ಗುರುವಾರ, 16 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖೆಡ್ಡಾ ಉದ್ಘಾಟಿಸಿದ ಮಹಾರಾಜ

Last Updated 1 ಜುಲೈ 2018, 13:10 IST
ಅಕ್ಷರ ಗಾತ್ರ

10ನೇ ಚಾಮರಾಜೇಂದ್ರ ಒಡೆಯರ್ ಮತ್ತು ವಾಣಿವಿಲಾಸ ಸನ್ನಿಧಾನ ಅವರು ಪ್ರಾರಂಭಿಸಿದ ಮಹಾರಾಣೀಸ್ ಗರ್ಲ್ಸ್ ಸ್ಕೂಲ್‌ಗೆ ಅತಿಥಿಯಾಗಿ ಬಂದವರು ಲೇಡಿ ಡಫರಿನ್ ಅವರು. ಇವರೇ ವಿದ್ಯಾರ್ಥಿನಿಯರಿಗೆ ಬಹುಮಾನ ವಿತರಿಸಿದರು. ಮೊದಲ ತಂಡದಲ್ಲಿ ಇದ್ದ ವಿದ್ಯಾರ್ಥಿನಿಯರ ಸಂಖ್ಯೆ 28 ಮಾತ್ರ. ಮಹಿಳೆಯರಿಗೆ ಶಿಕ್ಷಣ ದೊರೆಯಬೇಕೆಂಬ ಅಭಿಲಾಷೆಯಿಂದ ಸ್ಥಾಪಿಸಿದ ಈ ಶಾಲೆಯಲ್ಲಿ ಮೇಲ್ವರ್ಗದ ಬಾಲಕಿಯರು ಹಾಜರಿದ್ದರು. ಈ ಶಾಲೆ ಪ್ರಾರಂಭವಾದುದು 21ನೇ ಜನವರಿ 1881ರಲ್ಲಿ.

ಬಹುಮಾನ ವಿತರಣೆ ಕಾರ್ಯಕ್ರಮ 1886ನೇ ಡಿಸೆಂಬರ್ 2ರಂದು ನಡೆಯಿತು. ಈ ಐದು ವರ್ಷದಲ್ಲಿ ವಿದ್ಯಾರ್ಥಿನಿಯರ ಹಾಜರಾತಿ 463ಕ್ಕೆ ಏರಿತ್ತು. ಈ ಪೈಕಿ 6 ಮಂದಿ ಹೈಸ್ಕೂಲ್‌ಗೆ ಬಂದಿದ್ದರು. ಮಹಿಳೆಯರಿಗೆ ಅವರವರ ಮನೆಗೆ ಹೋಗಿ ಪಾಠ ಹೇಳಿಕೊಡುವ ವಿಧಾನವೂ ಇತ್ತು. ಕೌಟುಂಬಿಕ ಪರಿಸ್ಥಿತಿಯಿಂದಾಗಿ ಶಾಲೆಗೆ ಬರಲು ತೊಂದರೆ ಇದ್ದವರಿಗೆ ಈ ಪದ್ಧತಿಯ ಶಾಖೆಯನ್ನು ಆರಂಭಿಸಲಾಗಿತ್ತು.

ಇಂತಹ ಶಾಖೆಯಲ್ಲಿ 15 ಮಂದಿ ವಿದ್ಯಾರ್ಥಿನಿಯರೂ ಇದ್ದರು. ಇಬ್ಬರು ಮಹಿಳಾ ಬೋಧಕರಿದ್ದರು. ಬಾಲಕಿಯರಿಗೆ ಸಂಗೀತ ಶಿಕ್ಷಣ ಪ್ರಮುಖವಾಗಿತ್ತು. ಹಾಡುಗಾರಿಕೆಯನ್ನು ಕಲಿಸಲಾಗಿತ್ತು. ಸಂಸ್ಕೃತವೂ ಕಲಿಕೆಯ ಒಂದು ಪಠ್ಯವೇ ಇವರಿಗೆ ವಿಶೇಷವಾಗಿತ್ತು. ನೀತಿ ಮತ್ತು ಧಾರ್ಮಿಕ ಪಾಠಗಳೂ ಇದ್ದವು. ಈ ಪಾಠ ಕನ್ನಡ ಭಾಷೆಯಲ್ಲಿದ್ದವು. ಬಹುಮಾನ ವಿತರಣೆಯ ನಂತರ ಗವರ್ನರ್ ಜನರಲ್ ಡಫರಿನ್ ಅವರು ವಿದ್ಯಾರ್ಥಿನಿಯರಿಗೆ ಹಸ್ತಲಾಘವ ನೀಡಿ ಅವರ ಶ್ರದ್ಧೆ ಮತ್ತು ಆಸಕ್ತಿಯನ್ನು ಮೆಚ್ಚಿದರು.

ಇದೇ ದಿನ ರಾತ್ರಿ ರಂಗಾಚಾರ್ಲು ಮೆಮೊರಿಯಲ್ ಹಾಲ್ ಎನ್ನುವ ಟೌನ್‌ಹಾಲ್‌ನಲ್ಲಿ ಮನರಂಜನೆ ಕಾರ್ಯಕ್ರಮ ಏರ್ಪಾಡಾಗಿತ್ತು. ಬುದ್ಧಿವಂತಿಕೆಯಿಂದ ವಿದ್ಯುತ್ ರಹಿತ ದೀಪಾಲಂಕಾರವನ್ನು ಮಾಡಲಾಗಿತ್ತು. ಈ ಮನರಂಜನೆ ಕಾರ್ಯಕ್ರಮದಲ್ಲಿ ನಾಚ್ ಎನ್ನುವ ನೃತ್ಯವೂ ಸೇರಿಕೊಂಡಿತ್ತು. ಖಡ್ಗ ನೃತ್ಯ ಒಂಟಿಕಾಲಿನಲ್ಲಿ ನಡೆದುದು ವಿಶೇಷವಾಗಿತ್ತು. ಖಡ್ಗ ನೃತ್ಯ ಮಾಡಿದವರೂ ಮಹಿಳೆಯರೇ ಆಗಿದ್ದರು. ‘ದ್ರೌಪದಿ ಸ್ವಯಂವರ’ ನಾಟಕ ಪ್ರದರ್ಶಿತವಾಯಿತು. ಈ ನಾಟಕವನ್ನು ಮೇಲ್ವರ್ಗದ ಯುವಕರೇ ಅಭಿನಯಿಸಿದ್ದರು.

ಅತಿಥಿಗಳು ಇಬ್ಬರೂ ರೋಮಾಂಚನಗೊಂಡುದನ್ನು ಅವರವರ ಡೈರಿಗಳಲ್ಲಿ ದಾಖಲಿಸಿದ್ದಾರೆ. ಲೇಡಿ ಡಫರಿನ್‌ ಇಂಗ್ಲೆಂಡಿಗೆ ಹಿಂತಿರುಗಿದ ಮೇಲೆ ಪುಸ್ತಕವೊಂದನ್ನು ಬರೆದು ಪ್ರಕಟಿಸಿದರು. ‘ಅವರ್ ವೈಸರಾಯಿಸ್‌ ಲೈಫ್ ಇನ್ ಇಂಡಿಯಾ’ ಎಂಬುದೇ ಆ ಪುಸ್ತಕ. ಅದರಲ್ಲಿ ಬರೆದಿರುವ ಒಂದು ವಾಕ್ಯ ವೃಂದ ಹೀಗಿದೆ: ನಾವು ಅವರನ್ನು ನೋಡಿದೆವು. ಮಹಾರಾಜರ ಇಬ್ಬರು ಪುತ್ರಿಯರು ಮತ್ತು ಒಬ್ಬ ಪುತ್ರನನ್ನು. ಬಹುಶಃ ಹಿರಿಯ ಮಗಳು 6 ವರ್ಷದವಳು. ಅವರೆಲ್ಲ ನೋಡುತ್ತಿದ್ದ ಪರಿ, ಅವರ ಹಾವಭಾವ ನಮಗೆ ಹಿಡಿಸಿತು.
ಮುಂದಿನ ಅತಿಥಿಯಾಗಿ ಬಂದವರು ಪ್ರಿನ್ಸ್ ಆಲ್ಬರ್ಟ್ ವಿಕ್ಟರ್. ಇವರು ಏಳನೇ ಕಿಂಗ್ ಎಡ್ವ್‌ರ್ಡ್‌ನ ಹಿರಿಯ ಮಗ. ವೇಲ್ಸ್‌ನ ಪ್ರಿನ್ಸ್ ಆಗಿದ್ದವರು. ಮೊದಲು ಇವರು ಮುಂಬೈಗೆ ಬಂದರು. ಹೈದರಾಬಾದ್ ಮತ್ತು ಮದ್ರಾಸಿಗೆ ಬಂದರು. ನಂತರ ರಾಯಲ್ ರೈಲಿನಲ್ಲಿ ಬೆಂಗಳೂರಿನಿಂದ ಮೈಸೂರಿಗೆ ಹೊರಟರು.

ಸ್ವಲ್ಪ ಹೊತ್ತು ಶ್ರೀರಂಗಪಟ್ಟಣದಲ್ಲಿ ವಿಶ್ರಾಂತಿ ತೆಗೆದುಕೊಂಡರು. ಇಲ್ಲಿ ಆಲ್ಬರ್ಟ್ ಅವರು ನೋಡಿದ ದೃಶ್ಯ ವಿಶೇಷವಾಗಿತ್ತು. ರೈಲ್ವೆ ಸೇತುವೆ ಬಳಿ ಬೊಂಬುಗಳ ತೆಪ್ಪವೊಂದು ಕಾವೇರಿ ನದಿಯಿಂದ ತೂಗೂಯ್ಯಾಲೆಯಂತಾಡಿತ್ತು. ಈ ವಿನಾಶ ಆಗಿದ್ದು ಟಿಪ್ಪು ಯುದ್ಧದಲ್ಲಿ. ಈ ತೆಪ್ಪ ಹಾಗೆಯೇ ತೂಗಾಡಿತ್ತು ಸೇತುವೆಯ ಮೂಲೆಯಲ್ಲಿ. ಬ್ರಿಟಿಷರ ಬಂದೂಕಿಗೆ ಗುರಿಯಾಗಿ ಛಿದ್ರವಾಗಿ ನೇತಾಡುತ್ತಿತ್ತು. ಪ್ರಿನ್ಸ್ ಆಲ್ಬರ್ಟ್‌ರು ಟಿಪ್ಪು ಯುದ್ಧದಲ್ಲಿ ಬ್ರಿಟಿಷರು ಕೋಟೆಯನ್ನು ಮುರಿದು ಬಿದ್ದ ಕೋಟೆಯನ್ನು ಪರಿವೀಕ್ಷಿಸಿದರು. ಟಿಪ್ಪು ಅರಮನೆಯತ್ತ ಸಾಗಲು ಇಂಗ್ಲಿಷ್ ತಂಡ ಕೋಟೆ ಒಡೆದ ಜಾಗ ಇದಾಗಿತ್ತು. ನಂತರ ಟಿಪ್ಪು ಅವರ ಬೇಸಿಗೆ ಅರಮನೆ ದರಿಯಾ ದೌಲತ್ತಿಗೆ ಭೇಟಿಕೊಟ್ಟರು. ಸುಂದರವಾದ ಉದ್ಯಾನ ಮನೆ ಇದಾಗಿತ್ತು. ಊಟವಾದ ಮೇಲೆ ಕಾವೇರಿಯ ಎರಡನೇ ಶಾಖೆ ಪಶ್ಚಿಮ ವಾಹಿನಿಯ ಬಳಿ ಬಂದು ನೋಡಿದರು. ನಂತರ ವಿಶೇಷ ರೈಲಿನಲ್ಲಿ ಮೈಸೂರಿನತ್ತ ಪಯಣಿಸಿದರು.

ಮೈಸೂರು ರೈಲ್ವೆ ನಿಲ್ದಾಣದಲ್ಲಿ ಪ್ರಿನ್ಸ್, ಮಹಾರಾಜರು ಮತ್ತು ದಿವಾನರು ಇತರ ಅಧಿಕಾರಿಗಳು ಸ್ವಾಗತಿಸಿದುದನ್ನು ಕಂಡು ಹರ್ಷಿಸಿದರು. ಇವರಿಗೆ ಬೆಂಗಾವಲಾಗಿ ಮೈಸೂರು ಲ್ಯಾನ್ಸ್‌ರುಗಳಿದ್ದರು. ಆನೆಗಳೂ ಬಂದು ಸ್ವಾಗತ ಕೋರಿದವು. ಮೈಸೂರು ಇನ್‌ಫೆಂಟ್ರಿ ಇತ್ತು. ಬಿಳಿ ಕುದುರೆಗಳು ಗಾಡಿಯೊಂದನ್ನು ಎಳೆದು ತಂದಿದ್ದವು. ತಿಳಿ ನೇರಳೆ ಬಣ್ಣದ ಬಟ್ಟೆಗಳಿಂದ ಇವು ಅಲಂಕೃತಗೊಂಡಿದ್ದವು. ಅಂತೂ ಇದೊಂದು ವಿಜೃಂಭಿತ ದೃಶ್ಯವಾಗಿತ್ತು. ಪ್ರಿನ್ಸ್ ಮತ್ತು ಮಹಾರಾಜರೂ ಮಹಾರಾಣೀಸ್ ಗರ್ಲ್ಸ್ ಸ್ಕೂಲ್‌ಗೆ ಭೇಟಿ ನೀಡಿದರು. ಇವರು ಶಾಲೆಗೆ ಬಂದ ಸಮಯಕ್ಕೆ ತರಗತಿಗಳು ಪ್ರಾರಂಭವಾಗಿದ್ದವು. ಅಲ್ಲದೆ 500 ವಿದ್ಯಾರ್ಥಿನಿಯರು ಸುಂದರವಾದ ವೇಷ ಭೂಷಣದೊಂದಿಗೆ ಹಾಜರಿದ್ದರು. ಇವರೆಲ್ಲ 6ರಿಂದ 16ನೇ ವಯಸ್ಸಿನವರು ಆಗಿದ್ದರು. ಶಾಲೆಯಿಂದ ಅರಮನೆಗೆ ಬಂದರು. ಈ ದಿನದ ರಾತ್ರಿ ಅರಮನೆಯಲ್ಲಿ ಭೂರಿ ಭೋಜನ ವ್ಯವಸ್ಥೆಯಾಗಿತ್ತು.

ಅನಂತರ ಮಹಾರಾಜರು ಪ್ರಿನ್ಸ್ ಅವರೊಂದಿಗೆ ಅಲಂಕರಿಸಿದ ಮೈಸೂರು ನಗರವನ್ನು ಸುತ್ತಾಡಿಕೊಂಡು ಬಂದರು. ಪೂರ್ವಭಾಗದಲ್ಲಿ ಇರುವ ಡೊಡ್ಡಕೆರೆಯನ್ನು ನೋಡಿದರು. ಆ ಕೆರೆಯಲ್ಲೋ ಸಾವಿರಾರು ಹಚ್ಚಿದ ಹಣತೆಗಳನ್ನು ನೀರಿನ ಮೇಲೆ ತೇಲಿ ಬಿಟ್ಟಿರುವುದನ್ನು ಕಂಡು ಪುಳಕಿತರಾದರು. ಈ ದೀಪಗಳ ಪ್ರತಿಬಿಂಬ ನೀರಿನಲ್ಲಿ ಕಾಣುತ್ತಿದ್ದುದನ್ನು ಕಂಡು ಅಚ್ಚರಿಗೊಂಡರು. ಎಂಟು ಸಣ್ಣ ದೋಣಿಗಳೂ ನಿಧಾನವಾಗಿ ಹರಿದಾಡುತ್ತಿದ್ದವು. ಇದೇ ದಿನ ರಾತ್ರಿ ರಂಗಾಚಾರ್ಲು ಮೆಮೊರಿಯಲ್ ಹಾಲ್‌ನಲ್ಲಿ ವಿಶೇಷ ಮನರಂಜನೆ ಕಾರ್ಯಕ್ರಮಗಳು ಜರುಗಿದವು. ಮೈಸೂರು ಕಲಾವಿದರು ವಿವಿಧ ಅಪರೂಪದ ಕಲಾ ಪ್ರಕಾರಗಳನ್ನು ಪ್ರದರ್ಶಿಸಿದರು. ಈ ಕಲಾವಿದರಲ್ಲಿ ಪುರುಷರು, ಮಹಿಳೆಯರೂ ಇದ್ದು, ಜೋಡಿಜೋಡಿಯಾಗಿ ಕಾರ್ಯಕ್ರಮ ಕೊಟ್ಟರು.

ಸರಳ ಪ್ರಸಾಧನ ಹೊಂದಿದ್ದರು. ಈ ಪೈಕಿ ದೇಗುಲಗಳಲ್ಲಿ ಅರ್ಚನೆ ಮಾಡುವ ಶರಣರೂ ಇದ್ದರು. ಪುರುಷ ಕಲಾವಿದರು ಬಲಗಡೆ ಹೆಗಲಿನಲ್ಲಿ ಗಂಟೆಯನ್ನು ತೂಗಾಡಿಸಿಕೊಂಡಿದ್ದರು. ನವಿಲಿನ ಗರಿಯ ಗೊಂಚಲು ಹೊಂದಿದ್ದ ಕಲಾವಿದರು ಬಣ್ಣದ ಛತ್ರಿಗಳನ್ನು ಹಿಡಿದು ಪ್ರದರ್ಶನ ಕೊಟ್ಟರು. ನೆಕ್ಲೇಸ್ ಅಲಂಕರಿಸಿದ್ದ ಮಹಿಳಾ ಕಲಾವಿದರು ಕಂಗೊಳಿಸುತ್ತಿದ್ದರು. ಉರಿಬತ್ತಿ ದಾಸಯ್ಯರು ಬೆಂಕಿಯನ್ನು ಉಗುಳುತ್ತಿದ್ದುದೂ ಕಂಡುಬಂತು. ಜೇನುಕುರುಬರು ಸರಳ ವೇಷಭೂಷಣ ತೊಟ್ಟು ಕೈಯಲ್ಲಿ ಬೆತ್ತ ಹಿಡಿದು ಬಂದಿದ್ದರು, ಸಿಂಹದ ಮುಖವಾಡ ಹೊಂದಿ ವರ್ಣರಂಜಿತವಾಗಿ ನರ್ತಿಸಿದುದು ಕಂಡುಬಂತು.

ಮಹಾರಾಜರೇ ವಾಹನ ಓಡಿಸುತ್ತಾ ಪ್ರಿನ್ಸ್ ಅವರನ್ನು ಚಾಮರಾಜನಗರದ ಬಳಿ ಖೆಡ್ಡಾ ಕಾರ್ಯಕ್ರಮಕ್ಕೆ ಕರೆದುಕೊಂಡು ಹೋದರು. ಅಲ್ಲಿ ಪ್ರಸಿದ್ಧ ಆನೆ ಶಿಕಾರಿಕಾರ ಜಿ.ಪಿ.ಸ್ಯಾಂಡರ್‌ಸನ್ ಇದ್ದರು. ರಾಜರು ಬರುವುದನ್ನೇ ಅವರು ಕಾಯುತ್ತಿದ್ದರು. ಖೆಡ್ಡಾ ಕಾರ್ಯಕ್ಕೆ ಬಿಳಿಗಿರಿರಂಗನ ಬೆಟ್ಟದ ಆದಿವಾಸಿಗಳನ್ನು ನೇಮಿಸಿಕೊಂಡಿದ್ದರು. ಪ್ರಿನ್ಸ್‌ ತಂಡ ರಾಜರೊಂದಿಗೆ ಬೂದಿಪಡಗ ಶಿಬಿರಕ್ಕೆ ಬಂದಿತು. ಖೆಡ್ಡಾಕ್ಕೆ ಭಾರಿ ತಯಾರಿ ನಡೆದಿತ್ತು. ಅಲ್ಲಲ್ಲಿ ಈ ತಂಡಕ್ಕೆ ಟೆಂಟು ಹಾಕಲಾಗಿತ್ತು. ಕರ್ನಲ್ ಸರ್ ಆಲಿವರ್ ಸೇಂಟ್ ಜಾನ್ ಮೈಸೂರಿನ ರೆಸಿಡೆಂಟರಾಗಿ ಹಾಜರಿದ್ದರು. ದಿವಾನ್ ಶೇಷಾದ್ರಿ ಅಯ್ಯರ್ ಮತ್ತಿತರ ಅಧಿಕಾರಿಗಳೂ ಹಾಜರಿದ್ದರು. ಹಳ್ಳಿಗಳ ಅಂಗಡಿಯವರು ತಂಡಗಳಿಗೆ ಆಹಾರ ಧಾನ್ಯ ಸಂಗ್ರಹಿಸಿದ್ದರು. ತಾತ್ಕಾಲಿಕ ಅಂಚೆ ಕಚೇರಿಯನ್ನು ಸ್ಥಾಪಿಸಲಾಗಿತ್ತು.

ಸ್ನಾನ ಉಪಾಹಾರ ಆದ ಮೇಲೆ ಖೆಡ್ಡಾ ಸ್ಥಳಕ್ಕೆ ಬಂದರು. ಅಲ್ಲಿ ಪಳಗಿಸಿದ ಆನೆಗಳ ಗುಂಪೂ ಇತ್ತು. ಮಹಾರಾಜರು ಮತ್ತು ಸರ್ ಎಡ್ವರ್ಡ್ ಬ್ರಾಡ್‌ಫೋರ್ಡ್ ಮತ್ತು ಪ್ರಿನ್ಸ್ ತಂಡ ಆನೆಗಳ ಗುಂಪಿನ ಕಡೆ ಹಾದು ಬಂದರು. ಸ್ಯಾಂಡರ್‌ಸನ್, ಮಾಡಿಕೊಂಡಿದ್ದ ಸಿದ್ಧತೆ ಬಗ್ಗೆ ಮಹಾರಾಜರಿಗೆ ವಿವರಿಸಿದರು. ಕಾಡಿನಲ್ಲೇ ಓಡಾಡಿಸುವ ಎತ್ತಿನಗಾಡಿಯೂ ಅಲ್ಲಿತ್ತು. ಈ ಗಾಡಿ ಸ್ಯಾಂಡರ್‌ಸನ್ ಅವರದಾಗಿತ್ತು. ಖೆಡ್ಡಾ ವೃತ್ತದ ಹೊರಗೆ ಇವರೆಲ್ಲ ನಿಂತಿದ್ದರು. ಕಾಡಿನ ಗ್ರಾಂಡ್‌ಸ್ಟಾಂಡ್ ಬಳಿ ಇದ್ದರು. 30 ಗಜಗಳ ದೂರದಲ್ಲಿ ನಿಂತು ನೋಡುವಂತೆ ರಚಿಸಲಾಗಿತ್ತು. ಪೆವಿಲಿಯನ್ ಅನ್ನು ತೋರಣಗಳಿಂದ ಅಲಂಕರಿಸಲಾಗಿತ್ತು.

ಮಹಾರಾಜರು ಖೆಡ್ಡಾ ಅಂಗಳದ ದ್ವಾರದಲ್ಲಿ ಅಲಂಕರಿಸಿದ್ದ ಹಗ್ಗವನ್ನು ಕತ್ತರಿಸಿ ಖೆಡ್ಡಾ ಉದ್ಘಾಟಿಸಿಯೂ ಅಯಿತು. ಅನುಭವಿ ಬೇಟೆಗಾರರು ಶಿಸ್ತಾಗಿ ಬಾಗಿಲಲ್ಲಿ ನಿಂತಿದ್ದರು. ಖೆಡ್ಡಾ ಪ್ರಾರಂಭ ಸೂಚಿಸುವ ಕೊಂಬುಕಹಳೆ ಮೊಳಗಿಸಿದರು. ಮರಮುಟ್ಟುನಿಂದಲೇ ವೇದಿಕೆಯನ್ನು ಸಿದ್ಧಗೊಳಿಸಲಾಗಿತ್ತು. ಈ ಸಂದರ್ಭದಲ್ಲಿ ಪ್ರಿನ್ಸ್ ಅವರು ಕ್ಯಾಪ್ಟನ್ ಹಾರ್ವೆ, ಸ್ಯಾಂಡರ್‌ಸನ್, ಮಹಾರಾಜರು ಅಟ್ಟಣಿಗೆಗೆ ಹೋಗಲು ಏಣಿ ಏರಿ ಹೋದರು. ಬೂದಿಪಡಗ ಖೆಡ್ಡಾ ಆರಂಭವೇ ರೋಮಾಂಚಕವಾಗಿತ್ತು. ಕಾಡಾನೆಗಳನ್ನು ಪಳಗಿಸಲು ಖೆಡ್ಡಾಕ್ಕೆ ಅವುಗಳ ಕೆಡವಿ ನಂತರ ಇತರ ವಿಧಾನಗಳ ಮೂಲಕ ಪಳಗಿಸಲಾಯಿತು. ಇದು ಪಳಗಿದ ಕುಮ್ಕಿಗಳ ಸಹಾಯದಿಂದ ಈ ಕಾರ್ಯ ನಡೆಯುತ್ತಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT