ಬುಧವಾರ, ಅಕ್ಟೋಬರ್ 20, 2021
29 °C

ಚಾರಣಿಗರ ಸ್ವರ್ಗ: ಉತ್ತರ ಮಲೆಯ ಹಸಿರು ಹಾದಿಯಲ್ಲಿ

ಜಿ.ನಾಗೇಂದ್ರ Updated:

ಅಕ್ಷರ ಗಾತ್ರ : | |

Prajavani

ಸಂಡೂರನ್ನು ಬಯಲುಸೀಮೆಯ ಚಾರಣಿಗರ ಸ್ವರ್ಗ ಎಂದೇ ಕರೆಯಲಾಗುತ್ತದೆ. ಬೆಟ್ಟ, ಗುಡ್ಡ, ಝರಿ, ಜಲಪಾತಗಳ ಹಸಿರು ಹಾದಿಯಲ್ಲಿ ಚಾರಣ ನಡೆಸಿದ ವಿಶಿಷ್ಟ ಅನುಭವವೊಂದು ಇಲ್ಲಿದೆ. ಅಂದಹಾಗೆ, ಈ ಚಾರಣಿಗರನ್ನು ಸ್ಥಳೀಯರು ಕಿಡ್ನಿ ಕಳ್ಳರೆಂದು ಅಟ್ಟಿಸಿಕೊಂಡು ಬಂದಿದ್ದೇಕೋ?

***

ಸಂಡೂರಿನ ಸುತ್ತಮುತ್ತಲೂ ಇರುವ ಹಲವಾರು ಇತಿಹಾಸ ಪ್ರಸಿದ್ಧ ಸ್ಥಳಗಳು, ಪುರಾತನ ದೇವಾಲಯಗಳು, ಕೋಟೆ ಕೊತ್ತಲಗಳು, ಬೆಟ್ಟಗಳ ಸಾಲು ಎಂಥವರನ್ನೂ ಆಕರ್ಷಿಸುತ್ತವೆ. ಸಂಡೂರನ್ನು ಬಯಲುಸೀಮೆಯ ಚಾರಣಿಗರ ಸ್ವರ್ಗವೆಂದರೂ ತಪ್ಪಾಗಲಾರದು. ರಾಮಗಡ, ತಿಮ್ಮಪ್ಪನ ಬೆಟ್ಟ, ಢುಂಕು ಫಾಲ್ಸ್, ಭೈರವತೀರ್ಥ, ಭೀಮತೀರ್ಥ, ಜೋಗಿಕೊಳ್ಳ, ಮಲಿಯಮ್ಮ ಗುಹೆಗಳು ಚಾರಣಿಗರ ಪ್ರಿಯತಾಣಗಳು. ಬಿರು ಬೇಸಿಗೆಯಲ್ಲಿ ಚಾರಣ ಮಾಡಲು ಸೂಕ್ತ ಸಮಯವಲ್ಲದಿದ್ದರೂ ಜುಲೈನಿಂದ ನವೆಂಬರ್‌ವರೆಗೆ ಹಸಿರಿನಿಂದ ಕಂಗೊಳಿಸುವ ಬೆಟ್ಟ ಗುಡ್ಡಗಳು, ತಂಪಾದ ವಾತಾವರಣ ಚಾರಣಿಗರನ್ನು ತನ್ನತ್ತ ಸೆಳೆಯುತ್ತವೆ. ಈ ಅವಧಿಯಲ್ಲೇ ಚಾರಣಕ್ಕೆ ಯೋಜನೆ ರೂಪಿಸಿದ ನಮ್ಮ ತಂಡ ಹೊರಟಿದ್ದು ‘ಉತ್ತರ ಮಲೆ’ಯತ್ತ...

‘ಸಂಡೂರು ಸಮಿಟರ್ಸ್‌’ ತಂಡದ ರೂವಾರಿ ಚಾರಣ ಶ್ರೀನಿವಾಸ ರಾಮಗಡ. ಇವರ ಮಾರ್ಗದರ್ಶನದಲ್ಲಿ, ಸಹ ಚಾರಣಿಗರಾದ ಜಟಿಂಗ್ ರಾಜ್ ಹಾಗೂ ಮುತ್ತು ಪ್ರಕಾಶ್‌ರೊಂದಿಗೆ ಬೆಳಿಗ್ಗೆ 9 ಗಂಟೆಗೆ ನಮ್ಮ ಪಯಣ ಸಂಡೂರಿನಿಂದ ಪ್ರಾರಂಭವಾಯಿತು. ಕೂಡ್ಲಿಗಿ ರಸ್ತೆಯಲ್ಲಿ ಸುಮಾರು 22 ಕಿ.ಮೀ ದೂರದಲ್ಲಿ ಬಂಡ್ರಿ ಗ್ರಾಮವಿದೆ. ಅಲ್ಲಿಂದ 5 ಕಿ.ಮೀ ದೂರದಲ್ಲಿರುವ ಗ್ರಾಮವೇ ಉತ್ತರ ಮಲೆ. ಈ ಗ್ರಾಮಕ್ಕೆ ಬಸ್ ಸೌಕರ್ಯ ಬಹಳ ಕಡಿಮೆ. ಹೀಗಾಗಿ ನಾವೆಲ್ಲರೂ ಆಟೊ ರಿಕ್ಷಾದಲ್ಲಿ ಉತ್ತರ ಮಲೆ ಗ್ರಾಮ ತಲುಪಿದೆವು. ಅದುವರೆಗೆ ಯಾವುದೇ ಪುಸ್ತಕಗಳಲ್ಲಿ ಉತ್ತರ ಮಲೆ ಬೆಟ್ಟದ ಬಗ್ಗೆ ಉಲ್ಲೇಖವಿಲ್ಲದಿದ್ದರೂ ಗ್ರಾಮದ ಹಲವು ಜನರನ್ನು ಸಂಪರ್ಕಿಸಿ ಬೆಟ್ಟ ಹಾಗೂ ಅಲ್ಲಿರುವ ಕೋಟೆಯ ಇತಿಹಾಸದ ಬಗ್ಗೆ ಮಾಹಿತಿ ಪಡೆದುಕೊಂಡೆವು.

ಗ್ರಾಮದಿಂದ ಸುಮಾರು ಎರಡು ಕಿ.ಮೀ ದೂರದಲ್ಲಿ ಉತ್ತರ ಮಲೆ ಬೆಟ್ಟವಿದೆ. ದ್ವಿಚಕ್ರ ವಾಹನಗಳೂ ಹೋಗಲಾಗದಂತಹ ಮಣ್ಣಿನ ರಸ್ತೆಯಲ್ಲಿ ನಡೆದುಕೊಂಡೇ ಹೋಗಬೇಕು. ಹಿಂದಿನ ರಾತ್ರಿ ಮಳೆ ಸುರಿದಿದ್ದ ಕಾರಣ ರಸ್ತೆಯೆಲ್ಲವೂ ಕೆಸರುಮಯವಾಗಿತ್ತು. ಕಷ್ಟಪಟ್ಟು ಒಂದು ಕಿ.ಮೀ ಕ್ರಮಿಸಿದ ನಂತರ ಸಜ್ಜೆ, ಜೋಳ, ತೊಗರಿ, ಹಾಗೂ ಕಡಲೆಕಾಯಿ ಹೊಲಗಳ ಹಚ್ಚ ಹಸುರಿನ ಪರಿಸರ ಮನಸ್ಸಿಗೆ ಮುದ ನೀಡಿತು. ಅಲ್ಲಿಂದ ಬೆಟ್ಟದ ಬುಡ ತಲುಪಲು ಮತ್ತೊಂದು ಕಿ.ಮೀ ಕಾಲುದಾರಿಯಲ್ಲಿ ಸಾಗಿದೆವು. ತಂಪಾದ ವಾತಾವರಣದಲ್ಲಿ ಬೆಟ್ಟದ ತಪ್ಪಲು ತಲುಪಿದ್ದೇ ಗೊತ್ತಾಗಲಿಲ್ಲ.

ಹತ್ತಿರದಲ್ಲಿದ್ದ ಕುರಿಗಾಹಿಗಳ ಮಾರ್ಗದರ್ಶನ ಪಡೆದು ಬೆಟ್ಟವನ್ನು ಏರಲು ಪ್ರಾರಂಭಿಸಿದೆವು. ಕುರುಚಲು ಕಾಡನ್ನು ಹೊಂದಿರುವ ಬೆಟ್ಟ ಪ್ರದೇಶದಲ್ಲಿ ಆಗೊಮ್ಮೆ, ಈಗೊಮ್ಮೆ ಚಿರತೆ ದರ್ಶನ ನೀಡುತ್ತದೆಂದು ತಿಳಿದ ಮೇಲಂತೂ ಒಳಗೊಳಗೇ ಭಯ ನಮ್ಮ ಜೊತೆಯೇ ಹೆಜ್ಜೆ ಹಾಕುತ್ತಿತ್ತು. ಕರಡಿ ಹಾಗೂ ಕಾಡು ಹಂದಿಗಳೂ ಬೆಟ್ಟದ ಪ್ರದೇಶದಲ್ಲಿವೆಯಂತೆ. ಕುರಿಗಾಹಿಗಳು ಕುರಿಗಳನ್ನು ಮೇಯಿಸುವಾಗ ನಿರ್ಮಾಣವಾಗಿರುವ ದಾರಿಯ ಜಾಡು ಹಿಡಿದು ಸಾಗಿದೆವು. ಕೆಲವು ಕಡೆ ಗಿಡಗಳ ಮಧ್ಯೆ ನುಸುಳಿಕೊಂಡೇ ಕ್ರಮಿಸಿದೆವು.

ಬೆಟ್ಟದಲ್ಲಿ ಹಾದಿಯುದ್ದಕ್ಕೂ ಕಾಣಿಸಿದ ಪಚ್ಚೇರಿ, ಪೊಳಕೆ, ಹಲಗಿಲಿ, ಭೋಜಪತ್ರೆ, ಹೊಂಗೆ, ಜಾಲಿ ಹೀಗೆ ವಿವಿಧ ಬಗೆಯ ಮರಗಳ ಪರಿಚಯ ಹಾಗೂ ಉಪಯೋಗಗಳನ್ನು ಪರಸ್ಪರ ವಿನಿಮಯ ಮಾಡಿಕೊಂಡೆವು. ಸೀತಾಫಲ ಹಾಗೂ ಬಿಕ್ಕೆ ಹಣ್ಣು ಗಿಡಗಳೂ ಹೇರಳವಾಗಿದ್ದವು. ಮರದ ಕಾಂಡವಿಡೀ ಸೀಮೆಎಣ್ಣೆ ಹಾಕಿ ಸುಟ್ಟಂತೆ ಕಪ್ಪಗಿರುವ, ಮುಟ್ಟಿದರೆ ಮಸಿ ಮೆತ್ತಿಕೊಳ್ಳುವ ‘ಮಸಿವಾಳ’ ಮರವಂತೂ ಅಚ್ಚರಿ ಮೂಡಿಸಿತು.

ನಡುವೆ ಸಿಕ್ಕ ವಿಶಾಲವಾದ ಬಯಲು ಪ್ರದೇಶದಲ್ಲಿದ್ದ ಹುಲ್ಲಿನ ಮೇಲೆ ಕುಳಿತು ವಿಶ್ರಮಿಸಿ, ಲಘು ಉಪಾಹಾರ ಸೇವಿಸಿ ಒಟ್ಟು ಎರಡು ಗಂಟೆಗಳ ಕಾಲ ನಡೆದು ಬೆಟ್ಟದ ತುದಿಯನ್ನು ತಲುಪುವಷ್ಟರಲ್ಲಿ ಮಧ್ಯಾಹ್ನ ಸುಮಾರು 12 ಗಂಟೆಯಾಗಿತ್ತು.

ಬೆಟ್ಟದ ಮೇಲೆ ಜನವಸತಿಯಿದ್ದ ಕುರುಹುಗಳು ಅಲ್ಲಲ್ಲಿ ಕಾಣಸಿಕ್ಕವು. ಅಲ್ಲಿ ‘ಮಲೆಯಮ್ಮ ದೇವಿ’ಯ ಪುಟ್ಟ ದೇವಾಲಯವಿದ್ದು, ಉತ್ತರ ಮಲೆ, ಕಾಟಿನ ಕಂಬ ಹಾಗೂ ಬಂಡ್ರಿ ಗ್ರಾಮಗಳ ಭಕ್ತರು ಶ್ರಾವಣ ಮತ್ತು ಮಾರ್ಗಶಿರ ಮಾಸದಲ್ಲಿ ದೇವಿಗೆ ವಿಶೇಷ ಪೂಜೆ ಸಲ್ಲಿಸುತ್ತಾರಂತೆ.

ಬೆಟ್ಟದ ಒಂದು ಮೂಲೆಯಲ್ಲಿರುವ ವಿಶಾಲವಾದ ಕೊಳ ಗಮನ ಸೆಳೆಯುತ್ತದೆ. ಬಹುಶಃ ಒಂದು ಕಾಲದಲ್ಲಿ ಇದ್ದಿರಬಹುದಾದ ಜನರಿಗೆ ಈ ಕೊಳದ ನೀರು ಜೀವನಾಧಾರವಾಗಿರಬಹುದು. ಈಗ ಈ ಕೊಳ ಗಿಡಗಂಟಿಗಳಿಂದ ತುಂಬಿಹೋಗಿದೆ. ಕೋಟೆಯ ಗೋಡೆ ಬಹುತೇಕ ಶಿಥಿಲಗೊಂಡಿದೆಯಾದರೂ ಅಲ್ಲಲ್ಲಿ ಇರುವ ಬುರುಜುಗಳು ಸುಸ್ಥಿತಿಯಲ್ಲಿವೆ.

ಉತ್ತರ ಮಲೆಯ ಶೃಂಗದಲ್ಲಿರುವ ಬೃಹತ್ ಗಾತ್ರದ ಬಂಡೆಯ ಮೇಲೆ ನಿರ್ಮಿಸಲಾಗಿರುವ ಬುರುಜಿನಂತಹ ರಚನೆಯನ್ನು ತಲುಪುವ ಮಾರ್ಗವು ಶಿಥಿಲಗೊಂಡಿರುವುದರಿಂದ, ಅಲ್ಲಿಗೆ ಹೋಗುವ ನಮ್ಮ ಪ್ರಯತ್ನ ವಿಫಲವಾಯಿತು. ಮೂರು ಕೋಣೆಗಳನ್ನು ಹೊಂದಿರುವ ಮೇಲ್ಚಾವಣಿಯಿಲ್ಲದ ಕಲ್ಲಿನ ಕಟ್ಟಡ ಅಚ್ಚರಿ ಮೂಡಿಸುತ್ತದೆ. ಈ ಕಟ್ಟಡವನ್ನು ಪ್ರವೇಶಿಸಲು ಒಂದು ಪಾರ್ಶ್ವದಲ್ಲಿ ಮೆಟ್ಟಿಲುಗಳಿದ್ದು, ಮತ್ತೊಂದು ಪಾರ್ಶ್ವ ಶಿಥಿಲಗೊಂಡಿದೆ. ಮೂರೂ ಕೋಣೆಗಳಲ್ಲಿ ಗಿಡಗಳು ಬೆಳೆದಿವೆ. ನಡುಕೋಣೆಯಲ್ಲಿರುವ ಬಾವಿಯಂತಹ ರಚನೆಯಲ್ಲಿ ಮದ್ದು ಗುಂಡುಗಳನ್ನು ಶೇಖರಿಸಿಡುತ್ತಿದ್ದರಂತೆ.

ಉತ್ತರ ಮಲೆ ಪ್ರದೇಶ ಪಾಳೆಯಗಾರರ ಆಳ್ವಿಕೆಗೆ ಒಳಪಟ್ಟಿತ್ತೆಂದು ಸ್ಥಳೀಯರು ಹೇಳುತ್ತಾರಾದರೂ ನಿಖರವಾದ ಮಾಹಿತಿ ಯಾರಲ್ಲೂ ಲಭ್ಯವಿಲ್ಲ. ಅಂದು ಪಾಳೆಯಗಾರರು ರಕ್ಷಣೆಗಾಗಿ ಉಪಯೋಗಿಸುತ್ತಿದ್ದ ಆಯುಧಗಳು ಕೆಲವರ ಸುಪರ್ದಿಯಲ್ಲಿವೆಯಂತೆ.

ಕಾಡಿನಲ್ಲಿ ‘ಕಿಡ್ನಿ’ ಕಳ್ಳರು
ಮೂರು ಗಂಟೆಯವರೆಗೂ ಕೋಟೆಯ ಆವರಣದಲ್ಲಿ ಅಲೆದಾಡಿದೆವು. ಬೆಟ್ಟವನ್ನು ಹತ್ತಿದ ವಿರುದ್ಧ ದಿಕ್ಕಿನಿಂದ ಇಳಿಯಬೇಕೆಂದು ಮೊದಲೇ ನಿರ್ಧರಿಸಿದ್ದೆವು. ಅದೇ ರೀತಿ ಇಳಿಯುವಾಗ ಕೇವಲ ಕಲ್ಲು ಬಂಡೆಗಳ ಹಾದಿಯಲ್ಲೇ ಇಳಿದೆವು. ಮುಖ್ಯ ರಸ್ತೆಯನ್ನು ತಲುಪಲು ಕಾಲುದಾರಿಯಲ್ಲಿ ಆರು ಕಿ.ಮೀ ಕುರುಚಲು ಕಾಡಿನಲ್ಲಿ ಸಾಗಬೇಕು. ಅಲ್ಲಿ ನಮಗೊಂದು ಅನಿರೀಕ್ಷಿತ ಘಟನೆ ನಡೆಯಿತು. ಒಬ್ಬ ಮಹಿಳೆ ಹಾಗೂ ಪುರುಷ ನಮ್ಮನ್ನು ನೋಡಿ ಭಯಭೀತರಾಗಿ ಜೋರಾಗಿ ಕಿರುಚಾಡುತ್ತಾ ಓಡಿಹೋದರು. ಹತ್ತಿರ ಹೋಗಿ ನೋಡಿದಾಗ, ಒಣ ಕಟ್ಟಿಗೆಗಳ ರಾಶಿ ಕಾಣಿಸಿತು. ಬಹುಶಃ ನಮ್ಮನ್ನು ಅರಣ್ಯ ಇಲಾಖೆಯ ಅಧಿಕಾರಿಗಳೆಂದು ಭಾವಿಸಿ ಭಯದಿಂದ ಓಡಿಹೋಗಿರಬಹುದೆಂದು ಭಾವಿಸಿದೆವು.

ಮುಂದೆ ಸಾಗಿ ಮುಖ್ಯ ರಸ್ತೆಯ ಸಮೀಪವೇ ಇದ್ದ ಎತ್ತರದ ಪ್ರದೇಶದಲ್ಲಿ ವಿಶ್ರಮಿಸುತ್ತಿರುವಾಗ, ಏಳೆಂಟು ಜನರ ಗುಂಪೊಂದು ಕೈಯಲ್ಲಿ ಬಡಿಗೆಗಳನ್ನು ಹಿಡಿದುಕೊಂಡು ನಮ್ಮ ಕಡೆಗೆ ಬರುತ್ತಿರುವುದನ್ನು ನೋಡಿ ಹೆದರಿದೆವು. ನಮ್ಮನ್ನು ನೋಡಿ ಹೆದರಿ ಓಡಿಹೋದ ಮಹಿಳೆ ಹಾಗೂ ಪುರುಷ ಇಬ್ಬರೂ ಆ ಗುಂಪಿನಲ್ಲಿದ್ದರು. ನಮ್ಮನ್ನು ‘ಕಿಡ್ನಿ’ ಕದಿಯಲು ಬಂದವರೆಂದು ತಿಳಿದು ಮೊಬೈಲ್ ಮೂಲಕ ಹಳ್ಳಿಯವರಿಗೆ ತಿಳಿಸಿದ ಕಾರಣ ಅವರೆಲ್ಲರೂ ನಮಗೆ ಹೊಡೆಯಲು ಬಂದಿದ್ದರಂತೆ. ನಮ್ಮ ಪರಿಚಯ ಹಾಗೂ ನಾವು ಬಂದ ಉದ್ದೇಶವನ್ನು ತಿಳಿಸಿದ ನಂತರ ಅವರೆಲ್ಲರೂ ನಕ್ಕು, ನಮ್ಮನ್ನು ಬೀಳ್ಕೊಟ್ಟರು. ದಿನದ ಅನುಭವಗಳನ್ನು ಮೆಲುಕು ಹಾಕುತ್ತಾ ಸಂಡೂರು ತಲುಪಿದಾಗ ಸಂಜೆ ಆರು ಗಂಟೆಯಾಗಿತ್ತು.

ಬೆಟ್ಟದ ಮೇಲಿನಿಂದ ಕಾಣುವ ತುಂಗಭದ್ರಾ ಅಣೆಕಟ್ಟಿನ ಹಿನ್ನೀರಿನ ನೋಟ, ಕೆರೆಗಳು, ಸಮತಟ್ಟಾದ ಪ್ರದೇಶದಲ್ಲಿ ಕಾಣುವ ಹಚ್ಚ ಹಸಿರಿನ ಹೊಲಗಳು, ಮೇಯುತ್ತಿರುವ ಕುರಿ ಮಂದೆಗಳು, ಸುತ್ತಲೂ ಇರುವ ಬೆಟ್ಟಗಳ ಸಾಲು ಎಂತಹವರನ್ನೂ ಮಂತ್ರಮುಗ್ಧರನ್ನಾಗಿಸುತ್ತವೆ.

ಉತ್ತರ ಮಲೆ ಬೆಟ್ಟ ಒಂದು ದಿನದ ಚಾರಣಕ್ಕೆ ಹೇಳಿ ಮಾಡಿಸಿದಂತಿದೆ. ಇಲ್ಲಿಗೆ ಸಂಪರ್ಕ ನೀಡುವ ರಸ್ತೆ ಅಭಿವೃದ್ಧಿಪಡಿಸಬೇಕಾಗಿದೆ ಹಾಗೂ ಬೆಟ್ಟದ ಮೇಲೆ ಕೋಟೆಯ ಇತಿಹಾಸ ತಿಳಿಸುವ ಫಲಕಗಳು ಹಾಗೂ ಮಾರ್ಗಸೂಚಿ ಫಲಕಗಳನ್ನು ಅಳವಡಿಸಿದಲ್ಲಿ ಮುಂದೊಂದು ದಿನ ಉತ್ತರ ಮಲೆ ಬೆಟ್ಟ ಮತ್ತಷ್ಟು ಪ್ರವಾಸಿಗರನ್ನು ಆಕರ್ಷಿಸುವುದರಲ್ಲಿ ಅನುಮಾನವಿಲ್ಲ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು