ಗುರುವಾರ, 18 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ತರಕಾರಿ, ಮಾಸ್ಕ್‌ ಮಾರುತ್ತಿರುವ ಲಾವಣಿ ಕಲಾವಿದರು!

Last Updated 7 ಜುಲೈ 2020, 10:56 IST
ಅಕ್ಷರ ಗಾತ್ರ

ಸಾವಿರಾರು ಪ್ರೇಕ್ಷಕರ ಸೇರುವ ದೊಡ್ಡ ಕಾರ್ಯಕ್ರಮಗಳಲ್ಲಿ ಹಾಡಿ, ಕುಣಿಯುತ್ತಿದ್ದ ಮಹಾರಾಷ್ಟ್ರದ ಪ್ರಸಿದ್ಧ ಜಾನಪದ ನೃತ್ಯ ಲಾವಣಿ ಕಲಾವಿದರ ಬದುಕು ಈಗ ಅಕ್ಷರಶಃ ಬೀದಿಗೆ ಬಂದಿದೆ.

ಲಾಕ್‌ಡೌನ್‌ನಿಂದ ಕಾರ್ಯಕ್ರಮಗಳು ರದ್ದಾದ ಕಾರಣ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಹತ್ತಾರು ಲಾವಣಿ ಕಲಾವಿದರು ಬೀದಿ ಬದಿಯಲ್ಲಿ ಮಾಸ್ಕ್‌, ತರಕಾರಿ, ಬೇಳೆಕಾಳು ಮಾರಾಟ ಮಾಡುತ್ತಿದ್ದಾರೆ.

ಹಿರಿಯ ಲಾವಣಿ ಕಲಾವಿದೆ51 ವರ್ಷದ ಮೀರಾ ದಳ್ವಿ ಸೋನಾವಣೆ ಪುಣೆಯ ಪು.ಲ. ದೇಶಪಾಂಡೆ ಗಾರ್ಡನ್‌ ಪ್ರದೇಶದ ನಿಂಘಗಡ ರಸ್ತೆ ಬದಿಯಲ್ಲಿ ತರಕಾರಿ, ಬೇಳೆ, ಆಹಾರಧಾನ್ಯ ಮಾರಾಟ ಮಾರುತ್ತಿದ್ದಾರೆ.

ಒಂದು ಕಾಲಕ್ಕೆ ಇದೇ ಮೀರಾ ದಳ್ವಿ ಅವರ ಲಾವಣಿ ನೃತ್ಯ ನೋಡಲು ಮಹಾರಾಷ್ಟ್ರದಲ್ಲಿ ಜನರು ತಾಸುಗಟ್ಟಲೇ ಕಾಯುತ್ತಿದ್ದರು. ಇಂದು ಅದೇ ಕಲಾವಿದೆ ತರಕಾರಿ ಖರೀದಿಸುವ ಗ್ರಾಹಕರಿಗಾಗಿ ದಿನವಿಡೀ ಕಾಯಬೇಕಾದ ಪರಿಸ್ಥಿತಿ ಎದುರಾಗಿದೆ.

ಇದು ಎರಡು ವರ್ಷಗಳ ಹಿಂದಿನ ಮಾತು. ದೆಹಲಿಯಲ್ಲಿ ನಡೆದ ಸಮಾರಂಭದಲ್ಲಿ ಲೋಕಸಭೆಯ ಮಾಜಿ ಸ್ಪೀಕರ್‌ ಮೀರಾ ಕುಮಾರ್, ಈ ಹಿರಿಯ ಕಲಾವಿದೆಯನ್ನು ಶಾಲು ಹೊದಿಸಿ ಸತ್ಕರಿಸಿದ್ದರು. ಮರಾಠಿ ಪತ್ರಿಕೆ, ಸುದ್ದಿ ವಾಹಿನಿಗಳಲ್ಲಿ ಇದು ಸುದ್ದಿಯಾಗಿತ್ತು.

ನಿನ್ನೆ, ಮೊನ್ನೆ ನಡೆದಂತಿರುವ ದೆಹಲಿಯ ಮಧುರ ನೆನಪುಗಳು ಇನ್ನೂ ಕಲಾವಿದೆಯ ಸ್ಮೃತಿ ಪಟಲದಿಂದ ಮಾಸಿಲ್ಲ. ಆಗಲೇ ಜೀವನದ ಚಿತ್ರಣ ಸಂಪೂರ್ಣ ಬದಲಾಗಿ ಹೋಗಿದೆ. ಇಷ್ಟು ಬೇಗ ಇಂಥ ಸ್ಥಿತಿ ಬರುತ್ತದೆ ಎಂದು ಆಕೆ ಕನಸು, ಮನಸ್ಸಿನಲ್ಲೂ ಯೋಚಿಸಿರಲು ಸಾಧ್ಯವಿಲ್ಲ.

‘ಕೊರೊನಾ ಲಾಕ್‌ಡೌನ್‌ನಿಂದಾಗಿ ಏಪ್ರಿಲ್‌, ಮೇ ಮತ್ತು ಜೂನ್ ತಿಂಗಳಲ್ಲಿ ಬುಕ್‌ ಆಗಿದ್ದ ಎಲ್ಲ ಲಾವಣಿ ಕಾರ್ಯಕ್ರಮ ರದ್ದಾಗಿವೆ. ಹೀಗಾಗಿ ಅನಿವಾರ್ಯವಾಗಿ ಹೊಟ್ಟೆ ಹೊರೆಯಲು ಹೊಸ ಕಲೆಯನ್ನು ಕಲಿಯಬೇಕಾಗಿದೆ‘ ಎನ್ನುತ್ತಾರೆ ಮೀರಾ ದಳ್ವಿ.

ಇದು ಕೇವಲ ಒಬ್ಬ ಕಲಾವಿದೆಯ ಬದುಕಲ್ಲ. ಮೀರಾ ಅವರಂಥ ನೂರಾರು ಕಲಾವಿದರ ಬದುಕು ಇಂದು ಬೀದಿಗೆ ಬಿದ್ದಿದೆ. ಖ್ಯಾತ ಮರಾಠಿ ಕಲಾವಿದ ದಂಪತಿ ಪವಾರ್‌ ಕುಟುಂಬ ಮತ್ತು ಸಮಕಾಲೀನ ನೃತ್ಯಪಟು ಮಂಜು ವಾಘ್ಮೋರೆ ಕೂಡ ಬೀದಿ, ಬೀದಿ ಅಲೆದು ಮಾಸ್ಕ್‌ ಮಾರುತ್ತಿದ್ದಾರೆ.

ಪುಣೆ ಹಾಗೂ ಸುತ್ತಮುತ್ತ ವಾಸವಾಗಿರುವ ಬಡ ಕಲಾವಿದರು ಹೊಟ್ಟೆ ಹೊರೆಯಲು ಕಂಡುಕೊಂಡ ದಾರಿ ಮತ್ತು ಬವಣೆಗಳನ್ನು ‘ಪುಣೆ ಮಿರರ್‌’ವರದಿ ಮಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT