೇ ಪ್ರಸಿದ್ಧಿ ಹೊಂದಿರುವ ಜಾಗವಾದರೆ, ಅಸಂಪ್ರದಾಯವ ಪ್ರವಾಸಗಳು ನೀವು ಎಕ್ಸ್‌ಪ್ಲೋರ್‌ ಮಾಡುವಂಥ ಜಾಗಗಳಾಗಿರುತ್ತವೆ. ಇಂದಿನ ಯುವಕರು ಇಂಥ ಪ್ರವಾಸಕ್ಕೆ ಹೆಚ್ಚು ಆಸಕ್ತಿ ತೋರುತ್ತಿರುವುದು ಕಂಡು ಬರುತ್ತಿದೆ. ಅದರಲ್ಲೂ ಅಡ್ವೆಂಚರಸ್‌ ಪ್ರವಾಸವೇ ಯುವಕರ ಅಚ್ಚುಮೆಚ್ಚು.!

ಬಕೆಟ್‌ ಪಟ್ಟಿ ನಿರ್ಮಿಸಿಕೊಳ್ಳಿ

ಇಂದು ಪ್ರತಿಯೊಬ್ಬರೂ ತಮ್ಮ "ಬಕೆಟ್‌ ಲಿಸ್ಟ್‌" ಸಿದ್ಧಪಡಿಸಿಕೊಂಡಿರುತ್ತಾರೆ. ಬಕೆಟ್‌ ಲಿಸ್ಟ್‌ ಎಂದರೆ, ತಮ್ಮ ಜೀವಮಾನದಲ್ಲಿ ಇಂಥ ಕೆಲಸ ಅಥವಾ ಆಸೆಗಳನ್ನು ಪೂರೈಸಿಕೊಳ್ಳಬೇಕಾದ ಪಟ್ಟಿಗಳನ್ನೇ ಬಕೆಟ್‌ ಲಿಸ್ಟ್‌ ಎನ್ನಲಾಗುತ್ತದೆ. ಕೆಲವರಿಗೆ ದೇಶ, ವಿದೇಶ ಸುತ್ತುವ ಬಯಕೆ ಇದ್ದರೆ, ಇನ್ನೂ ಕೆಲವರಿಗೆ ಸಮುದ್ರದಾಳಕ್ಕೋಗುವುದು, ಅಥವಾ ಇತರೆ ಆಸೆಗಳು ಇದ್ದೇ ಇರುತ್ತವೆ. ತಮ್ಮ ಡೈರಿ ಅಥವಾ ಸ್ಟಿಕ್ಕಿನೋಟ್‌ನಲ್ಲಿ ನೀವು ನಿಮ್ಮ ಜೀವಮಾನದಲ್ಲಿ ಮಾಡಬೇಕಾದ ನಿಮ್ಮಿಚ್ಚೇಕ ಕನಸು, ಆಸೆಗಳ ಪಟ್ಟಿಯನ್ನು ಬರೆದು ಪ್ರತಿದಿನ ನೀವು ಅದನ್ನ ನೋಡುವ ಜಾಗದಲ್ಲಿ ಹಾಕಿಕೊಳ್ಳಿ. ಹೀಗೆ ಮಾಡುವುದರಿಂದ ನೀವು ಕನಿಷ್ಠ ನಿಮ್ಮ ಆಸೆಗಳನ್ನು ಪ್ರತಿ ದಿನ ನೆನಪಿಸಿಕೊಳ್ಳುವಂತೆ ಮಾಡುತ್ತದೆ. ಜೊತೆಗೆ, ಆ ಆಸೆಗಳನ್ನು ಪೂರೈಸಿಕೊಳ್ಳಲು ನಿಮ್ಮನ್ನು ಉರಿದುಂಬಿಸುತ್ತದೆ. ನಿಮ್ಮ ಆಸೆಗಳ ಪಟ್ಟಿಯಲ್ಲಿ ನೀವು ಈಡೇರಿಸಿಕೊಂಡ ಆಸೆಗಳನ್ನು ಒಂದೊಂದಾಗಿಯೇ ಟಿಕ್‌ ಮಾಡುತ್ತಾ ಬನ್ನಿ. ಈ ಆಸೆಗಳನ್ನು ಈಡೇರಿಸಿಕೊಳ್ಳಲು ಒಂದಷ್ಟು ಟೈಮ್‌ಲೈನ್‌ ರೂಪಿಸಿಕೊಂಡಿರಿ. ಆ ಅವಧಿಯೊಳಗೆ ಎಷ್ಟು ಆಸೆಗಳಿಗೆ ಟಿಕ್‌ ಮಾಡಿದ್ದೀರ ಎಂದು ಆಗಾಗ್ಗೇ ನೋಡಿಕೊಳ್ಳಿ. ಇದು ನಿಮ್ಮನ್ನು ನಿಮ್ಮ ಪ್ರವಾಸದ ಆಸೆಯನ್ನು ಪೂರ್ಣಗೊಳಿಸಲು ಸಹಕಾರಿಯಾಗುತ್ತದೆ.

ಕುಟುಂಬದೊಂದಿಗೆ ಸಮಯ ಕೊಡಿ

ಕುಟುಂಬದೊಂದಿಗಿನ ಪ್ರವಾಸ ಇನ್ನಷ್ಟು ಖುಷಿಕೊಡುತ್ತದೆ. ಕುಟುಂಬದೊಂದಿಗೆ ಪ್ರವಾಸದ ಪ್ಲಾನ್‌ ಮಾಡುವ ಮೊದಲು ಕುಟುಂಬಸ್ಥರಿಗೆ ಯಾವ ಸ್ಥಳ ಹೆಚ್ಚು ಆಪ್ತವೆನಿಸುತ್ತದೆ ಎಂಬುದನ್ನು ತಿಳಿದುಕೊಳ್ಳಿ. ಕೆಲವರಿಗೆ ಟ್ರಾವೆಲಿಂಗ್‌ ಇಷ್ಟವಾದರೆ ಇನ್ನೂ ಕೆಲವರಿಗೆ ರೆಸ್ಟಾರ್ಟ್‌ನಲ್ಲಿ ಕಾಲ ಕಳೆಯುವುದು, ಬೀಚ್‌ ಸೈಡ್‌ ಇರುವುದು, ಟ್ರೆಕ್ಕಿಂಗ್‌, ಅಮ್ಯೂಸ್‌ಮೆಂಟ್‌ ಪಾರ್ಕ್‌ಗಳಲ್ಲಿನ ಆಟಗಳನ್ನು ಎಂಜಾಯ್‌ ಮಾಡುವುದು ಇಷ್ಟವಾಗುತ್ತದೆ. ಇನ್ನೂ ಕೆಲವರಿಗೆ ತಮ್ಮ ಪ್ರೀತಿ ಪಾತ್ರರೊಂದಿಗೆ ಸಂಜೆ ಸಮಯ ಕಳೆಯುವುದು ಸಹ ಅಚ್ಚುಮೆಚ್ಚು. ತಮ್ಮ ಕುಟುಂಬದವರ ಅಥವಾ ಸ್ನೇಹಿತರ ಆಸೆಗಳನ್ನು ಅರಿತು ಅದರಂತೆ ಪ್ರವಾಸದ ಯೋಜನೆ ಹಾಕುವುದು ಒಳ್ಳೆಯದು. ಇದರಿಂದ ನಿಮ್ಮ ಸುತ್ತಲಿನವರ ಮನಸ್ಸು ಹಗುರವಾಗುತ್ತದೆ.

ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್‌ ಮಾಡೋದು ಮರಿಬೇಡಿ

ಕೆಲವೊಮ್ಮೆ ಸಾಮಾಜಿಕ ಜಾಲತಾಣಗಳು ತಮ್ಮ ಅನುಕೂಲಕ್ಕೆ ಉಪಯೋಗವಾಗುತ್ತದೆ. ನೀವು ಹೋಗುವ ಪ್ರತಿ ಪ್ರವಾಸದ ಅನುಭವ, ಅಲ್ಲಿನ ಆಹಾರ, ಉಡುಗೆ, ತೊಡುಗೆಗಳ ಸಂಸ್ಕೃತಿಗಳನ್ನು ಫೋಟೋ ಅಥವಾ ಬರವಣಿಗೆ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವುದರಿಂದ ಇತರರಿಗೂ ಸಹಕಾರಿಯಾಗಲಿದೆ. ಜೊತೆಗೆ ಆ ಪರಿಸರದ, ಅಲ್ಲಿನ ಸಂಸ್ಕೃತಿ ಜಗತ್ತಿಗೆ ತೆರೆದುಕೊಳ್ಳಲು ಅವಕಾಶ ನೀಡಿದಂತಾಗುತ್ತದೆ. ನೀವು ಸಹ ಸಾಮಾಜಿಕ ಜಾಲತಾಣದಲ್ಲಿ ವಿಶೇಷ ವ್ಯಕ್ತಿಯಾಗಿಯೂ ಗುರುತಿಸಿಕೊಳ್ಳಬಹುದು. ಮುಂದೊಂದು ದಿನ ನಿಮ್ಮ ನೆನಪುಗಳನ್ನು ಮೆಲುಕು ಹಾಕಲು ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್‌ ಮಾಡಿದ ಫೋಟೋಗಳು ನೆನಪಿನ ಪುಟಗಳನ್ನು ತಿರುವು ಹಾಕುತ್ತವೆ.

ಬದುಕನ್ನೇ ಬದಲಿಸಿದ ಸಾಂಕ್ರಮಿಕ ರೋಗ

ಕೋವಿಡ್‌ನಂಥ ಸಾಂಕ್ರಮಿಕ ರೋಗ ಜಗತ್ತಿನಲ್ಲಿ ಸಾಕಷ್ಟು ಬದಲಾವಣೆಗಳನ್ನೇ ತಂದಿದೆ. ಪ್ರವಾಸಕ್ಕೆ ಹೋಗುವ ಜನರಿಗೆ ಪರಿಸರದೊಂದಿಗೆ ನಡೆದುಕೊಳ್ಳಬಹುದಾದ ನಡವಳಿಕೆಯನ್ನೂ ಸಹ ಕಲಿಸುವಲ್ಲಿ ಹೆಜ್ಜೆ ಇಟ್ಟಿದೆ ಎಂಬುದು ಸಂತೋಷದ ವಿಷಯ. ಹೌದು, Booking.com ಅವರ ಪ್ರಯಾಣ ವರದಿ 2021 ರ ಪ್ರಕಾರ, ಶೇ.88 ರಷ್ಟು ಭಾರತೀಯ ಪ್ರಯಾಣಿಕರು ಹೆಚ್ಚು ಸುಸ್ಥಿರವಾಗಿ ಹಾಗೂ ಸುರಕ್ಷಿತವಾಗಿ ಪ್ರಯಾಣಿಸಲು ಆದ್ಯತೆ ನೀಡುತ್ತಿದ್ದಾರೆ. ಜೊತೆಗೆ ಪರಿಸರ ಪ್ರಜ್ಞೆಯೂ ಜನರಲ್ಲಿ ಮೂಡಿದೆ. ಇನ್ನು, ಪ್ರಯಾಣಕ್ಕೆ ತೆರಳುವವರು ಯಾವೆಲ್ಲಾ ವಿಷಯಗಳಿಗೆ ತೆರದುಕೊಳ್ಳುತ್ತಾರೆ ಎನ್ನುವ ಅಧ್ಯಯನದಲ್ಲಿ ಶೇ.40ರಷ್ಟು ಪ್ರಯಾಣಿಕರು ಹೊಸ ಆಹಾರಗಳನ್ನು ಪ್ರಯತ್ನಿಸುವಲ್ಲಿ ಆಸಕ್ತಿ ತೀರುತ್ತಾರೆ ಎನ್ನಲಾಗಿದೆ. ಶೇ.31ರಷ್ಟು ಜನರು ಸ್ಥಳೀಯ ಭಕ್ಷ್ಯಗಳಿಗಾಗಿ ಹಂಬಲಿಸುತ್ತಾರೆ. ಶೇ.23ರಷ್ಟು ಜನರು ಆಫ್-ದಿ-ಬೀಟ್-ಪಾತ್ ಅನುಭವಗಳು ಮತ್ತು ಗಮ್ಯಸ್ಥಾನಗಳನ್ನು ಹುಡುಕುತ್ತಾರೆ ಎಂದು ಹೇಳಲಾಗಿದೆ.

ಥೀಮ್ ಪಾರ್ಕ್‌ಗಳಲ್ಲಿ ಅನುಭವ ಪಡೆಯುವುದು ಮರೆಯದಿರಿ

ಪ್ರವಾಸದ ಪ್ರಕಾರಗಳಲ್ಲಿ ಥೀಮ್‌ ಪಾರ್ಕ್‌ ಪ್ರವಾಸವೂ ಒಂದು. ಈ ಥೀಮ್‌ ಪಾರ್ಕ್‌ ಪ್ರವಾಸದಲ್ಲಿ ಮನರಂಜನೆಯಾದ ಅಮ್ಯೂಸ್‌ಮೆಂಟ್‌ ಪಾರ್ಕ್‌, ಪ್ರಾಣಿ ಸಂಗ್ರಹಾಲಯ ಪಾರ್ಕ್‌ಗಳು, ಕಲಾ-ವಾಸ್ತುಶಿಲ್ಪ ಪಾರ್ಕ್‌ಗಳು ಇವೆ. ಇದು ಆ ವ್ಯಕ್ತಿಯ ಆಸಕ್ತಿಗಳ ಮೇಲೆ ಈ ಪಾರ್ಕ್‌ಗಳಿಗೆ ಭೇಟಿ ನೀಡುತ್ತಾರೆ. ಆದರೆ, ಪ್ರತಿಯೊಬ್ಬ ಮನುಷ್ಯನೂ ಈ ಮೂರು ರೀತಿಯ ಪಾರ್ಕ್‌ಗಳಿಗೂ ಭೇಟಿ ನೀಡುವುದು ಅತ್ಯವಶ್ಯಕ. ಇದರಿಂದ ನಿಮ್ಮ ಜ್ಞಾನಾರ್ಜನೆ ಹೆಚ್ಚುವುದಲ್ಲದೇ ನಿಮ್ಮ ಮನಸ್ಸಿಗೆ ಆಹ್ಲಾದ ಸಿಗುವ ಹಾಗೂ ಅತಿ ಕಡಿಮೆ ವೆಚ್ಚದಲ್ಲಿ ಮುಗಿಯುವ ಪ್ರವಾಸಗಳಾಗಿವೆ.

ಲೇಖಕರು: ಅರುಣ್ ಕೆ ಚಿಟ್ಟಿಲಪಿಲ್ಲಿ, ವಂಡರ್‌ಲಾ ಹಾಲಿಡೇಸ್ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT