ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಸ್ವರೂಪವಾದ ಆನಂದವೇ ಭಾರತೀಯ ಸಂಸ್ಕೃತಿ

Last Updated 20 ಜನವರಿ 2020, 19:45 IST
ಅಕ್ಷರ ಗಾತ್ರ

ನಮ್ಮ ದೇಶದ ಜ್ಞಾನಿಗಳು ಕೇವಲ ಭೌತಿಕ ಪ್ರಪಂಚದಲ್ಲೇ ನಿಲ್ಲದೇ ಈ ಭೌತಿಕವೂ ಯಾವ ಮೂಲದಿಂದ ಅರಳಿಬಂದಿದೆ ಎಂಬುದನ್ನು ತಮ್ಮ ಅಂತರ್ಮುಖವಾದ ಪ್ರಯಾಣದಿಂದ ಅರಿಯುವ ಸಾಹಸ ಮಾಡಿದರು. ತಮ್ಮ ತಪಸ್ಸು, ಸಾಧನೆಗಳಿಂದ ಜೀವನಮೂಲದಲ್ಲಿ ಬೆಳಗುತ್ತಿರುವ ಪರಂಜ್ಯೋತಿ ಸ್ವರೂಪನಾದ ದೇವನನ್ನು ಕಂಡರು. ಅಲ್ಲಿಂದಲೇ ಎಲ್ಲವೂ ವಿಕಾಸವಾಗಿ ಬಂದಿದೆ ಎಂಬುದನ್ನು ಅವರಿವರು ಹೇಳಿದ್ದನ್ನು ಕೇಳದೆ ತಮ್ಮದೇ ಅನುಭವದಿಂದ ಕಂಡುಕೊಂಡರು. ಆ ದರ್ಶನ, ಅನುಭವಗಳು ಅವರಿಗೆ ಅದುವರೆಗೆ ಕಾಣದ ಆನಂದವನ್ನೂ ಅಪರಿಮಿತವಾದ ನೆಮ್ಮದಿಯನ್ನೂ ತಂದುಕೊಟ್ಟಿದ್ದರಿಂದ ಅವರು ಪರಮ ಕರುಣೆಯಿಂದ ಅಂತಹ ಜೀವನವನ್ನು ಜೀವಲೋಕವೆಲ್ಲವೂ ಅನುಭವಿಸಲಿ ಎಂದು ಉದಾರಹೃದಯರಾಗಿ ಲೋಕದಲ್ಲಿ ಸಂಸ್ಕೃತಿ ವೃಕ್ಷವನ್ನು ಕೃಷಿಮಾಡಿ ಬೆಳೆಸಿದರು.

ವೃಕ್ಷ-ಸಂಸ್ಕೃತಿ, ಒಂದು ಉದಾಹರಣೆ: ಒಂದು ವೃಕ್ಷದ ಹಿಂಬದಿಯಲ್ಲಿ ನೋಡುತ್ತಾ ಹೋದರೆ ಅದರ ಉಗಮಸ್ಥಾನವಾದ ಬೀಜದಲ್ಲಿ ನಿಲ್ಲುತ್ತದೆ. ಬೀಜದಲ್ಲಿನ ಅಭಿಪ್ರಾಯವೇ ವೃಕ್ಷರೂಪದಲ್ಲಿ ಅರಳುತ್ತದೆ. ಕಡೆಯಲ್ಲಿ ಬೀಜದಲ್ಲೇ ನಿಲ್ಲುತ್ತದೆ. ಹಾಗಾದರೆ ಬೀಜದಲ್ಲಿ ಈ ಬಗೆಯ ಕಾಂಡ, ಕೊಂಬೆಗಳು, ಎಲೆ, ಕಾಯಿ ಹಣ್ಣು ಎಲ್ಲವೂ ಇತ್ತೇ? ಎಂದರೆ ಇತ್ತು ಎಂದೇ ಹೇಳಬೇಕಾಗುತ್ತದೆ. ಇಲ್ಲದಿದ್ದರೆ ಮುಂದೆ ಅವೆಲ್ಲ ಬರುವುದಾದರೂ ಎಲ್ಲಿಂದ? ಹಾಗೆ ಬೀಜದ ಸ್ವರೂಪವನ್ನು ಅರ್ಥ ಮಾಡಿಕೊಳ್ಳಬೇಕಾದರೆ ಅವನು ಸಸ್ಯಶಾಸ್ತ್ರಜ್ಞ ಹಾಗೂ ವ್ಯವಸಾಯಜ್ಞನಾಗಿರಬೇಕು. ಈ ಬೀಜವೇ ಇಷ್ಟು ದೊಡ್ಡ ವೃಕ್ಷವಾಗಿದೆ ಎಂಬ ಅರಿವಿನಿಂದ ಮಾಡುವ ಕೃಷಿಯೆಲ್ಲವೂ ಬೀಜದ ತನ ಬೆಳೆಯಲು ಸಹಾಯ ಮಾಡುವುದೇ ಆಗಿರುತ್ತದೆ. ಅವೆಲ್ಲವೂ ‘ವೃಕ್ಷ-ಸಂಸ್ಕೃತಿ’ಯೇ ಆಗುತ್ತದೆ. ಉದಾಹರಣೆಗೆ ಮಾವಿನ ಬೀಜ ಎಂದಾದರೆ ಅದರಲ್ಲಿ ಮಾವೇ ಮುಂದೆ ಬರುವುದು ನಿಸರ್ಗ ಸಹಜ. ಆದರೆ ಕೆಲವೊಮ್ಮೆ ಬೀಜದ ಶಕ್ತಿಯನ್ನು ಬಳಸಿಕೊಂಡು ಬದನಿಕೆಗಳು ಬೆಳೆದುಬಿಡುವುದುಂಟು. ವ್ಯವಸಾಯಜ್ಞನಾದವನು ಯಾವುದು ಬೀಜದ ತನ ಯಾವುದು ಬದನಿಕೆ ಎಂಬುದನ್ನು ಅರಿತವನಾಗಿರಬೇಕು. ಅಲ್ಲಿ ಅವನು ಬದನಿಕೆಯನ್ನು ಕಿತ್ತುಹಾಕಿ ಮಾವಿನ ಮರವೇ ಬೆಳೆಯುವಂತೆ ನೋಡಿಕೊಳ್ಳುವ ಜವಾಬ್ದಾರಿಯುಂಟು. ಹಾಗಾದಾಗ ತಾನೇ ಮಾವಿನ ರಸಾಸ್ವಾದನೆ ನಮಗೆ
ಲಭಿಸೀತು?

ಹಾಗೆಯೇ ನಮ್ಮ ದೇಶದ ಜ್ಞಾನಿಗಳು ವಿಶ್ವಕ್ಕೆಲ್ಲಾ ಚೈತನ್ಯಬೀಜನಾದ ಭಗವಂತನನ್ನು ಅರ್ಥಮಾಡಿಕೊಂಡು ಅವನ ತನವೇ ಮುಂದೆಲ್ಲ ಬೆಳೆದರೆ ಜೀವನವು ಸರ್ವಾಂಗ ಸುಂದರವಾಗಿ ಚೇತೋಹಾರಿಯಾಗಿ, ಆನಂದಮಯವಾಗಿ ಇರುವುದನ್ನು ತಮ್ಮ ಅನುಭವದಿಂದ ಕಂಡುಕೊಂಡರು. ಹಾಗೆ ಆ ಜಗದ್ಬೀಜನಾದ ಭಗವಂತನ ತನವೇ ಲೋಕದಲ್ಲೂ ಮತ್ತು ನಮ್ಮಲ್ಲೂ ಬೆಳೆಯುವಂತೆ ಕೃಷಿ ಮಾಡಿ ಇಲ್ಲಿ ಸಂಸ್ಕೃತಿಯನ್ನು ತಂದರು. ಅವನ ತನ ಮರೆಮಾಡುವ ಬದನಿಕೆಗಳನ್ನು ಕಿತ್ತೆಸೆದು ಅವನ ಸ್ವಸ್ವರೂಪವಾದ ಆನಂದವೇ ಎಲ್ಲೆಡೆ ಬೆಳೆಯುವಂತೆ ಶ್ರಮಿಸಿ ತಂದ ಸಂಸ್ಕೃತಿಯೇ ಭಾರತೀಯ ಸಂಸ್ಕೃತಿ. ಹಾಗೆ ತಂದ ಜೀವನ ವಿಧಾನಗಳೆಲ್ಲವೂ ಭಾರತೀಯ ಸಂಸ್ಕೃತಿಯೆನಿಸಿತು.

ಶ್ರೀರಂಗ ಮಹಾಗುರುಗಳ ಮಾತಿನಂತೆ ‘ಭಾ’ರೂಪಿಯಾದ ಪರಂಜ್ಯೋತಿಯ ಸ್ವರೂಪವನ್ನು ಅರ್ಥ ಮಾಡಿಕೊಂಡು ಬೆಳೆದ ಸಂಸ್ಕೃತಿಯೇ-ಭಾರತೀಯ ಸಂಸ್ಕೃತಿ. ಅದು ವಿಕಾಸವಾಗಲು ಇರುವ ಪ್ರತಿಬಂಧಕಗಳನ್ನೆಲ್ಲ ಅವರು ಕೊಳೆ ಅಥವಾ ದೋಷ ಎಂದು ಕರೆದರು. ಅಂತಹ ದೋಷಗಳನ್ನು ನಿರಂತರವಾಗಿ ತೆಗೆದುಹಾಕಿ ಆ ಪರಂಜ್ಯೋತಿಯ ಆಶಯದಂತೆ ಜೀವನವೆಲ್ಲವೂ ಅರಳಬೇಕು ಎಂಬ ಅತ್ಯುನ್ನತವಾದ ಧ್ಯೇಯದಿಂದ ಪ್ರೇರಿತರಾದವರು ತಂದುಕೊಟ್ಟ ಸಂಸ್ಕೃತಿಯಿದು. ಅವರ ಪಾವನ ಸಂಸ್ಕೃತಿಯ ಕೆಲವೇ ಕೆಲವು ಅಂಶಗಳನ್ನು ಸೂಚನಾಮಾತ್ರವಾಗಿದೆ.

ಲೇಖಕರು ಆಧ್ಯಾತ್ಮಿಕ ಚಿಂತಕರು.
ಅಷ್ಟಾಂಗಯೋಗ ವಿಜ್ಞಾನಮಂದಿರಂ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT