ಗುರುವಾರ , ಮೇ 28, 2020
27 °C

ಅಬ್ಬಾ! ಹಾರ್ನ್‌ಬಿಲ್ ಹಬ್ಬ

ಶ್ರೀಧರ್. ಎಸ್. ಸಿದ್ದಾಪುರ. Updated:

ಅಕ್ಷರ ಗಾತ್ರ : | |

ತರಹೇವಾರಿ ಬಿದಿರಿನ ಡಬ್ಬಿಗಳು, ಅಷ್ಟೇ ಅಲ್ಲ ಬಿದಿರಿನಿಂದ ಮಾಡಿದ ತಟ್ಟೆಗಳು, ಚಮಚಗಳು, ಚಹದ ಕೆಟಲ್‍ಗಳು, ಚಿತ್ತಾಕರ್ಷಕ ಕೀ ಚೈನ್‍ಗಳು, ನೀರಿನ ಬಾಟಲಿ, ಹುಲ್ಲಿನಿಂದ ತಯಾರಿಸಿದ ವಿಶಿಷ್ಟ ಚಾಪೆಗಳು, ಶಾಲ್‍ಗಳು, ಕಾರ್ಪೆಟ್‌ಗಳು...

ಅಷ್ಟೇ ಅಲ್ಲ, ಭಿನ್ನ ರುಚಿಯ ದೇಸಿ ಜೇನುತುಪ್ಪ, ವಿವಿಧ ಹರಳುಗಳಿಂದ ಅಲಂಕೃತ ವಿಚಿತ್ರ ವಿನ್ಯಾಸದ ಕ್ಲಿಪ್‌ಗಳು, ಮನಸೂರೆಗೊಳಿಸುವ ಹರಳುಗಳ ಸರಗಳು, ಮರದಿಂದ ಮಾಡಿದ ಕಾಡುಕೋಣ, ಘೇಂಡಾಮೃಗಗಳ ಪ್ರತಿಕೃತಿಗಳು, ಮರದಿಂದ ಕೊರೆದ ಹಾರ್ನ್‌ಬಿಲ್ ಹಕ್ಕಿಗಳು, ಉಬ್ಬು ಶಿಲ್ಪಗಳು, ವಿಚಿತ್ರ ವಿನ್ಯಾಸದ ಹಿತ್ತಾಳೆ ಪದಕದ ಸರಗಳು ಕೊನೆಗೆ ಬಿದಿರಿನ ನಳ್ಳಿಗಳು!

ಇದೆಲ್ಲ ಕಂಡಿದ್ದು ನಾಗಾಲ್ಯಾಂಡ್‌ ರಾಜ್ಯದ ಕೊಹಿಮಾ ಪಟ್ಟಣ ಸಮೀಪದ ನಾಗಾ ಪಾರಂಪರಿಕ ಹಳ್ಳಿ ಕಿಸಮಾದಲ್ಲಿ ನಡೆಯುತ್ತಿದ್ದ ‘ಹಾರ್ನ್‌ಬಿಲ್‌’ ಹಬ್ಬದಲ್ಲಿ. ಪ್ರವಾಸೋದ್ಯಮ ಅಭಿವೃದ್ಧಿಗಾಗಿ 2000ನೇ ಇಸವಿಯಿಂದ ನಾಗಾಲ್ಯಾಂಡ್‌ ಸರ್ಕಾರವೇ ಈ ಹಬ್ಬವನ್ನು ಆಯೋಜಿಸಿ ಕೊಂಡು ಬಂದಿದೆ. ರಂಗು ರಂಗಿನ ಈ ಹಬ್ಬ ನೋಡಲು ಕಳೆದ ವರ್ಷದ ಡಿಸೆಂಬರ್‌ನಲ್ಲಿ ಗೆಳೆಯರೊಂದಿಗೆ ಆ ಹಳ್ಳಿಗೆ ಭೇಟಿ ನೀಡಿದ್ದೆ.

ಅದು ‘ಹಬ್ಬಗಳ ಹಬ್ಬ’
ಅಲ್ಲಿನ ಪ್ರವಾಸೋದ್ಯಮ ವಿಭಾಗದ ಟ್ಯಾಗ್‌ಲೈನ್ ಹೇಳುವಂತೆ ಅದು ನಿಜಕ್ಕೂ ‘ಹಬ್ಬಗಳ ಹಬ್ಬ’ವೇ. ಏಕೆಂದರೆ, ಹಬ್ಬಕ್ಕಾಗಿ ಇಡೀ ಗ್ರಾಮವೇ ರಂಗು ರಂಗಾಗಿ ಅಲಂಕಾರಗೊಂಡಿರುತ್ತದೆ. ಅದೊಂದು ರೀತಿಯ ಕಲೆ, ನೃತ್ಯ, ಸಂಸ್ಕೃತಿ, ಸಂಪ್ರದಾಯ, ಆಹಾರ, ಧಿರಿಸು.. ಹೀಗೆ ಹಲವು ವಿಚಾರಗಳ ಸಮ್ಮಿಲನದಂತೆ ಕಾಣುತ್ತೆ.

ಒಂದು ಕಡೆ ನಾಗಾ ಬುಡಕಟ್ಟು ಸಮುದಾಯದವರು ತಯಾರಿಸಿದ ವೈವಿಧ್ಯಮಯ ಕರಕುಶಲ ವಸ್ತುಗಳು ಪ್ರದರ್ಶನದಲ್ಲಿ ಕಂಡರೆ, ಇನ್ನೊಂದೆಡೆ ಚಿತ್ರ ವಿಚಿತ್ರ ಪೋಷಾಕಿನಿಂದ ಕಂಗೊಳಿಸುವ ನೃತ್ಯಗಾರರು, ವಿಶಿಷ್ಟ ದೇಸಿ ಆಟ, ಕುಣಿತ. ಕಣ್ಣಿಗೆ ಹಬ್ಬ ನೀಡುತ್ತಿತ್ತು. ಕಣ್ಣು ಹಾಯಿಸಿದಲ್ಲೆಲ್ಲಾ ಕಲೆ ಮತ್ತು ಕಲಾವಿದರು.

ಇಲ್ಲಿನ ಪ್ರತಿ ಮನೆ ಒಂದು ಮ್ಯೂಸಿಯಂ ತರಹ ಕಾಣುತ್ತಿತ್ತು. ಮನೆ ಮನೆಗಳಲ್ಲೂ ಸಾಂಪ್ರದಾಯಿಕ ಉಡುಗೆ, ಆಭರಣ, ಬಟ್ಟೆ, ಆಯುಧಗಳ ಪ್ರದರ್ಶನವಿತ್ತು. ಬುಡಕಟ್ಟು ಸಮುದಾಯದ ಪಂಗಡ, ಉಪ ಪಂಗಡ, ಸಂಪ್ರದಾಯಗಳ ಫಲಕಗಳಿದ್ದವು. ಅಲ್ಲಿ, ಅರ್ಧ ದಿನ ವಿವಿಧ ಪಂಗಡಗಳ ನೃತ್ಯ, ಸಂಪ್ರದಾಯಗಳ ಪ್ರದರ್ಶನ ಏರ್ಪಡಿಸುತ್ತಿದ್ದರು.

ವಿಶಿಷ್ಟ ಸಂಸ್ಕೃತಿ, ಆಚರಣೆ
ಹಾರ್ನ್‌ಬಿಲ್‌ ಹಬ್ಬವನ್ನು ನೋಡುತ್ತಲೇ, ನಾಗಾ ಬುಡಕಟ್ಟು ಸಂಸ್ಕೃತಿ, ಸಂಪ್ರದಾಯಗಳ ಬಗ್ಗೆಯೂ ಮಾಹಿತಿ ಸಂಗ್ರಹಿಸಲು ಆರಂಭಿಸಿದೆ. ಸುಮಾರು ಹದಿನೇಳಕ್ಕೂ ಹೆಚ್ಚು ಬುಡಕಟ್ಟು ಜನಾಂಗವನ್ನು ಹೊಂದಿರುವ ಈ ರಾಜ್ಯ ಅದಕ್ಕಿಂತಲೂ ಹೆಚ್ಚು ಭಾಷೆಗಳನ್ನು ಬಳಸುತ್ತದೆ. ಎಲ್ಲ ಭಾಷೆಗಳೂ ಒಂದಕ್ಕಿಂತ ಒಂದು ವಿಭಿನ್ನ. ಅವುಗಳ ನಡುವಿನ ಸಾಮ್ಯತೆಯೂ ಕಡಿಮೆ. ಒಂದು ಭಾಷೆಯ, ಒಂದೆರಡು ಶಬ್ದ ಕಲಿತೆನಾದರೂ, ಅವ್ಯಾವುವೂ ಮನಸ್ಸಿನಲ್ಲಿ ಉಳಿಯಲಿಲ್ಲ.

ಈ ಸಮುದಾಯದವರ ವಧು ವರಾನ್ವೇಷಣೆ ಬಹಳ ವಿಭಿನ್ನವಾಗಿ ನಡೆಯುತ್ತದೆಯಂತೆ. ಒಂದು ಬುಡಕಟ್ಟಿನ ವಧು, ವರರನ್ನು ಒಂದು ಕಡೆ ಸೇರಿಸುತ್ತಾರೆ. ಹುಡುಗ – ಹುಡುಗಿ ಆಯ್ಕೆ ಅವರವರಿಗೆ ಬಿಡುತ್ತಾರಂತೆ. ನನಗೆ ಈ ಕ್ರಮ ಅತ್ಯಂತ ಸಮರ್ಪಕವೆನಿಸಿತು. ಅವರವರ ಕೆಮಿಸ್ಟ್ರಿಗೆ ಸರಿ ಹೊಂದುವ ಹುಡುಗ ಅಥವಾ ಹುಡುಗಿಯನ್ನು ಆರಿಸಿಕೊಳ್ಳುವ ಅವಕಾಶ. ಅವರಿಗೆ ಜನಿಸಿದ ಮಕ್ಕಳು ಅವರಿಗಲ್ಲದೆ ಇಡೀ ಸಮುದಾಯಕ್ಕೆ ಸೇರುತ್ತವೆ ಎನ್ನುವುದು ಮತ್ತೊಂದು ವಿಶೇಷ. ಎಲ್ಲರೂ ಎಲ್ಲದಕ್ಕೂ ಭಾದ್ಯಸ್ಥರು. ಇಂತಹ ಸಂಪ್ರದಾಯ ಈಗ ಅಳಿವಿನಂಚಿಗೆ ಸರಿದಿದೆ ಎಂಬುದೇ ಖೇದ.

ವಿಭಿನ್ನ ಆಹಾರ ಪದ್ಧತಿ
ಇವರ ಆಹಾರ ಸಂಸ್ಕೃತಿಯೂ ಅನನ್ಯ. ಎಲ್ಲಾ ಜಾತಿಯ ಕಂಬಳಿ ಹುಳ, ಬಸವನ ಹುಳಗಳನ್ನು, ಹಕ್ಕಿಗಳನ್ನು ಹೊಡೆದು ತಿನ್ನುತ್ತಾರೆ. ಹಂದಿಯೊಂದನ್ನು ಒಣಗಿಸಿ ತಿಂಗಳುಗಳ ಕಾಲ ಹಾಳಾಗದಂತೆ ಕಾಪಾಡುತ್ತಾರೆ. ಹಂದಿ ಮಾಂಸದಿಂದಲೂ ಅನೇಕ ಭಕ್ಷ್ಯಗಳನ್ನು ಮಾಡುತ್ತಾರೆ. ಈ ಹಬ್ಬದಲ್ಲೂ ಎಲ್ಲೆಂದರಲ್ಲಿ ಹಂದಿ ಭಕ್ಷ್ಯ ಲಭ್ಯ. ಅಕ್ಕಿಯಿಂದ ತಯಾರಿಸಿದ ದೇಸಿ ಮದ್ಯವನ್ನು ಬಿದಿರಿನ ಸುಂದರ ಲೋಟಗಳಲ್ಲಿ ಲಿಂಗಬೇಧವಿಲ್ಲದೇ ಕುಡಿಯುತ್ತಾರೆ. ಸಸ್ಯಾಹಾರದಲ್ಲೂ ದೇಸಿ ಅಕ್ಕಿ ಮತ್ತು ಔಷಧೀಯ ಎಲೆಗಳಿಂದ ತಯಾರಿಸಿದ ವಿಶಿಷ್ಟ ತಿನಿಸು ಗಾಲ್ಹೊ ಉಣ್ಣಲು ಲಭ್ಯ. ನಾವಂತೂ ಒಬ್ಬೊಬ್ಬರು ಕನಿಷ್ಟ ಮೂರ್ನಾಲ್ಕು ಬಟ್ಟಲು ಗಾಲ್ಹೊ ಹೊಟ್ಟೆಗಿಳಿಸಿದೆವು. ಅದು ಅಷ್ಟು ರುಚಿಯಾಗಿತ್ತು!

ಐದು ದಿನವಿದ್ದರೂ ಅಲ್ಲಿಂದ ಬಿಟ್ಟು ಬರಲಾಗದೇ ಹೊರಟುಬಂದೆವು. ಈಗ ಡಿಸೆಂಬರ್ ತಿಂಗಳು ಹತ್ತಿರದಲ್ಲೇ ಇದೆ. ಈ ವರ್ಷದ ಅಂತರರಾಷ್ಟ್ರೀಯ ಹಾರ್ನ್‌ಬಿಲ್‌ ಹಬ್ಬಕ್ಕೆ ಹೋಗಿ ಬನ್ನಿ.

ಹೋಗುವುದು ಹೇಗೆ?
ಧೀಮಾಪುರ ಹಾಗೂ ಮಣಿಪುರದ ರಾಜಧಾನಿ ಇಂಫಾಲದ ವಿಮಾನ ನಿಲ್ದಾಣಗಳಿಂದ ಟ್ಯಾಕ್ಸಿಯಲ್ಲಿ ಕೊಹಿಮಾಕ್ಕೆ 3 ರಿಂದ 4 ಗಂಟೆಯ ಪ್ರಯಾಣ. ಇವೆರಡೂ ಕೊಹಿಮಾಗೆ ಸಮೀಪವಿರುವ ವಿಮಾನ ನಿಲ್ದಾಣಗಳು.

ಧೀಮಾಪುರಕ್ಕೆ ದೇಶದ ವಿವಿಧ ನಗರಗಳಿಂದ ರೈಲು ಸಂಪರ್ಕವೂ ಇವೆ.

ಕೊಹಿಮಾದಲ್ಲಿ ಮತ್ತು ಕಿಸಮಾ ಗ್ರಾಮದ ಸಮೀಪದಲ್ಲಿ ಅನೇಕ ಗೆಸ್ಟ್ ಹೌಸ್‍ಗಳಿವೆ. ಆದರೆ, ಹಾರ್ನ್‌ಬಿಲ್‌ ಹಬ್ಬದ ಸಮಯದಲ್ಲಿ ವಸತಿ ವ್ಯವಸ್ಥೆ ತುಸು ಕಷ್ಟ. ಮೊದಲೇ ಬುಕ್‌ ಮಾಡಿಕೊಳ್ಳಬೇಕು.

ಡಿಸೆಂಬರ್ ತಿಂಗಳಲ್ಲಿ ವಿಪರೀತ ಚಳಿ ಇರುವುದರಿಂದ, ಬೆಚ್ಚನೆಯ ಉಡುಪುಗಳೊಂದಿಗೆ ಪ್ರವಾಸ ಮಾಡುವುದು ಒಳಿತು.

**

ಹಾರ್ನ್‌ಬಿಲ್‌ ಪಕ್ಷಿ (ಮಂಗಟ್ಟೆ)ಯ ಚಿತ್ರವನ್ನು ನಾಗಾಲ್ಯಾಂಡ್‌ನ ಬುಡಕಟ್ಟು ಸಮುದಾಯದ ಎಲ್ಲ ಹಬ್ಬಗಳಲ್ಲೂ ಪ್ರದರ್ಶಿಸುತ್ತಾರೆ. ಆ ಕಾರಣಕ್ಕಾಗಿ ಸರ್ಕಾರ ಈ ಹಬ್ಬಕ್ಕೆ ‘ಹಾರ್ನ್‌ಬಿಲ್‌ ಹಬ್ಬ’ ಎಂದು ಹೆಸರಿಸಿದೆ. 2017ರಲ್ಲಿ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಹಬ್ಬವನ್ನು ಉದ್ಘಾಟಿಸಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು