ಸೋಮವಾರ, ಜೂನ್ 27, 2022
28 °C

ನೋಟುಗಳ ಇತಿಹಾಸ ಸಾರುವ ಕರೆನ್ಸಿ ಮ್ಯೂಸಿಯಂ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದೇಶದ ಅಪರೂಪದ ಕರೆನ್ಸಿಗಳ ಶ್ರೀಮಂತ ಇತಿಹಾಸ ಮತ್ತು ಪಯಣವನ್ನು ಬಿಂಬಿಸುವ ದಕ್ಷಿಣ ಭಾರತದ ಮೊದಲ ಕರೆನ್ಸಿ ಮ್ಯೂಸಿಯಂ 'ರೆಜ್ವಾನ್ ರಜಾಕ್ಸ್ ಮ್ಯೂಸಿಯಂ ಆಫ್ ಇಂಡಿಯನ್ ಪೇಪರ್ ಮನಿ' ಬೆಂಗಳೂರಿನಲ್ಲಿ ಕಾರ್ಯಾರಂಭ ಮಾಡಿದೆ. 

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಮಾಜಿ ಗವರ್ನರ್ ಡಾ.ಸಿ.ರಂಗರಾಜನ್ ಶನಿವಾರ ಮ್ಯೂಸಿಯಂ ಲೋಕಾರ್ಪಣೆ ಮಾಡಿದರು.

ಈ ಮ್ಯೂಸಿಯಂ ಪ್ರೆಸ್ಟೀಜ್ ಗ್ರೂಪ್‌ ಸಹ-ಸಂಸ್ಥಾಪಕ ಮತ್ತು ಜಂಟಿ ವ್ಯವಸ್ಥಾಪಕ ನಿರ್ದೇಶಕ ರೆಜ್ವಾನ್ ರಜಾಕ್ ಅವರ ಕನಸಿನ ಕೂಸು. ಭಾರತದ ಕಾಗದ ಹಣದ ದೊಡ್ಡ ಸಂಗ್ರಹಾಕಾರರಾಗಿರುವ ಅವರು 50 ವರ್ಷಗಳಿಂದ ಜತನದಿಂದ ಸಂಗ್ರಹಿಸಿದ ಅಪರೂಪದ ಕರೆನ್ಸಿಗಳನ್ನು ಇಲ್ಲಿ ನೋಡಬಹುದು. 

ಪ್ರೆಸ್ಟೀಜ್ ಫಾಲ್ಕನ್ ಟವರ್ಸ್‌ನ 2 ನೇ ಮಹಡಿಯಲ್ಲಿರುವ ಮ್ಯೂಸಿಯಂ ಮಂಗಳವಾರದಿಂದ (ಫೆ. 18) ಸಾರ್ವಜನಿಕರಿಗೆ ಆರಂಭವಾಗಲಿದೆ. ಜನರಿಗೆ ಮಾಹಿತಿ ನೀಡಲು ಮಾರ್ಗದರ್ಶಿಗಳನ್ನು ಕೂಡ ನೇಮಕ ಮಾಡಲಾಗಿದೆ.

ಪ್ರತಿ ಮಂಗಳವಾರದಿಂದ ಭಾನುವಾರದವರೆಗೆ ಬೆಳಿಗ್ಗೆ 10.30 ರಿಂದ ಸಂಜೆ 5.30ರವರೆಗೂ ಸಾರ್ವಜನಿಕರ ಪ್ರವೇಶಕ್ಕೆ ಮ್ಯೂಸಿಯಂ ತೆರೆದಿರುತ್ತದೆ. ಸೋಮವಾರ ರಜಾ ದಿನ.

ನೋಟುಗಳ ಪುಸ್ತಕ

ಭಾರತೀಯ ಕಾಗದ ಹಣದ ಬೈಬಲ್ ಎಂದು ಪರಿಗಣಿಸಲಾದ ‘ದಿ ರಿವೈಸ್ಡ್ ಸ್ಟ್ಯಾಂಡರ್ಡ್ ರೆಫರೆನ್ಸ್ ಗೈಡ್ ಟು ಇಂಡಿಯನ್ ಪೇಪರ್ ಮನಿ’ ಎಂಬ ಪುಸ್ತಕವನ್ನು ಕೂಡಾ ಅವರು ರಚಿಸಿದ್ದಾರೆ. 2012 ರಲ್ಲಿ ಈ ಪುಸ್ತಕ ಬಿಡುಗಡೆಯಾಗಿದೆ.

ಒಂದು ರೂಪಾಯಿ ನೋಟಿನ 100ನೇ ವಾರ್ಷಿಕೋತ್ಸವದ ನೆನಪಿಗಾಗಿ 2017 ರಲ್ಲಿ ರೆಜ್ವಾನ್ ತಮ್ಮ ಎರಡನೇ ಪುಸ್ತಕ ‘ಒಂದು ರೂಪಾಯಿ - ನೂರು ವರ್ಷ 1917-2017’ ಹೊರ ತಂದಿದ್ದಾರೆ.

ನಮ್ಮ ಅಸ್ತಿತ್ವವೂ ಬೆಸೆದುಕೊಂಡಿದೆ: ರೆಜ್ವಾಕ್

‘ನಮ್ಮ ಅಸ್ತಿತ್ವದೊಂದಿಗೆ ಹಣದ ಕತೆಯೂ ಬೆಸೆದುಕೊಂಡಿದೆ. ಹಣ ನಮ್ಮನ್ನು ಒಂದುಗೂಡಿಸುತ್ತದೆ, ವಿಭಜಿಸುತ್ತದೆ ಮತ್ತು ನಮಗೆ ಅಸ್ತಿತ್ವ, ಗುರುತಿನ ಪ್ರಜ್ಞೆ ನೀಡುತ್ತದೆ’ ಎನ್ನುತ್ತಾರೆ ರೆಜ್ವಾಕ್‌ ರಜಾಕ್‌.

‘ಭಾರತದ ಕರೆನ್ಸಿ ಪ್ರಯಾಣದ ಶ್ರೀಮಂತ ಇತಿಹಾಸ ಮತ್ತು ಪರಂಪರೆಯನ್ನು ಜನರಿಗೆ ತಿಳಿಸುವ ಪ್ರಯತ್ನದ ಫಲವೇ ಈ ಮ್ಯೂಸಿಯಂ. ಮ್ಯೂಸಿಯಂ ಸ್ಥಾಪನೆ ನನ್ನ ಬಹಳ ದಿನಗಳ ಕನಸು. ಇಂದು ನನಸಾಗಿದೆ’ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.

‘ಇದು ಒಂದು ಪ್ರಮುಖ ರಾಷ್ಟ್ರೀಯ ಪರಂಪರೆಯ ಸಮಗ್ರ ಪುನರ್‌ ಸ್ಥಾಪನೆ ಮತ್ತು ಸಂರಕ್ಷಣೆ ಎಂದು ನಾನು ಭಾವಿಸುತ್ತೇನೆ. ನಾಣ್ಯಶಾಸ್ತ್ರಜ್ಞರು, ವಿದ್ಯಾರ್ಥಿಗಳು ಮತ್ತು ಕರೆನ್ಸಿಗಳ ಬಗ್ಗೆ ತಿಳಿದುಕೊಳ್ಳಬೇಕು ಎನ್ನುವ ಆಸಕ್ತರಿಗೆ ಇದರ ಪ್ರಯೋಜನವಾಗಲಿದೆ’ ಎನ್ನುವುದು ರೆಜ್ವಾಕ್‌ ಅವರ ಅಭಿಪ್ರಾಯ. 

‘ಈ ಕನಸನ್ನು ನನಸಾಗಿಸಲು ಸಾಧ್ಯವಾಗಿದ್ದಕ್ಕೆ ಎಂದು ನನಗೆ ತುಂಬಾ ಸಂತೋಷವಾಗಿದೆ. ನಮ್ಮ ರಾಷ್ಟ್ರೀಯ ಹೆಮ್ಮೆಯ ಈ ವಸ್ತುಸಂಗ್ರಹಾಲಯದ ಉದ್ದೇಶವನ್ನು ಸಂದರ್ಶಕರು ಅರ್ಥಮಾಡಿಕೊಳ್ಳುತ್ತಾರೆ, ಆನಂದಿಸುತ್ತಾರೆ ಮತ್ತು ಗೌರವಿಸುತ್ತಾರೆ ಎಂದು ನಾನು ಭಾವಿಸುತ್ತೇನೆ’ ಎನ್ನುವ ಆಶಯ ವ್ಯಕ್ತಪಡಿಸುತ್ತಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು