ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನಮೋಹಕ ಭೋಗಾನಂದೀಶ್ವರ

ಸುತ್ತಾಣ
Last Updated 8 ಮೇ 2015, 19:30 IST
ಅಕ್ಷರ ಗಾತ್ರ

ಭೋಗಾನಂದೀಶ್ವರ ದೇವಸ್ಥಾನವು ನಂದಿ ಬೆಟ್ಟದ ತಪ್ಪಲಲ್ಲಿರುವ ನಂದಿ ಗ್ರಾಮದಲ್ಲಿದೆ. ನಂದಿ ಗ್ರಾಮವು ಚಿಕ್ಕಬಳ್ಳಾಪುರ ಜಿಲ್ಲೆಗೆ ಸೇರಿದ್ದು, ಬೆಂಗಳೂರಿನಿಂದ 60 ಕಿ.ಮೀ. ದೂರದಲ್ಲಿದೆ. ಇತ್ತೀಚೆಗೆ ಹೆಸರುವಾಸಿಯಾಗುತ್ತಿರುವ ಈ ಪ್ರವಾಸಿ ತಾಣವು ಅತಿ ಹಳೆಯದಾದ ಶಿವ ಪಾರ್ವತಿ ದೇವಸ್ಥಾನವೆಂದೂ ಹೇಳಲಾಗುತ್ತದೆ. 

ವೀಕ್ಷಕರ ಕಣ್ಮನ ಸೆಳೆಯುವ ಇಲ್ಲಿನ ಅತ್ಯದ್ಭುತ ಶಿಲ್ಪಕಲೆಗೆ ಸಾವಿರ ವರ್ಷಗಳ ಐತಿಹಾಸಿಕ ಹಿನ್ನೆಲೆಯಿದೆ. 9ನೇ ಶತಮಾನದಲ್ಲಿ ಬಾಣ ವಂಶದ ರತ್ನಾವಳಿ ಎಂಬ ರಾಣಿಯು ಇದನ್ನು ನಿರ್ಮಿಸಿದಳು. ನಂತರ ಗಂಗ, ಚೋಳ, ಪಲ್ಲವ ಹಾಗೂ ವಿಜಯನಗರ ಸಾಮ್ರಾಜ್ಯಗಳ ದೊರೆಗಳಿಂದ ಅಭಿವೃದ್ಧಿಗೊಂಡಿದೆ. ಹೀಗಾಗಿ ಇಲ್ಲಿ ಆಕರ್ಷಕ ಶಿಲ್ಪಕಲೆ ನೋಡಲು ಸಿಗುತ್ತದೆ.

ದೇವಸ್ಥಾನಕ್ಕೆ ಅತಿ ದೊಡ್ಡ ಹೊರ ಪ್ರಾಕಾರವಿದ್ದು, ಎರಡು ಮಹಾದ್ವಾರಗಳಿವೆ. ಒಳ ಪ್ರಾಕಾರದಲ್ಲಿ  ಶಿವನ ಎರಡು ದೇವಾಲಯಗಳಿವೆ; ಭೋಗಾನಂದೀಶ್ವರ ಮತ್ತು ಅರುಣಾಚಲೇಶ್ವರ. ದೇವಸ್ಥಾನದ ಹೊರ ಪ್ರಾಕಾರದಲ್ಲಿ ಮಹಾನವಮಿ ದಿಬ್ಬವೊಂದಿದೆ.

ದೇವಸ್ಥಾನದ ಗರ್ಭಗುಡಿಯ ಎದುರಿಗೆ ಕಲ್ಲಿನ ಬೃಹತ್ ನಂದಿ ಇದ್ದು, ಅದು ಇಲ್ಲಿನ ಪ್ರಮುಖ ಆಕರ್ಷಣೆಗಳಲ್ಲಿ ಒಂದು. ಇಲ್ಲಿ ದೊಡ್ಡ ಮದುವೆ ಮಂಟಪ, ನಂದಿ ಮಂಟಪ, ಸುಕನಾಸಿ, ನವರಂಗ ಹಾಗೂ ಅತಿ ಸುಂದರವಾದ ಪುಷ್ಕರಣಿಯಿದೆ. ಪುಷ್ಕರಣಿಯ ಹಿಂಭಾಗದಲ್ಲಿ, ನಂದಿ ಬೆಟ್ಟದ ರಮಣೀಯ ದೃಶ್ಯ ಕಾಣುತ್ತದೆ. ಕಲ್ಲಿನ ಬಾವಿ, ಕಲ್ಲಿನ ಬೃಹತ್ ತುಳಸಿ ಬೃಂದಾವನವೂ ಇದೆ. ಬಹು ಜನರಿಗೆ ಪರಿಚಯವಿಲ್ಲದ, ಪ್ರಶಾಂತವಾಗಿ ಸ್ವಚ್ಛವಾಗಿ ಇಡಲಾದ ಈ ಪ್ರಾಕಾರದಲ್ಲಿ ಸಮಯ ಕಳೆದರೆ, ಮನಸ್ಸು ಆಹ್ಲಾದಕಾರವಾಗುತ್ತದೆ. ನಗರದ ಯಾಂತ್ರಿಕ ಬದುಕಿನಿಂದ ಬಹು ದೂರ ಬಂದ ಅನುಭವವಾಗುತ್ತದೆ.

ಬೆಂಗಳೂರಿನಿಂದ ಹೊರಟು ಸುಮಾರು 8–9 ಗಂಟೆಗೆ ದೇವಸ್ಥಾನ ತಲುಪಿದರೆ, ಮೇಲೆ ತಿಳಿಸಿದ ಎಲ್ಲ ಸ್ಥಳಗಳನ್ನು ನೋಡಿ, 10 ಗಂಟೆಯ ಹೊತ್ತಿಗೆ ಶುರುವಾಗುವ ಈಶ್ವರನ ರುದ್ರಾಭಿಷೇಕವನ್ನೂ ವೀಕ್ಷಿಸಬಹುದು. ಅಲ್ಲಿಂದ ನಂದಿ ಬೆಟ್ಟಕ್ಕೆ ತೆರಳಿ ವಿಹರಿಸಬಹುದು.

ದೇವಸ್ಥಾನದ ಸುತ್ತಮುತ್ತ ಅಪರೂಪದ ಪಕ್ಷಿಗಳು ನೋಡಲು ಸಿಗುತ್ತವೆ. ಪಕ್ಷಿ ವೀಕ್ಷಣೆಗೂ ಹೇಳಿ ಮಾಡಿಸಿದ ಜಾಗ. ದೇವಸ್ಥಾನದ ಹೊರಗೆ ಎಳನೀರು, ದೇವರ ಹಣ್ಣು-ಕಾಯಿ ಸಿಗುವ ಅಂಗಡಿಗಳಿವೆ. ಸುತ್ತಮುತ್ತ ಊಟ ತಿಂಡಿಗೆ ಒಳ್ಳೆಯ ಜಾಗ ಇಲ್ಲದಿರುವುದರಿಂದ ಊಟ ತಿಂಡಿಯನ್ನು  ತೆಗೆದುಕೊಂಡು ಹೋಗುವುದು ಸೂಕ್ತ. ನಂದಿಯಿಂದ ಬೆಂಗಳೂರಿಗೆ ಬರುವ ದಾರಿಯಲ್ಲಿ, ಬಲಗಡೆ ‘ಪರಾಠ ಕಂಪೆನಿ’ ಎಂಬ ಸ್ಥಳವಿದ್ದು, ವಿವಿಧ ಬಗೆಯ ರುಚಿಕರ ಪರೋಟಾಗಳು ದೊರೆಯುತ್ತವೆ.

ಹವ್ಯಾಸಿ ಛಾಯಾಗ್ರಾಹಕರಿಗೆ ಇದು ಉತ್ತಮ ಸ್ಥಳ. ಇತ್ತೀಚಿನ ದಿನಗಳಲ್ಲಿ ಮದುವೆಗಳು, ನಿಶ್ಚಿತಾರ್ಥ ಹಾಗೂ ಮದುವೆ ಮುಂಚಿನ ವಧೂವರರ ಫೋಟೋಶೂಟ್ ಅನ್ನು ಇಲ್ಲಿ ಮಾಡಲಾಗುತ್ತಿದೆ.

ಸಾವಿರ ವರ್ಷಗಳ ಇತಿಹಾಸವಿರುವ ಈ ಸ್ಥಳವನ್ನು ನಿಮ್ಮ ಪ್ರವಾಸಿ ತಾಣಗಳ ಪಟ್ಟಿಯಲ್ಲಿ ಸೇರಿಸಿ, ಹೋಗಿ ನೋಡಿ, ಆನಂದಿಸಿ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT