ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನನ್ಯ ಸಿರಿಯ ಬಿಳಿಗಿರಿ

Last Updated 19 ಜನವರಿ 2013, 19:59 IST
ಅಕ್ಷರ ಗಾತ್ರ

ಯಾವ ದಿಕ್ಕಿಗೆ ನೋಡಿದರೂ ಪ್ರಪಾತ. ಕಣ್ಣು ಹಾಯಿಸಿದಷ್ಟೂ ಮುಗಿಯದ ಕಾಡು. ಸಾಲು ಸಾಲು ಪರ್ವತ ಶ್ರೇಣಿ. ಬಿಳಿ ಮೋಡಗಳ ಸಾಲು. ಕಂಪನ್ನೂ ತಂಪನ್ನೂ ಹೊತ್ತು ಹದವಾಗಿ ಬೀಸುವ ಗಾಳಿ... ಬಿಳಿಗಿರಿರಂಗನ ಬೆಟ್ಟದ ನೋಟವೆಂದರೆ ಅದು ರಸಿಕರ ಪಾಲಿನ ಹಬ್ಬದೂಟ.

ಬಿಳಿಗಿರಿ ರಂಗನ ಬೆಟ್ಟಕ್ಕೆ ಕೂಸಿನ ನಡಿಗೆಯಂತೆ ನಿಧಾನವಾಗಿ ಏರಬೇಕು. ಈ ಬೆಟ್ಟ ಸಮುದ್ರಮಟ್ಟದಿಂದ 5091 ಅಡಿ ಎತ್ತರದಲ್ಲಿದೆ. ಕಾಡಿನ ದಾರಿಯಲ್ಲಿ ಅಲ್ಲಲ್ಲಿ ಆನೆ, ಕಾಡೆಮ್ಮೆ, ಚಿಗರೆಗಳು, ಸರಿದು ಹೋಗುವ ಸರೀಸೃಪಗಳು, ಮಂಗಗಳು, ಹಕ್ಕಿಗಳು, ಜಿಂಕೆಗಳು, ಕಡವೆಗಳು ಎದುರಾಗುತ್ತವೆ.

ಬಿಳಿಗಿರಿ ರಂಗನ ಬೆಟ್ಟದ ಕೇಂದ್ರಬಿಂದು ಅಲ್ಲಿರುವ ರಂಗನಾಥ ಸ್ವಾಮಿ ದೇವಾಲಯ. ಗುಡಿಯ ಬಳಿಯಲ್ಲಿರುವ ವೀಕ್ಷಣಾ ಸ್ಥಳದಲ್ಲಿ ನಿಂತು ಯಾವ ದಿಕ್ಕಿಗೆ ನೋಡಿದರೂ ಆಳ ಕಮರಿಗಳು ಕಾಣುತ್ತವೆ. ದಟ್ಟ ಹಸಿರು ಹೊದಿಕೆಯುಟ್ಟ ಭೂರಮೆಯನ್ನು ಬಿಗಿಯಾಗಿ ಅಪ್ಪಿಕೊಂಡ ಹಿಮದ ದೃಶ್ಯ ನೋಡುಗರ ಮನಸ್ಸನ್ನು ಪ್ರಫುಲ್ಲಗೊಳಿಸುತ್ತದೆ. ಭೂಮಿಗಿಂತ ಆಕಾಶವೇ ನಮ್ಮ ಸಮೀಪವಿದ್ದಂತೆ ಭಾಸವಾಗುತ್ತದೆ.

ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲ್ಲೂಕಿಗೆ ಸೇರಿಕೊಂಡಿರುವ ಬಿಳಿಗಿರಿ ಬೆಟ್ಟ ಪ್ರದೇಶ ಹಸಿರು ಕಾಡಿನಿಂದ ಸಮೃದ್ಧ. ಇಲ್ಲಿನ ಮೂಲ ನಿವಾಸಿಗಳಾದ ಸೋಲಿಗರ ಅಧಿದೇವತೆ ರಂಗನಾಥ. ರಂಗ, ಬಿಳಿಗಿರಿ ರಂಗ, ರಂಗಪ್ಪ, ರಂಗಸ್ವಾಮಿ- ಸೋಲಿಗರ ಭಕ್ತಿಭಾವದ ಅಭಿವ್ಯಕ್ತಿಗೆ ದೇವರು ಹಲವು ಹೆಸರುಗಳಲ್ಲಿ ಒದಗಿಬಂದಿದ್ದಾನೆ.

ದೇವಸ್ಥಾನದ ಬಳಿ ಇರುವ ಕಮರಿಕಲ್ಲು ಬೆಳ್ಳಗಿದೆ. ಆ ಕಾರಣದಿಂದಾಗಿ ಇದನ್ನು ಬಿಳಿಗಿರಿ ಎಂದು ಕರೆಯುವುದು ಪ್ರತೀತಿ. ಈ ದೇವಾಲಯ ದ್ರಾವಿಡ ಶೈಲಿಯಲ್ಲಿದ್ದು, ಚೋಳರ ಕಾಲದಲ್ಲಿ ನಿರ್ಮಾಣವಾಯಿತಂತೆ. ರಂಗನ ಮನದನ್ನೆ ಲಕ್ಷ್ಮಿ ಇಲ್ಲಿ ರಂಗನಾಯಕಿ. ಜತೆಗೆ ಹನುಮಂತ ಮಹಾಮುನಿ, ರಾಮಾನುಜಾಚಾರ್ಯ, ವೇದಾಂತಚಾರ್ಯರ ಮೂರ್ತಿಗಳು ಇಲ್ಲಿವೆ.

ಸಫಾರಿಗೂ ಅವಕಾಶ
ಬಿಳಿಗಿರಿರಂಗನ ದೇವಸ್ಥಾನದಿಂದ 16 ಕಿ.ಮೀ ದೂರದಲ್ಲಿರುವ `ಕೆ ಗುಡಿ'ಯಲ್ಲಿ (ಕ್ಯಾತದೇವರ ಗುಡಿ) 600 ರೂಪಾಯಿ ಖರ್ಚು ಮಾಡಿದರೆ ಸಫಾರಿಗೆ ಹೋಗಿ ಬರಬಹುದು. ಪ್ರವಾಸಿಗಳು ತಂಗಲು ಜಂಗಲ್ ರಿಸಾರ್ಟ್ ಕೂಡ ಇಲ್ಲಿದೆ. ಬೆಳಿಗ್ಗೆ 6 ರಿಂದ 9 ಗಂಟೆವರೆಗೆ ಮತ್ತು ಸಂಜೆ 4ರಿಂದ 6ರವರೆಗೆ ಅರಣ್ಯ ಇಲಾಖೆಯ ಜೀಪ್‌ನಲ್ಲಿ ಸಫಾರಿಗೆ ಅವಕಾಶವಿದೆ. ಸಫಾರಿಗೆಂದೇ ಪ್ರತ್ಯೇಕ ರಸ್ತೆಗಳಿದ್ದು, ಸುಮಾರು 10 ಕಿ.ಮೀ ದೂರ ಸಫಾರಿ ಮಾಡಬಹುದು. ಕೆರೆಗಳ ಬಳಿಗೆ ಸಫಾರಿ ಹೋಗುವುದರಿಂದ ನೀರು ಕುಡಿಯಲು ಬರುವ ಕಾಡಾನೆ, ಹುಲಿ ಸೇರಿದಂತೆ ಅನೇಕ ಬಗೆಯ ಪ್ರಾಣಿ ಪಕ್ಷಿ, ಚಿಟ್ಟೆಗಳ ದರ್ಶನವಾಗುತ್ತದೆ.

ಗೋರುಕನ ರೆಸಾರ್ಟ್
ರಂಗನಾಥ ಸ್ವಾಮಿ ಗುಡಿಗೆ ಇನ್ನೂ ಒಂದು ಕಿಮೀ ದೂರ ಇದ್ದಾಗಲೇ ಗೋರುಕನ ಪ್ರವಾಸಿ ತಂಗುದಾಣ ಕಾಣಿಸುತ್ತದೆ. ಕಳೆದ ಎರಡು ವರ್ಷಗಳ ಹಿಂದೆ ಸೋಲಿಗರ ಅಭಿವೃದ್ಧಿಗಾಗಿ ಪ್ರಾರಂಭವಾದ ಇದು ಪ್ರವಾಸಿಗರ ಆಕರ್ಷಣೀಯ ಕೇಂದ್ರ. ಇಲ್ಲಿ ಹಳ್ಳಿ ಸೋಗೆಯಲ್ಲಿ ನಿರ್ಮೀತವಾದ 10 ಕಾಟೇಜ್‌ಗಳಿವೆ. ಟ್ರೀ ಹೌಸ್ ಹಾಗೂ ಟೆಂಟ್ ಹೌಸ್ ಕೂಡ ಇದೆ. ತಾಜಾ ಹಣ್ಣು, ತರಕಾರಿ ಮತ್ತು ನೊರೆ ಹಾಲಿನಿಂದ ಸಿದ್ಧಪಡಿಸಿದ ಸ್ವಾದಿಷ್ಟ ಆಹಾರ ಅತಿಥಿಗಳಿಗೆ ಲಭ್ಯ. ಇಲ್ಲಿನ ಆಹಾರದ ಉತ್ಪನ್ನಗಳನ್ನು ವಿವೇಕಾನಂದ ಗಿರಿಜನ ಕಲ್ಯಾಣ ಕೇಂದ್ರದ ಸೋಲಿಗ ರೈತರು ಒದಗಿಸುತ್ತಾರೆ.

ಈ ತಂಗುದಾಣದಲ್ಲಿ ಸೋಲಿಗರ ಪಿನಾಸಿ ವಾದ್ಯ, ಉಜ್ಜರಿ, ಸೇರು, ಮಾನ, ಕೋಳಿ ಗುಂಡುರುಕೆ, ಉಪ್ಪಿನ ಮಡಿಕೆ, ಬಿದಿರಿನ ಕೊಟ್ಟ, ಕವಲೆ ಕಡ್ಡಿ, ಬಿದಿರಿನ ಲೋಟ, ಕೋಳಿ ಪಾಜಿ, ತೊಂಬೆ, ಕೈಗತ್ತಿ, ಮಡಿಕೆ ಕುಡಿಕೆ ಇತ್ಯಾದಿ ನಿತ್ಯ ಬಳಕೆಯ ವಸ್ತುಗಳನ್ನು ಇಟ್ಟಿರುವ ಮ್ಯೂಸಿಯಂ ಕೂಡ ಇದೆ. ಅತಿಥಿ ಗೃಹಕ್ಕೆ ಹೊಂದಿಕೊಂಡಂತೆ `ಆಯುರ್ವೇದ ತೈಲಗಳ ಮಸಾಜ್ ಸೆಂಟರ್ ಕೂಡ ಲಭ್ಯವಿದೆ'.

ಬೆಟ್ಟಕ್ಕೆ ಮಾರ್ಗ
ಬಿಳಿಗಿರಿರಂಗನಬೆಟ್ಟ ಬೆಂಗಳೂರಿನಿಂದ 220 ಕಿ.ಮೀ ದೂರವಿದೆ. ಮೈಸೂರಿನಿಂದ 90 ಕಿ.ಮೀ ದೂರ. ಮೈಸೂರಿನಿಂದ ತಿರುಮಕೂಡಲು ನರಸೀಪುರ, ಅಲ್ಲಿಂದ ಸಂತೆಮಾರನಹಳ್ಳಿ ಮಾರ್ಗವಾಗಿ ಯಳಂದೂರಿನಿಂದ 24 ಕಿ.ಮೀ ದೂರದಲ್ಲಿದೆ. ಮೈಸೂರಿನಿಂದ -ನಂಜನಗೂಡು- ಸಂತೆಮಾರನಹಳ್ಳಿ- ಯಳಂದೂರು ಮಾರ್ಗವಾಗಿಯೂ ಹೋಗಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT