ಸೋಮವಾರ, ಜೂನ್ 27, 2022
28 °C
ಬೀದಿ ಬದಿ ಎಳನೀರು ಮಾರಿ ಬದುಕು ಕಟ್ಟಿಕೊಂಡವರು..

ಎಳನೀರು ಶಾರದಮ್ಮ..

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಲ್ಲೇಶ್ವರದ ಹದಿನೇಳನೇ ಕ್ರಾಸ್‌ನಲ್ಲಿ ಸೂರ್ಯೋದಯಕ್ಕೆ ಮುನ್ನವೇ ನೀವು ಹೆಜ್ಜೆ ಹಾಕುತ್ತಿದ್ದರೆ, ಎಳನೀರು ರಾಶಿಯ ಎದುರು ಪೆನ್ನು, ನೋಟ್‌ ಪುಸ್ತಕ ಹಿಡಿದು ನಿಂತ ಮಹಿಳೆಯೊಬ್ಬರು ಸಹಜವಾಗಿ ಗಮನ ಸೆಳೆಯುತ್ತಾರೆ.

ಅರವತ್ತರ ಆಸುಪಾಸಿನ ಇವರ ಹೆಸರು ಶಾರದಮ್ಮ. ರಸ್ತೆ ಬದಿಯಲ್ಲಿ ಎಳನೀರು ಮಾರಾಟ ಮಾಡುವುದು ಇವರ ವೃತ್ತಿ. ಹಾಗಾಗಿ ಸೂರ್ಯ ಬರುವ ಮುನ್ನವೇ ಅವರು ಎಳನೀರ ರಾಶಿ ಎದುರು ನಿಂತಿರುತ್ತಾರೆ!

ಮರದ ಕೆಳಗೆ ನಿಂತು ಎಳನೀರು ಸಗಟು ವ್ಯಾಪಾರ ಮಾಡುವುದಷ್ಟೇ ಆಗಿದ್ದರೆ ಈ ಕಥೆ ಬರೆಯುವ. ಆದರೆ ಶಾರದಮ್ಮ ಎಳನೀರು ಮಾರಾಟ ಮಾಡುತ್ತಲೇ, ತನ್ನ ಮೂವರು ಹೆಣ್ಣು ಮಕ್ಕಳಿಗೆ ಒಳ್ಳೆಯ ಶಿಕ್ಷಣ ಕೊಡಿಸಿದ್ದಾರೆ. ‌ಅವರಿಗೊಂದು ಉತ್ತಮ ಭವಿಷ್ಯ ರೂಪಿಸಿದ್ದಾರೆ. ಅಚ್ಚರಿ ಎನಿಸುವ ಇವರ ಯಶೋಗಾಥೆಯಲ್ಲಿ ಕಠಿಣ ಪರಿಶ್ರಮ, ವೃತ್ತಿಯಲ್ಲಿನ ಬದ್ಧತೆ, ಬದುಕುವ ಛಲ ಎಲ್ಲವೂ ಪಾತ್ರಗಳಾಗಿ ಅನಾವರಣಗೊಳ್ಳುತ್ತವೆ.

ಮೂರು ದಶಕಗಳ ಅನುಭವ: ದೇವರ ತಲೆ ಮೇಲೆ ಹೂವು ತಪ್ಪಬಹುದು. ಚಳಿ, ಮಳೆ, ಗಾಳಿಯ ನೆಪದಲ್ಲಿ ಬೆಳಗಿನ ವಾಯುವಿಹಾರಕ್ಕೆ ಹೋಗುವವರೂ ತಪ್ಪಿಸಬಹುದು. ಆದರೆ, ಅಪ್ಪಿತಪ್ಪಿಯೂ ಈ ಹೆಣ್ಣುಮಗಳು ಒಂದು ದಿನವೂ ‘ಎಳೆನೀರು ಮಾರಾಟ‘ಕ್ಕೆ ರಜೆ ತೆಗೆದುಕೊಂಡಿಲ್ಲ. ಇದನ್ನು 30 ವರ್ಷಗಳಿಂದ ವ್ರತದಂತೆ ಪಾಲಿಸಿಕೊಂಡು ಬಂದಿದ್ದಾರೆ.

ಅವರ ನಿತ್ಯದ ಬದುಕು ಹೀಗಿದೆ; ಬೆಳಗಿನ ಜಾವ ಐದಾರು ಗಂಟೆಗೆ ಮದ್ದೂರು, ಮಂಡ್ಯದಿಂದ ಲಾರಿಗಳಲ್ಲಿ ರಾಶಿ, ರಾಶಿ ಎಳನೀರು ಬರುತ್ತದೆ. ಅದನ್ನು ಇಳಿಸಿಕೊಂಡು, ನಗರದ ಚಿಲ್ಲರೆ ವರ್ತಕರಿಗೆ ಮಾರಾಟ ಮಾಡುತ್ತಾರೆ. ಮುಂಜಾನೆ 9 ಗಂಟೆಯವರೆಗೆ ಈ ಕೆಲಸ ಮಾಡಿ ಮುಗಿಸಿ, ಮನೆಗೆ ಹೋದರೆ, ಅಲ್ಲಿ ಮನೆಗೆಲಸ ಕಾಯುತ್ತಿರುತ್ತದೆ. ಒಂದು ಕಡೆ ಮನೆಕೆಲಸ, ಇನ್ನೊಂದು ಕಡೆ ವ್ಯಾಪಾರ ಹೀಗೆ ಎರಡನ್ನೂ ಸರಿತೂಗಿಸಿಕೊಂಡೇ ಬದುಕು ಕಟ್ಟಿಕೊಂಡಿದ್ದಾರೆ ಇವರು.

ಬದುಕಿನ ಆಕಸ್ಮಿಕ ತಿರುವು: ಮಹಿಳೆಯರು ಎಳನೀರು ಸಗಟು ವ್ಯಾಪಾರಕ್ಕೆ ಇಳಿಯುವುದು ಅಪರೂಪ. ಆದರೆ, ಶಾರದಮ್ಮ ಈ ವ್ಯಾಪಾರಕ್ಕೆ ಇಳಿದಿದ್ದೇ ಒಂದು ಆಕಸ್ಮಿಕ.

ಬೆಂಗಳೂರಿನಲ್ಲಿ ಹುಟ್ಟಿ ಬೆಳೆದ ಶಾರದಮ್ಮ ಮಲ್ಲೇಶ್ವರದ ಸರ್ಕಾರಿ ಶಾಲೆಯಲ್ಲಿ 10ನೇ ತರಗತಿಯವರೆಗೆ ಓದಿದ್ದಾರೆ. ದಿನಪತ್ರಿಕೆ ಹಂಚುವ ಕೆಲಸ ಮಾಡುತ್ತಿದ್ದ ಹುಲಿಯೂರು ದುರ್ಗದ ನರಸಿಂಹಯ್ಯ ಅವರನ್ನು ಮದುವೆಯಾದರು. ಕೆಲವು ವರ್ಷ ಸಂಸಾರ ಸುಖವಾಗಿ ಸಾಗಿತ್ತು. ಓದು, ಬರಹ, ಲೆಕ್ಕ ಗೊತ್ತಿಲ್ಲದ ನರಸಿಂಹಯ್ಯ ವ್ಯಾಪಾರದಲ್ಲಿ ನಷ್ಟ ಅನುಭವಿಸಿ ಸಂಕಷ್ಟಕ್ಕೆ ಸಿಲುಕಿದರು.  

ಚಿಕ್ಕಪುಟ್ಟ ವ್ಯಾಪಾರ, ಗಾರ್ಮೆಂಟ್ಸ್ ಕೆಲಸ ಕೈಹಿಡಿಯಲಿಲ್ಲ. ಅಷ್ಟರಲ್ಲಿ ಮೂವರು ಮಕ್ಕಳು ಜನಿಸಿದ್ದರು. ಜೀವನ ಸಾಗಬೇಕಿತ್ತು. ಅಷ್ಟರಲ್ಲಿ ಪತಿ ಸಗಟು ಎಳನೀರು ವ್ಯಾಪಾರ ಆರಂಭಿಸಿದ್ದರು. ಲೆಕ್ಕ ಗೊತ್ತಿಲ್ಲದ ಕಾರಣ ಅಲ್ಲಿಯೂ ನಷ್ಟ ಶುರುವಾಗಿತ್ತು. ಆಗ ಶಾರದಮ್ಮ ತಾವೇ ಪೆನ್ನು, ನೋಟುಪುಸ್ತಕ ಹಿಡಿದು ಈ ಫೀಲ್ಡ್‌ಗೆ ಇಳಿದರು. ಪತಿ ನರಸಿಂಹಯ್ಯ ಪತ್ನಿಗೆ ಜವಾಬ್ದಾರಿವಹಿಸಿ ಹಿಂದೆ ಸರಿದರು. ಶಾರದಮ್ಮ ಸಂಸಾರದ ಜತೆ ವ್ಯಾಪಾರದ ಜವಾಬ್ದಾರಿಯನ್ನೂ ಹೊತ್ತರು. 

‘ಕೆಲಸ ಮಾಡದೆ ಹೊಟ್ಟೆ ತುಂಬದು. ಹಾಗಾಗಿ ನಾನೂ ಕೆಲಸ ಮಾಡುವುದು ಅನಿವಾರ್ಯವಾಗಿತ್ತು. ಮಕ್ಕಳು ಚಿಕ್ಕವರಿದ್ದರು. ಮಹಿಳೆಯಾಗಿ ಇಂಥ ಕೆಲಸ ಮಾಡುವುದೇ ಎಂದು ಮೂಗು ಮುರಿದವರೇ ಹೆಚ್ಚು. ಆಗ ನನಗದು ಮುಖ್ಯವಾಗಿರಲಿಲ್ಲ. ನನ್ನ ಬದುಕು ಮತ್ತು ಮಕ್ಕಳ ಭವಿಷ್ಯದ ಪ್ರಶ್ನೆ ಕಾಡುತ್ತಿತ್ತು’ ಎನ್ನುತ್ತಾರೆ ಶಾರದಮ್ಮ. 

ಮಕ್ಕಳಿಗೆ ಉನ್ನತ ಶಿಕ್ಷಣ: ಫುಟ್‌ಪಾತ್‌ನಲ್ಲಿ ಎಳನೀರು ವ್ಯಾಪಾರ ಮಾಡುತ್ತಲೇ ಶಾರದಮ್ಮ ಮಲ್ಲೇಶ್ವರದಲ್ಲಿ ಪುಟ್ಟದೊಂದು ಸೂರು ಖರೀದಿಸಿದ್ದಾರೆ. ತಮ್ಮ ಮೂವರು ಹೆಣ್ಣು ಮಕ್ಕಳಿಗೆ ಒಳ್ಳೆಯ ಶಿಕ್ಷಣ ಕೊಡಿಸಿ, ಉತ್ತಮ ಭವಿಷ್ಯ ರೂಪಿಸಿದ್ದಾರೆ. ಅದರಲ್ಲಿ ಮೊದಲ ಮಗಳು ಡಾ. ಸುಮಾ ಸಿ.ಎನ್‌. ದಂತವೈದ್ಯೆ. ಎರಡನೇ ಮಗಳು ಚಿತ್ರಾ ಬಿ.ಟೆಕ್‌ ಪದವೀಧರೆ. ವೃತ್ತಿಯಲ್ಲಿ ಎಂಜಿನಿಯರ್‌. ಮೂರನೇ ಮಗಳು ವಿನುತಾ ಸಾಫ್ಟ್‌ವೇರ್‌ ಕಂಪನಿ ಉದ್ಯೋಗಿ. ಎಲ್ಲರೂ ಜೀವನದಲ್ಲಿ ನೆಲೆ ನಿಂತಿದ್ದಾರೆ. 

ಮಕ್ಕಳೆಲ್ಲ ಸೆಟ್ಲ ಆಗಿದ್ದಾರೆ. ಆದರೂ ಎಳನೀರು ಮಾರುವ ವೃತ್ತಿಯನ್ನು ಶಾರದಮ್ಮ ನಿಲ್ಲಿಸಿಲ್ಲ. ‘ಮೊದಲಿನಂತೆ ಲಾಭ ಇಲ್ಲ. ಕೆಲವೊಮ್ಮೆ ಈ ಎಳನೀರು ವ್ಯಾಪಾರ ಸಾಕು ಎಂದೆನಿಸುತ್ತದೆ. ಆದರೆ, ಜೀವನ ಸಾಗಬೇಕಲ್ಲ’ ಎಂದು ಶಾರದಮ್ಮ ವಿಷಾದದ ನಗು ಬೀರುತ್ತಾರೆ.

ವಿಷಾದವಿಲ್ಲ...: ‘ನನಗಾಗಲಿ, ನನ್ನ ಮಕ್ಕಳಿಗಾಗಲಿ ಈ ಎಳನೀರು ವ್ಯಾಪಾರದ ಬಗ್ಗೆ ಇಂದಿಗೂ ವಿಷಾದ, ಕೀಳರಿಮೆ ಇಲ್ಲ. ನಮ್ಮ ಕೈ ಹಿಡಿದು ನಡೆಸಿ, ನಮಗೊಂದು ಗೌರವದ ಬದುಕು ರೂಪಿಸಿದ್ದೇ ಈ ವ್ಯಾಪಾರ‘ ಎಂದು ಹೆಮ್ಮೆಯಿಂದ ಹೇಳುತ್ತಾರೆ ಶಾರದಮ್ಮ. ‘ಈ ವ್ಯಾಪಾರದಿಂದ ಮಕ್ಕಳ ವಿಧ್ಯಾಭ್ಯಾಸಕ್ಕಾಗಿ ಬ್ಯಾಂಕ್‌ನಲ್ಲಿ ಮಾಡಿದ್ದ ಸಾಲವನ್ನು ತೀರಿಸಿ ದ್ದೇವೆ. ಉಳಿದ ಸಾಲವನ್ನು ಮಕ್ಕಳು ತೀರಿಸುತ್ತಿದ್ದಾರೆ’ ಎಂದು ಅವರು ಮಾತು ಪೋಣಿಸುತ್ತಾರೆ.

ಶಾರದಮ್ಮನ ಛಲ, ಗಟ್ಟಿತನ ಮತ್ತು ಜಾಣ್ಮೆಯ ಬಗ್ಗೆ ಅವರ ಪತಿ ನರಸಿಂಹಯ್ಯ ಅವರಿಗೂ ತುಂಬಾ ಹೆಮ್ಮೆ ಇದೆ. ಏನೇ ಕೇಳಿದರೂ ಹೆಂಡತಿಯತ್ತ ಕೈ ತೋರಿಸುತ್ತಾರೆ. ‘ಈ ಎಲ್ಲ ಶ್ರೇಯ ಅವಳಿಗೆ ಸಲ್ಲಬೇಕು‘ ಎಂದು ನಸುನಗುತ್ತಾರೆ.

ಜನರು, ಬಂಧು, ಬಳಗದವರ ಮೂದಲಿಕೆ ಲೆಕ್ಕಿಸದೆ ರಸ್ತೆ ಬದಿ ಎಳನೀರು ವ್ಯಾಪಾರ ಮಾಡಿ ಬದುಕು ಕಟ್ಟಿಕೊಂಡ ಈ ಹೆಣ್ಣುಮಗಳ ಜೀವಾನೋತ್ಸಾಹ ನಿಜಕ್ಕೂ ದೊಡ್ಡದು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು