ಭಾನುವಾರ, ಜನವರಿ 26, 2020
27 °C

ಹಿರಿಯರಿಗೆ ನೀತಿಕತೆ ಹೇಳಿದ ಪುಟ್ಟಾಣಿಗಳು

ಪೃಥ್ವಿರಾಜ್ Updated:

ಅಕ್ಷರ ಗಾತ್ರ : | |

Prajavani

ಸಾಮಾನ್ಯವಾಗಿ ಮಕ್ಕಳನ್ನು ಕೂಡಿಸಿಕೊಂಡು ದೊಡ್ಡವರು ಕತೆಗಳನ್ನು ಹೇಳುವುದು ರೂಢಿ. ಆದರೆ, ದೊಡ್ಡವರನ್ನು ಮುಂದೆ ಮುದ್ದಾದ ಪುಟಾಣಿಗಳು ತೊದಲು ನುಡಿಗಳಿಂದ ಕತೆಗಳನ್ನು ಹೇಳಿದರೆ ಹೇಗಿರುತ್ತದೆ? ಇಂಥದೊಂದು ಕಲ್ಪನೆಯನ್ನು ಸಾಕಾರಗೊಳಿಸಿದ್ದು ಕುಮಾರಸ್ವಾಮಿ ಬಡಾವಣೆಯಲ್ಲಿರುವ ನಗರ ಕೇಂದ್ರ ಗ್ರಂಥಾಲಯ.

‘ಎಂತಹ ಕಷ್ಟ ಬಂದರೂ ಸುಳ್ಳು ಹೇಳಬಾರದು’ ‘ಉಪಾಯ ಬಲ್ಲವನಿಗೆ ಅಪಾಯವಿಲ್ಲ’ ‘ಸತ್ಯಕ್ಕೆ ಎಂದಿಗೂ ಜಯ’ ಎಂಬ ನೈತಿಕ ಮೌಲ್ಯಗಳನ್ನು ಸಾರುವ ನೀತಿಕತೆಗಳನ್ನು ಪುಟ್ಟ ಮಕ್ಕಳು ಮುದ್ದು ಮುದ್ದಾಗಿ ಹೇಳುತ್ತಿದ್ದರೆ ನೆರೆದಿದ್ದ ಓದುಗರು ತದೇಕಚಿತ್ತದಿಂದ ಆಲಿಸಿದರು. ಚಪ್ಪಾಳೆ ತಟ್ಟಿ ಮಕ್ಕಳ ಕತೆಗಳಿಗೆ ಮೆಚ್ಚುಗೆ ಸೂಚಿಸಿದರು. 

ಕುಮಾರಸ್ವಾಮಿ ಬಡಾವಣೆ ನಗರ ಕೇಂದ್ರ ಗ್ರಂಥಾಲಯದಲ್ಲಿ ಶನಿವಾರ ‘ಪುಟ್ಟ ಮಗು ಕಥೆ ಕೇಳು’ ಕಾರ್ಯಕ್ರಮದ 50ನೇ ಸಂಚಿಕೆಯನ್ನು ವಿಶಿಷ್ಟವಾಗಿ ಆಚರಿಸಲಾಯಿತು. ಓದುಗರೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿರಲು ವಿನೂತನ ಕಾರ್ಯಕ್ರಮಗಳೊಂದಿಗೆ ಗಮನ ಸೆಳೆಯುತ್ತಿರುವ ಗ್ರಂಥಾಲಯದ ಹೊಸ ಪ್ರಯೋಗಗಳಿಗೆ ಉತ್ತಮ ಪ್ರತಿಕ್ರಿಯೆ ದೊರೆಯುತ್ತಿದೆ. 

ಮಕ್ಕಳಲ್ಲಿ ಓದುವ ಹವ್ಯಾಸ ರೂಢಿಸಲು ಹಾಗೂ ಗ್ರಂಥಾಲಯದ ಕಡೆಗೆ ಆಸಕ್ತಿ ಮೂಡಿಸಲು ಪ್ರತಿ ತಿಂಗಳ ಎರಡನೇ ಶನಿವಾರ ಹಾಗೂ ನಾಲ್ಕನೇ ಭಾನುವಾರ ‘ಪುಟ್ಟ ಮಗು ಕತೆ ಕೇಳು’ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ.

‘ಈ ಕಾರ್ಯಕ್ರಮದಿಂದಾಗಿ ಸಾಹಿತಿಗಳು, ಕಥನಕಾರರಿಂದ ಕತೆ ಕೇಳುವ ಅವಕಾಶ ಬಡಾವಣೆಯ ಮಕ್ಕಳಿಗೆ ಸಿಗುತ್ತಿದೆ. ಆಸಕ್ತ ಮಕ್ಕಳು ಕತೆ ಕೇಳಿ ನಲಿಯುತ್ತಾರೆ. ಚಿಕ್ಕಂದಿನಿಂದಲೇ ಮಕ್ಕಳಲ್ಲಿ ಓದುವ ಹವ್ಯಾಸ ರೂಢಿಸಬೇಕೆಂಬ ಉದ್ದೇಶದಿಂದ ಈ ಕಾರ್ಯಕ್ರಮವನ್ನು ನಿರಂತರವಾಗಿ ಆಯೋಜಿಸಿಲಾಗುತ್ತಿದೆ’ ಎನ್ನುತ್ತಾರೆ ಗ್ರಂಥಾಲಯದ ಗ್ರಂಥಪಾಲಕ ಎಸ್‌. ಆನಂದ್. 

‘ಓದುಗರನ್ನೂ ಕಾರ್ಯಕ್ರಮದಲ್ಲಿ ಭಾಗಿಯಾಗಿಸಿಕೊಳ್ಳಬೇಕೆಂಬ ಉದ್ದೇಶದಿಂದ ಗ್ರಂಥಾಲಯದ ಕಾಯಂ ಓದುಗರಾದ ನಿವೃತ್ತ ಶಿಕ್ಷಕ ಸುಬ್ರಹ್ಮಣ್ಯಾಚಾರ್‌ ಅವರಿಂದ ಮಕ್ಕಳಿಗೆ ನೀತಿಕತೆ ಹೇಳಿಸಲಾಯಿತು.ನಿವೃತ್ತ ಎಂಜಿನಿಯರ್‌ ಶೇಷಾದ್ರಿ ಹಾಗೂ ಪ್ರೇಮಾ ಅವರು ಮಕ್ಕಳ ಹಾಡುಗಳನ್ನು ಹಾಡಿ ರಂಜಿಸಿದರು. ಒಟ್ಟಿನಲ್ಲಿ ಗ್ರಂಥಾಲಯಕ್ಕೆ ಭೇಟಿ ನೀಡುವ ಪುಸ್ತಕ ಪ್ರಿಯರಲ್ಲಿ ‘ಇದು ನಮ್ಮ ಗ್ರಂಥಾಲಯ’ ಎಂಬ ಭಾವನೆ ರೂಢಿಸಬೇಕೆಂಬ ಉದ್ದೇಶದಿಂದ ಇಂತಹ ಪ್ರಯತ್ನಗಳನ್ನು ಮಾಡಲಾಗುತ್ತಿದೆ’ ಎಂದರು.

‘ಕಾರ್ಯಕ್ರಮ ಆಯೋಜಿಸಲು ಇಲಾಖೆಯ ಅನುದಾನ ನೆಚ್ಚಿಕೊಳ್ಳದೇ ಓದುಗರ ನೆರವು ಪಡೆಯಲಾಗುತ್ತಿದೆ. ಆಸಕ್ತ ಓದುಗರು ವಿವಿಧ ರೂಪದಲ್ಲಿ ಗ್ರಂಥಾಲಯದ ಅಭಿವೃದ್ಧಿಗೆ ನೆರವಾಗಿದ್ದಾರೆ. ಕತೆ ಹೇಳುವ ಕಾರ್ಯಕ್ರಮಕ್ಕೂ ಓದುಗರಾದ ಕಟ್ಟಿ ಎಂಬುವವರು ಉಪಹಾರದ ವ್ಯವಸ್ಥೆ ಮಾಡಿಸಿದ್ದರು. ಸಾರ್ವಜನಿಕರ ನೆರವು ಹೀಗೆ ಇದ್ದರೆ ಇನ್ನಷ್ಟು ಕಾರ್ಯಕ್ರಮ ಆಯೋಜಿಸುತ್ತೇವೆ’ ಎನ್ನುತ್ತಾರೆ ಆನಂದ್. 

ಕತೆ ಹೇಳುವ ಕಾರ್ಯಕ್ರಮದ ನಂತರ ಮಕ್ಕಳಿಗಾಗಿ ಚಿತ್ರಕಲಾ ಸ್ಪರ್ಧೆಯನ್ನೂ ಆಯೋಜಿಸಲಾಗಿತ್ತು.ಮೂವರು ವಿದ್ಯಾರ್ಥಿಗಳಿಗೆ ಪ್ರಶಸ್ತಿ ಫಲಕ ಹಾಗೂ ಪದಕ ನೀಡಲಾಯಿತು.

ಈ ಗ್ರಂಥಾಲಯದಲ್ಲಿ ಮಕ್ಕಳಿಗೆ ಪ್ರತ್ಯೇಕ ಕೋಣೆ!
ಈ ಗ್ರಂಥಾಲಯದಲ್ಲಿ ಮಕ್ಕಳಿಗಾಗಿಯೇ ಒಂದು ಕೋಣೆಯನ್ನು ಮೀಸಲಿಡಲಾಗಿದೆ. ಮಕ್ಕಳ ಪುಸ್ತಕಗಳನ್ನೆಲ್ಲಾ ಒಂದು ಕೋಣೆಯಲ್ಲಿ ಆಕರ್ಷಕವಾಗಿ ಜೋಡಿಸಿ, ಒದಲು ಅನುಕೂಲವಾಗುವಂತೆ ಪುಟ್ಟ ಕುರ್ಚಿ ಹಾಗೂ ಮೇಜುಗಳನ್ನು ಇಡಲಾಗಿದೆ. ಕೊಠಡಿಯ ಗೋಡೆಗಳ ತುಂಬೆಲ್ಲಾ ವರ್ಣರಂಜಿತ ಚಿತ್ತಾರಗಳನ್ನೂ ಬಿಡಿಸಲಾಗಿದೆ.

ಈ ಕೋಣೆಯಲ್ಲಿ ಕನ್ನಡ ಮತ್ತು ಇಂಗ್ಲಿಷ್‌ ಭಾಷೆಗಳ ಕತೆ, ಕಾಮಿಕ್ಸ್‌, ಕಾರ್ಟೂನ್‌ ಸೇರಿದಂತೆ ಮಕ್ಕಳಿಗೆ ಇಷ್ಟವಾಗುವ ಅಂದಾಜು ಏಳು ಸಾವಿರ ಪುಸ್ತಕಗಳಿವೆ. ಅಷ್ಟೇ ಅಲ್ಲ, ಮಕ್ಕಳಿಗೆ ಬೇಸರವಾದರೆ ಆಟವಾಡಲು ಆಟಿಕೆಗಳನ್ನು ಕೂಡ ಇಡಲಾಗಿದೆ. ಇದರೊಂದಿಗೆ ನಾಲ್ಕು ಪಜಲ್ ಸೆಟ್‌ ಸೇರಿವೆ. ಪ್ರತಿ ಭಾನುವಾರ ಪೋಷಕರು ತಮ್ಮ ಮಕ್ಕಳನ್ನು ಈ ಆಟಿಕೆಗಳೊಂದಿಗೆ ರಂಜಿಸಬಹುದು.

ಓದುಗರ ನೆರವಿನಿಂದ ಆಸಕ್ತ ಮಕ್ಕಳಿಗೆ ಗ್ರಂಥಾಲಯದ ಜೀವಿತಕಾಲದ ಸದಸ್ಯತ್ವವನ್ನೂ ನೀಡಿ, ಪುಸ್ತಕಗಳನ್ನು ಒದುವ ಪ್ರೇರಣೆ ನೀಡಲಾಗಿದೆ.

*
50ನೇ ಸಂಚಿಕೆಯ ಕಾರ್ಯಕ್ರಮವಾದ್ದರಿಂದ ವಿಶಿಷ್ಟವಾಗಿ ಆಚರಿಸಬೇಕೆಂದು ನಿರ್ಧರಿಸಿದೆವು, ಇದಕ್ಕಾಗಿ ಚಂದ್ರನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳನ್ನು ವಿಶೇಷ ಅತಿಥಿಗಳಾಗಿ ಆಹ್ವಾನಿಸಲಾಗಿತ್ತು. ಸಾಮಾನ್ಯವಾಗಿ ಈ ಕಾರ್ಯಕ್ರಮದಲ್ಲಿ ಸಾಹಿತ್ಯಾಸಕ್ತರಿಂದ ನೀತಿ ಕತೆಗಳನ್ನು ಹೇಳಿಸಲಾಗುತ್ತಿತ್ತು. ಆದರೆ ಈ ಸಂಚಿಕೆಯಲ್ಲೇ ಮಕ್ಕಳೇ ನೀತಿ ಕತೆ ಹೇಳಿದರು.
-ಎಸ್‌. ಆನಂದ್, ಗ್ರಂಥಪಾಲಕ

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು