ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಮಾಲಯ ಹಿಮಪಾತ: ಹಿಮನಡಿಗೆ & ಶ್ರಮಪಾಠ

Last Updated 22 ಜನವರಿ 2022, 19:30 IST
ಅಕ್ಷರ ಗಾತ್ರ

ಕುದಿವ ನೀರು ಗಂಟಲೊಳಗಿಳಿದರೂ ಬಿಸಿ ಪಾತ್ರೆ ಸೋಕಿದರೂ ದೇಹ ಏನನ್ನೂ ಗ್ರಹಿಸುತ್ತಿಲ್ಲ. ಕೆಂಪು ಕೈಗಳು ನೀಲಿಗಟ್ಟಿವೆ, ದೇಹ ನಡುಗುವುದ ನಿಲ್ಲಿಸಿದೆ. ಬಿದಿರು ಬೊಂಬೆಗಳಂತೆ ನಮ್ಮ ಓಡಾಟ ನಡೆದಿದೆ. ಇಲ್ಲಿಂದ ನಾವು ಸ್ವಲ್ಪ ಸಹಜತೆಗೆ ಮರಳಲು ತುಸು ತಾಸುಗಳೇ ಹಿಡಿದವು. ನನ್ನ ಜೊತೆಗಿದ್ದ ಹನ್ನೊಂದು ಜನರದ್ದೂ ಇದೇ ಕತೆ. ನಮ್ಮಲ್ಲಿನ ಸಾಹಸ ಮನೋವೃತ್ತಿಗೊಂದಷ್ಟು ಸವಾಲು ಒಡ್ಡಿಕೊಳ್ಳಲು ಹೊರಟಿದ್ದ ನಮ್ಮನ್ನು, ಪ್ರಕೃತಿ ಅಕ್ಷರಶಃ ಭ್ರಮನಿರಸನಗೊಳಿಸಿತ್ತು. ಆ ಟ್ರೆಕ್ಕಿಂಗ್‌ ಅನುಭವವನ್ನು ಹೇಗೆ ಆರಂಭಿಸಲಿ?

‘ಹಿಮಾಲಯ’ ಬಾಲ್ಯದಿಂದಲೂ ನನ್ನನ್ನು ಅನೂಹ್ಯ ಸೋಜಿಗದಂತೆ ಕಾಡುತ್ತಿದ್ದ ವಿಷಯ. ಭೂಗೋಳ ತರಗತಿಗಳಲ್ಲಿ ಎವರೆಸ್ಟ್-ಕಾಂಚನಗಂಗಾ-ಅಲ್ಲಿನ ಶೀತಲತೆಯನ್ನು ಟೀಚರ್ ವರ್ಣಿಸುವಾಗ ಪುಳಕಗೊಳ್ಳದವರುಂಟೇ? ನನಗೂ ಈ ಬಗ್ಗೆ ಬಗೆಹರಿಯಲಾಗದ ಕೌತುಕಗಳಿದ್ದವು. ಮುಂದುವರಿದು, ನಾನು ಬೆಳೆದದ್ದು ಪಶ್ಚಿಮಘಟ್ಟದ ನೆರಳಿನಲ್ಲಾದ್ದರಿಂದ ಬೆಟ್ಟ ಹತ್ತುವುದು, ಟ್ರೆಕ್ಕಿಂಗ್ ಅತ್ಯುತ್ಸಾಹದಿಂದ ಮುಗಿಸುವುದು ನನಗೆ ಬಹಳ ಸುಲಭವೇನೋ ಎನ್ನುವ ಭ್ರಾಂತಿ ನನ್ನೊಳಗಿತ್ತು. ಇತ್ತೀಚೆಗೆ ನಾನು ಭಾಗವಹಿಸಿದ ಪೂರ್ವ ಹಿಮಾಲಯ ಪರ್ವತ ಶ್ರೇಣಿಯ ಕಾಲ್ನಡಿಗೆಯ ಸಾಹಸಯಾತ್ರೆಯೊಂದು, ನನ್ನ ಜೀವನದ ಅತಿ ಉತ್ಕಟ ತಲ್ಲಣಗಳನ್ನು ನನಗೆ ಪರಿಚಯಿಸಿಬಿಟ್ಟಿತು.

ಪರ್ವತ-ನಗರಿಗಳ ರಾಣಿ ಎಂದು ಕರೆಸಿಕೊಳ್ಳುವ ಡಾರ್ಜಿಲಿಂಗ್ ನಗರದಿಂದ ನೇಪಾಳದ ಸಂಡಕ್‌ಫು, ಗುರ್ದಮ್ ಮತ್ತು ಫಲೌಟ್ ಎನ್ನುವ ಪೂರ್ವ ಹಿಮಾಲಯ ಪರ್ವತ ಪ್ರಾಂತ್ಯಗಳಿಗೆ ಉತ್ಸಾಹಿಗಳು ಟ್ರೆಕ್ಕಿಂಗ್ ಹೋಗುವುದು ಸಾಮಾನ್ಯ. ಇವು ಸರ್ವಕಾಲಿಕ ಚಳಿಆವೃತ ಪ್ರದೇಶಗಳು. ವರ್ಷದ ಕೊನೆ, ಅದೂ ಚಳಿಗಾಲ ಎಂದರೆ ಚಳಿ ಇರುವಲ್ಲಿಗೇ ಪ್ರವಾಸ ಹೋಗಬೇಕೆಂಬ ನಮ್ಮ ವಯೋಸಹಜ ಹುಚ್ಚಿನ ಯೋಚನೆಗೆ ಹೊಳೆದದ್ದೂ ಇದೇ ಸಂಡಕ್‌ಫು-ಗುರ್ದಮ್.

ಒಂದಷ್ಟು ಹೈಸ್ಕೂಲ್ ಸ್ನೇಹಿತರು ಒಟ್ಟಾಗಿ ಈ ದಂಡಯಾತ್ರೆಗೆ ಆನ್‍ಲೈನ್‌ನಲ್ಲೇ ನೋಂದಾಯಿಸಿ ಹೊರಟಿದ್ದಾಯ್ತು.

ಶಾಲಾ ಸ್ನೇಹಿತರು ಹನ್ನೊಂದು ವರ್ಷಗಳಾದ ಮೇಲೆ ಹೀಗೊಂದು ಟ್ರೆಕ್ಕಿಂಗ್ ವಿಷಯವಾಗಿ ಸೇರುತ್ತಿರುವ ಬಗ್ಗೆ ನಮಗೊಂದು ಹೆಮ್ಮೆ, ಖುಷಿ. ಮತ್ತು ನಾವೆಲ್ಲರೂ ಯಂತ್ರಗಳಂತೆ ಜೀವಿಸುತ್ತಿದ್ದ ಕಾರಣ ಇದೊಂದು ಆರಾಮದ ವಿರಾಮ ಎನ್ನುವ ಮೋಜಿನ ಭಾವನೆಯ ಹೊರತಾಗಿ ನಾವು ಹೊರಟಿರುವುದು ನಮ್ಮ ಗಡಿಯ ಅತಿ ದುರ್ಗಮ, ನಾವು ಊಹಿಸಿಯೂ ಇರಲಾರದಂಥ ಪರಿಸರಕ್ಕೆ ಎನ್ನುವ ಬಗ್ಗೆ ನಮಗೆ ಯಾರಿಗೂ ಅಷ್ಟಾಗಿ ಗಾಂಭೀರ್ಯ ಇರಲಿಲ್ಲ.

ನಮ್ಮ ಪರ್ವತಾರೋಹಣ ಶಿಬಿರ ಡಾರ್ಜಿಲಿಂಗ್‍ನಿಂದ ಶುರುವಾಯ್ತು. ಸಾಮಾನ್ಯವಾಗಿ ಇಂಥಾ ಶಿಬಿರಗಳಲ್ಲಿ ಬೇಸ್‍ಕ್ಯಾಂಪ್‍ನಿಂದ ಬೇಸ್‍ಕ್ಯಾಂಪ್‍ಗೆ ನಮ್ಮ ಸಮಸ್ತ ಲಗೇಜ್ ಅನ್ನು ಬೆನ್ನಮೇಲೆ ಹೊತ್ತುಕೊಂಡೇ ಹತ್ತಬೇಕು. ಬಹುಶಃ ಆ ಕಾಲಕ್ಕೆ ನಮಗಿದ್ದ ಬಹುದೊಟ್ಟ ತಲೆಬಿಸಿ ಎಂದರೆ, ಈ ಲಗೇಜ್ ಹೊರುವ ಪ್ರಕ್ರಿಯೆಯೊಂದೇ. ಇನ್ನುಳಿದಂತೆ ಸುಲಭವಾಗಿ ಹತ್ತಿಬಿಡುತ್ತೇವೆ ಎನ್ನುವುದು ನಮ್ಮ ಊಹೆಯಾಗಿತ್ತು. ಪ್ರತೀ ಬೇಸ್‍ಕ್ಯಾಂಪ್‍ನಲ್ಲಿ ಬೇಕೇ ಬೇಕು ಎಂದು ಕೊಂಡೊಯ್ದಿದ್ದ ವಸ್ತುಗಳನ್ನು ನಿರ್ದಾಕ್ಷಿಣ್ಯವಾಗಿ ಬೇಡ ಎಂದು ವಿಂಗಡಿಸಿ, ಬೆನ್ನು ಏರಿದ ಚೀಲದಲ್ಲಿ ಒಂದಷ್ಟು ಗ್ರಾಂಗಳ ಇಳಿಕೆ ಕಂಡು ನಿಡುಸುಯ್ದು ಮುಂದಿನ ನಡಿಗೆ ಪ್ರಾರಂಭಿಸುತ್ತಿದ್ದೆವು.

ಅಂದು ನಮ್ಮ ಶಿಬಿರದ ಎರಡನೇ ದಿನ. 8 ಕಿ.ಮೀ.ಗಳ ಕಡಿದಾದ ಗಿರಿ ಹತ್ತಿ ಅಪರಾಹ್ನ 2ರ ಸುಮಾರಿಗೆ ಟಂಗ್ಲೂ ಎನ್ನುವ, ಗಾಳಿ ಬಿಟ್ಟು ಇನ್ನಾವ ಶಬ್ದವೂ ಕೇಳದ ನೇಪಾಳದ ಸಶಸ್ತ್ರ ಸೀಮಾ ಬಲದ ಪಹರೆ ಇರುವ ಪ್ರದೇಶಕ್ಕೆ ಬಂದು ನಿಂತೆವು. ಸುತ್ತಲೂ ಕಣ್ಣಿಗೆ ಸುಸ್ತಾಗುವಷ್ಟು ಹಿಮಾಲಯದ ದೃಶ್ಯಾವಳಿಗಳು. ನಮ್ಮ ದಣಿವೆಲ್ಲಾ ಅಡರಿಹೋಯ್ತು. ಸುಮ್ಮನೆ ಈ ಪರಿಸರವನ್ನು ಗಮನಿಸಿದೆ, ಇಲ್ಲಿಂದ ನಮ್ಮ ಮುಂದಿನ ಬೇಸ್ ಅಂದರೆ ಟಂಬ್ಲಿಂಗ್ ಎನ್ನುವ ಪ್ರದೇಶ ಚಿಕ್ಕ ಕನಸಿನೂರಿನಂತೆ ದೂರದಲ್ಲಿ ಗೋಚರಿಸುತ್ತಿತ್ತು .

ನಾವು ನಿಂತ ಜಾಗ ಅಂದರೆ ಬೆಟ್ಟದ ತುದಿ ಒಂದು ಮೂರು ಎಕರೆ ವಿಸ್ತಾರದ ಪ್ರದೇಶ ಇರಬಹುದು. ಅಲ್ಲಿ ಎರಡೂ ದೇಶದ ಭೂಸೇನೆಯ ಒಂದೊಂದು ಘಟಕಗಳಿವೆ. ಸುತ್ತಲೂ ಪ್ರಪಾತ, ಸೇನೆಗೆ ಸಂಬಂಧಪಟ್ಟ ಬಲಿಷ್ಠ ಬೋರ್ಡುಗಳೂ ಸುರುಳಿಗಳಂತೆ ಸುತ್ತಿವೆ, ಬಾಗಿವೆ. ಇದೆಲ್ಲಾ ಗಾಳಿಯ ಪ್ರಲಾಪ ಎಂದು ಅಲ್ಲಿದ್ದ ಅಧಿಕಾರಿಯೊಬ್ಬರು ನಗುತ್ತಾರೆ. ನಮ್ಮ ಕಾಲ್ನಡಿಗೆಗೆ ಅದು ಒಂದು ತಂಗುದಾಣವಷ್ಟೆ. ಆದರೆ, ಅಲ್ಲಿದ್ದ ಸೈನಿಕರಿಗೆ ಅದು ಹಲವು ತಿಂಗಳುಗಳ ಕಾರ್ಯಕ್ಷೇತ್ರ. ನಿವಾಸಿಗಳಿಗೆ ಶಾಶ್ವತ ನೆಲೆ. ಒಂದೊಂದು ನೀರಿನ ಹನಿಯನ್ನು, ಸೇವಿಸುವ ಆಹಾರದ ಪ್ರತೀ ಕಣವನ್ನೂ ಇಲ್ಲಿನ ವಾಸಿಗಳು ತಲೆಮೇಲೆ ಹೊತ್ತು ತರುತ್ತಾರೆ. ಇದನ್ನು ಪ್ರತ್ಯಕ್ಷ ಕಂಡ ನಮಗೆ ಅರಿವೇ ಇಲ್ಲದಂತೆ ಬೆನ್ನ ಚೀಲಗಳ ಭಾರ ಹೊರಲಾಗದೆಂದು ದೂಷಿಸಿದ್ದರ ಬಗ್ಗೆ ಅಪರಾಧಿ ಭಾವ ಕಾಡತೊಡಗಿತು. ಮೋಜಿನ ಯಾತ್ರೆಯೊಂದು ನಿಧಾನವಾಗಿ ಬದುಕಿನ ಪಾಠಗಳನ್ನು ಕಲಿಸುತ್ತಾ ನಮ್ಮನ್ನು ವಿಚಾರಶೀಲರನ್ನಾಗಿಸುತ್ತಾ ಹೋಯ್ತು.

ಈ ಯೋಚನೆಗಳೊಂದಿಗೆ ಬೆಟ್ಟವಿಳಿದು ಟಂಬ್ಲಿಂಗ್‌ನ ನಮ್ಮ ವಸತಿನಿಲಯ ತಲುಪಿದೆವು. ಅಲ್ಲಿ ಸಂಜೆ 5ರ ಸುಮಾರಿಗೆ ಕತ್ತಲಾಗಿಬಿಡುತ್ತದೆ. ಹೀಗಾಗಿ ವಸತಿನಿಲಯ ತಲುಪಿ ಬೆಚ್ಚಗೆ ಒಳಮುದುರಿ ಕುಳಿತುಬಿಟ್ಟೆವು. ನಮ್ಮ ಕ್ಯಾಂಪ್‍ಫೈರ್, ಕುಣಿತ, ಕೇಕೆಗಳ ನಡುವೆ ವಸತಿನಿಲಯದ ಹೊರಗೆ ನಡೆಯುತ್ತಿರುವ ಪ್ರಾಕೃತಿಕ ಬದಲಾವಣೆಗಳು ನಮ್ಮ ಗಮನಕ್ಕೆ ಬರಲಿಲ್ಲ. ಟಂಬ್ಲಿಂಗ್‍ನ ಸೂರ್ಯೋದಯ ದೃಶ್ಯಗಳು ವಿಶ್ವಪ್ರಸಿದ್ಧ. ಇಲ್ಲಿ ಬೆಳಗಿನ 6ಕ್ಕೆ ಸೂರ್ಯೋದಯ ಹಿಮಾಲಯದ ಒಂದೊಂದು ಪರ್ವತದ ಮೇಲೆ ಒಂದೊಂದು ಬಣ್ಣಗಳನ್ನು ಮೂಡಿಸುತ್ತದೆ. ಹೀಗಾಗಿ ಮಾರನೆಯ ದಿನ ಹಲವು ಕಿ.ಮಿ ಕ್ರಮಿಸಬೇಕಿರುವುದೆಂದೂ ಸೂರ್ಯೋದಯ ನೋಡಿ ಮುಂದಿನ ಬೇಸ್‍ಗೆ ಹೊರಡುವುದೆಂದೂ ಶಿಬಿರದ ನಾಯಕರ ಆಜ್ಞೆಯ ನಿಮಿತ್ತ. ಸೂರ್ಯೋದಯದ ಕನಸು ಕಾಣುತ್ತಾ ಬೆಚ್ಚಗೆ ಮಲಗಿಬಿಟ್ಟೆವು. ಬಹಳ ದಣಿವಿದ್ದ ಕಾರಣ ಕ್ಷಣಮಾತ್ರದಲ್ಲಿ ನಿದ್ದೆಗೆ ಜಾರಿದ್ದೆವು.

ಬೆಳಗ್ಗೆ ಏಳುವ ಸಮಯ. ಏಳುವಾಗಲೆ ವಸತಿನಿಲಯ ಗಲಾಟೆಯ ಗೂಡಾಗಿತ್ತು. ಹೊರಬಂದು ನೋಡಿದರೆ ನಾವು ಹಿಮದ್ವೀಪದಲ್ಲಿರುವಂತೆ ಕಂಡಿತು. ನನ್ನ ಕಣ್ಣನ್ನೇ ನಾನು ನಂಬಲಾಗುತ್ತಿಲ್ಲ. ಕನಸಿರಬಹುದೇ ಎಂದು ಕಣ್ಣುಜ್ಜಿ ನೋಡಿದರೂ ಅದೇ ದೃಶ್ಯ. ಯಾವುದೇ ಸೂಚನೆಗೊಡದೆ ಹಿಂದಿನ ರಾತ್ರಿ ಅಲ್ಲಿ ಹಿಮಪಾತವಾಗಿತ್ತು. ನಾವಿದ್ದ ಪ್ರದೇಶ ಡಿಸೆಂಬರ್‌ನಲ್ಲಿ ಹಿಮಪಾತ ನಿರೀಕ್ಷಿಸುವ ಜಾಗವೇನಲ್ಲ, ಇಲ್ಲಿ ಹಿಮಾಪಾತವಾದರೂ ಅದು ಫೆಬ್ರವರಿ ಮಧ್ಯಭಾಗದಲ್ಲಿ. ಅದೂ ಅಪರೂಪ. ನಾವಂತೂ ಹಿಮಪಾತವನ್ನು ಊಹಿಸಿಯೂ ಇರಲಿಲ್ಲ. ಆರಂಭಕ್ಕೆ ಎಲ್ಲರಿಗೂ ಏನೋ ಖುಷಿ. ಹಿಮದಲ್ಲಿ ಆಟ, ಫೋಟೊ ಮತ್ತು ಇಂದಿನ ನಡಿಗೆ ರದ್ದು ನಾಳೆ ಮುಂದಿನ ಬೇಸ್ ಎಂದು ನಾಯಕ ಹೇಳಿದ್ದರಿಂದ ಇಡೀ ದಿನ ಮನಸೋ ಇಚ್ಛೆ ಹಿಮದಲ್ಲಿ ಆಡಬಹುದು ಎಂಬ ಹುಡುಗುಬುದ್ಧಿ.

ಮೂರ್ನಾಲ್ಕುಗಂಟೆ ಕಳೆಯಿತು, ಹಿಮವು ಸಾಕೆನಿಸಿ ಒಳ ಹೊರಟಿದ್ದೆವು. ಅಷ್ಟರಲ್ಲಿ, ದೂರದಿಂದ ಸೇನೆಯ ಅಧಿಕಾರಿಗಳದಂಡು ನಮ್ಮೆಡೆಗೆ ಬರುವುದು ಕಂಡಿತು. ಇಲ್ಲಿಂದ ನಮ್ಮ ಮೋಜುಮಸ್ತಿಗಳು ಪದಶಃ ನಿಂತವು.

ಸೇನೆಯ ಅಧಿಕಾರಿಗಳು, ‘ಹಿಮಪಾತ ಹೆಚ್ಚುತ್ತಿದೆ. ನೀವು ಈ ಕೂಡಲೇ ಇಲ್ಲಿಂದ ಸುರಕ್ಷಿತ ಬೇಸ್‍ಗಳಿಗೆ ಮರಳಬೇಕು’ ಎಂದು ಏರುಧ್ವನಿಯಲ್ಲಿ ವಿನಂತಿಸಲು ಮೊದಲಾದರು. ಕಿವಿಗೆ ರೆಸ್ಕ್ಯೂ ಪದ ಬೀಳುತ್ತಿದ್ದಂತೆ ನಮ್ಮೆಲ್ಲರಿಗೂ ದುಗುಡ. ನಾವು ತಡಮಾಡಿದರೆ ನಮ್ಮ ವಸತಿ ನಿಲಯವೂ ಹಿಮಸಮಾಧಿಯಾಗುವ ಅಪಾಯ ಹೆಚ್ಚಿತ್ತು. ನಮಗೆ ಸೇನೆಯವರ ಮಾತು ಕೇಳದೆ ಬೇರೆ ದಾರಿಯಿರಲಿಲ್ಲ. ಪರಿಸ್ಥಿತಿಯ ತೀವ್ರತೆ ನಮಗೆ ಸೇನಾಧಿಕಾರಿಗಳ ನಡಿಗೆ, ಧ್ವನಿಗಳಲ್ಲಿ ಅರ್ಥವಾಗತೊಡಗಿತು. ನಾವು 11 ಮಂದಿ ಟ್ರೆಕ್ಕರ್‌ಗಳು ಮತ್ತು ನಮ್ಮ ಜೊತೆ ಇನ್ನೂ 45 ಜನ ಪ್ರವಾಸಿಗರು ಮುಂದಿನ ಹಿಮನಡಿಗೆಗೆ ಸಿದ್ಧರಾದೆವು.

ನಾನು ಮೊದಲೇ ಹೇಳಿದಂತೆ ನಾವು ನಡಿಗೆಗೆ ಸಿದ್ಧವಿದ್ದರೂ ಹಿಮವನ್ನು ಊಹಿಸಿರಲಿಲ್ಲ. ನಾವು ಕ್ರಮಿಸಬೇಕಿರುವ ದೂರ ನಮಗಿನ್ನೂ ಗೊತ್ತಿರಲಿಲ್ಲ. ಬೇಕಂತಲೇ ಸೇನಾಧಿಕಾರಿಗಳು ನಮಗೆ ನಡಿಯಬೇಕಿರುವ ದೂರ ತಿಳಿಸಿರಲಿಕ್ಕಿಲ್ಲ ಎಂದು ಈಗ ಅನಿಸುತ್ತದೆ. ಮಧ್ಯಾಹ್ನ ಒಂದು ಗಂಟೆಯ ಹೊತ್ತಿಗೆ ನಮ್ಮ ನಡಿಗೆ ಶುರುವಾಯ್ತು. ಹಿಮದಲ್ಲಿ ಬೆನ್ನುಚೀಲಗಳ ಭಾರ ಹೊತ್ತು ನಡೆಯುವುದು ಸುಲಭದ ಮಾತಲ್ಲ.
500 ಮೀಟರ್‌ ಕ್ರಮಿಸುವಾಗ ಅದಾಗಲೇ ಎರಡು-ಅಡಿಗೂ ಮೀರಿ ಹಿಮವಿದ್ದಿದ್ದರಿಂದ ನಮ್ಮ ಬೂಟುಗಳೊಳಗೆ ಹಿಮ ಹೊಕ್ಕು ಪಾದದಿಂದ ಹಿಡಿದು ಮೈಕೊರೆಯಲು ಶುರುವಾಗಿತ್ತು. ಹಿಮಪಾತವಾಗುವಾಗ ಆಮ್ಲಜನಕದ ಓಡಾಟವೂ ಕಡಿಮೆಯಿರುವ ಕಾರಣ ಉಸಿರು ಎಳೆದುಕೊಳ್ಳುವುದೇ ಮೊದಲ ಸವಾಲಾಯ್ತು. ಹಿಮಬೆಟ್ಟ ಹತ್ತುತ್ತ ಹೆಚ್ಚು ಉಸಿರಿಗಾಗಿ ಮೂಗು-ಬಾಯಿ ಎರಡೂ ಕೆಲಸಮಾಡಿ ಗಂಟಲು ಧ್ವನಿ ಕಳೆದುಕೊಳ್ಳಲು ಶುರುಮಾಡಿತ್ತು. ಗಂಟಲು ಒಣಗುತ್ತಿದೆ ಎಂದು ನೀರು ಕುಡಿಯಲು ಬಿಸಿನೀರಿನ ಫ್ಲಾಸ್ಕ್ ತೆಗೆದರೆ, ಕುದಿಸಿ ತುಂಬಿಸಿದ್ದ ನೀರು ತಣ್ಣಗೆ ಕೊರೆದು; ಅದನ್ನು ಕುಡಿದ ಗಂಟಲು ಇನ್ನಷ್ಟು ಹದಗೆಡುತ್ತಿತ್ತು.

ನಾವು ನಡೆಯುತ್ತಿದ್ದದ್ದು ಗುಡ್ಡ ಕೊರೆದು ಮಾಡಿದ್ದ ರಸ್ತೆಯಲ್ಲಿ. ಇಲ್ಲಿ ಎಲ್ಲಿ ಪ್ರಪಾತವಿದೆ, ಎಲ್ಲಿ ರಸ್ತೆಯಿದೆ ಎಂದು ತಿಳಿಯದಷ್ಟು ಮಟ್ಟಿಗೆ ಹಿಮ ಸುರಿದಿತ್ತು. ಸೈನಿಕರೊಬ್ಬರು ನಮಗೆ ದಾರಿ ತೋರಿಸುತ್ತಾ ಮುನ್ನಡೆದಿದ್ದರು, ಅವರ ಹೆಜ್ಜೆಗೆ ನಮ್ಮ ಹೆಜ್ಜೆ ಸೇರಿಸಿ ನಡೆವುದೂ ಒಂದು ಸಾಹಸವೇ. ನಮ್ಮ ಚೀಲಗಳು 5 ನಿಮಿಷಕ್ಕೊಮ್ಮೆ ಒಂದಷ್ಟು ಹಿಮ ಸಂಗ್ರಹಿಸಿಕೊಂಡು ತೂಕವಾಗಿ, ಅವುಗಳನ್ನು ನಿಂತು ನಿಂತು ಕೊಡವಿಕೊಂಡು ಮುನ್ನಡೆಯಬೇಕಾಯ್ತು. ಈ ನಡಿಗೆ ಮಧ್ಯಾಹ್ನ 2ರ ಹೊತ್ತಿಗೆ ಹಿಂದಿನ ದಿನ ನಾವು ದಣಿವಾರಿಸಿಕೊಂಡಿದ್ದ ಟಂಗ್ಲೂಗೆ ತಲುಪಿತು. ಪ್ರಕೃತಿಯ ವೈಚಿತ್ರ್ಯ ಎನ್ನುವುದು ಇದಕ್ಕೆ. ಕೇವಲ 24 ಗಂಟೆ ಮುಂಚೆ ಸ್ವಚ್ಛಂದ-ಸ್ವತಂತ್ರ ಪರಿಸರದಂತೆ ಕಂಡಿದ್ದ ಜಾಗ ಈಗ ಸಂಪೂರ್ಣ ಹಿಮಾವೃತಗೊಂಡು ಆ ಸೇನಾ ಟೆಂಟುಗಳು ಹಿಮದಲ್ಲಿ ಮುಳುಗಿಹೋಗಿದ್ದವು. ಈ ದೃಶ್ಯ ನಮ್ಮ ಭಯವನ್ನು, ಅಸಹಾಯಕತೆಯನ್ನು ಇಮ್ಮಡಿಯಾಗಿಸಿತು.

3.30ರ ಸುಮಾರಿಗೆ ಕತ್ತಲಾಗಲು ಶುರುವಾಯ್ತು. ಹಿಮ ನೋಡಿದ ಹಲವರಿಗೆ ಹಿಮಗುರುಡು ಶುರುವಾಗುತ್ತದೆ ಎಂದು ಎಲ್ಲೋ ಓದಿದ್ದೆ, ಈಗ ಅನುಭವಿಸಿದೆ, ಏನು ನೋಡಿದರೂ ಬಿಳಿ, ಯಾರನ್ನು ನೋಡಿದರೂ ಬೆಳ್ಳಗೆ ಭೂತ ಕಂಡಂತೆ ಗೋಚರವಾಯ್ತು. ಆಯ್ಯೋ... ಇಲ್ಲಿ ಬಂದು ಕಣ್ಣು ಕಳೆದುಕೊಂಡೆನೇ ಎಂದುಕೊಂಡೆ. ಅಳುವುದಕ್ಕೂ ಮರುಗುವುದಕ್ಕೂ ಆಗದಷ್ಟು ಸೋತಿದ್ದೆ. ಮುಂದಿನ ಅಷ್ಟೂ ದಾರಿ ಸ್ನೇಹಿತರ ಕೈಹಿಡಿದು 'ಅಂಧೆ'ಯಾಗಿಯೇ ನಡೆದೆ. ಸಂಜೆ 5ರ ಸುಮಾರಿಗೆ ಅದು ಭೀಕರ ಕತ್ತಲು. ನಮ್ಮ ಹದಗೆಟ್ಟ, ಒಡೆದ ಧ್ವನಿಗಳು ಬಿಟ್ಟರೆ ಅಲ್ಲಿ ಏನೂ ನಮ್ಮ ಧೈರ್ಯಕ್ಕಿಲ್ಲ. ನಾವು ಒಯ್ದಿದ್ದ ಟಾರ್ಚುಗಳು ಆ ಕತ್ತಲಲ್ಲಿ ಮಿಣುಕು ಹುಳದಂತೆ ಮಿಣುಕಿ ನಂದಿಹೋಗಿದ್ದವು. ಹಿಮಪರ್ವತವನ್ನು ಹತ್ತುವಾಗ ಒಂದು ರೀತಿಯ ಕಷ್ಟವಾದರೆ, ಇಳಿಯುವಾಗ ಇನ್ನೊಂದು ರೀತಿಯ ಬವಣೆ. ಪರ್ವತಗಳನ್ನು ಇಳಿಯುವಾಗ ಸಹಜವಾಗಿಯೇ ಕಾಲು ಜಾರುತ್ತದೆ. ಇನ್ನು ಹಿಮವಿರುವಾಗ ನಾವು ಎಷ್ಟೇ ಜಾಗರೂಕರಾಗಿದ್ದರೂ ಹಿಮ ನಮ್ಮನ್ನೆಳೆದೊಯ್ಯುತ್ತದೆ.

ಹೀಗೆ ಇಳಿಯುವಾಗ ಹಿಂದೆಂದೂ ನೋಡಿರದ ಕತ್ತಲೆ, ಪ್ರಪಾತ ಮತ್ತು ಜಾರುವಿಕೆ ಎಲ್ಲವೂ ಸೇರಿ ಹಲವು ಬಾರಿ ನಾವು ಬದುಕುವುದಿಲ್ಲ ಎಂದು ಊಹಿಸಿದ್ದಿದೆ. ಜಾರುತ್ತಾ ಹೋಗಿ ಗಿಡಗಂಟಿಗಳಿಗೆ ಸಿಕ್ಕಿ ಜೀವ ಉಳಿಸಿಕೊಂಡಿದ್ದಿದೆ. ಒಬ್ಬ ಸ್ನೇಹಿತನು ಹಿಮರಾಶಿಯಲ್ಲಿ ಕಳೆದುಹೋಗಿ ಆತ ಸಿಗುವವರೆಗೂ ಅತ್ತಿದ್ದಿದೆ. ಇಷ್ಟೆಲ್ಲ ಸವಾಲುಗಳ ನಡುವೆ ಅಂದು ರಾತ್ರಿ 11ರವರೆಗೆ ಅಂದರೆ ಸುಮಾರು 10 ಗಂಟೆಗಳ ಕಾಲ ನಾವು ಸೇನಾಧಿಕಾರಿಗಳನ್ನು ಹಿಂಬಾಲಿಸಿ ಬರೋಬ್ಬರಿ 25 ಕಿ.ಮೀ ನಡೆದಿದ್ದೆವು. ಸುರಕ್ಷಿತ ಜಾಗಕ್ಕೆ ನಮ್ಮನ್ನು ಸೇರಿಸಿದ ಸೇನೆಯವರೂ ಮುಂದಿನ ರೆಸ್ಕ್ಯೂ ಕಾರ್ಯಕ್ಕೆ ಹೊರಟಿದ್ದರು.

ಆ ಸರಿರಾತ್ರಿಯಲ್ಲಿ ಯಾರೋ ಪುಣ್ಯಾತ್ಮರು ಮನೆಯೊಳಗೆ ಕರೆದು ಕುದಿವ ನೀರು ಕೊಟ್ಟರು. ಮೈಬಿಸಿ ಮಾಡಿಕೊಳ್ಳಲು ವ್ಯವಸ್ಥೆ ಮಾಡಿದರು.

ನಾವೆಲ್ಲರೂ ಉತ್ಸಾಹದಿಂದ ಸಾಹಸಯಾತ್ರೆ ಎಂದು ಹೊರಟಿದ್ದೆವು. ಆದರೆ, ಪ್ರಕೃತಿಯ ಸ್ನೇಹ ಬಯಸಿ ಹೊರಟವರು ಪ್ರಕೃತಿಯ ಕಠೋರತೆಯ ಸೂಚನೆಗಳನ್ನೂ ಅವಲೋಕಿಸಬೇಕು ಎನ್ನುವುದನ್ನ ಈ ಸುದೀರ್ಘ ನಡಿಗೆ ಕಲಿಸಿತು. ಕತ್ತಲಾದ ನಂತರ ನಾವುಗಳ್ಯಾರೂ ಬದುಕಿ ಹಿಂದಿರುಗುತ್ತೇವೆ ಎನ್ನುವ ನಂಬಿಕೆ ಇಟ್ಟುಕೊಂಡಿರಲಿಲ್ಲ. ಅಂದು ನಾವೆಲ್ಲರೂ ಅನುಭವಿಸಿದ ಮನೋವ್ಯಥೆಗಳನ್ನ ಬಹುಶಃ ನನ್ನ ಪದಗಳು ಕಟ್ಟಿಕೊಡಲಾರವು. ಜೀವಭಯವನ್ನು ಬಹಳ ಹತ್ತಿರದಿಂದ ಅನುಭವಿಸಿದ್ದೆವು. ಆದರೆ, ಈ ಯಾತ್ರೆ ನಮ್ಮ ದೇಹದ ಬಗ್ಗೆ, ಮನಸ್ಥೈರ್ಯದ ಬಗ್ಗೆ ಇದ್ದ ವಿಶ್ವಾಸವನ್ನು ನೂರುಪಟ್ಟು ಹೆಚ್ಚಿಸಿತು. ನಮ್ಮ ದೈಹಿಕ ಸಾಮರ್ಥ್ಯಕ್ಕೆ ನಾವೇ ಮಿತಿಯೊಡ್ಡಿಕೊಳ್ಳುತ್ತೇವೆ. ಸಾವು ಎದುರಿಗಿದ್ದರೆ ಮಾತ್ರ ಈ ಸಾಮರ್ಥ್ಯವನ್ನು ಬಳಸುತ್ತೇವೆ ಎನ್ನುವ ಸತ್ಯ ಅರ್ಥವಾಯ್ತು.

ಈಗ ಇದನ್ನೆಲ್ಲಾ ನೆನೆದು ಒಂದಷ್ಟು ನಗುತ್ತೇವೆ, ಗೇಲಿಮಾಡುತ್ತೇವೆ. ಅಂದಿನ ವಿಹ್ವಲ ಕ್ಷಣಗಳು ಇಂದಿನ ತಮಾಷೆಗೆ ವಿಷಯಗಳಾಗಿವೆ. ಅಂದು ಸುರಕ್ಷಿತವಾಗಿ ನಾವು ನೆಲ ಮುಟ್ಟಿದ ನಂತರ ನಮ್ಮ ಶಿಬಿರ ನಾಯಕ, ಹಿಮಾಲಯ್ ಕೆ ಸಾಮ್ನೇ ಹೀರೊ ಮತ್ ಬನೋ.... ಹಿಮಾಲಯ ಖುದ್ ಹೀರೊ ಹೈ ಎಂದ ಮಾತು ಮತ್ತೆ ಮತ್ತೆ ನಮ್ಮನ್ನು ಚಿಂತನೆಗೆ ಹಚ್ಚಿ, ಪ್ರಕೃತಿಯೆದುರು ನಾವು ಸಣ್ಣ ಅಣುಗಳು. ಇರುವಷ್ಟು ದಿನ ಒಡನಾಡಿಯಂತೆ, ಅರಿತು ಬದುಕು ಎಂದು ನನ್ನನ್ನು ಎಚ್ಚರಿಸುತ್ತದೆ. ಈ ಅನುಭವ ನನ್ನನ್ನು ಸಾಹಸ-ಪ್ರವಾಸಗಳ ವಿಷಯದಲ್ಲಿ ಎದೆಗುಂದಿಸದಿದ್ದರೂ ಇನ್ನಷ್ಟು ಅಧ್ಯಯನ, ಪ್ರಯಾಣ ವಿಷಯದಲ್ಲಿ ಅಣಿಗೊಳ್ಳುವಿಕೆಯ ಅಗತ್ಯತೆಯನ್ನು ಅರ್ಥೈಸಿಕೊಟ್ಟಿದೆ. ನಿಸರ್ಗದ ಜೊತೆಗಿನ ಆಪ್ತತೆಯ ಹಂಬಲ ಇನ್ನೂ ಹೆಚ್ಚಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT