ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರವಾಸ: ಹಲವು ಆಕರ್ಷಣೆಗಳ ಬರ್ಲಿನ್

Last Updated 28 ಜನವರಿ 2023, 19:30 IST
ಅಕ್ಷರ ಗಾತ್ರ

ಯುರೋಪ್ ರಾಷ್ಟ್ರಗಳಲ್ಲಿನ ನಗರಗಳ ಪೈಕಿ ಬರ್ಲಿನ್‌ ನಗರದ ಇತಿಹಾಸವು ತುಂಬಾ ರೋಚಕವಾಗಿದೆ. ಪೂರ್ವ ಮತ್ತು ಪಶ್ಚಿಮ ಜರ್ಮನಿ ಎಂದು ಇಬ್ಭಾಗ ಮಾಡಿದ್ದ ಬರ್ಲಿನ್ ಗೋಡೆಯ ಒಂದು ಬದಿಯಲ್ಲಿ ಬಡತನ ನಿರುದ್ಯೋಗ ತಾಂಡವವಾಡುತ್ತಿದ್ದರೆ, ಮತ್ತೊಂದು ಬದಿಯಲ್ಲಿ ಶರವೇಗದಲ್ಲಿ ನಡೆಯುತ್ತಿತ್ತು ಅಭಿವೃದ್ಧಿ ಚಟುವಟಿಕೆ. ತಮ್ಮ ಜೀವನವನ್ನು ರೂಪಿಸಿಕೊಳ್ಳಲು ಜೀವದ ಹಂಗುತೊರೆದು ಗೋಡೆ ದಾಟುವ ಸಮಯದಲ್ಲಿ ಭದ್ರತಾ ಸಿಬ್ಬಂದಿಯ ಗುಂಡಿಗೆ ಬಲಿಯಾದವರು ಸಾವಿರಾರು ಪ್ರಜೆಗಳು. ರೊಚ್ಚಿಗೆದ್ದ ಪೂರ್ವ ಜರ್ಮನಿಯ ಪ್ರಜೆಗಳು ತಮ್ಮ ಅಭಿವೃದ್ಧಿಗೆ ಅಡ್ಡವಾಗಿದ್ದ ಬರ್ಲಿನ್‌ ಗೋಡೆಯನ್ನು ಕೆಡವಿದ್ದನ್ನು ನಾವು ಇತಿಹಾಸದ ಪಠ್ಯಗಳಲ್ಲಿ ಓದಿರುತ್ತೇವೆ.

ಬರ್ಲಿನ್‌ ನಗರವನ್ನು ವೀಕ್ಷಿಸುವ ಆಸೆ ನನ್ನ ಮಗನ ಮೂಲಕ ಸಾಕಾರಗೊಂಡಿತು. ನಾನು ಒಂದು ತಿಂಗಳು ನೆದರ್ಲೆಂಡ್ಸ್‌ನಲ್ಲಿದ್ದು, ಯುರೋಪ್ ರಾಷ್ಟ್ರಗಳ ಅನೇಕ ಪ್ರೇಕ್ಷಣೀಯ ಸ್ಥಳಗಳನ್ನು ವೀಕ್ಷಿಸಿದೆ. ಬರ್ಲಿನ್‌ ನಗರದ ಮೂರು ದಿನಗಳ ಪ್ರವಾಸ ಸದಾ ನೆನಪಿನಲ್ಲಿ ಉಳಿಯುವಂತದ್ದು.

ಅಲೆಕ್ಸಾಂಡರ್ ಪ್ಲಾಜಾ: ಬರ್ಲಿನ್‌ ನಗರದ ಜನದಟ್ಟಣೆಯುಳ್ಳ ಹಾಗೂ ಹಲವು ಆಕರ್ಷಣೆಗಳನ್ನು ಹೊಂದಿರುವ ಕೇಂದ್ರ ಪ್ರದೇಶ ಅಲೆಕ್ಸಾಂಡರ್ ಪ್ಲಾಜಾ. ಬರ್ಲಿನ್‌ ನಗರದಲ್ಲಿ ನಾವೆಲ್ಲೇ ಇದ್ದರೂ ನಮಗೆ ಬರ್ಲಿನ್‌ ಟೆಲಿವಿಷನ್ ಟವರ್ ಕಾಣುತ್ತದೆ. 368 ಮೀಟರ್ ಎತ್ತರವುಳ್ಳ, ನಗರದ ಅತಿ ಎತ್ತರದ ಟವರ್ ಇದಾಗಿದೆ. 1960ರ ದಶಕದಲ್ಲಿ ನಿರ್ಮಿಸಲಾದ ಟವರ್ ಮೇಲಿರುವ ಪ್ರವಾಸಿಗರ ವೀಕ್ಷಣಾ ಗ್ಯಾಲರಿಯಿಂದ ಬರ್ಲಿನ್‌ ನಗರದ ಸೌಂದರ್ಯವನ್ನು ಕಣ್ತುಂಬಿಕೊಳ್ಳಬಹುದು. ನಗರ ವೀಕ್ಷಣೆಗೆಂದೇ ಮೀಸಲಾಗಿರುವ ಹಾಫ್‌ ಆನ್-ಹಾಫ್‌ ಆಫ್ ಬಸ್ಸುಗಳು ಇಲ್ಲಿಂದಲೇ ಪ್ರಾರಂಭವಾಗುತ್ತವೆ.

ಎರಡನೇ ಮಹಾಯುದ್ಧದ ಸಮಯದಲ್ಲಿ ಅತ್ಯಂತ ಹೆಚ್ಚು ಹಾನಿಗೊಳಗಾಗಿದ್ದ ಈ ಪ್ರದೇಶವನ್ನು ಮರುಸ್ಥಾಪಿಸಲಾಗಿದೆ. ಹಾನಿಗೊಳಗಾದ ಕೆಲವು ಕುರುಹುಗಳು ಈಗಲೂ ನಮಗೆ ಕಾಣಲು ಸಿಗುತ್ತವೆ. ಜೆಂಡರ್‌ಮನ್ ಮಾರ್ಕೆಟ್‌ ಪ್ರದೇಶದಲ್ಲಿ ಅಡ್ಡಾಡಿದರೆ ಬರ್ಲಿನ್‌ ನಗರದ 18 ಮತ್ತು 19ನೇ ಶತಮಾನದ ಕಟ್ಟಡಗಳ ಆಕರ್ಷಕ ವಾಸ್ತು ಶೈಲಿಯನ್ನು ಕಣ್ತುಂಬಿಕೊಳ್ಳಬಹುದು. ಇಲ್ಲಿರುವ ಮೂರು ಹೆಗ್ಗುರುತುಗಳಾದ ಫ್ರೆಂಚ್ ಕ್ಯಾಥೆಡ್ರಲ್, ಜರ್ಮನ್ ಕ್ಯಾಥೆಡ್ರಲ್ ಹಾಗೂ ಕಾನ್ಸರ್ಟ್‌ ಹೌಸ್ ಕಟ್ಟಡಗಳು, ಅವುಗಳ ಭವ್ಯ ಗುಮ್ಮಟಗಳು ಎಂಥವರನ್ನೂ ಮಂತ್ರಮುಗ್ಧರನ್ನಾಗಿಸುತ್ತವೆ. ಕವಿ ಫ್ರೆಡರಿಕ್ ಷಿಲ್ಲರ್‌ನ ಭವ್ಯ ಪ್ರತಿಮೆಯನ್ನೂ ನಾವಿಲ್ಲಿ ನೋಡಬಹುದು.

ಬರ್ಲಿನ್‌ ಗೋಡೆ: ಎರಡನೇ ಮಹಾಯುದ್ಧದ ನಂತರ ಜರ್ಮನಿ ದೇಶವು ಪೂರ್ವ ಜರ್ಮನಿ ಮತ್ತು ಪಶ್ಚಿಮ ಜರ್ಮನಿಗಳಾಗಿ ಇಬ್ಭಾಗವಾಯಿತು. ರಾಜಧಾನಿ ಬರ್ಲಿನ್‌ ನಗರವನ್ನೂ ಇಬ್ಭಾಗ ಮಾಡಲಾಯಿತು. ಪೂರ್ವ ಜರ್ಮನಿಯ ಸರ್ಕಾರ ಬರ್ಲಿನ್‌ನಲ್ಲಿ 106 ಕಿ.ಮೀ ಉದ್ದದ ಕಾಂಕ್ರೀಟ್ ಗೋಡೆಯನ್ನು ನಿರ್ಮಿಸಿತು. ಬರ್ಲಿನ್‌ ಗೋಡೆಯನ್ನು 1989ರಲ್ಲಿ ಭಾಗಶಃ ಕೆಡವಿ ಪೂರ್ವ ಮತ್ತು ಪಶ್ಚಿಮ ಜರ್ಮನಿಯನ್ನು ಒಂದುಗೂಡಿಸುವ ಕಾರ್ಯಕ್ಕೆ ನಾಂದಿ ಹಾಡಲಾಯಿತು.

ಪೂರ್ವ ಬರ್ಲಿನ್‌ ಮತ್ತು ಪಶ್ಚಿಮ ಬರ್ಲಿನ್‌ ನಡುವಿನ ‘ವಾಲ್ ಕ್ರಾಸಿಂಗ್ ಪಾಯಿಂಟ್ ಚೆಕ್ ಪಾಯಿಂಟ್ ಚಾರ್ಲಿ’ ಸಮೀಪವೇ ಇರುವ ಮ್ಯೂಸಿಯಂಗೆ ಭೇಟಿಯಿತ್ತಲ್ಲಿ, ಪೂರ್ವ ಬರ್ಲಿನ್‌ನಿಂದ ಪಶ್ಚಿಮ ಬರ್ಲಿನ್‌ಗೆ ಬರ್ಲಿನ್‌ ವಾಲ್‌ ಮೂಲಕ ತಪ್ಪಿಸಿಕೊಳ್ಳುವಾಗ ಸಾವನ್ನಪ್ಪಿದ ಜನರ ಕಥೆಗಳನ್ನು ಹಾಗೂ ಬರ್ಲಿನ್‌ ಗೋಡೆಯ ಇತಿಹಾಸವನ್ನು ತಿಳಿಯಬಹುದು.

ಬರ್ಲಿನ್‌ನ ಮಹಾಗೋಡೆ, ಜೆಂಡರ್‌ಮೆನ್‌ ಮಾರ್ಕೆಟ್‌
ಬರ್ಲಿನ್‌ನ ಮಹಾಗೋಡೆ, ಜೆಂಡರ್‌ಮೆನ್‌ ಮಾರ್ಕೆಟ್‌

ವಿಶ್ವದ ಅತಿದೊಡ್ಡ ತೆರೆದ ಗ್ಯಾಲರಿ ಎಂಬ ಖ್ಯಾತಿಗೆ ಪಾತ್ರವಾಗಿರುವ ಸುಮಾರು ಒಂದು ಮೈಲು ಉದ್ದದ ಅಖಂಡವಾದ ಗೋಡೆಯಿದು. ನೂರಾರು ಅಂತರರಾಷ್ಟ್ರೀಯ ಕಲಾವಿದರು ಒಟ್ಟಾಗಿ ಚಿತ್ರಿಸಿರುವ ಶೀತಲ ಸಮರದ ಅಂತ್ಯದ ಸಂತೋಷದಾಯಕ ಹಾಗೂ ಆಶಾವಾದತ್ವವನ್ನು ಪ್ರದರ್ಶಿಸುವ ವರ್ಣಚಿತ್ರಗಳನ್ನು ನಾವಿಲ್ಲಿ ನೋಡಬಹುದು.

1791ರಲ್ಲಿ ನಿರ್ಮಿಸಲಾದ ಬ್ರಾಂಡನ್‌ಬರ್ಗ್ ಗೇಟ್, ಬರ್ಲಿನ್‌ ನಗರದ ಅನೇಕ ಹಳೆಯ ದ್ವಾರಗಳಲ್ಲಿ ಒಂದಾಗಿದೆ. ಎರಡು ಸಾಲುಗಳಲ್ಲಿ ಎತ್ತರವಾದ ಡೋರಿಕ್ ಕಂಬಗಳಿಂದ ನಿರ್ಮಿಸಲಾಗಿರುವ ದ್ವಾರದ ಮೇಲ್ಗಡೆ ನಾಲ್ಕು ಕುದುರೆಗಳನ್ನು ಹೊಂದಿರುವ ರಥವಿದ್ದು, ರೋಮನ್ ದೇವತೆ ವಿಕ್ಟೋರಿಯಾ ರಥವನ್ನು ನಡೆಸುತ್ತಿರುವ ಬೃಹತ್ ಗಾತ್ರದ ಶಿಲ್ಪವಿದೆ. ಬರ್ಲಿನ್‌ ಗೋಡೆ ಅಸ್ತಿತ್ವದಲ್ಲಿದ್ದಾಗ ನಿರ್ಮಿಸಲಾದ ಈ ದ್ವಾರವು ಅಥೆನ್ಸ್ ನಗರದ ಅಕ್ರೋಪೊಲೀಸ್ ದ್ವಾರದ ವಾಸ್ತು ಶೈಲಿಯನ್ನು ಹೋಲುತ್ತದೆ. ಇದರ ಸಮೀಪದಲ್ಲೇ 60 ಲಕ್ಷ ಯಹೂದಿ ಸಂತ್ರಸ್ತರ ನೆನಪಿಗಾಗಿ ನಿರ್ಮಿಸಲಾಗಿರುವ 2,711 ಕಾಂಕ್ರೀಟ್ ಬ್ಲಾಕ್‌ಗಳ ಯಹೂದಿಯರ ಸ್ಮಾರಕವಿದೆ.

ಭವ್ಯತೆಯ ದ್ಯೋತಕ: ಬ್ರಾಂಡನ್‌ಬರ್ಗ್‌ ಗೇಟ್‌ನಿಂದ ಸ್ವಲ್ಪವೇ ದೂರದಲ್ಲಿ ಜರ್ಮನಿಯ ಸಂಸತ್ ಭವನ ರೇಕ್‌ಸ್ಟಾಗ್‌ ಕಟ್ಟಡವಿದೆ. ಜರ್ಮನಿಯ ಸಂಸತ್ ಇಲ್ಲಿಂದಲೇ ಕಾರ್ಯನಿರ್ವಹಿಸುತ್ತದೆ. ಸಭಾಂಗಣವನ್ನು ಪ್ರವೇಶಿಸಿದರೆ, ಸುಂದರ ಗಾಜಿನ ಗುಮ್ಮಟ ಆಕರ್ಷಿಸುತ್ತದೆ. ಇಲ್ಲಿಂದ ಸಂಸತ್ ಕಲಾಪವನ್ನು ಜನ ವೀಕ್ಷಿಸಬಹುದು ಹಾಗೂ ಬರ್ಲಿನ್‌ ನಗರದ ವಿಹಂಗಮ ನೋಟವನ್ನು ಆಸ್ವಾದಿಸಬಹುದು.

ಮ್ಯೂಸಿಯಂ ಐಲ್ಯಾಂಡ್!: ಬರ್ಲಿನ್‌ ನಗರದಲ್ಲಿ ಹಾದು ಹೋಗುವ ಸ್ಪ್ರೀ ನದಿಯಲ್ಲಿ ದೋಣಿಗಳ ಮೂಲಕ ನಗರ ದರ್ಶನ ಮಾಡಬಹುದು. ಸ್ಪ್ರೀ ನದಿ ನಗರದ ಮಧ್ಯದಲ್ಲಿ ಹಾದುಹೋಗುವಾಗ ಒಂದು ದ್ವೀಪವನ್ನು ಸೃಷ್ಟಿಸಿದೆ. ಈ ಪ್ರದೇಶವು ಬರ್ಲಿನ್‌ ಐಲ್ಯಾಂಡ್ ಎಂದೇ ಪ್ರಖ್ಯಾತವಾಗಿದೆ.

ಯುನೆಸ್ಕೊ ವಿಶ್ವ ಪರಂಪರೆಯ ತಾಣಗಳಲ್ಲಿ ಒಂದಾಗಿರುವ 15ನೇ ಶತಮಾನಕ್ಕೂ ಹಿಂದಿನ ಇತಿಹಾಸವನ್ನು ಹೊಂದಿರುವ ಎರಡು ಶೈಲಿಗಳ ಸಂಗಮದ ಬರ್ಲಿನ್‌ ಕ್ಯಾಥೆಡ್ರಲ್. ಜರ್ಮನಿಯ ಅತಿದೊಡ್ಡ ಪ್ರೊಟೆಸ್ಟಂಟ್ ಚರ್ಚ್. ಎರಡನೇ ಮಹಾಯುದ್ಧದಲ್ಲಿ ಕ್ಯಾಥೆಡ್ರಲ್‌ನ ಒಳಾಂಗಣವು ಭಾಗಶಃ ಹಾನಿಗೊಳಗಾಗಿದ್ದು, ಪುನರ್ ನಿರ್ಮಿಸಲಾಗಿದೆ. ಯುರೋಪಿನ ಪ್ರಮುಖ ರಾಜವಂಶಸ್ಥರ ಗೋರಿಗಳು ಇಲ್ಲಿವೆ.

1699ರಲ್ಲಿ ನಿರ್ಮಿಸಲಾದ ಷಾರ್ಲೋ ಟೆನ್‌ಬರ್ಗ್‌ ಒಂದು ಭವ್ಯ ಅರಮನೆ. ಅರಮನೆಯ ಹಿಂಭಾಗದಲ್ಲಿ ವಿಶಾಲವಾದ ಸುಂದರ ಉದ್ಯಾನವನವಿದೆ. ಅರಮನೆಯ ಗೋಲ್ಡನ್ ಗ್ಯಾಲರಿಯಲ್ಲಿರುವ ಸಿಲ್ವರ್ ವಾಲ್ಟ್ ಎಂಥವರನ್ನೂ ಬೆರಗುಗೊಳಿಸುತ್ತದೆ. ನೂರಕ್ಕೂ ಅಧಿಕ ಟೇಬಲ್‌ಗಳ ಮೇಲೆ ಒಪ್ಪ ಓರಣವಾಗಿ ಜೋಡಿಸಲಾಗಿರುವ ಚಿನ್ನ, ಬೆಳ್ಳಿ, ಗಾಜಿನ ಮತ್ತು ಪಿಂಗಾಣಿಯಿಂದ ತಯಾರಿಸಲಾದ ಟೇಬಲ್ ವೇರ್, ಪರ್ಶಿಯನ್ ಕಿರೀಟ ಹಾಗೂ ವಜ್ರಾಭರಣಗಳು ಭವ್ಯತೆಯನ್ನು ಸಾರುತ್ತವೆ. ಹಳೆಯ ಅರಮನೆಯಲ್ಲಿರುವ ಪೋರ್ಸಿಲೀನ್ ಕ್ಯಾಬಿನೆಟ್ ಕೋಣೆಯಲ್ಲಿ ನೀಲಿ ಮತ್ತು ಬಿಳಿಬಣ್ಣದ ಪಿಂಗಾಣಿ ವಸ್ತುಗಳನ್ನು ವೀಕ್ಷಿಸಬಹುದು.

ಫ್ರ್ಯಾಂಕೋ-ಜರ್ಮನ್ ಯುದ್ಧದಲ್ಲಿ ಜಯಸಾಧಿಸಿದ ನೆನಪಿಗಾಗಿ 1873ರಲ್ಲಿ ನಿರ್ಮಿಸಲಾದ ಸ್ಮಾರಕದ ತುದಿಯಲ್ಲಿ ರೋಮನ್ ವಿಜಯ ದೇವತೆ ವಿಕ್ಟೋರಿಯಾಳ 37 ಟನ್ ತೂಕವುಳ್ಳ 27 ಅಡಿ ಎತ್ತರದ ಕಂಚಿನ ಶಿಲ್ಪವಿದ್ದು, ಸ್ಮಾರಕದ ಒಟ್ಟು ಎತ್ತರ 220 ಅಡಿಗಳಾಗಿವೆ. ಈ ಊರು ಹೆಜ್ಜೆ ಹೆಜ್ಜೆಗೂ ಚರಿತ್ರೆಯ ಕಥೆ ಹೇಳುತ್ತದೆ.

ವಿಕ್ಟರಿ ಟವರ್‌
ವಿಕ್ಟರಿ ಟವರ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT