ಬುಧವಾರ, ಆಗಸ್ಟ್ 12, 2020
27 °C

ಕೊರೊನಾ ಸೋಂಕು ಹರಡದಂತೆ ತಬ್ಬಲು ‘ಹಗ್‌ ಕರ್ಟನ್‌’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಅಜ್ಜಿಯನ್ನು ಕಂಡೊಡನೆ ಓಡೋಡಿ ಬಂದು ತಬ್ಬಿಕೊಳ್ಳುತ್ತಿದ್ದ ಪೆಗ್ಗಿಗೆ ಕೊರೊನಾ ತಂದೊಡ್ಡಿರುವ ಸಂಕಟ ಹೇಳತೀರದು. ಮನೆಯಲ್ಲೇ ಲಾಕ್‌ಡೌನ್‌ ಆಗಿ, ಅಜ್ಜಿ–ತಾತನೊಂದಿಗೆ ಬರೀ ಫೋನ್‌ನಲ್ಲೇ ಮಾತನಾಡುತ್ತಿದ್ದ ಪೆಗ್ಗಿಗೆ ಅಜ್ಜಿಯನ್ನು ತಬ್ಬಿಕೊಂಡು ಮಾತನಾಡಿಸಬೇಕೆಂಬ ಮಹಾದಾಸೆ. ಆದರೆ, ಅದಕ್ಕೆ ಕೊರೊನಾ ಸೋಂಕು ತಡೆಗೋಡೆಯಾಗಿತ್ತು. ಪೆಗ್ಗಿ ಅದಕ್ಕೆ ತನ್ನದೇ ಮಾರ್ಗ ಕಂಡುಕೊಂಡಿದ್ದಾಳೆ. ಅಜ್ಜಿ, ಅಜ್ಜನನ್ನು ತಬ್ಬಿಕೊಳ್ಳಬೇಕು ಎಂಬ ಆಕೆಯ ಆಸೆಯೇ ಈಗ ‘ಹಗ್‌ ಕರ್ಟನ್‌‘ಗೆ ಸೃಷ್ಟಿಗೆ ನಾಂದಿ ಹಾಡಿದೆ.

ಕ್ಯಾಲಿಫೋರ್ನಿಯಾದ ಪೆಗ್ಗಿ ಎಂಬ ಹತ್ತು ವರ್ಷದ ಪುಟ್ಟ ಬಾಲಕಿ ಮನೆಯಲ್ಲಿದ್ದ ಬಾತ್‌ರೂಂ ಕರ್ಟನ್‌, ಹಳೆಯ ಗ್ಲೌಸ್‌, ಪ್ಲಾಸ್ಟಿಕ್ ಕವರ್ ಬಳಸಿ ಈ ‘ಹಗ್‌ ಕರ್ಟನ್’ ತಯಾರಿಸಿದ್ದಾಳೆ. ವೃತ್ತಿಯಲ್ಲಿ ನರ್ಸ್‌ ಆಗಿರುವ ಆಕೆಯ ತಾಯಿ ಲಿಂಡ್ಸೆ ಒಕ್ರೆ ಮಗಳಿಗೆ ಈ ಕೆಲಸದಲ್ಲಿ ಸಾಥ್‌ ನೀಡಿದ್ದಾರೆ. 

ಪೆಗ್ಗಿಯ ಅಮ್ಮ ಕ್ಯಾಲಿಫೋನಿಯಾದ ಸರ್ಕಾರಿ ಆಸ್ಪತ್ರೆಯಲ್ಲಿ ಕೋವಿಡ್‌–19 ರೋಗಿಗಳ ಚಿಕಿತ್ಸೆಯಲ್ಲಿ ತೊಡಗಿದ್ದಾರೆ. ಹಾಗಾಗಿ ಅವರನ್ನು ಕ್ವಾರೆಂಟೈನ್‌ನಲ್ಲಿ ಇಡಲಾಗಿತ್ತು. ಹೊರಗಿನವರೊಂದಿಗೆ ಸಂಪರ್ಕವಿಲ್ಲದೆ ಬೇಸರದಲ್ಲಿದ್ದ ಏಕಾಂಗಿ ಪೆಗ್ಗಿ, ‘ಹಗ್‌ ಕರ್ಟನ್’ ರೂಪಿಸಲು ಯೋಚಿಸಿದಳು. ಇದಕ್ಕೆ ಮನೆಯಲ್ಲಿದ್ದ ವಸ್ತುಗಳನ್ನೇ ಬಳಸಿದ್ದಾಳೆ. ಮನೆಯ ತುಂಬಾ ಈ ವಸ್ತುಗಳನ್ನು ಹರಡಿಕೊಂಡು ಗಂಟೆಗಟ್ಟಲೆ ಕೂತು ಈ ಕೆಲಸ ಮುಗಿಸಿದ್ದಾಳೆ ಎನ್ನುತ್ತಾರೆ ಲಿಂಡ್ಸೆ ಒಕ್ರೆ.

ಇದರ ಮುಂದುವರೆದ ಭಾಗವಾಗಿ ಜಗತ್ತಿನ ಹಲವು ಕಡೆ ಈ ಹಗ್‌ ಕರ್ಟನ್‌, ಕ್ಯಾಡಲ್ ಕರ್ಟನ್, ತಬ್ಬಿಕೊಳ್ಳುವ ಕೈಗವುಸು, ಅಪ್ಪುಗೆಯ ಸುರಂಗ, ಆಲಿಂಗನದ ಪರದೆಗಳಂತಹ ಹೊಸ ಅನ್ವೇಷಣೆಗಳು ಮುನ್ನಲೆಗೆ ಬಂದಿವೆ. ಈ ಮೂಲಕ ಆತ್ಮೀಯರನ್ನು ಒಂದುಗೂಡಿಸುವ ಕೆಲಸ ನಡೆದಿದೆ. ಅದಕ್ಕೆ ಪೆಗ್ಗಿಯ ಪುಟ್ಟ ಪ್ರಯತ್ನ ಮುನ್ನುಡಿ ಬರೆದಿದೆ. 

ಬೆಲ್ಜಿಯಂನ ಜಾರ್ಡಿನ್ಸ್‌ ಡೆ ಪಿಕಾರ್ಡಿ ನರ್ಸಿಂಗ್‌ ಹೋಂನಲ್ಲಿ ಇಂಥದ್ದೇ ಹಗ್‌ ಕರ್ಟನ್‌ ಪರಿಚಯಿಸಲಾಗಿದೆ. ಕುಟುಂಬ ಸದಸ್ಯರನ್ನು ಕಾಣದೆ ನೊಂದಿದ್ದ ಕೋವಿಡ್‌ ಸೋಂಕಿತರಿಗೆ ಈ ಪರದೆ ಆಶಾಕಿರಣವಾಗಿದೆ. ಪರದೆಯ ಎರಡೂ ಕಡೆಗಳಲ್ಲಿ ನಿಂತು ಪರಸ್ಪರರನ್ನು ತಬ್ಬಿಕೊಂಡು ಸಂತೈಸಲು ಅವಕಾಶ ಕಲ್ಪಿಸಲಾಗಿದೆ.

ದಕ್ಷಿಣ ಬ್ರೆಜಿಲ್‌ನ ಪ್ರಾಂತ್ಯವೊಂದರ ವೃದ್ಧಾಶ್ರಮದಲ್ಲಿ ‘ಆಲಿಂಗನದ ಸುರಂಗ’ (ಹಗ್‌ ಟನೆಲ್‌)ವನ್ನು ನಿರ್ಮಿಸಲಾಗಿತ್ತು. ಕೆನಡಾದ ಕೆರೋಲಿನ್‌ ಎಲ್ಲಿಸ್‌ ಎಂಬವರು ಅಮ್ಮಂದಿರ ದಿನದಂದು ತನ್ನ ತಾಯಿಗೆ ‘ಹಗ್‌ ಗ್ಲೌಸ್‌’ (ಆಲಿಂಗನದ ಕೈಗವುಸು) ಉಡುಗೊರೆಯಾಗಿ ನೀಡಿದ್ದರು.

ಹೇಗಿದೆ ಈ ಹಗ್‌ ಕರ್ಟನ್‌?
ದೊಡ್ಡ ಪಾರದರ್ಶಕ ಪ್ಲಾಸ್ಟಿಕ್‌ ಶೀಟ್‌ (ಬಾತ್‌ ರೂಂ ಕರ್ಟನ್‌) ಅನ್ನು ಮಧ್ಯೆದಲ್ಲಿ ಪರದೆಯಂತೆ ತೂಗು ಬಿಡಲಾಗುತ್ತದೆ. ಪರದೆಯ ಮಧ್ಯಭಾಗದಲ್ಲಿ ಎರಡೂ ಕಡೆಯಿಂದ ಕೈ ತೂರಿಸಲು ರಂಧ್ರ ಮಾಡಲಾಗಿದೆ. ರಂಧ್ರಕ್ಕೆ ಕೈಗವಸು ಅಳವಡಿಸಲಾಗಿದೆ. ಪರದೆಯ ಒಂದು ಭಾಗದಲ್ಲಿ ಪೆಗ್ಗಿ ಹಾಗೂ ಮತ್ತೊಂದು ಭಾಗದಲ್ಲಿ ಪೆಗ್ಗಿಯ ಅಜ್ಜಿ ನಿಂತು, ಕೈಗಳನ್ನು ತೂರಿಸಿ, ಆಲಿಂಗಿಸಿಕೊಂಡರು. ಒಂದು ಸಾರಿ ಕರ್ಟನ್‌ ಬಳಸಿದ ನಂತರ ಸ್ವತ್ಛಗೊಳಿಸಿ, ಸೋಂಕು ಇದ್ದರೆ ನಿವಾರಿಸಲಾಗುತ್ತದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು