ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತ–ಪಾಕ್ ಸೈನಿಕ ಸಾಮರ್ಥ್ಯ: ಯಾರ ಬತ್ತಳಿಕೆಯಲ್ಲಿ ಏನಿದೆ? ಇಲ್ಲಿದೆ ಉತ್ತರ

Last Updated 27 ಫೆಬ್ರುವರಿ 2019, 9:24 IST
ಅಕ್ಷರ ಗಾತ್ರ

ಗಡಿ ನಿಯಂತ್ರಣಾ ರೇಖೆಯನ್ನೂ ಮೀರಿ, ಪಾಕಿಸ್ತಾನದ ಭೂಪ್ರದೇಶದಲ್ಲಿ ಭಾರತೀಯ ವಾಯುಪಡೆಯ ಯುದ್ಧ ವಿಮಾನಗಳು ಬಾಂಬ್ ಹಾಕಿ ಬಂದಿರುವುದು ಸದ್ಯದ ಮಟ್ಟಿಗೆ ಹಳೆಯ ಸುದ್ದಿ. ವಾಯುಪಡೆಯ ನಿಖರ ದಾಳಿ ಮತ್ತು ಶತ್ರುದೇಶವನ್ನು ಗೊಂದಲಕ್ಕೆ ಕೆಡವಿ, ಗುರಿ ಸಾಧಿಸುವಸಾಮರ್ಥ್ಯಕ್ಕೆದೇಶದೆಲ್ಲೆಡೆ ಶ್ಲಾಘನೆ ವ್ಯಕ್ತವಾಗುತ್ತಿದೆ.

ಪೆಟ್ಟು ತಿಂದಪಾಕಿಸ್ತಾನವು ಆರಂಭದಲ್ಲಿ ‘ದಾಳಿಯಿಂದ ಹೆಚ್ಚೇನು ಹಾನಿಯಾಗಿಲ್ಲ’ ಎನ್ನುತ್ತಿತ್ತು. ಆದರೆ ಇದೀಗ ಪ್ರತೀಕಾರದ ಮಾತನ್ನಾಡುತ್ತಿದೆ. ‘ಭಾರತೀಯ ವಾಯುಪಡೆಯ ಎರಡು ಯುದ್ಧವಿಮಾನಗಳನ್ನು ಹೊಡೆದುರುಳಿಸಲಾಗಿದೆ’ ಎಂದು ಪಾಕ್ ಸೇನೆ ಹೇಳಿಕೊಂಡಿದೆ. ಕಾಶ್ಮೀರದ ಬುಡಗಾವ್‌ನಲ್ಲಿ ಭಾರತೀಯ ವಾಯುಪಡೆಯ ಹೆಲಿಕಾಪ್ಟರ್‌ ಪತನಗೊಂಡಿದೆ. ಇದನ್ನು ಪಾಕ್ ಸೇನೆ ಹೊಡೆದುರುಳಿಸಿದೆ ಎಂದು ಹೇಳಲಾಗುತ್ತಿದೆ.

ಪಾಕ್ ಆಕ್ರಮಿತ ಕಾಶ್ಮೀರದ ಚಕೋತಿ ಗ್ರಾಮದಲ್ಲಿ ಬಂಕರ್ ಪರಿಶೀಲಿಸಿ ಹಿಂದಿರುಗುತ್ತಿರುವ ಮಹಿಳೆ.ಯುದ್ಧ ನಡೆದರೆ ರಕ್ಷಣೆ ಪಡೆಯಲು ಭಾರತ–ಪಾಕ್ ಗಡಿಯ ಎರಡೂ ಭಾಗಗಳಲ್ಲಿ ಜನರು ಬಂಕರ್‌ಗಳನ್ನು ನಿರ್ಮಿಸಿಕೊಳ್ಳುತ್ತಿದ್ದಾರೆ (ಎಎಫ್‌ಪಿ ಚಿತ್ರ).
ಪಾಕ್ ಆಕ್ರಮಿತ ಕಾಶ್ಮೀರದ ಚಕೋತಿ ಗ್ರಾಮದಲ್ಲಿ ಬಂಕರ್ ಪರಿಶೀಲಿಸಿ ಹಿಂದಿರುಗುತ್ತಿರುವ ಮಹಿಳೆ.ಯುದ್ಧ ನಡೆದರೆ ರಕ್ಷಣೆ ಪಡೆಯಲು ಭಾರತ–ಪಾಕ್ ಗಡಿಯ ಎರಡೂ ಭಾಗಗಳಲ್ಲಿ ಜನರು ಬಂಕರ್‌ಗಳನ್ನು ನಿರ್ಮಿಸಿಕೊಳ್ಳುತ್ತಿದ್ದಾರೆ (ಎಎಫ್‌ಪಿ ಚಿತ್ರ).

ಪಾಕಿಸ್ತಾನದ ಸಂಭಾವ್ಯ ದಾಳಿಯನ್ನು ತಡೆಯುವ ಉದ್ದೇಶದಿಂದ ಭಾರತವು ಗಡಿಯುದ್ದಕ್ಕೂ ವಾಯುನೆಲೆಗಳನ್ನು ಸನ್ನದ್ಧ ಸ್ಥಿತಿಯಲ್ಲಿಟ್ಟಿದೆ. ಸೇನೆಯ ಉತ್ತರ ಮತ್ತು ಪಶ್ಚಿಮ ಕಮಾಂಡ್ ಮತ್ತು ನೌಕಾಪಡೆಗಳಿಗೆ ಯಾವುದೇ ಪರಿಸ್ಥಿತಿ ಎದುರಿಸಲು ಸಿದ್ಧರಾಗಿರಿ ಎಂದು ಸೂಚಿಸಿದೆ. ಗಡಿಯುದ್ದಕ್ಕೂ ನೆಲೆಸಿರುವ ಎರಡೂ ದೇಶಗಳ ಜನರು ಸಂಘರ್ಷದ ಭೀತಿಯಿಂದ ಸುರಕ್ಷಿತ ಸ್ಥಳಗಳನ್ನು ಹುಡುಕಿ ವಲಸೆ ಹೊರಟಿದ್ದಾರೆ.

ಯುದ್ಧದ ಕಾರ್ಮೋಡ ದಟ್ಟೈಸುತ್ತಿರುವ ಹಿನ್ನೆಲೆಯಲ್ಲಿ ಎರಡೂ ದೇಶಗಳಭೂಸೇನೆ, ವಾಯುಪಡೆ ಮತ್ತು ನೌಕಾಪಡೆಯ ಸಂಖ್ಯಾಬಲ ಮತ್ತು ಸಾಮರ್ಥ್ಯದ ಬಗ್ಗೆ ಕುತೂಹಲ ವ್ಯಕ್ತವಾಗುತ್ತಿದೆ. ಜಾಗತಿಕ ಸುದ್ದಿಗಳನ್ನು ಪ್ರಕಟಿಸುವಅಲ್‌ ಜಝೀರಾ ಜಾಲತಾಣ,ರಕ್ಷಣಾ ವಿದ್ಯಮಾನಗಳ ಮಾಹಿತಿ ನೀಡುವ ಗ್ಲೋಬಲ್ ಫೈರ್‌ ಪವರ್ (Global Fire Power),ಬ್ರಿಟನ್‌ನ ಇಂಟರ್‌ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಫಾರ್ ಸ್ಟ್ರಾಟಜಿಕ್ ಸ್ಟಡೀಸ್ (International Institute for Strategic Studies– IISS), ಸ್ವೀಡನ್‌ನಸ್ಟಾಕ್‌ಹೋಂ ಇಂಟರ್‌ನ್ಯಾಷನಲ್ ಪೀಸ್ ರೀಸರ್ಚ್ ಇನ್‌ಸ್ಟಿಟ್ಯೂಟ್ (Stockholm International Peace Research Institute– SIPRI) ಮತ್ತು ಅಮೆರಿಕದ ಸೆಂಟರ್ ಫಾರ್ ಸ್ಟ್ರಾಟಜಿಕ್ ಅಂಡ್ ಇಂಟರ್‌ನ್ಯಾಷನಲ್ ಸ್ಟಡೀಸ್ (Center for Strategic and International Studies– CSIS) ಜಾಲತಾಣಗಳಲ್ಲಿ ಲಭ್ಯವಿರುವ ಮಾಹಿತಿ ಆಧರಿಸಿ ಎರಡೂ ದೇಶಗಳ ಸೇನಾಬಲ ಹೋಲಿಸುವ ಪ್ರಯತ್ನವನ್ನು ಇಲ್ಲಿ ಮಾಡಲಾಗಿದೆ.

ಸುಮಾರು 57 ಅಂಶಗಳನ್ನು ಪರಿಗಣಿಸಿ ವಿವಿಧ ದೇಶಗಳಿಗೆ ರಕ್ಷಣಾ ಸಾಮರ್ಥ್ಯದ ರ‍್ಯಾಂಕಿಂಗ್ ನೀಡುವ ‘ಗ್ಲೋಬಲ್ ಫೈರ್‌ ಪವರ್’ ಜಾಲತಾಣದಲ್ಲಿಭಾರತಕ್ಕೆ ಸೈನಿಕ ಸಾಮರ್ಥ್ಯದಲ್ಲಿ4ನೇ ರ‍್ಯಾಂಕ್ ಸಿಕ್ಕಿದೆ. ಪಾಕಿಸ್ತಾನವು17ನೇ ರ‍್ಯಾಂಕ್‌ನಲ್ಲಿದೆ.

ಕಾಶ್ಮೀರದಲ್ಲಿ ಭಾರತೀಯ ಸೇನೆ (ಚಿತ್ರ: ಎಎಫ್‌ಪಿ).
ಕಾಶ್ಮೀರದಲ್ಲಿ ಭಾರತೀಯ ಸೇನೆ (ಚಿತ್ರ: ಎಎಫ್‌ಪಿ).

ರಕ್ಷಣಾ ಬಜೆಟ್

2018ರಲ್ಲಿ ಭಾರತ ಸರ್ಕಾರವು ₹4 ಲಕ್ಷ ಕೋಟಿ (₹4,04,365 ಕೋಟಿ ಅಥವಾ 58 ದಶಲಕ್ಷ ಅಮೆರಿಕನ್ ಡಾಲರ್) ರಕ್ಷಣಾ ಇಲಾಖೆಗೆ ನೀಡಿತ್ತು. ಇದು ಭಾರತದ ಜಿಡಿಪಿಯ ಶೇ 2.1ರಷ್ಟು ಮೊತ್ತ. ಪಾಕಿಸ್ತಾನವು 1.26 ಲಕ್ಷ ಕೋಟಿ ಪಾಕಿಸ್ತಾನಿ ರೂಪಾಯಿಯನ್ನು(11 ದಶಲಕ್ಷ ಅಮೆರಿಕನ್ ಡಾಲರ್) ರಕ್ಷಣೆಗಾಗಿ ಖರ್ಚು ಮಾಡಿತ್ತು. ಇದು ಪಾಕಿಸ್ತಾನದ ಒಟ್ಟು ಜಿಡಿಪಿಯ ಶೇ 3.6ರಷ್ಟು ಮೊತ್ತ. ಈ ಅಂಕಿಅಂಶಗಳನ್ನು ಬ್ರಿಟನ್‌ನ ‘ಇಂಟರ್‌ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಫಾರ್ ಸ್ಟ್ರಾಟಜಿಕ್ ಸ್ಟಡೀಸ್’ ಪುಷ್ಟೀಕರಿಸಿದೆ.

ಸ್ವೀಡನ್‌ನ ‘ಸ್ಟಾಕ್‌ಹೋಂ ಇಂಟರ್‌ನ್ಯಾಷನಲ್ ಪೀಸ್ ರೀಸರ್ಚ್ ಇನ್‌ಸ್ಟಿಟ್ಯೂಟ್’ವರದಿಯ ಪ್ರಕಾರ1993ರಿಂದ 2006ರ ನಡುವೆ ಪಾಕಿಸ್ತಾನ ಸರ್ಕಾರವು ತನ್ನ ಒಟ್ಟು ಖರ್ಚಿನಲ್ಲಿ ಶೇ20ಕ್ಕೂ ಹೆಚ್ಚು ಮೊತ್ತವನ್ನು ಮಿಲಿಟರಿಗಾಗಿ ವಿನಿಯೋಗಿಸಿದೆ. ಈ ಅವಧಿಯಲ್ಲಿ ಭಾರತ ಸರ್ಕಾರದ ಮಿಲಿಟರಿ ವೆಚ್ಚ ತನ್ನ ಒಟ್ಟು ಖರ್ಚಿನ ಶೇ 12ರಷ್ಟು ಮಾತ್ರವೇ ಇತ್ತು.2017ರಲ್ಲಿ ಪಾಕಿಸ್ತಾನ ತನ್ನ ಒಟ್ಟು ಖರ್ಚಿನಶೇ16.7ರಷ್ಟನ್ನು ಮಿಲಿಟರಿಗೆ ವಿನಿಯೋಗಿಸಿದ್ದರೆ, ಭಾರತ ಶೇ9.1ರಷ್ಟನ್ನು ಮಿಲಿಟರಿಗೆ ವಿನಿಯೋಗಿಸಿತ್ತು. 2018ರಲ್ಲಿ ಪಾಕಿಸ್ತಾನವು ರಕ್ಷಣಾ ವೆಚ್ಚಕ್ಕಾಗಿ10 ಕೋಟಿ ಅಮೆರಿಕನ್ ಡಾಲರ್‌ನಷ್ಟು ಮೊತ್ತವನ್ನು ವಿದೇಶಗಳಿಂದ ಸಹಾಯಧನದ ರೂಪದಲ್ಲಿ ಪಡೆದುಕೊಂಡಿದೆ.

ಮಿಲಿಟರಿ ವೆಚ್ಚ ಹೆಚ್ಚಾದಂತೆ ಸರ್ಕಾರದ ಇತರ ಜವಾಬ್ದಾರಿಗಳಿಗೆ (ಸಾಮಾಜಿಕ ಜವಾಬ್ದಾರಿ, ಆರೋಗ್ಯ, ಶಿಕ್ಷಣ ಇತ್ಯಾದಿ) ವಿನಿಯೋಗಿಸಲು ಉಳಿಯುವ ಹಣದ ಮೊತ್ತ ಕಡಿಮೆಯಾಗುತ್ತದೆ. ಇದು ದೇಶದ ಒಟ್ಟಾರೆ ಅಭಿವೃದ್ಧಿಯ ಮೇಲೆ ಪರಿಣಾಮ ಬೀರುತ್ತದೆ.

ಸೈನಿಕ ಸಂಖ್ಯಾಬಲ

ಭಾರತದ ಒಟ್ಟು ಸಕ್ರಿಯ ಸೈನಿಕ ಬಲ 14 ಲಕ್ಷ, ಮೀಸಲು ಸೈನಿಕರು28 ಲಕ್ಷ, ಮಿಲಿಟರಿ ಸೇವೆಗೆ ಸೇರಲು ಅರ್ಹತೆ ಇರುವ ವಯೋಮಿತಿಯಲ್ಲಿರುವವಸಂಖ್ಯೆ 48 ಕೋಟಿ.ಪಾಕಿಸ್ತಾನದ ಒಟ್ಟು ಸಕ್ರಿಯ ಸೈನಿಕ ಬಲ 6.5 ಲಕ್ಷ. ಮೀಸಲು ಸೈನಿಕ ಬಲ 2.82ಲಕ್ಷ. ಮಿಲಿಟರಿ ಸೇವೆಗೆ ಅರ್ಹರಿರುವವರ ಸಂಖ್ಯೆ 7.5 ಕೋಟಿ.

ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಅಭಿವೃದ್ಧಿಪಡಿಸಿರುವ ಆಕಾಶ್ ಕ್ಷಿಪಣಿಗಳು (ಎಎಫ್‌ಪಿ ಚಿತ್ರ).
ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಅಭಿವೃದ್ಧಿಪಡಿಸಿರುವ ಆಕಾಶ್ ಕ್ಷಿಪಣಿಗಳು (ಎಎಫ್‌ಪಿ ಚಿತ್ರ).

ಕ್ಷಿಪಣಿ ಮತ್ತು ಶಸ್ತ್ರಾಸ್ತ್ರಗಳು

ಎರಡೂ ದೇಶಗಳ ಬಳಿ ಅಣ್ವಸ್ತ್ರ ಸಿಡಿತಲೆಗಳನ್ನು ಹೊತ್ತೊಯ್ಯಬಲ್ಲ ಖಂಡಾಂತರ ಕ್ಷಿಪಣಿಗಳಿವೆ. 3ರಿಂದ 5 ಸಾವಿರ ಕಿ.ಮೀ. ದೂರದ ಗುರಿಗಳನ್ನು ತಲುಪಬಲ್ಲ ಅಗ್ನಿ–3 ಸೇರಿದಂತೆ ಭಾರತದ ಬಳಿ ವಿಧದ ಕಾರ್ಯಾಚರಣೆಗೆ ಸಿದ್ಧವಿರುವ9 ಕ್ಷಿಪಣಿಗಳಿವೆ ಎಂದು ವಾಷಿಂಗ್‌ಟನ್‌ನಲ್ಲಿರುವ ‘ಸೆಂಟರ್ ಫಾರ್ ಸ್ಟ್ರಾಟಜಿಕ್ ಅಂಡ್ ಇಂಟರ್‌ನ್ಯಾಷನಲ್ ಸ್ಟಡೀಸ್’ ಹೇಳಿದೆ. ಪಾಕಿಸ್ತಾನದ ಇಡೀ ಭೂಪ್ರದೇಶ ಭಾರತದ ಕ್ಷಿಪಣಿಗಳ ಗುರಿಗೆ ನಿಲುಕಬಲ್ಲದು.

ಚೀನಾದ ನೆರವಿನೊಂದಿಗೆಪಾಕಿಸ್ತಾನವು ಕ್ಷಿಪಣಿಗಳನ್ನು ಅಭಿವೃದ್ಧಿಪಡಿಸಿಕೊಂಡಿದೆ. 3000 ಕಿ.ಮೀ. ದಾಟುವ ಸಾಮರ್ಥ್ಯದ ಕ್ಷಿಪಣಿಗಳು ಪಾಕ್ ಬಳಿ ಇಲ್ಲವಾದರೂ, 2000 ಕಿ.ಮೀ. ಅಂತರಕ್ಕೆ ಗುರಿಯಿಡುವ ಶಾಹೀನ್–2 ಪಾಕ್ ಬತ್ತಳಿಕೆಯಲ್ಲಿರುವ ದೊಡ್ಡ ಅಸ್ತ್ರ. ದಕ್ಷಿಣ ಭಾರತದ ಕೆಲ ಪ್ರದೇಶಗಳನ್ನು ಹೊರತುಪಡಿಸಿದರೆ ಭಾರತದ ಬಹುತೇಕ ನಗರಗಳನ್ನು ಶಾಹೀನ್ ತಲುಪಬಲ್ಲದು. ಭಾರತ ಸುಮಾರು 140 ಅಣ್ವಸ್ತ್ರ ಸಿಡಿತಲೆಗಳನ್ನು ಅಭಿವೃದ್ಧಿಪಡಿಸಿದೆ ಎಂದು ಅಂದಾಜಿಸಲಾಗಿದೆ. ಪಾಕ್ ಬಳಿ ಸುಮಾರು 150 ಅಣ್ವಸ್ತ್ರ ಸಿಡಿತಲೆಗಳಿವೆ ಎಂದು ಅಂತರರಾಷ್ಟ್ರೀಯ ಮಿಲಿಟರಿ ಸಂಶೋಧನಾ ಸಂಸ್ಥೆಗಳು ಅಂದಾಜಿಸಿವೆ.

ಭೂಸೇನೆ

13,888 ಕಿ.ಮೀ. ಗಡಿಯನ್ನು ಭಾರತ ಹೊಂದಿದೆ.ಭೂಸೇನೆಯಲ್ಲಿ ಸಕ್ರಿಯರಾಗಿರುವ ಒಟ್ಟು ಸಿಬ್ಬಂದಿ 12 ಲಕ್ಷ. 3565 ಯುದ್ಧ ಟ್ಯಾಂಕ್‌ಗಳು, 3,436ಯುದ್ಧ ವಾಹನಗಳು, 190 ಅತ್ಯಾಧುನಿಕ ಸ್ವಯಂ ಚಾಲಿತ ಫಿರಂಗಿಗಳು, 4158 ಸಾಧಾರಣ ಫಿರಂಗಿಗಳು ಮತ್ತು 266 ರಾಕೆಟ್ ಪ್ರೊಜೆಕ್ಟರ್‌ಗಳು (ಲಾಂಚರ್‌ಗಳು)ಇವೆ.

ಪಾಕಿಸ್ತಾನದ ಗಡಿ ಉದ್ದ 7,257 ಕಿ.ಮೀ.ಭಾರತಕ್ಕೆ ಹೋಲಿಸಿದ ಪಾಕಿಸ್ತಾನದ ಭೂಸೇನೆಯ ಬಲ ಸಣ್ಣದು. 5.60 ಲಕ್ಷ ಸಕ್ರಿಯ ಸಿಬ್ಬಂದಿ, 2182 ಯುದ್ಧ ಟ್ಯಾಂಕ್‌ಗಳು, 2,604 ಯುದ್ಧ ವಾಹನಗಳು, 375 ಅತ್ಯಾಧುನಿಕ ಸ್ವಯಂ ಚಾಲಿತ ಫಿರಂಗಿಗಳು, 1,240 ಸಾಧಾರಣ ಫಿರಂಗಿಗಳು ಮತ್ತು 144 ರಾಕೆಟ್ ಪ್ರೊಜೆಕ್ಟರ್‌ಗಳು (ಲಾಂಚರ್‌ಗಳು) ಇವೆ.

ಭಾರತೀಯ ವಾಯುಪಡೆಯ ಎಸ್‌ಯು30–ಎಂಕೆಐ ಯುದ್ಧವಿಮಾನ (ಚಿತ್ರ: ಪಿಟಿಐ)
ಭಾರತೀಯ ವಾಯುಪಡೆಯ ಎಸ್‌ಯು30–ಎಂಕೆಐ ಯುದ್ಧವಿಮಾನ (ಚಿತ್ರ: ಪಿಟಿಐ)

ವಾಯುಪಡೆ

1.27 ಲಕ್ಷ ಸಿಬ್ಬಂದಿ, 814 ದಾಳಿ ಯುದ್ಧ ವಿಮಾನಗಳು ಭಾರತೀಯ ವಾಯುಪಡೆಯ ಬೆನ್ನೆಲುಬು. ಇದರೊಂದಿಗೆ 590 ಫೈಟರ್‌ ಜೆಟ್‌ಗಳು, 708 ಸಾಗಣೆ ವಿಮಾನಗಳು, 15 ದಾಳಿ ಹೆಲಿಕಾಪ್ಟರ್‌ಗಳೂ ಸೇರಿ ಒಟ್ಟು 720 ಹೆಲಿಕಾಪ್ಟರ್‌ಗಳು ಭಾರತೀಯ ವಾಯುಪಡೆಯಲ್ಲಿದೆ. ರಷ್ಯನ್ ತಂತ್ರಜ್ಞಾನದಮಿಗ್–21 ಮತ್ತು ಫ್ರಾನ್ಸ್‌ ತಂತ್ರಜ್ಞಾನದಮಿರಾಜ್–2000 ಭಾರತದ ಬತ್ತಳಿಕೆಯಲ್ಲಿರುವ ಪ್ರಮುಖ ವಿಮಾನಗಳು.

70 ಸಾವಿರ ಸಿಬ್ಬಂದಿ ಇರುವಪಾಕ್ ವಾಯುಪಡೆಬಳಿ 410 ದಾಳಿ ಯುದ್ಧ ವಿಮಾನಗಳು, 320 ಫೈಟರ್‌ ಜೆಟ್‌ಗಳು, 296 ಸಾಗಣೆ ವಿಮಾನಗಳು, 49 ದಾಳಿ ಹೆಲಿಕಾಪ್ಟರ್‌ಗಳೂ ಸೇರಿ ಒಟ್ಟು328 ಹೆಲಿಕಾಪ್ಟರ್‌ಗಳು ಇವೆ. ಚೀನಾ ಅಭಿವೃದ್ಧಿಪಡಿಸಿದ ಎಫ್‌–7ಪಿಜಿ ಮತ್ತು ಅಮೆರಿಕದಿಂದ ಖರೀದಿಸಿರುವ ಎಫ್‌–16 ಫಾಲ್ಕನ್ ಫೈಟಿಂಗ್ ಜೆಟ್‌ಗಳನ್ನುಪಾಕ್‌ ವಾಯುಪಡೆನೆಚ್ಚಿಕೊಂಡಿದೆ.

ಭಾರತೀಯ ನೌಕಾಪಡೆಯ ಜಲಾಂತರ್ಗಾಮಿ ನಾಶಕ ಯುದ್ಧನೌಕೆ ಐಎನ್‌ಎಸ್ ಕೊಮರ್ತಾ (ಚಿತ್ರ– ರಾಯಿಟರ್ಸ್).
ಭಾರತೀಯ ನೌಕಾಪಡೆಯ ಜಲಾಂತರ್ಗಾಮಿ ನಾಶಕ ಯುದ್ಧನೌಕೆ ಐಎನ್‌ಎಸ್ ಕೊಮರ್ತಾ (ಚಿತ್ರ– ರಾಯಿಟರ್ಸ್).

ನೌಕಾಪಡೆ

7517 ಕಿ.ಮೀ. ಸಾಗರ ತೀರ ಹೊಂದಿರುವ ಭಾರತ ಬಲಿಷ್ಠ ನೌಕಾಪಡೆ ಹೊಂದಿದೆ. ವಿಮಾನ ವಾಹಕ ಯುದ್ಧನೌಕೆ ‘ವಿಕ್ರಮಾದಿತ್ಯ’ ಬಳಸಿಕೊಂಡುಪಾಕಿಸ್ತಾನದ ಯಾವುದೇ ಬಂದರಿಗೆ ವಾಣಿಜ್ಯ ಮತ್ತು ಯುದ್ಧನೌಕೆಗಳ ಸಾಗಾಟವನ್ನುನಿರ್ಬಂಧಿಸಬಹುದು. ವಿಮಾನ ವಾಹಕ ನೌಕೆಗಳು ಯುದ್ಧ ವಿಮಾನಗಳು ಕ್ರಮಿಸುವ ಅಂತರ ಮತ್ತು ಹಾರಾಟದ ಸಾಮರ್ಥ್ಯವನ್ನೂ ಹೆಚ್ಚಿಸುತ್ತದೆ.ಗುರಿ ಹುಡುಕಿ ಹೊರಟ ಯುದ್ಧ ವಿಮಾನವೊಂದು ಇಂಧನ ತುಂಬಿಸಿಕೊಳ್ಳಲು ಅಥವಾ ನಿರ್ವಹಣೆಯ ಕೆಲಸಗಳಿಗಾಗಿ ಮತ್ತೆ ಭೂಮಿಯ ಮೇಲಿರುವ ತನ್ನ ನೆಲೆಗೆ ಬರಬೇಕಿಲ್ಲ. ಯುದ್ಧವಾಹಕ ವಿಮಾನ ನೌಕೆಯೇ ಈ ಅಗತ್ಯಗಳನ್ನು ಪೂರೈಸಬಲ್ಲದು.

67,700 ಸಿಬ್ಬಂದಿ ಇರುವ ಭಾರತೀಯ ನೌಕಾಪಡೆಯಲ್ಲಿ 16 ಸಬ್‌ಮರೀನ್‌ಗಳು, 11 ಡೆಸ್ಟ್ರಾಯರ್‌ಗಳು (ದಾಳಿನೌಕೆ) 13 ಫ್ರಿಗೇಟ್ (ಕ್ಷಿಪ್ರ ಸಂಚಾರದ ದಾಳಿ ನೌಕೆ), 22 ಕರ್‌ವೆಟ್ (ಸಣ್ಣ ಯುದ್ಧನೌಕೆ)ಮತ್ತು 139 ಗಸ್ತು ನೌಕೆಗಳು ಇವೆ. 75 ಯುದ್ಧ ವಿಮಾನ–ಹೆಲಿಕಾಪ್ಟರ್‌ಗಳು ನೌಕಾಪಡೆಯ ಬಲವನ್ನು ಹೆಚ್ಚಿಸಿವೆ. ಸಾಗರದಲ್ಲಿ ಅಡಗಿಸಿಟ್ಟ ಮೈನ್ (ಬಾಂಬ್) ಪತ್ತೆಗಾಗಿ 4 ವಿಶೇಷ ನೌಕೆಗಳನ್ನು ಭಾರತೀಯ ನೌಕಾಪಡೆ ಹೊಂದಿದೆ.

1,046 ಕಿ.ಮೀ. ಸಾಗರತೀರ ಹೊಂದಿರುವ ಪಾಕಿಸ್ತಾನದ ನೌಕಾಪಡೆಯ ಒಟ್ಟು ಸಿಬ್ಬಂದಿ ಸಂಖ್ಯೆ26,000.ಪಾಕಿಸ್ತಾನದ ಬಳಿ 10 ಫ್ರಿಗೇಟ್‌, 8ಸಬ್‌ಮರೀನ್, 17ಗಸ್ತುನೌಕೆಗಳು, 3 ಮೈನ್ ಪತ್ತೆ ನೌಕೆಗಳು ಮತ್ತು 8 ಯುದ್ಧವಿಮಾನಗಳು ಇವೆ.

ಇನ್ನಷ್ಟು ಓದು
*ಭಾರತದ ಉರಿ ವಲಯದ ಮೇಲೆ ಪಾಕಿಸ್ತಾನದ ಶೆಲ್‌ ದಾಳಿ ​
*ಗಡಿದಾಟಿದ ಪಾಕ್‌ ಯುದ್ಧ ವಿಮಾನಗಳು; ಭಾರತದ ಸೇನಾ ವಲಯದ ಮೇಲೆ ಬಾಂಬ್‌ ದಾಳಿ
*ಜಮ್ಮು–ಕಾಶ್ಮೀರದಲ್ಲಿ ಭಾರತೀಯ ವಾಯುಪಡೆಯ ಮಿಗ್‌ ವಿಮಾನ ಪತನ; ಇಬ್ಬರು ಪೈಲಟ್‌ ಸಾವು
*ಶ್ರೀನಗರ ಸೇರಿ ಐದು ವಿಮಾನ ನಿಲ್ದಾಣಗಳಲ್ಲಿ ನಾಗರಿಕ ವಿಮಾನ ಸಂಚಾರಕ್ಕೆ ನಿರ್ಬಂಧ
*ಬಲಾಕೋಟ್‍ನಲ್ಲಿ ವೈಮಾನಿಕ ದಾಳಿ ನಡೆಸಿ ಪಾಕ್‍ಗೆ ಪ್ರತ್ಯುತ್ತರ ನೀಡಿದ ಭಾರತ
*ವೈಮಾನಿಕ ದಾಳಿಯಲ್ಲಿ ಹತರಾಗಿದ್ದು 200 ಉಗ್ರರು!
*ಪಾಕ್‍ ವಿರುದ್ಧ ವೈಮಾನಿಕ ದಾಳಿ ನಡೆಸಿದ ಐಎಎಫ್‍ಗೆ ಟ್ವೀಟ್ ಪ್ರಶಂಸೆ
*ಪಾಕ್ ಉಗ್ರರ ನೆಲೆಗಳ ಮೇಲೆ ದಾಳಿ: ಸೀಬರ್ಡ್ ನೌಕಾನೆಲೆಯಲ್ಲಿ ಭದ್ರತೆ ಹೆಚ್ಚಳ
*ಇಂದಿನ ದಾಳಿ ನವ ಭಾರತದ ಸಂಕಲ್ಪದ ಮುನ್ನುಡಿ: ಅಮಿತ್‌ ಶಾ
*ಪಾಕಿಸ್ತಾನ ಇನ್ನಾದರೂ ತೆಪ್ಪಗಿರಲಿ: ಪ್ರಹ್ಲಾದ ಜೋಶಿ
*ಮೋದಿ ನುಡಿದಂತೆ ನಡೆದಿದ್ದಾರೆ; ಇದು ಪಾಕಿಸ್ತಾನಕ್ಕೆ ಎಚ್ಚರಿಕೆ ಗಂಟೆ -ಸದಾನಂದ ಗೌಡ
*ಉಗ್ರರ ಶಿಬಿರಗಳನ್ನೇ ಗುರಿಯಾಗಿರಿಸಿ ಕಾರ್ಯಾಚರಣೆ ಮಾಡಲಾಗಿದೆ: ವಿಜಯ್ ಗೋಖಲೆ
*ಪುಲ್ವಾಮಾ ದಾಳಿಗೆ ಪ್ರತೀಕಾರ: ಉಗ್ರರ ವಿರುದ್ಧ ಭಾರತ ‘ಯುದ್ಧ’
*ನಮ್ಮ ಸರ್ಕಾರ ಬಳಸುತ್ತಿರುವ ‘ನಾನ್–ಮಿಲಿಟರಿ ಆಕ್ಷನ್’ ಪದಗಳ ಅರ್ಥವೇನು
*ಸಾರ್ವತ್ರಿಕ ಚುನಾವಣೆ ಗಮನದಲ್ಲಿರಿಸಿ ವಾಯುದಾಳಿ ನಡೆಸಿದ ಭಾರತ: ಪಾಕಿಸ್ತಾನ ಆರೋಪ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT