ಸೋಮವಾರ, ಜೂನ್ 27, 2022
27 °C

ಸಂಗಾತಿ ಮುಂದೆ ಸುಳ್ಳು ಒಪ್ಪಿಕೊಳ್ಳಿ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಂಗಾತಿ- ಸಾಂದರ್ಭಿಕ ಚಿತ್ರ

ಸುಮಂತ್ ಹಾಗೂ ಶಾಲಿನಿ ಮೂರು ವರ್ಷಗಳಿಂದ ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದರು. ಸುಮಂತ್ ತುಂಬಾ ಶಿಸ್ತಿನ ಮನುಷ್ಯ. ಶಾಲಿನಿ ಎಂದರೆ ಅವನಿಗೆ ಪ್ರಪಂಚ. ಒಂದು ದಿನ ಸ್ನೇಹಿತರ ಒತ್ತಾಯಕ್ಕೆ ಪಾರ್ಟಿಗೆ ಹೋಗಿ ಮದ್ಯ ಸೇವಿಸಿದ. ಕುಡಿತದ ಚಟ ಅಂಟಿಸಿಕೊಂಡ ಸುಮಂತ್ ಮತ್ತೆ ಮತ್ತೆ ಪಾರ್ಟಿ, ಪಬ್ ಎಂದು ತಿರುಗಾಡಲು ಶುರು ಮಾಡಿದ. ಶಾಲಿನಿ ಕರೆ ಮಾಡಿದಾಗಲೆಲ್ಲಾ ಕುಡಿತದ ವಿಷಯವನ್ನು ಹೇಳಲು ಭಯವಾಗಿ ಕಚೇರಿ ಕೆಲಸ, ಸ್ನೇಹಿತರ ಮನೆ ಎಂದೆಲ್ಲಾ ಸುಳ್ಳು ಹೇಳಲು ಆರಂಭಿಸಿದ. ಆದರೆ ಒಂದು ದಿನ ಅವನ ಸ್ನೇಹಿತನಿಂದಲೇ ಸುಮಂತ್‌ನ ಕುಡಿತದ ವಿಷಯವನ್ನು ತಿಳಿದುಕೊಂಡಳು ಶಾಲಿನಿ. ಸುಮಂತ್‌ ಕುಡಿಯುವುದು ಕಲಿತದ್ದಕ್ಕಿಂತ ಸುಳ್ಳು ಹೇಳಿದ ಎಂಬ ವಿಷಯವೇ ಶಾಲಿನಿಯ ಮನಸ್ಸನ್ನು ಹೆಚ್ಚು ಗಾಸಿಮಾಡಿತು. ಆ ಕೋಪಕ್ಕೆ ಶಾಲಿನಿ ಸುಮಂತ್ ಜೊತೆ ಸಂಬಂಧವನ್ನು ಶಾಶ್ವತವಾಗಿ ಕಡಿದುಕೊಂಡಳು.

ಶಾಲಿನಿ–ಸುಮಂತ್‌ರಂತೆ ಅನೇಕ ಪ್ರೇಮಿಗಳು, ದಂಪತಿ ನಡುವೆ ಸುಳ್ಳುಗಳು ಕಂದಕ ಸೃಷ್ಟಿಸುತ್ತವೆ. ಯಾವುದೋ ಕಾರಣದಿಂದ ನೀವು ಸಂಗಾತಿಯ ಬಳಿ ಸುಳ್ಳು ಹೇಳಿರಬಹುದು. ಆದರೆ ನೀವು ಹೇಳಿದ್ದು ಸುಳ್ಳು ಎಂದು ಅವರಿಗೆ ಬೇರೆಯವರಿಂದ ತಿಳಿದರೆ ಮನಸ್ಸಿಗೆ ಗಾಸಿಯಾಗುತ್ತದೆ. ಇದರಿಂದಾಗಿ ಸಂಬಂಧದಲ್ಲಿ ಬಿರುಕು ಮೂಡಬಹುದು. ಆ ಕಾರಣಕ್ಕೆ ಸಂಬಂಧವನ್ನು ಶಾಶ್ವತವಾಗಿ ಕಡಿದುಕೊಳ್ಳುವ ಬದಲು ಸುಳ್ಳನ್ನು ಒಪ್ಪಿಕೊಳ್ಳುವುದು ಉತ್ತಮ. ಆದರೆ ಸುಳ್ಳನ್ನು ಒಪ್ಪಿಕೊಳ್ಳುವ ಮೊದಲು ಕೆಲವು ವಿಷಯಗಳನ್ನು ನೆನಪಿನಲ್ಲಿರಿಸಿಕೊಳ್ಳಿ.

ತಪ್ಪೊಪ್ಪಿಗೆಗೆ ಕಾಯಬೇಡಿ 

‘ಸಂಗಾತಿ ಯಾವ ಸಂದರ್ಭದಲ್ಲಿ ಸುಳ್ಳು ಹೇಳುತ್ತಾನೆ ಹಾಗೂ ಬೇರೆ ಬೇರೆ ಸಂದರ್ಭಗಳಲ್ಲಿ ಹೇಗೆ ಪ್ರತಿಕ್ರಿಯಿಸುತ್ತಾರೆ ಎಂಬುದು ತಿಳಿದಿರಬೇಕು. ಅನೇಕ ಬಾರಿ ನೀವು ಹೇಳಿದ ಸುಳ್ಳು ಹಾಗೂ ನೀವು ಮಾಡಿದ ತಪ್ಪುಗಳ ಅರಿವು ನಿಮ್ಮ ಸಂಗಾತಿಗಿರುತ್ತದೆ. ಅವರು ನೀವಾಗಿಯೇ ಅದನ್ನು ಒಪ್ಪಿಕೊಳ್ಳಲಿ ಎಂದು ಕಾಯುತ್ತಿರುತ್ತಾರೆ. ಹಾಗಾಗಿ ಅವರ ತಾಳ್ಮೆ ಪರಿಶೀಲಿಸಲು ಹೋಗಬೇಡಿ. ನೀವು ಸುಳ್ಳು ಹೇಳಿದ ಸಂದರ್ಭವನ್ನು ಅರ್ಥ ಮಾಡಿಸಿ ಸತ್ಯ ಒಪ್ಪಿಕೊಳ್ಳಿ. ಸತ್ಯವನ್ನು ಒಪ್ಪಿಕೊಂಡು ಸಂಬಂಧವನ್ನು ಕಾಪಾಡಿಕೊಳ್ಳುವ ಜವಾಬ್ದಾರಿ ಹಾಗೂ ಧೈರ್ಯ ನಿಮ್ಮದಾಗಿರಬೇಕು’ ಎನ್ನುತ್ತಾರೆ ಆಪ್ತಸಮಾಲೋಚಕಿ ಡಿ. ಯಶೋದಾ.

ಕೀಳರಿಮೆ ಬೇಡ

ಸುಳ್ಳು ಹೇಳಿದ್ದನ್ನು ಒಪ್ಪಿಕೊಂಡರೆ ತಾನೆಲ್ಲಿ ಕೀಳಾಗುತ್ತೇನೊ, ಬೆಲೆ ಕಳೆದುಕೊಳ್ಳುತ್ತೇನೋ ಎಂಬ ಕೀಳರಿಮೆ ಬೇಡ. ನೀವು ಯಾವುದೇ ದೊಡ್ಡ ಸ್ಥಾನದಲ್ಲಿರಲಿ ತಪ್ಪು ಒಪ್ಪಿಕೊಳ್ಳುವ ಮನೋಭಾವ ನಿಮ್ಮದಾಗಬೇಕು. 

ಸುಳ್ಳು ಹೇಳಿದ್ದಕ್ಕೆ ಹಂಗಿಸಬೇಡಿ

‘ಸಂಗಾತಿ ತನ್ನನ್ನು ರಕ್ಷಿಸಿಕೊಳ್ಳಲು ಸುಳ್ಳು ಹೇಳಿರುತ್ತಾನೆ. ಅದನ್ನು ಅರ್ಥ ಮಾಡಿಕೊಳ್ಳಿ. ಅವರು ಸುಳ್ಳು ಹೇಳಿದ್ದು ಒಪ್ಪಿಕೊಂಡು ಕ್ಷಮೆ ಕೇಳಿದ ಮೇಲೆ ಪದೇ ಪದೇ ಅವರನ್ನು ಹಂಗಿಸುತ್ತಿರಬೇಡಿ. ಹಂಗಿಸುವುದರಿಂದ ಸಂಬಂಧ ಇನ್ನಷ್ಟು ಹಳಸುತ್ತದೆ’ ಎನ್ನುತ್ತಾರೆ ಯಶೋದಾ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.