ಇದು ಅಂಥಿಂಥ ಬಾವಿಯಲ್ಲ. ನೋಡುವರು ‘ವಾಹ್, ವಾವ್...’ ಎಂದು ಕಣ್ಣರಳಿಸುವಷ್ಟು ಅಚ್ಚರಿ ಹುಟ್ಟಿಸುವ ಬಾವಿ ಇದು. ಜಲಮೂಲಗಳ ಬಗ್ಗೆ ನಮ್ಮ ಹಿರಿಯರಿಗಿದ್ದ ಕಳಕಳಿ, ಭಕ್ತಿಯ ದರ್ಶನ ಮಾಡಿಸುವ ಈ ಬಾವಿಯ ಹೆಸರು ‘ಅದಾಲಜ್ ನಿ ವಾವ್’. ಗುಜರಾತಿ ಭಾಷೆಯಲ್ಲಿ ಬಾವಿಗೆ ‘ವಾವ್’ ಎನ್ನುತ್ತಾರೆ.

ಅಹಮದಾಬಾದಿನಿಂದ 18 ಕಿ.ಮೀ. ದೂರದ ಅದಾಲಜ್ ಎಂಬಲ್ಲಿರುವ ಈ ಮೆಟ್ಟಿಲುಬಾವಿ ತನ್ನ ಅಪೂರ್ವ ರಚನೆಯಿಂದ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತದೆ.

ಮೆಟ್ಟಿಲುಬಾವಿ ಅಥವಾ ಕೊಳಗಳು ಭಾರತದಲ್ಲೆಡೆ ಕಂಡುಬಂದರೂ ಪಶ್ಚಿಮಭಾರತದಲ್ಲಿ ಇವುಗಳ ಸಂಖ್ಯೆ ಹೆಚ್ಚು. ಕರ್ನಾಟಕದ ಗದುಗಿನ ಎಕ್ಕುಂಡಿಯಲ್ಲಿ ಇಂಥ ಅದ್ಭುತಬಾವಿಯನ್ನು ಕಾಣಬಹುದು. ಮಳೆನೀರು ಸಂಗ್ರಹ, ವರ್ಷವಿಡೀ ಜನಜಾನುವಾರುಗಳಿಗೆ ನೀರುಣಿಸುವುದು ಇವುಗಳ ರಚನೆಯ ಹಿಂದಿನ ಉದ್ದೇಶ.

ಹೆಚ್ಚಾಗಿ ಗಾರೆ, ಇಟ್ಟಿಗೆಗಳಿಂದ ರೂಪಿಸಲಾಗುತ್ತಿದ್ದ ಇವುಗಳಲ್ಲಿ ಕೆಲವು ರಾಜಮಹಾರಾಜರ ಕೃಪೆಯಿಂದ ಕಲ್ಲಿನಲ್ಲಿ ರೂಪುಗೊಂಡಿವೆ; ಸುಂದರ ಶಿಲ್ಪಕಲಾ ವೈಭವವನ್ನು ಮೆರೆಯಿಸುವ ತಾಣಗಳಾಗಿವೆ.

ಜನರ ದೈನಂದಿನ ಉಪಯೋಗಕ್ಕೆ ನೀರು ಒದಗಿಸುವ ಜೊತೆಗೆ ಉತ್ಸವ, ಮನರಂಜನೆಗಳ ಕೇಂದ್ರಗಳಾಗಿಯೂ ಇವು ಮೆರೆದಿವೆ. ನೀರು ತರುವ ಕೆಲಸ ಹೆಚ್ಚಾಗಿ ಹೆಂಗಸರದ್ದೇ ಆಗಿದ್ದರಿಂದ ಅವರ ಬಿಡುವಿನ ಹರಟೆಕಟ್ಟೆಗಳ ರೂಪದಲ್ಲೂ ಈ ಬಾವಿಲುಗಳನ್ನು ಗುರ್ತಿಸಬಹುದು.

ಇತಿಹಾಸದ ತೊಟ್ಟಿಲುಗಳಲ್ಲಿ ಒಂದಾದ ಮೊಹೆಂಜೋದಾರೋವಿನಲ್ಲಿ ಏಳುನೂರಕ್ಕೂ ಹೆಚ್ಚಿನ ಮೆಟ್ಟಿಲು ಬಾವಿಗಳು ಪತ್ತೆಯಾಗಿವೆಯೆಂದರೆ ಇವುಗಳ ಸಮೃದ್ಧ ಇತಿಹಾಸದ ಕಲ್ಪನೆ ಮಾಡಿಕೊಳ್ಳಬಹುದು. ಭಾರತದಲ್ಲಿ ಇಂದು ಸುಸ್ಥಿತಿಯಲ್ಲಿರುವ ಇನ್ನೂರಕ್ಕೂ ಅಧಿಕ ಬಾವಿಗಳಿವೆ ಎನ್ನಲಾಗಿದೆ.

ಕಣ್ಣೀರಿನ ಕಥೆಯ ‘ಅದಾಲಜ್’
1499ರಲ್ಲಿ ಮುಸ್ಲಿಮ್ ದೊರೆ ಮಹಮದ್ ಬೇಗ್ದನಿಂದ ನಿರ್ಮಾಣಗೊಂಡಿತು ಎನ್ನುವ ಉಲ್ಲೇಖವಿರುವ ಅದಾಲಜ್‌ನ ಮೆಟ್ಟಿಲು ಬಾವಿಯ ಆಳದಲ್ಲಿ ಕಣ್ಣೀರಿನ ಕಥೆಯಿದೆ. 1498ರಲ್ಲಿ ವಘೇಲಾ ವಂಶದ ರಾಣಾವೀರಸಿಂಹ ತನ್ನ ಪ್ರಿಯಪತ್ನಿಗೋಸ್ಕರ ಇದರ ನಿರ್ಮಾಣವನ್ನು ಆರಂಭಿಸಿದ. ಕೆಲಸ ಕಾಲುಭಾಗದಷ್ಟು ಮುಗಿದಿತ್ತಷ್ಟೇ. ಪಕ್ಕದ ರಾಜ್ಯದ ದೊರೆ ಮಹಮದ್ ಯುದ್ಧ ಸಾರಿದ. ಯುದ್ಧದಲ್ಲಿ ವೀರಸಿಂಹ ಸಾವನ್ನಪ್ಪಿದ.

ವಿಜಯೀ ಮಹಮದ್, ಮೃತ ಅರಸನ ಪತ್ನಿ ರೂಪಬಾಳನ್ನು ತನ್ನನ್ನು ಮದುವೆಯಾಗುವಂತೆ ಒತ್ತಾಯಿಸಲಾರಂಭಿಸಿದ. ರೂಪಬಾ ಒಂದು ಷರತ್ತಿನೊಂದಿಗೆ ಮದುವೆಗೆ ಸಮ್ಮತಿಯಿತ್ತಳು. ತನ್ನ ಪತಿ ಆರಂಭಿಸಿದ ಬಾವಿಯ ನಿರ್ಮಾಣ ಮೊದಲು ಮುಗಿಸಬೇಕು, ನಂತರವೇ ಮದುವೆ ಎನ್ನುವ ಷರತ್ತದು.

ರೂಪಬಾಳ ಕೋರಿಕೆಗೆ ಮಹಮದ್ ಸಮ್ಮತಿಸಿದ. ಬಾವಿಯ ಕೆಲಸ ಚುರುಕಾಯಿತು. ತ್ವರಿತಗತಿಯಲ್ಲಿ ಬಾವಿಯ ನಿರ್ಮಾಣ ಮುಗಿಯಿತು. ಆದರೆ ರಾಣಿ ರೂಪಬಾ ಒಂದು ರಾತ್ರಿ ಆ ಬಾವಿಯಲ್ಲಿ ಹಾರಿ ಪ್ರಾಣತ್ಯಾಗ ಮಾಡುವುದರೊಂದಿಗೆ ಮಹಮದ್ ಬೇಗ್ದನ ಕನಸನ್ನು ಭಗ್ನಗೊಳಿಸಿದಳು. ಮಹಮದ್ ನಿರಾಶನಾದರೂ ಬಾವಿಯನ್ನು ಸಂರಕ್ಷಿಸಲು ವ್ಯವಸ್ಥೆ ಮಾಡಿದ. ಚರಿತ್ರೆಯ ಈ ಕಥನವನ್ನು ಬಾವಿಯ ಗೋಡೆಗಳ ಮೇಲೆ ಕೆತ್ತಲಾಗಿದೆ.

ಬಾವಿಯ ನಿರ್ಮಾಣದ ದಾಖಲೆಗಳನ್ನು ಮೊದಲ ಮಹಡಿಯ ಗೋಡೆಯ ಮೇಲೆ ಸಂಸ್ಕೃತದಲ್ಲಿ ಕೊರೆಯಲಾಗಿದೆ. ಈ ಮೆಟ್ಟಲುಬಾವಿಯ ಶಿಲ್ಪಕಲೆಯನ್ನು ಸೂಕ್ಷ್ಮವಾಗಿ ಗಮನಿಸಿದರೆ, ತಳಹಂತದಲ್ಲಿ ಹಿಂದೂ ದೇವ–ದೇವಿಯರ ಕೆತ್ತನೆಗಳು ಕಂಡುಬಂದರೆ, ಮೇಲಿನ ಹಂತಗಳಲ್ಲಿ ಇಸ್ಲಾಮಿಕ್ ಶೈಲಿ ಇದೆ.

ಐದು ಮಹಡಿಗಳ ಬಾವಿ
ಅದಾಲಜ್‌ನ ಮೆಟ್ಟಲುಬಾವಿ ಐದುಮಹಡಿಗಳನ್ನು (ಸುಮಾರು 100 ಅಡಿ ಆಳ) ಹೊಂದಿದೆ. ಅಷ್ಟಭುಜಾಕೃತಿಯಲ್ಲಿ ಬಲಿಷ್ಠ ಸ್ತಂಭಗಳ ಮೇಲೆ, ಎಲ್ಲ ದಿಕ್ಕುಗಳಿಂದಲೂ ಸಾಕಷ್ಟು ಗಾಳಿ–ಬೆಳಕು ಬರುವಂತೆ ಇದನ್ನು ರೂಪಿಸಲಾಗಿದೆ. ಮೇಲಿನಿಂದ ಬಾವಿಯೊಳಗೆ ಇಳಿಯಲು ಮೂರು ದಿಕ್ಕುಗಳಲ್ಲಿ ಮೆಟ್ಟಲುಗಳಿವೆ. ಪ್ರತಿ ಮಹಡಿಯಲ್ಲೂ ಜನರು ಓಡಾಡಲು ಸಾಕಷ್ಟು ಸ್ಥಳಾವಕಾಶ ಇದೆ.

ಬಾವಿಯ ಗೋಡೆಗಳ ಮೇಲೆ ನೀರು ತುಂಬುವ ಪಾತ್ರೆಗಳು, ಕಲ್ಪವೃಕ್ಷ, ನವಗ್ರಹಗಳ ಕೆತ್ತನೆ ಮನಸೆಳೆಯುತ್ತದೆ. ಅಲ್ಲದೆ ಮೊಸರು ಕಡೆಯುವುದು, ಅಲಂಕರಿಸಿಕೊಳ್ಳುವುದು, ರಾಜನ ಆಸ್ಥಾನದಲ್ಲಿ ನೃತ್ಯ–ಸಂಗೀತ ಸಭೆ ಇತ್ಯಾದಿ ಕೆತ್ತನೆಗಳಲ್ಲಿ ಮಹಿಳೆಯರ ದೈನಂದಿನ ಬದುಕು ಅನಾವರಣಗೊಂಡಿದೆ. ಬಾವಿಯ ಒಳಗಿನ ತಾಪಮಾನ ಆಹ್ಲಾದಕರವಾಗಿದ್ದು, ಹೊರಗಿನ ಉಷ್ಣತೆಗಿಂತ ಐದು ಡಿಗ್ರಿ ಕಡಿಮೆ ಇರುತ್ತದೆ.

ಭವ್ಯವಾದ ಅರಮನೆಯನ್ನು ಪ್ರವೇಶಿಸುತ್ತಿದ್ದೇವೇನೋ ಎಂಬ ಭಾವನೆಯನ್ನು ಉಂಟುಮಾಡುವ ಈ ಬಾವಿ ಸ್ವಚ್ಛವಾಗಿದೆ. ನೀರಿನ ಮೇಲೆ ಲೋಹದ ಬಲೆಯನ್ನು ಹೊದಿಸಲಾಗಿದೆ. ಸುತ್ತಲೂ ಸುಂದರವಾದ ಉದ್ಯಾನವಿದೆ.

ಅಹಮದಾಬಾದ್‌ನಿಂದ ರಸ್ತೆ ಸಂಪರ್ಕ ಅತ್ಯುತ್ತಮವಾಗಿದ್ದು ಒಳ್ಳೆಯ ಬಸ್ ವ್ಯವಸ್ಥೆ ಇದೆ. ಬಾಡಿಗೆ ಕಾರುಗಳು, ರಿಕ್ಷಾಗಳೂ ಸಿಗುತ್ತವೆ. ಅಹಮದಾಬಾದ್‌ಗೆ ಭೇಟಿ ನೀಡುವವರು ಅದಾಲಜದ ಮೆಟ್ಟಿಲು ಬಾವಿಯನ್ನು ತಪ್ಪದೆ ನೋಡಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.