ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಲ್ಲೆಲ್ಲೂ ಹಸಿರು

Last Updated 27 ಮೇ 2013, 19:59 IST
ಅಕ್ಷರ ಗಾತ್ರ

ಎತ್ತ ನೋಡಿದರೂ ಹಸಿರು ದಿಬ್ಬಣ, ಬೆಟ್ಟಗುಡ್ಡಗಳ ಸೌಂದರ್ಯ. ಎಲ್ಲೆಲ್ಲೂ ವಿಶಾಲವಾಗಿರೋ ಕೆರೆಗಳು, ಇದರ ಮಧ್ಯೆ ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿ ಸಂಪದ್ಭರಿತವಾಗಿ ಬೆಳೆದ ಪೈರು, ಸದಾ ಸುಗ್ಗಿಕಾಲದ ವಾತಾವರಣ... ಒಟ್ಟಾರೆ ಇಡೀ ತಾಲ್ಲೂಕು ಹಸಿರು ಸೀರೆಯುಟ್ಟ ನಾರಿಯಂತೆ ಕಂಗೊಳಿಸುತ್ತಿದೆ.

ಊರಿಗೊಂದು ಕೆರೆ, ಕೇರಿಗೊಂದು ಕಲ್ಯಾಣಿ, ಮನೆಗೊಂದು ಬಾವಿ... ಅಬ್ಬಾ ಇದೆಲ್ಲಾ ಇತಿಹಾಸದಲ್ಲಿ ಓದಿದ ನೆನಪು. ಇವುಗಳನ್ನೆಲ್ಲ ಈಗ ಹುಡುಕಲು ಹೊರಟರೆ ತಾಲ್ಲೂಕಿಗೊಂದು ಕೆರೆ ಸಿಗುವುದೂ ಅಪರೂಪ. ಆದರೆ ಈ ಸನ್ನಿವೇಶಕ್ಕೆ ವಿರುದ್ಧ ಎಂಬಂತೆ ಇಲ್ಲೊಂದು ತಾಲ್ಲೂಕಿನಲ್ಲಿ ಕೆರೆ ಇಲ್ಲದ ಗ್ರಾಮಗಳೇ ಇಲ್ಲ. ಸದಾ ಈ ಕೆರೆಗಳಲ್ಲಿ ನೀರು ತುಂಬಿರುತ್ತದೆ, ಅಲ್ಲದೆ ಇಲ್ಲಿನ ರೈತರ ಜೀವನಾಡಿಯಾಗಿದೆ. ಅದೇ ರಾಜ್ಯದ ಗಡಿಜಿಲ್ಲೆಯಾದ ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲ್ಲೂಕು.

ಯಳಂದೂರು ತಾಲ್ಲೂಕಿನಲ್ಲಿ 33 ಗ್ರಾಮಗಳಿದ್ದು, 33ಕ್ಕೂ ಹೆಚ್ಚು ಕೆರೆಗಳಿವೆ. ಪ್ರತಿಯೊಂದು ಹಳ್ಳಿಯಲ್ಲೂ ಸಾವಿರಾರು ಎಕರೆಯಲ್ಲಿ ಹರಡಿಕೊಂಡಿರುವ ವಿಶಾಲವಾದ ಕೆರೆಗಳಿವೆ. ಹಲವು ಗ್ರಾಮಗಳಲ್ಲಿ ನೂರಾರು ಎಕರೆಯ ಎರಡು ಮೂರು ಕೆರೆಗಳಿವೆ. ಎಲ್ಲ ಕಾಲದಲ್ಲೂ ಈ ಕೆರೆಗಳಲ್ಲಿ ನೀರು ತುಂಬಿರುವುದು ಮತ್ತೊಂದು ವಿಶೇಷ. ತಾಲ್ಲೂಕಿನ ಅಗರ ಕೆರೆ ರಾಜ್ಯದ ಅತಿ ಹೆಚ್ಚು ವಿಸ್ತಾರವಾದ ಕೆರೆಗಳಲ್ಲಿ ಒಂದು ಎಂಬ ಖ್ಯಾತಿ ಪಡೆದಿದೆ. ಅಂದ ಹಾಗೆ ಇವುಗಳನ್ನೆಲ್ಲ ನಿನ್ನೆ ಮೊನ್ನೆ ನಿರ್ಮಿಸಿದ್ದಲ್ಲ. ಇವುಗಳಿಗೆ ಬರೋಬ್ಬರಿ 150 ವರ್ಷಗಳ ಇತಿಹಾಸವಿದೆ!

ಬಿಳಿಗಿರಿಬೆಟ್ಟದ ತಪ್ಪಲಿನಲ್ಲಿರುವ ತಾಲ್ಲೂಕಿನ ಕೆರೆಗಳಿಗೆ ಬೆಟ್ಟದ ಅನೇಕ ಕೊಲ್ಲಿಗಳಿಂದ ಅಪಾರ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. ಇಲ್ಲಿನ ಮತ್ತೊಂದು ವಿಶೇಷವೆಂದರೆ ನೂರಾರು ಅಡಿಗಳಲ್ಲಿ ರೈತರಿಗೆ ನೀರು ಸಿಗುತ್ತಿದೆ. ಅಂತರ್ಜಲ ಮಟ್ಟ ಕುಸಿದಿಲ್ಲ. ಇಲ್ಲಿನ ಕೆರೆಗಳಲ್ಲಿ ನೀರು ಖಾಲಿಯಾದರೆ ಕಬಿನಿಯಿಂದ ನೀರು ಹರಿಸುವ ವ್ಯವಸ್ಥೆಯೂ ಇದೆ. ಕಬಿನಿ ನೀರು ಬರುವುದಕ್ಕೂ ಮುನ್ನ ರೈತರು ಕೆರೆಗಳಿಗೆ ನೀರು ಸಂಗ್ರಹಿಸಿ ವರ್ಷದಲ್ಲಿ ಖುಷ್ಕಿ ಮತ್ತು ಅರೆ ಖುಷ್ಕಿ ಎರಡು ಫಸಲು ಬೆಳೆಯುತ್ತಿದ್ದಾರೆ.

ದಿವಾನರ ಕೊಡುಗೆ
ಕ್ರಿ.ಶ. 1800 ಮೈಸೂರು ರಾಜರು ಆಳ್ವಿಕೆ ನಡೆಸುತ್ತಿದ್ದ ಸಮಯ. ಮುಮ್ಮಡಿ ಕೃಷ್ಣರಾಜ ಒಡೆಯರ್ ಆಳ್ವಿಕೆ ನಡೆಸುತ್ತಿದ್ದ ಕಾಲದಲ್ಲಿ ಕೊಯಮತ್ತೂರಿನ ದಿವಾನ್ ಪೂರ್ಣಯ್ಯ ಅವರು ಮೈಸೂರಿನ ದಿವಾನರಾಗಿದ್ದರು. ದಿವಾನ್ ಪೂರ್ಣಯ್ಯನವರ ದಕ್ಷತೆ, ದೂರದೃಷ್ಟಿ ಮತ್ತು ಕಾರ್ಯವೈಖರಿಗೆ ಮನಸೋತ ಬ್ರಿಟಿಷರು ಯಳಂದೂರನ್ನು ಪೂರ್ಣಯ್ಯನವರಿಗೆ ಬಳುವಳಿಯಾಗಿ ಕೊಡುವಂತೆ ಮೈಸೂರು ರಾಜರಿಗೆ ಶಿಫಾರಸು ಮಾಡಿದರು. ಅಂತೆಯೇ ಯಳಂದೂರು ಬಳುವಳಿಯಾಗಿ ಬಂದ ಕೆಲವೇ ವರ್ಷಗಳಲ್ಲಿ ಅಲ್ಲಿನ ರೈತರನ್ನು ಅತಿವೃಷ್ಠಿ ಮತ್ತು ಅನಾವೃಷ್ಠಿಯಿಂದ ಪಾರುಮಾಡಲು ಪೂರ್ಣಯ್ಯನವರು ಚಿಂತಿಸಿದ್ದರು.

ಊರಿಗೊಂದು ಕೆರೆಯಿರಲಿ, ನಾಡು ಸಮೃದ್ಧವಾಗಿರಲಿ ಎಂದು ದಿವಾನ್ ಪೂರ್ಣಯ್ಯನವರು ಈ ತಾಲ್ಲೂಕಿನ ಪ್ರತಿ ಗ್ರಾಮದಲ್ಲೂ ಕೆರೆಗಳನ್ನು ನಿರ್ಮಿಸಿದರು. ಮೊದಲು ಇಲ್ಲಿದ್ದ ಚಿಕ್ಕದಾದ ಕೆರೆಗಳಿಗೂ ಕಾಯಕಲ್ಪ ನೀಡಿದರು. ದಿವಾನರು ನಿವೃತ್ತರಾದ ನಂತರ ಯಳಂದೂರಿನಲ್ಲಿಯೇ ನೆಲೆಸಲು ಒಂದು ಬಂಗಲೆಯನ್ನು ನಿರ್ಮಿಸಿದ್ದರು ಎನ್ನುತ್ತದೆ ಇತಿಹಾಸ.

ದಿವಾನರ ಕನಸಿನ ಕೂಸಿಗೆ ಗ್ರಹ ಹಿಡಿದಿದೆ ಎಂದರೆ ತಪ್ಪಾಗಲಾರದು. 150 ವರ್ಷಗಳ ಹಿಂದೆ ನಿರ್ಮಿಸಿದ್ದ ಕೆರೆಯಲ್ಲಿ ಹೂಳು ತುಂಬಿಕೊಂಡಿದೆ. ಸಾವಿರಾರು ಎಕರೆ ಕೆರೆಗಳು ಒತ್ತುವರಿಯಾಗಿ ಚಿಕ್ಕದಾಗಿವೆ. ನೀರಿನ ಮಟ್ಟ ಕಡಿಮೆಯಾಗುತ್ತಿದೆ. ಗಣೇಶನ ಕಡ್ಡಿಗಳು ಆಕಾಶಕ್ಕೆ ಮುತ್ತಿಡುವಂತೆ ಬೆಳೆದಿವೆ. ಇದರ ಜತೆಗೆ ಕಳೆಗಳು ಆಳೆತ್ತರಕ್ಕೆ ಬೆಳೆದು ನಿಂತಿವೆ. ಇದರಿಂದ ಕೆರೆಯಲ್ಲಿ ಹೆಚ್ಚು ನೀರಿನ ಶೇಖರಣೆಗೆ ಅಡಚಣೆಯಾಗುತ್ತಿದ್ದು, ಮುಂಬರುವ ದಿನಗಳಲ್ಲಿ ಈ ಕೆರೆಗಳು ಕಣ್ಮರೆಯಾಗುವ ಮುನ್ಸೂಚನೆ ನೀಡುತ್ತಿವೆ.

ಸದ್ಯ ಇರುವ ನೀರಿನಲ್ಲಿ ಕೃಷಿಗೆ ತೊಂದರೆ ಇಲ್ಲವೆಂದೋ ಏನೋ ಸಂಬಂಧಪಟ್ಟವರು ಹೂಳೆತ್ತುವ ಬಗ್ಗೆ ಚಿಂತಿಸುತ್ತಿಲ್ಲ. ಇದು ಹೀಗೆ ಮುಂದುವರಿದಲ್ಲಿ ಕೆರೆಗಳಿಗೆ ಕಾಯಕಲ್ಪ ನೀಡಿದ ಮಹಾನ್ ವ್ಯಕ್ತಿಯ ಕನಸಿನ ಕೆರೆಗಳು ಲಂಟಾನಗಳಿಂದ ಮುಚ್ಚಿಹೋಗಲು ಹೆಚ್ಚು ದಿನಗಳು ಬೇಕಿಲ್ಲ.

ತಟ್ಟದ ಬರದ ಬಿಸಿ
ಈ ಭಾರಿ ಕರ್ನಾಟಕದ ಬಹುತೇಕ ಜಿಲ್ಲೆಗಳೆಲ್ಲ ಬರಗಾಲದಿಂದ ತತ್ತರಿಸಿದ್ದವು. ಕುಡಿಯಲು ನೀರಿಲ್ಲದೆ ಜನ ಮತ್ತು ಜಾನುವಾರುಗಳು ಪರದಾಡಿದವು. ಬಿತ್ತಿದ ಬೀಜ ಮೊಳಕೆಯೊಡೆಯಲೇ ಇಲ್ಲ. ರೈತ ಅಸಹಾಯಕನಾಗಿ ಆಕಾಶದತ್ತ ಮುಖ ಮಾಡಿದ. ಇದು ಬರದ ಛಾಯೆಯಲ್ಲಿ ಮಿಂದೆದ್ದ ಪ್ರತಿ ತಾಲ್ಲೂಕಿನಲ್ಲೂ ಇದ್ದ ಭೀಕರ ದುಸ್ಥಿತಿ.

ಸರ್ಕಾರ ಅನೇಕ ಜಿಲ್ಲೆಗಳನ್ನು ಬರಗಾಲ ಪಿಡೀತ ಜಿಲ್ಲೆಯನ್ನಾಗಿ ಘೋಷಣೆ ಮಾಡಿತ್ತು. ಅದರಲ್ಲಿ ಚಾಮರಾಜನಗರ ಜಿಲ್ಲೆಯೂ ಹೊರತಾಗಿಲ್ಲ. ಕೊಳ್ಳೆಗಾಲ, ಗುಂಡ್ಲುಪೇಟೆ, ಹನೂರು, ಮಲೆಮಹದೇಶ್ವರ ಬೆಟ್ಟದಿಂದ ಹಿಡಿದು ಹೊಗೇನಕಲ್‌ವರೆಗೂ ನೀರಿಗೆ ಹಾಹಾಕಾರ ಎದ್ದಿತ್ತು. ವಿಪರ್ಯಾಸವೆಂದರೆ ಯಳಂದೂರು ತಾಲ್ಲೂಕು ಮಾತ್ರ ಬರಕ್ಕೆ ಅಲ್ಲಾಡಲಿಲ್ಲ.

ಅಂದರೆ ಯಳಂದೂರಿಗೆ ಬರ ತಟ್ಟಲಿಲ್ಲ ಎಂದಲ್ಲ. ಬರದ ಪರಿಣಾಮ ತುಸು ಕಡಿಮೆಯೇ ಇತ್ತು. ವರ್ಷಕ್ಕೆ ಒಂದು ಬೆಳೆ ಬೆಳೆಯುತ್ತಿದ್ದ ಕಡೆಗಳಲ್ಲಿ ಬರದಿಂದ ಆ ಬೆಳೆಯನ್ನೂ ತೆಗೆಯಲಾಗಲಿಲ್ಲ. ಆದರೆ ಯಳಂದೂರಿನಲ್ಲಿ ವರ್ಷದ ಮೂರು ಅಥವಾ ಎರಡು ಬೆಳೆಗಳಲ್ಲಿ ಒಂದು ಬೆಳೆ ಮಾತ್ರ ಕಡಿಮೆಯಾಗಿತ್ತು. ಹೀಗಿದ್ದೂ ಹೆಚ್ಚಿನವರು ಎರಡು ಬೆಳೆ ಬೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ. ಇವು ದಿವಾನ್ ಪೂರ್ಣಯ್ಯನವರ ಕೊಡುಗೆ.

`ಎಲ್ಲ ಪಕ್ಷಗಳು ತಂಡೋಪತಂಡವಾಗಿ ಬಂದು ಹೋದ್ರು. ಅದ್ಯಾವುದೂ ಬರಗಾಲದಲ್ಲಿ ನಮಗೆ ಉಪಯೋಗವಾಗಲಿಲ್ಲ. ನಮಗೆ ನೆರವಾಗಿದ್ದು ಇಲ್ಲಿನ ಕೆರೆಗಳು. ನಾವು ದಿವಾನರಿಗೆ ಋಣಿಗಳು. ಕೆರೆಯಲ್ಲಿ ಹೂಳು ತುಂಬಿಕೊಂಡಿದೆ. ಅವುಗಳ ಅಭಿವೃದ್ಧಿಗೆ ನಾವೆಲ್ಲ ಕೈಜೋಡಿಸುತ್ತೇವೆ' ಎನ್ನುತ್ತಾರೆ ಸ್ಥಳೀಯರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT